ಪ್ರಚಲಿತರಾಜ್ಯ

ಉಡುಪಿಯಲ್ಲೊಬ್ಬ ಕಲಿಯುಗದ ದ್ರೋಣಾಚಾರ್ಯ!! ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಶಿಕ್ಷಕರೊಬ್ಬರ ವಿನೂತನ ಪ್ರಯತ್ನ!! ಮಕ್ಕಳಿಗಾಗಿ ಬಸ್ ಚಾಲಕನಾದ ಆದರ್ಶ ಶಿಕ್ಷಕ!!

ಗುರುವಿನಲ್ಲಿ ಸರ್ವೋತ್ತಮ ಗುರು ದ್ರೋಣಾಚಾರ್ಯ!! ತನ್ನ ಜ್ಞಾನದ ಭಂಡಾರವನ್ನೆಲ್ಲ ತನ್ನ ಶಿಷ್ಯಂದಿರಿಗೆ ಧಾರೆ ಎರೆದು ಅವರನ್ನು ಅಪ್ರತಿಮ ಪರಾಕ್ರಮಿಗಳನ್ನಾಗಿ ಮಾಡಿದ ಮಹಾನ್ ಗುರು ದ್ರೋಣ. ಉಡುಪಿಯಲ್ಲೊಬ್ಬ ಶಿಕ್ಷಕ ಕಲಿಯುಗದ ದ್ರೋಣಾಚಾರ್ಯರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ತಮ್ಮ ವಿದ್ಯಾರ್ಥಿಗಳ ಏಳಿಗೆಗಾಗಿ ಯಾವ ಸ್ವಾರ್ಥವೂ ಇಲ್ಲದೆ ಇವರು ಮಾಡುತ್ತಿರುವ ಸೇವೆಯ ಬಗ್ಗೆ ಕೇಳಿದರೆ ಕಲಿಯುಗದಲ್ಲೂ ಇಂತಹ ಜನರಿದ್ದಾರಾ ಎಂದು ಆಶ್ಚರ್ಯವಾಗದಿರದು!

ಉಡುಪಿ ಬ್ರಹ್ಮಾವರ ತಾಲೂಕಿನ ಬಾರಾಳಿ ಎಂಬ ಹಳ್ಳಿಯ ರಾಜಾರಾಮ್ ಎನ್ನುವ ಶಿಕ್ಷಕ ನಿಜವಾದ ಪಬ್ಲಿಕ್ ಹೀರೋ. ಇವರ ಜೀವನ ಪ್ರತಿಯೊಬ್ಬರಿಗೂ ಆದರ್ಶವಾಗಿರಲಿ. ಬಾರಾಳಿಯ ಸರಕಾರಿ ಶಾಲೆಯ ಮಕ್ಕಳಿಗೆ ರಾಜಾರಾಮ್ ಕೇವಲ ವಿಜ್ಞಾನ ಮತ್ತು ಗಣಿತ ಶಿಕ್ಷಕರಲ್ಲ, ಬದಲಿಗೆ ಈ ಶಾಲೆಯ ಮಕ್ಕಳ ಭಾಗ್ಯೋದಯದ ಹರಿಕಾರ. ಬಾರಾಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿನ ವಿದ್ಯಾರ್ಥಿಗಳು ಒಂದು ವರ್ಷದ ಹಿಂದೆ ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರುವುದನ್ನೆ ನಿಲ್ಲಿಸಿದ್ದರು. ಶಾಲೆ ತಲುಪಲು ಮೂರು ಕಿ.ಮೀ ಕಾಡಿನ ದಾರಿಯನ್ನು ಕ್ರಮಿಸಿ ಬರುವುದು ಪುಟಾಣಿ ಮಕ್ಕಳಿಗೆ ಸಾಧ್ಯವಿರಲಿಲ್ಲ.

ಕಾಡಿನ ಮಧ್ಯೆ ಕೆಸರು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಬರುವುದು ಮಕ್ಕಳಿಗೆ ಕಷ್ಟಕರವಾಗಿತ್ತು. ಕಾಡಿನಲ್ಲಿ ಶಾಲೆಗೆ ಹೋಗಲು ಮತ್ತು ಮರಳಲು ಒಟ್ಟು ಆರು ಕಿ.ಮೀ ಕ್ರಮಿಸಬೇಕಾಗಿದ್ದರಿಂದ ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನು ಅರ್ಧದಲ್ಲೆ ಮೊಟಕುಗೊಳಿಸಿ ಶಾಲೆಗೆ ಬರುವುದನ್ನು ನಿಲ್ಲಿಸಿಬಿಟ್ಟಿದ್ದರು. ಸರಕಾರದ ಘೋರ ನಿರ್ಲಕ್ಷಕ್ಕೊಳಗಾಗಿದ್ದ ಈ ಶಾಲೆಯ ಪರಿಸ್ಥಿತಿಯನ್ನು ಕಂಡು ರಾಜಾರಾಮ್ ಮೃದು ಹೃದಯ ಮಮ್ಮಲ ಮರುಗಿತು. ಸರಕಾರದ ಬಾಗಿಲು ತಟ್ಟಿ ಪ್ರಯೋಜನವಿಲ್ಲವೆಂದು ಅರಿವಾದಾಗ, ಇದೆ ಶಾಲೆಯ ಹಳೆಯ ವಿದ್ಯಾರ್ಥಿ ವಿಜಯ್ ಹೆಗ್ಡೆಯವರ ಬಳಿ ಸಹಾಯಕ್ಕೆ ಮೊರೆ ಇಡುತ್ತಾರೆ ರಾಜಾರಾಮ್.

ವಿಜಯ್ ಹೆಗ್ಡೆ ಬೆಂಗಳೂರಿನಲ್ಲಿ ಆಸ್ತಿ ನಿರ್ವಹಣೆ ಕಂಪನಿಯೊಂದನ್ನು ಚಲಾಯಿಸುತ್ತಿದ್ದಾರೆ. ವಿಜಯ್ ಹೆಗ್ಡೆ ಮತ್ತು ಗಣೇಶ್ ಶೆಟ್ಟಿ ಎಂಬ ಹಳೆ ವಿದ್ಯಾರ್ಥಿಗಳಿಬ್ಬರು ರಾಜಾರಾಮ್ ಅವರ ಸಹಾಯಕ್ಕೆ ಮುಂದಾಗುತ್ತಾರೆ. ರಾಜಾರಾಮ್ ಅವರ ಪ್ರಕಾರ ವಾರಕ್ಕೆ ಕನಿಷ್ಟ 5 ರಿಂದ 6 ವಿದ್ಯಾರ್ಥಿಗಳು ಶಾಲೆ ತ್ಯಜಿಸುತ್ತಿದ್ದರು. ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಮ್ಮಿಯಾಗುತ್ತಿರುವುದು ರಾಜಾರಾಮ್ ಅವರಿಗೆ ಚಿಂತೆಯೆ ವಿಷಯವಾಗಿತ್ತು. ಇದು ಹೀಗೇ ಮುಂದುವರಿದರೆ ಶಾಲೆಯಲ್ಲಿ ಮಕ್ಕಳಿಲ್ಲದೆ ಶಾಲೆಯನ್ನೆ ಮುಚ್ಚಿಬಿಡಬೇಕಾದ ಪರಿಸ್ಥಿತಿ ಎದುರಾಗುವುದನ್ನು ಮನಗಂಡ ರಾಜಾರಾಮ್ ಹಳೆ ವಿದ್ಯಾರ್ಥಿಗಳ ಸಹಾಯ ನಿರೀಕ್ಷಿಸಿದ್ದರು.

ಅವರ ಮೊರೆಗೆ ಓಗೊಟ್ಟು, ವಿಜಯ್ ಹೆಗ್ಡೆ ಮತ್ತು ಗಣೇಶ್ ಶೆಟ್ಟಿ ಎಂಬ ಹಳೆ ವಿದ್ಯಾರ್ಥಿಗಳು ರಾಜಾರಾಮ್ ಅವರಿಗೆ ಸಹಾಯ ಮಾಡಲು ಮುಂದೆ ಬಂದರು. ಮೂವರೂ ಹಣ ಒಟ್ಟುಗೂಡಿಸಿ ಶಾಲಾ ಬಸ್ ಒಂದನ್ನು ಖರೀದಿಸಿದರು. ಆದರೆ ಶಾಲಾ ಬಸ್ ಅನ್ನು ಚಲಾಯಿಸಲು ಡ್ರೈವರ್ ನಿಯೋಜಿಸಿದರೆ ತಿಂಗಳಿಗೆ 7000 ರುಪಾಯಿಗಳು ಆತನಿಗೆ ನೀಡಬೇಕಾಗುತ್ತಿತ್ತು. ಅಷ್ಟು ದೊಡ್ಡ ಮೊತ್ತ ಪ್ರತಿ ತಿಂಗಳೂ ಭರಿಸುವಷ್ಟು ಆರ್ಥಿಕವಾಗಿ ಸ್ಥಿತಿವಂತರಲ್ಲ ರಾಜಾರಾಮ್. ಆದರೆ ಅವರ ಹೃದಯ ಮಾತ್ರ ಅಪ್ಪಟ ಚಿನ್ನ! ಆದ್ದರಿಂದ ಮಕ್ಕಳಿಗಾಗಿ ತಾವೆ ಬಸ್ ಚಾಲಕರಾದರು ಶಾಲಾ ಶಿಕ್ಷಕ ರಾಜಾರಾಮ್!! ಎಂತಹ ದೊಡ್ಡ ಹೃದಯ, ಎಂತಹ ಉದಾತ್ತ ಮನಸ್ಸು.

ರಾಜ್ಯದಲ್ಲಿ ಎಷ್ಟೋ ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ. ರಾಜಾರಾಮ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಈ ಶಾಲೆ ಕೂಡ ಮುಚ್ಚಲಿ ಬಿಡಿ, ನನಗ್ಯಾಕೆ ಉಸಾಬರಿ ಎಂದು ಉಡಾಫೆ ತೋರುತ್ತಿದ್ದರು. ಆದರೆ ರಾಜಾರಾಮ್ ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ, ಬದಲಿಗೆ ಮಕ್ಕಳಿಗಾಗಿ ಬಸ್ ಚಾಲಕನಾಗಲೂ ತಯಾರಾದರು. ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಬಸ್ ಚಲಾಯಿಸುವುದನ್ನು ಕಲಿತು ಲೈಸೆನ್ಸ್ ಕೂಡಾ ಮಾಡಿಸಿಕೊಂಡಿದ್ದಾರೆ ರಾಜಾರಾಮ್. ಬಸ್ ವ್ಯವಸ್ಥೆ ಶುರು ಮಾಡಿದ ಮೇಲೆ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಮೊದಲು 50 ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 90 ಕ್ಕೇರಿದೆ!!

ಬೆಳಿಗ್ಗೆ ಬೇಗನೆ ಮನೆಯಿಂದ ಹೊರಡುವ ರಾಜಾರಾಮ್ ಅವರು 9.20ರವರೆಗೆ ನಾಲ್ಕು ಟ್ರಿಪ್ಗಳನ್ನು ಪೂರೈಸುತ್ತಾರೆ! ಮತ್ತೆ ಶಾಲೆಯಲ್ಲಿ ಪಾಠ- ಪ್ರವಚನ ತಿರುಗಾ ಸಾಂಯಂಕಾಲ ಮಕ್ಕಳನ್ನು ಮನೆಗೆ ಡ್ರಾಪ್ ಮಾಡುತ್ತಾರೆ. ಮಾತ್ರವಲ್ಲ ಬಸ್ಸಿನ ಇನ್ಷೂರೆನ್ಸ್ ಅನ್ನು ತಾವೇ ಕಟ್ಟುತ್ತಾರೆ ಮತ್ತು ಡೀಸೆಲ್ ಅನ್ನು ಕೂಡಾ ತಮ್ಮ ಸಂಬಳದಿಂದಲೆ ತುಂಬಿಸುತ್ತಾರೆ! ರಾಜಾರಾಮ್ ಅವರ ಸಹೃದಯತೆ ಮತ್ತು ನಿಸ್ವಾರ್ಥ ಸೇವೆಗೊಂದು ಸಲಾಂ. ಶಾಲೆಯ ಸುತ್ತ ಬೇಲಿ ನಿರ್ಮಿಸಲು ಮತ್ತು ಮಕ್ಕಳ ಕ್ರೀಡಾಭ್ಯಾಸಕ್ಕಾಗಿ 100 ಮೀ ಮತ್ತು 200 ಮೀ ಸ್ಪ್ರಿಂಟ್ ಟ್ರ್ಯಾಕ್ ಗಳನ್ನು ನಿರ್ಮಿಸಬೇಕೆಂದು ಆಶಿಸುತ್ತಿರುವ ರಾಜಾರಾಮ್ ಅದನ್ನು ನಿರ್ಮಿಸಲು ತನ್ನಲ್ಲಿ ಹಣ ಇಲ್ಲ ಎಂದು ಪೆಚ್ಚು ಮೋರೆ ಹಾಕುತ್ತಾರೆ. ಸಹೃದಯ ದಾನಿಗಳು ಮುಂದೆ ಬಂದರೆ ಅವರ ಈ ಆಶೆಯೂ ಇಡೇರಬಹುದೇನೋ…

ಈ ಕಲಿಯುಗದಲ್ಲೂ ಇಂತಹ ಮಹಾತ್ಮರಿರುತ್ತಾರೆ ಎಂದರೆ ವಿಚಿತ್ರವೆನಿಸುತ್ತಿದೆ. ತನಗೇನು ಲಾಭ ಬರುತ್ತದೆ ಎಂದು ಲೆಕ್ಕಾಚಾರ ಹಾಕುವ ಜನರೆ ಹೆಚ್ಚು. ರಾಜಾರಾಮ್ ಇವರಿಗೆಂತ ಭಿನ್ನವಾಗಿ ನಿಲ್ಲುತ್ತಾರೆ. ಶಿಕ್ಷಣದಿಂದಾಗಿ ಮಕ್ಕಳ ಬಾಳು ಬೆಳಗಲಿ ಎಂದು ಯಾವ ಪ್ರತಿಫಲಾಪೇಕ್ಷೆ ಇಲ್ಲದೆಯೂ ನಿಸ್ವಾರ್ಥ ಸೇವೆ ಮಾಡುತ್ತಿರುವ ರಾಜಾರಾಮ್ ಅವರಿಗೆ ದೇವರು ಆಯುರಾರೋಗ್ಯ ಭಾಗ್ಯ ಕೊಟ್ಟು, ಸಿರಿ ಸಂಪತ್ತು ದೊರಕುವಂತೆ ಮಾಡಲಿ. ಇಂತಹ ಸಹೃದಯರಿಗೆ ಸಿರಿ ಸಂಪತ್ತು ಬಂದರೆ ಸಮಾಜ ಕಲ್ಯಾಣ ಕಾರ್ಯಕ್ಕಾದರೂ ವಿನಿಯೋಗವಾಗುವುದು. ರಾಜಾರಾಮ್ ಅವರಂತ ಶಿಕ್ಷಕರು ಪ್ರತಿಯೊಬ್ಬರಿಗೂ ಆದರ್ಶವಾಗಲಿ.

-ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close