ಪ್ರಚಲಿತ

ಮೋಡಗಳಿಲ್ಲದ ಶುಭ್ರ ಆಕಾಶ, ಶುಭ್ರ ಚಂದ್ರ, ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವು ಶಿವರಾತ್ರಿಯ ದಿನ ಗೋಚರಿಸುವುದಾದರೂ ಯಾಕೆ ಗೊತ್ತೇ?

ಸತತ ನಾಮಜಪ ಮಾಡುವ ಒಬ್ಬ ದೇವನೆಂದರೆ ಅವನೇ ‘ಪರಮೇಶ್ವರ’!!ಸತತ ಧ್ಯಾನಮುದ್ರೆಯಲ್ಲಿ ಆಸೀನನಾಗಿರುವ ಶಿವನು ಇತರರ ಸುಖಕ್ಕಾಗಿ ಯಾವುದೇ ಕಷ್ಟಗಳನ್ನು ಸಹಿಸಲು ಸಿದ್ಧನಾಗಿರುವ ಕರುಣಮಯಿ!! ಪರಿಪೂರ್ಣ ಪಾವಿತ್ರ್ಯ, ಪರಿಪೂರ್ಣ ಜ್ಞಾನ ಮತ್ತು ಪರಿಪೂರ್ಣ ಸಾಧನೆಯನ್ನು ಹೊಂದಿರುವ ಸರ್ವಶಕ್ತನಾದ ಮಹಾದೇವನ ನಾಮ ಜಪಿಸಿ, ಭವಭಾರ ಹಗುರಮಾಡಿಕೊಳ್ಳಲು ಆಸ್ಪದ ನೀಡುವ ದೈವಶ್ರದ್ಧೆಯ ಮಹತ್ವದ ದಿನ ಶಿವರಾತ್ರಿ ಮತ್ತೆ ಬಂದಿದೆ.

ಹಿಂದೂಗಳ ನಂಬಿಕೆಯ ರೀತ್ಯ ದೇವತೆಗಳಲ್ಲಿ ಸರ್ವ ಶ್ರೇಷ್ಠರೆಂದರೆ ಅದು ತ್ರಿಮೂರ್ತಿಗಳು!! ಹಾಗಾಗಿ ಸೃಷ್ಟಿ, ಸ್ಥಿತಿ, ಲಯಗಳನ್ನು ನಿಯಂತ್ರಿಸುವವರೇ ಇವರು. ಬ್ರಹ್ಮದೇವ ಸೃಷ್ಟಿಕರ್ತನಾದರೆ, ಸ್ಥಿತಿ ಸ್ಥಾಪಕತ್ವದ ದೃಷ್ಟಿಯಿಂದ ಶಿಷ್ಟ ರಕ್ಷಣೆ, ದುಷ್ಟ ಶಿಕ್ಷಣೆ ಮಾಡುವಾತ ಶ್ರೀಮನ್ನಾರಾಯಣ. ಇನ್ನು ಲಯದ ಹೊಣೆ ಶಿವನದು. ಅದಕ್ಕಾಗಿ ” ಶಿವ ಶಿವ ಎಂದರೆ ಭಯವಿಲ್ಲ… ಶಿವನಾಮಕೆ ಸಾಟಿ ಬೇರಿಲ್ಲ” ಎಂದು ಭಕ್ತರು ಪ್ರೀತಿಯಿಂದ ಸ್ತುತಿಸುತ್ತಾರೆ ಕೂಡ..

ಭಾರತೀಯರು ತಾವು ಆಚರಿಸುವ ಯಾವುದೇ ಹಬ್ಬ ಹರಿ-ದಿನಗಳಿಗಿಂತ ಶಿವರಾತ್ರಿಯನ್ನು ಬಹು ಮಹತ್ವವೆಂದು ನಂಬುತ್ತಾರೆ. ಹಾಗಾಗಿ ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.

ಸಮುದ್ರಮಂಥನದಿಂದ ಉತ್ಪನ್ನವಾದ ಹಾಲಾಹಲ ವಿಷವು ಸಂಪೂರ್ಣ ವಿಶ್ವವನ್ನು ಸುಡುವಂತಿತ್ತು. ಆಗ ಯಾವುದೇ ದೇವತೆಯು ಅದನ್ನು ಸ್ವೀಕರಿಸಲು ಸಿದ್ಧವಿಲ್ಲದಿದ್ದಾಗ ಶಿವನು ಆ ವಿಷವನ್ನು ಸ್ವೀಕರಿಸಿ ಅದನ್ನು ಅರಗಿಸಿಕೊಂಡನು. ಇಲ್ಲದಿದ್ದರೆ ವಿಶ್ವವು ನಾಶವಾಗುತ್ತಿತ್ತು!! ಶಿವನು ವಿಷವನ್ನು ಕುಡಿದು ವಿಶ್ವವನ್ನು ವಿನಾಶದಿಂದ ರಕ್ಷಿಸಿ ವಿಷಕಂಠನಾದನೂ ಈ ಕರುಣಮಯಿ ಪರಮೇಶ್ವರ!!

ಮಹಾಶಿವರಾತ್ರಿಯಂದು ಲಯಕರ್ತನಾದ ಶಿವ ಹುಟ್ಟಿದನೆಂಬ ನಂಬಿಕೆ ಕೆಲವರದಾದರೆ, ಸಮುದ್ರ ಮಂಥನ ಕಾಲದಲ್ಲಿ ಶಿವನು ಹಾಲಾಹಲ ಕುಡಿದ ದಿನವೇ ಶಿವರಾತ್ರಿ ಎಂಬುದು ಇನ್ನು ಕೆಲವರ ವಾದ. ಮತ್ತೆ ಕೆಲವರು ಶಿವ ಪಾರ್ವತಿಯನ್ನು ವರಿಸಿದ ದಿನ ಶಿವರಾತ್ರಿ ಎನ್ನುತ್ತಾರೆ. ಆದರೆ, ಶಿವರಾತ್ರಿಯ ದಿನ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ರಾತ್ರಿಯಿಡೀ ಪೂಜಿಸುವುದು ವಾಡಿಕೆ. ಇದಕ್ಕೆ ಬೇಡರ ಕಣ್ಣಪ್ಪನ ತ್ಯಾಗದ ಕತೆಯೂ ಪೂರಕವಾಗಿದೆ.

ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವನಿಗೆ ಬಿಲ್ವ ಪತ್ರೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಉತ್ತರ ಭಾರತ ಹಾಗೂ ನೇಪಾಳದಲ್ಲಿ ಶಿವನ ಆರಾಧಕರು ಭಂಗ ಮತ್ತು ಲಸ್ಸಿಯನ್ನು ಕುಡಿಯುತ್ತಾರೆ (ಮಹಾರಾಷ್ಟ್ರದಲ್ಲಿ ಇದನ್ನು ಕಡ್ಡಾಯವಾಗಿ ಕುಡಿದು ಹಬ್ಬವನ್ನು ಆಚರಿಸುತ್ತಾರೆ, ಇದು ಅಮಲು ಪದಾರ್ಥವಾಗಿದೆ) ಇದು ಶಿವನಿಗೆ ತುಂಬಾ ಪ್ರೀತಿಯೆಂದು ಹೇಳುತ್ತಾರೆ. ಮಹಾಶಿವರಾತ್ರಿ ಹಬ್ಬದ ಆಚರಣೆ ಕುರಿತಂತೆ ಅನೇಕ ದಂತಕಥೆಗಳನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಶಿವರಾತ್ರಿ ಆಚರಣೆ ಹಿನ್ನೆಲೆ:

ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುವಾಗ ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿಯ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿಯೂ ಇದೆ.

ಸ್ಕಂದ ಪುರಾಣದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದ್ದು, ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ!! ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ.

ಇನ್ನು, ತ್ರಯೋದಶಿಯು ಶಕ್ತಿರೂಪವಾದರೆ, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತವಾಗಿದ್ದರೆ ಅದು ಶಿವಶಕ್ತಿಯೋಗವಾಗುತ್ತದೆ. ಅದೇ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ.

ಅಷ್ಟೇ ಅಲ್ಲದೇ, ‘ಶಿವ ಪುರಾಣ’ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ, ‘ಸ್ಕಂದ ಪುರಾಣ’ ದ ಬೇಡ ಚಂದನನ ಕಥೆ, ‘ಗರುಡ ಮತ್ತು ಅಗ್ನಿ ಪುರಾಣ’ಗಳ ಬೇಡ ಸುಂದರ ಸೇನನ ಕಥೆ. ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು.. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. ಇದು ಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ.

ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದರೆ ಮೊದಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು. ಆದರೆ ಈಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದ ಹಾಲಾಹಲವನ್ನು ದೇವತೆಗಳಾಗಲಿ, ಅಸುರರಾಗಲಿ ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಾಗುವುದಿಲಿಲ್ಲ.. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ!! ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು. ಆ ಸಂದರ್ಭದಲ್ಲಿ ನಿದ್ರಿಸಿದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ ಎನ್ನುವುದಕ್ಕೆ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎನ್ನುವುದನ್ನು ಪುರಾಣಗಳು ತಿಳಿಸಿಕೊಡುತ್ತದೆ.

ಉಪವಾಸ ಮತ್ತು ಜಾಗರಣೆಗಳ ಅರ್ಥ:

ಶಿವರಾತ್ರಿಯಂದು ಭಕ್ತರು ಎರಡು ವಿಶೇಷ ರೀತಿಯ ಆಚರಣೆಗಳನ್ನು ಮಾಡುತ್ತಾರೆ. 1. ಉಪವಾಸ ಮತ್ತು 2. ಜಾಗರಣೆ. ಸಾಮಾನ್ಯವಾಗಿ ಬಹಳಷ್ಟು ಹಬ್ಬಗಳಲ್ಲಿ ಭಕ್ತರು ವಿಶೇಷ ರೀತಿಯ ಭಕ್ಷ್ಯ-ಭೋಜನಗಳನ್ನು ಸವಿದರೆ, ಶಿವರಾತ್ರಿಯಂದು ಮಾತ್ರ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಉಪವಾಸ ಅಂದ್ರೆ ಹತ್ತಿರದಲ್ಲಿ ನೆಲಸು ಇಲ್ಲಿ ಉಪವಾಸದ ಅರ್ಥವು ಈ ರೀತಿಯಾಗಿದೆ – ಉಪ ಎಂದರೆ ಹತ್ತಿರ ಎಂದರ್ಥ. ವಾಸ ಎಂದರೆ ನೆಲೆಸು ಎಂದರ್ಥ. ಅಂದರೆ ಹತ್ತಿರದಲ್ಲಿ ವಾಸಿಸು, ನೆಲಸು ಎಂದರ್ಥ. ಹಾಗಾದರೆ ನಾವು ಮಾಡುತ್ತಿರುವ ಉಪವಾಸವೇ ಬೇರೆಯಾಗಿದೆ ಅಲ್ಲವೇ? ಕೇವಲ ಆಚರಣೆಗಾಗಿ ಉಪವಾಸ ದೈಹಿಕ ಆರೋಗ್ಯಕ್ಕಾಗಿ ಉಪವಾಸ ಕೈಗೊಳ್ಳುವುದು ಬೇರೆ. ಆದರೆ ಉಪವಾಸದ ಯಥಾರ್ಥ ಅರ್ಥವನ್ನು ಅರಿಯದೇ ಕೇವಲ ಆಚರಣೆಗಾಗಿ ಉಪವಾಸ ಮಾಡುವುದೆಂದರೆ ದೇಹವನ್ನು ದಂಡಿಸಿದಂತೆ. ದೇಹಕ್ಕೆ ಉಪವಾಸ ಹಾಕುವುದರಿಂದ ಮನಸ್ಸು ಆಹಾರದೆಡೆಗೆ ಹರಿದಾಡಬಹುದು. ಹಾಗಾಗಿ ಸದಾ ಮನಸ್ಸು-ಬುದ್ಧಿಯನ್ನು ಪರಮಾತ್ಮ ಶಿವನಲ್ಲಿ ನೆಲೆಸುತ್ತಾ ಸದಾ ಅವನ ನೆನಪಿನಲ್ಲಿರುವುದೇ ನಿಜ ಉಪವಾಸ.

ಜಾಗರಣೆ, ವೈಜ್ಞಾನಿಕ ವಿಶ್ಲೇಷಣೆ!!

ಮಾನವನ ಬದುಕಿನ ಚಕ್ರ ಸೃಷ್ಟಿ, ಸ್ಥಿತಿ ಹಾಗೂ ಲಯಗಳನ್ನು ಅವಲಂಬಿಸಿದೆ. ಜಲ, ನೆಲ, ಗಾಳಿ, ಬೆಂಕಿ, ಆಕಾಶಗಳೆಂಬ ಪಂಚಭೂತಗಳಿಂದ ಆದ ಮಾನವ ಪ್ರಕೃತಿ ನಿಯಮಗಳಿಗೆ ಒಳಪಟ್ಟಿದ್ದಾನೆ. ಪ್ರಕೃತಿಗೂ ಒಂದು ನಿಯಮಿತ ನಿಯಮ, ಚಲನೆ ಇದೆ. ಭೂಮಿಯ ಸುತ್ತ ಚಲಿಸುವ ಚಂದ್ರ ಒಂದು ದಿನದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಇದಕ್ಕೆ ತಿಥಿ (ಪಾಡ್ಯ, ಬಿದಿಗೆ…..) ಎನ್ನುತ್ತಾರೆ. ಭೂಮಿಯ ಒಂದು ನಿಗದಿತ ಕೋನಕ್ಕೆ ಚಂದ್ರನು ಬಂದಾಗ ಆತನ ಪ್ರಭಾವ ಹೆಚ್ಚಾಗಿರುತ್ತದೆ. ಚಂದ್ರನು ಭೂಮಿಯ 180 ಡಿಗ್ರಿ ಕೇಂದ್ರ- ಕೋನಕ್ಕೆ ಬಂದಾಗ ಆಕರ್ಷಣೆ ಅಧಿಕವಾಗಿರುತ್ತದೆ. ಹೀಗಾಗಿ ಸಮುದ್ರದ ಅಲೆಗಳ ಮೊರೆತವೂ ಹೆಚ್ಚುತ್ತದೆ.

ಮಿಗಿಲಾಗಿ ಶೇಕಡಾ 80ರಷ್ಟು ಜಲವರ್ಗಕ್ಕೆ ಸೇರಿದ ಮನುಷ್ಯನ ಮೆದುಳು, ಜೀರ್ಣಾಂಗ, ಪಿತ್ತಕೋಶ ಹಾಗೂ ಮೂತ್ರ ಜನಕಾಂಗಳ ಮೇಲೂ ಚಂದ್ರನ ಪ್ರಭಾವ ಈ ಅವಧಿಯಲ್ಲಿ ತೀಕ್ಷ್ಣವಾಗಿರುತ್ತದಂತೆ. ಅದಕ್ಕೆ ಅಮಾವಾಸ್ಯೆ ಮತ್ತು ಪೂರ್ಣಿಮೆಯಲ್ಲಿ ಮಾನಸಿಕ ರೋಗಿಗಳಿಗೆ ಉದ್ರೇಕ ಹೆಚ್ಚುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಮಾಘ ಮಾಸದ ಚತುರ್ದಶಿಯಂದು ಕ್ಷೀಣ ಚಂದ್ರನ ಪ್ರಭಾವ ಇರುವುದರಿಂದ ಅಂದು ಜಾಗರೂಕರಾಗಿದ್ದು, ಜಾಗರಣೆ ಮಾಡಿದರೆ (ನಿದ್ದೆ ಮಾಡದೆ ಎಚ್ಚರ ಸ್ಥಿತಿ) ಮಾನವನಲ್ಲಿ ಉತ್ಸಾಹ ಹೆಚ್ಚಿ, ಆತನ ಚಿಂತನೆ ವೃದ್ಧಿಸುತ್ತದೆ ಎನ್ನುವುದು ಕೆಲವರ ನಂಬಿಕೆ.

ಆರೋಗ್ಯದ ದೃಷ್ಟಿಯಿಂದ ನೀವು ಜಾಗರಣೆ ಮಾಡಿ ಎಂದರೆ ಯಾರೂ ಮಾಡರು, ಹೀಗಾಗಿ ಶಾಸ್ತ್ರದ ಕಟ್ಟಳೆಯಂತೆ ರಾತ್ರಿ ನಿದ್ದೆ ಮಾಡದೇ ಇರಬೇಕಾದರೆ, ಹೊಟ್ಟೆ ಹಸಿದಿರಬೇಕು ಎಂಬ ತತ್ವ ಇದೆ. ಇದಕ್ಕಾಗಿಯೇ ಮಹಾ ಶಿವರಾತ್ರಿಯ ದಿನ ಉಪವಾಸ ಇರಬೇಕು ಎಂಬ ನಿಯಮವಂತೆ. ಯಾರು ಒಪ್ಪಲಿ ಬಿಡಲಿ, ಅನಾದಿ ಕಾಲದಿಂದಲೂ ಈ ಆಚರಣೆ ಅನೂಚಾನವಾಗಿ ನಡೆದು ಬಂದಿದ್ದು, ಅದು ನಡೆಯುತ್ತಲೇ ಇರುತ್ತದೆ.

ಹಾಗಾಗಿ ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕವಲ್ಲದೇ, ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ ಎಂಬುವುದು ಎಲ್ಲರ ನಂಬಿಕೆ.

– ಅಲೋಖಾ

Tags

Related Articles

Close