ಅಂಕಣರಾಜಕೀಯ

ನರೇಂದ್ರ ಮೋದಿಗೆ ಸರಿಸಾಟಿಯಾಗಿ ನಿಲ್ಲುವ ಒಬ್ಬನೇ ಒಬ್ಬ ಎದುರಾಳಿ ಕಾಂಗ್ರೆಸ್‌ನಲ್ಲಿ ಇಲ್ಲ ಏಕೆ? ಕಾಂಗ್ರೆಸ್ ಮುಕ್ತ ಭಾರತ ನಡೆದೇ ಹೋಗುತ್ತಾ?

ಕಾಂಗ್ರೆಸ್ ಪಕ್ಷದ ಇತಿಹಾಸ ಬಲ್ಲವರು ಕಡಿಮೆ, ಇತಿಹಾಸ ಅರಿತವರು ಕಾಂಗ್ರೆಸ್ ಪಕ್ಷದ ಹಿಂದೆ ಹೋಗಲಿಲ್ಲ, ತಿಳಿಯದೇ ಇದ್ದವರು ಪಕ್ಷವನ್ನು ಬೆಂಬಲಿಸಿದರು ಈಗಲೂ ಬೆಂಬಲಿಸುತ್ತಲೇ ಇದ್ದಾರೆ. ಕಾಂಗ್ರೆಸ್‌ ಎಂದರೆ ಸ್ವಾತಂತ್ರ್ಯ ನಂತರದಲ್ಲಿ ಭಾರತವನ್ನು ಆಳಿದ ಮೊದಲ ಪಕ್ಷ, ಪಕ್ಷ ಎಂಬುದಕ್ಕಿಂತ ಹೆಚ್ಚಾಗಿ ಒಂದು ಸಾಮ್ರಾಜ್ಯ ಎಂದೇ ಹೇಳಬಹುದು. ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಎದುರಾಳಿಯಾಗಿ ನಿಲ್ಲುವ ಯಾವೊಬ್ಬನೂ ಇರಲಿಲ್ಲ ಮತ್ತು ಅಂತಹ ಯೋಚನೆ ಕೂಡ ಯಾರೊಬ್ಬರೂ ಮಾಡಲಿಲ್ಲ. ಯಾಕೆಂದರೆ ದೊಡ್ಡ ದೊಡ್ಡ ನಾಯಕರೆಲ್ಲ ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡಿದ್ದರು.‌ ಇದೊಂದು ಕಾರಣದಿಂದಾಗಿ ಕಾಂಗ್ರೆಸ್ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿತ್ತು. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೀಗೆ ಗಾಂಧಿ ಕುಟುಂಬ ಎಂದು ತಮ್ಮನ್ನು ತಾವು ಕರೆಸಿಕೊಂಡವರೆಲ್ಲ ತಮಗೆ ಬೇಕಾದ ರೀತಿಯಲ್ಲಿ ದೇಶವನ್ನು ಬಳಸಿಕೊಂಡರು ಮತ್ತು ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಬೇರೂರುವಂತೆ ಮಾಡಿದ್ದರು. ಆದರೆ ಇಂದು ಅದೇ ಕಾಂಗ್ರೆಸ್ ಪಕ್ಷದ ಸ್ಥಿತಿ ಯಾರೂ ಊಹಿಸದ ರೀತಿಯಲ್ಲಿದೆ, ಕಾಂಗ್ರೆಸ್ ಎಂದರೆ ಜನರು ದೂರ ಹೋಗಿ ನಿಲ್ಲುವಂತಾಗಿದೆ. ಭಾರತಕ್ಕೆ ಕಾಂಗ್ರೆಸ್ ಮಾರಕ ಎಂಬುದು ಗೊತ್ತಾಗಿದೆ, ಆದ್ದರಿಂದಲೇ ದಿನ ಕಳೆದಂತೆ ಕಾಂಗ್ರೆಸ್‌ನ ಶಕ್ತಿ ಕ್ಷೀಣಿಸುತ್ತಿದೆ. ಅದರಲ್ಲೂ ಯಾವಾಗ ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಯಾದರೋ ಅಂದಿನಿಂದ ಕಾಂಗ್ರೆಸ್‌ನ ಪರಿಸ್ಥಿತಿಯೇ ಬದಲಾಯಿತು. ಅತ್ತ ಮೋದಿ ಕೂಡ ಕಾಂಗ್ರೆಸ್ ಮುಕ್ತ ಭಾರತದ ಕನಸು ಹೊತ್ತು ಪ್ರಧಾನಿಯಾದವರು, ಇತ್ತ ಕಂಡ ಕನಸು ನನಸು ಮಾಡಲು ಹೊರಟ ಮೋದಿ ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಏಟಿನ ಮೇಲೆ ಏಟು ನೀಡುತ್ತಾ ಕಾಂಗ್ರೆಸ್ ಮೂಲೆ ಸೇರುವಂತೆ ಮಾಡಿದ್ದಾರೆ.!

ಹೌದು, ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಕಾಂಗ್ರೆಸ್ ಶಕ್ತಿ ಕಳೆದುಕೊಂಡಿದೆ, ಮೋದಿ ಕಾಂಗ್ರೆಸ್‌‌ನ ಎಲ್ಲಾ ಅಕ್ರಮ ಹಗರಣಗಳನ್ನು ಬಯಲಿಗೆಳೆಯುತ್ತಿದ್ದು ಕಾಂಗ್ರೆಸ್ ಅಕ್ಷರಶಃ ತತ್ತರಿಸಿದೆ. ಇತ್ತ ಎದುರಿಸಲೂ ಆಗದೆ ಮಂಕಾಗಿದೆ, ಅದೂ ಅಲ್ಲದೇ ಕಾಂಗ್ರೆಸ್‌‌ಗೆ ಸದ್ಯ ಸಮರ್ಥ ನಾಯಕನ ಅಗತ್ಯವಿದೆ. ಇತ್ತ ರಾಜಕೀಯವೇ ಅರಿಯದ ರಾಹುಲ್ ಗಾಂಧಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ, ಆದರೆ ಅರ್ಹತೆ ಗಮನಿಸಿದರೆ ರಾಹುಲ್‌ಗೆ ನಕಲಿ ಗಾಂಧಿ ಕುಟುಂಬ ಎಂಬ ಅರ್ಹತೆ ಬಿಟ್ಟರೆ ಬೇರೆ ಯಾವುದೇ ಯೋಗ್ಯತೆ ಇಲ್ಲ. ಭಾರತೀಯ ಜನತಾ ಪಕ್ಷ ಅಂತೂ ಇಂದು ಜಗತ್ತಿನ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಯಾವುದೇ ಒಬ್ಬ ವ್ಯಕ್ತಿಯ ಪರಿಶ್ರಮದಿಂದ ಆದ ಕೆಲಸವಲ್ಲ, ಬದಲಾಗಿ ಸಾವಿರಾರು ನಾಯಕರ ಕಾರ್ಯಕರ್ತರ ಪರಿಶ್ರಮದಿಂದ ಇಂದು ಬಿಜೆಪಿ ಬಲಿಷ್ಠವಾಗಿದೆ. ಅದರಲ್ಲೂ ಮೋದಿ ಬಂದ ನಂತರ ಬಿಜೆಪಿ ಮತ್ತಷ್ಟು ಮೇಲುಗೈ ಸಾಧಿಸುತ್ತಲೇ ಇದೆ. ಯಾಕೆಂದರೆ ಮೋದಿ ಜನಪ್ರಿಯತೆ ಮುಂದೆ ಕಾಂಗ್ರೆಸ್ ಶೂನ್ಯವಾಗಿದೆ. ಮೋದಿಯನ್ನು ಎದುರಿಸುವ ಸಾಮರ್ಥ್ಯ ಕಾಂಗ್ರೆಸ್‌ನಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾಂಗ್ರೆಸ್‌ ನಾಯಕರು ಹೋದಲ್ಲಿ ಬಂದಲ್ಲಿ ಪ್ರಧಾನಿ ಮೋದಿ ವಿರುದ್ಧ ಟೀಕೆ ಮಾಡುತ್ತಾರೆ. ಆದರೆ ಟೀಕೆಗಳೇ ವಿನಃ ಯಾವುದೇ ಆರೋಪಕ್ಕೆ ಕಾಂಗ್ರೆಸ್ ಬಳಿ ಸಾಕ್ಷ್ಯ ಇಲ್ಲ. ಇತ್ತ ಮೋದಿ‌ ಕಾಂಗ್ರೆಸ್‌‌ಗೆ ನೀಡುವ ಒಂದೊಂದು ಏಟು ಕೂಡ ಕಾಂಗ್ರೆಸ್ ಮತ್ತೆಂದೂ ಮೇಲೇಳಲು ಸಾಧ್ಯವಾಗದಂತೆ ಮಾಡುತ್ತಿದೆ. ದೇಶಾದ್ಯಂತ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಇಂದು ಕೇವಲ ೪-೫ ರಾಜ್ಯಗಳಲ್ಲಿ ಮಾತ್ರ ಅಧಿಕಾರ ಹಿಡಿದುಕೊಂಡಿದೆ. ಇದೊಂದೇ ಸಾಕು ಕಾಂಗ್ರೆಸ್ ಮುಕ್ತ ಭಾರತ ನಮ್ಮ ಕಣ್ಣ ಮುಂದೆ ಇದೆ ಎಂದು. ಮೋದಿಯನ್ನು ಎದುರಿಸುವ ನಾಯಕರು ಕಾಂಗ್ರೆಸ್ ನಲ್ಲಿ ಇಲ್ಲ, ಮೋದಿ ಮೇಲೆ ಆರೋಪ ಮಾಡಲು ಯಾವುದೇ ಸಾಕ್ಷಿಗಳು ಕೂಡ ಕಾಂಗ್ರೆಸ್ ಬಳಿ ಇಲ್ಲ. ಆದರೂ ಸುಳ್ಳು ಆರೋಪ ಮಾಡುತ್ತಿದೆ.!

ಅಷ್ಟೇ ಅಲ್ಲದೆ 2014ರಲ್ಲಿ ಮೋದಿ ಹೇಳಿದ ಮಾತು ನಿಜವಾಗಲಿದೆ ಎಂಬುದು ಬಲಪಂಥೀಯರ ಅಭಿಪ್ರಾಯ. ‌ಆದರೆ ಕಾಂಗ್ರೆಸ್ ಮಾತ್ರ ಮೋದಿಯವರ ಕನಸ್ಸು ನನಸಾಗಲು ಬಿಡುವುದಿಲ್ಲ ಎಂದು ಹೇಳುತ್ತಲೇ ಇದೆ. ಇತ್ತ ದೇಶ ಮಾತ್ರವಲ್ಲದೆ ಜಗತ್ತಿನಾದ್ಯಂತ ಮೋದಿ ಒಲವು ಹೆಚ್ಚುತ್ತಿದ್ದು ಕಾಂಗ್ರೆಸ್‌ಗೆ ಆತಂಕ ಎದುರಾಗಿದೆ. ಮೋದಿ ಹೇಳಿದ ಮಾತನ್ನು ಮಾಡಿ‌ ತೋರಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದಲೇ ಕಾಂಗ್ರೆಸ್‌‌ಗೆ ಭಯ ಹೆಚ್ಚಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕೂಡ ಮೋದಿ v/s ವಿಪಕ್ಷಗಳು ಎಂಬಂತಾಗಿದೆ. ಅದೇನೇ ಇರಲಿ ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಮೋದಿಗೆ ಸರಿಸಾಟಿಯಾಗಿ ನಿಲ್ಲುವ ಯಾವನೇ ಒಬ್ಬ ವ್ಯಕ್ತಿ ಭಾರತದಲ್ಲಿ ಇಲ್ಲ ಎಂಬುದು ಒಪ್ಪಿಕೊಳ್ಳಲೇಬೇಕಾದ ಸತ್ಯ..!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close