ಪ್ರಚಲಿತ

ಬಿಜೆಪಿ ಸೇರಲಿದ್ದಾರಾ ಸುಮಲತಾ ಅಂಬರೀಶ್.? ಎಸ್.ಎಂ.ಕೃಷ್ಣ ಭೇಟಿಗೆ ಸಜ್ಜಾದ ಮಂಡ್ಯದ ಹೆಣ್ಣು.!

ಹಲವಾರು ಕಾರಣಗಳಿಂದ ತನ್ನ ಜೀವಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ದೂರ ಉಳಿದಿದ್ದ ಮಾಜಿ ಸಚಿ ಅಂಬರೀಶ್ ಹಾಗೂ ಅವರ ಕುಟುಂಬ ಇದೀಗ ಮತ್ತೆ ಕಾಂಗ್ರೆಸ್ ಪಕ್ಷದೊಂದಿಗೆ ಅಂತರವನ್ನು ಕಾಯ್ದುಕೊಂಡಿದೆಯಾ ಎಂಬ ಪ್ರಶ್ನೆ ಹುಟ್ಟು ಹಾಕಿತ್ತು. ಈ ಪ್ರಶ್ನೆ ಹುಟ್ಟು ಹಾಕಿದ್ದ ಕೆಲವೇ ದಿನಗಳಲ್ಲಿ ಮತ್ತೊಂದು ಸುದ್ಧಿ ಹೊರಬಿದ್ದಿದೆ. ಅದು ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ.

ಅಂಬರೀಶ್ ನಿಧನದ ನಂತರ ಅವರ ಪತ್ನಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಗ್ರಹಗಳು ಕೇಳಿಬರುತ್ತಿದೆ. ಸಹಜವಾಗಿಯೇ ಅಂಬರೀಶ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಕಾರಣ ಕಾಂಗ್ರೆಸ್ಸಿನಿಂದಲೇ ಸ್ಪರ್ಧಿಸುತ್ತಾರೆ ಅನ್ನೋದು ವಾಸ್ತವ. ಆದರೆ ಇದೀಗ ಕಾಂಗ್ರೆಸ್ ಪಕ್ಷ ಜನತಾದಳದೊಂದಿಗೆ ಮೈತ್ರಿ ನಡೆಸುತ್ತಿದ್ದು ಸುಮಲತಾಗೆ ಮಂಡ್ಯ ಟಿಕೆಟ್ ದಕ್ಕುವುದು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈಗಾಗಲೇ ಸುಮಲತಾ ಅಂಬರೀಶ್ ವಿಚಾರವಾಗಿ ಮಂಡ್ಯದಲ್ಲಿ ಸಂಘರ್ಷಗಳು ತಾರಕಕ್ಕೇರಿದೆ. ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಎಂಬ ಜೆಡಿಎಸ್ ನಾಯಕ ಶ್ರೀಕಂಠೇಗೌಡರ ಹೇಳಿಕೆ ಮಂಡ್ಯ ಕಾಂಗ್ರೆಸ್ ಹಾಗೂ ಅಂಬರೀಶ್ ಅಭಿಮಾನಿಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕೆಂಬ ಆಶಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜನತಾದಳ ತೀರ್ಮಾನಿಸಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲು ಕುಮಾರಸ್ವಾಮಿ ತಯಾರಿಲ್ಲ. ಹೀಗಾಗಿ ಸುಮಲತಾಗೆ ಟಿಕೆಟ್ ದಕ್ಕುವುದು ಕಷ್ಟ. ಆದರೆ ಈಗ ಅಭಿಮಾನಿಗಳ ಪ್ರಬಲ ಒತ್ತಾಯದ ಮೇರೆಗೆ ಸುಮಲತಾ ಚುನಾವಣೆಗೆ ಸ್ಪರ್ಧಿಸಲೇಬೇಕೆಂಬ ಒತ್ತಾಯ ಕೇಳಿಬಂದಿದ್ದು ಕಾಂಗ್ರೆಸ್ ಹೈಕಮಾಂಡ್ ನಡೆ ಇನ್ನೂ ನಿಗೂಢವಾಗಿದೆ.

ಇನ್ನು ಸುಮಲತಾ ಅಂಬರೀಶ್ ಭಾರತೀಯ ಜನತಾ ಪಕ್ಷವನ್ನು ಸೇರುತ್ತಾರಾ ಎಂಬ ಮಾತುಗಳೂ ಕೇಳಿಬರುತ್ತಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಸುಮಲತಾ ಅಂಬರೀಶರನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿದ್ದಾರೆ. ಸುಮಲತಾರವರೂ ಬರುತ್ತೇನೆ ಎಂದು ಒಪ್ಪಿಗೆ ನೀಡಿದ್ದಾರೆ. ಈ ವೇಳೆ ಸುಮಲತಾರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಹೇಳುವುದು ಅಥವಾ ಪಕ್ಷೇತರ ಸ್ಪರ್ಧಿಸುವಂತೆ ಸೂಚಿಸಿ ಬೆಂಬಲ ನೀಡುವುದರ ಕುರಿತು ಚರ್ಚಿಸಲಾಗುವುದು ಎಂಬ ವಿಚಾರ ಬಲ್ಲ ಮೂಲಗಳಿಂದ ಲಭಿಸಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಗೆಲುವಿನ ನಗೆ ಬೀರಿಲ್ಲ. ಮಂಡ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹಾವು ಮುಂಗುಸಿಯಂತೆ ಕಚ್ಚಾಡಿಕೊಳ್ಳುತ್ತಿದೆ. ಇದರ ಉಪಯೋಗವನ್ನು ಪಡೆದುಕೊಳ್ಳುವುದು ಕಮಲದ ಪ್ಲಾನ್. ಮೈತ್ರಿ ಪಕ್ಷವೇ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾದರೆ ಕುಮಾರಸ್ವಾಮಿ ಪಟ್ಟಿನಿಂದ ನಿಖಿಲ್  ಸ್ಪರ್ಧೆ ಖಚಿತ ಎನ್ನಲಾಗಿದೆ. ಹೀಗಾಗಿ ಸುಮಲತಾ ಬಿಜೆಪಿಯಿಂದ ಸ್ಪರ್ಧೆ ಮಾಡುವಂತೆ ಮಾಡುವುದು ಅಂಬರೀಶ್ ಅಭಿಮಾನಿಗಳ ತಂತ್ರ. ಇದಕ್ಕೆ ಅಂಬರೀಶ್ ಹಾಗೂ ಅವರ ಕುಟುಂಬದ ಬಗ್ಗೆ ಹಿಂದಿನಿಂದಲೂ ಅಭಿಮಾನ ಹೊಂದಿರುವ ಬಿಜೆಪಿಯೂ ಸಮ್ಮತಿ ಸೂಚಿಸಬಹುದು ಎನ್ನಲಾಗಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close