ಅಂಕಣ

ಅಖಂಡ ಬ್ರಹ್ಮಚಾರಿ ರಾಮನ ಬಂಟ ಹನುಮಂತನನ್ನು ಆತನ ಪತ್ನಿಯ ಜೊತೆ ಪೂಜಿಸಲಾಗುವ ಭಾರತದ ಏಕೈಕ ಮಂದಿರ ತೆಲಂಗಾಣದಲ್ಲಿದೆ ಎಂದರೆ ನಂಬಲೆಬೇಕು!!

ನಂಬಲು ಸಾಧ್ಯವೇ ಇಲ್ಲ, ಆದರೂ ಇದು ಸತ್ಯ!! ನಮಗೆಲ್ಲ ತಿಳಿದಿರುವಂತೆ ಹನುಮಂತ ಬಾಲ ಬ್ರಹ್ಮಚಾರಿ. ಆತ ಜೀವನ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸಿದವ. ಆದರೆ ದಕ್ಷಿಣ ಭಾರತದ ತೆಲಂಗಾಣದ ಖಮ್ಮಾಮ್ ಜಿಲ್ಲೆಯಲ್ಲಿ ಹನುಮಂತನನ್ನು ಆತನ ಪತ್ನಿ ಸುವರ್ಚಲಾ ದೇವಿಯ ಜೊತೆ ಪೂಜಿಸಲಾಗುತ್ತದೆ. ಸನಾತನ ಧರ್ಮವೆಂದರೆ ಇದೆ. “ಯದ್ಭಾವಂ ತದ್ಭವತಿ”. ನಾವು ಯಾವ ರೂಪದಲ್ಲಿ ಭಗವಂತನನ್ನು ಪೂಜಿಸುತ್ತೇವೋ ಆತ ಅದೆ ರೂಪದಲ್ಲಿ ನಮಗೆ ಅನುಗ್ರಹವನ್ನೀಯುತ್ತಾನೆ!! ಇಲ್ಲಿ ದೇವರು ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕನಾದ ವರವನ್ನೀಯುತ್ತಾನೆ. ನಂಬಿಕೆಯೆ ದೇವರು.

ಹನುಮಂತನ ವಿವಾಹ ಸೂರ್ಯ ಪುತ್ರಿ ಸುವರ್ಚಲೆಯೊಂದಿಗೆ ಹೇಗಾಯಿತು?

ಹನುಮಂತನ ವಿವಾಹದ ಕಥೆ ‘ಪರಾಶರ ಸಂಹಿತೆ’ ಮತ್ತು ‘ಸುವರ್ಚಲಾ ಸಂಹಿತೆ’ ಯಲ್ಲಿ ಬರೆದಿದೆ ಎಂದು ಹೇಳಲಾಗಿದೆ. ಈ ಸಂಹಿತೆಗಳ ಪ್ರಕಾರ, ಹನುಮಂತ ಸೂರ್ಯ ದೇವನ ಶಿಷ್ಯ. ಸೂರ್ಯ ದೇವನಿಂದ 9 ವ್ಯಾಕರಣ ವಿದ್ಯೆಯನ್ನು ಹನುಮಂತ ಕಲಿಯಬೇಕಾಗಿತ್ತು. ಆದರೆ ಈ ವಿದ್ಯೆಗಳನ್ನು ಗೃಹಸ್ಥ ಜೀವನದಲ್ಲಿ ಇರುವವರಷ್ಟೆ ಕಲಿಯಬಹುದಾಗಿತ್ತು. ಹನುಮ ಬಾಲ ಬ್ರಹ್ಮಚಾರಿ, ಸನ್ಯಾಸವನ್ನು ಪರಿಪಾಲಿಸುವವ. ಹಾಗಾಗಿ ಈ ವಿದ್ಯೆಯನ್ನು ಹನುಮನಿಗೆ ಧಾರೆಯೆರೆಯಲು ಸೂರ್ಯ ದೇವ ಮದುವೆಯ ಪ್ರಸ್ತಾಪವನ್ನು ಮುಂದಿಡುತ್ತಾನೆ.

ಮೊದಲಿಗೆ ಒಪ್ಪಿಕೊಳ್ಳದ ಹನುಮಂತ ತದನಂತರ ದೇವತೆಗಳ ಆಗ್ರಹದಂತೆ ಮದುವೆಯಾಗಲು ಒಪ್ಪಿಗೆ ನೀಡುತ್ತಾನೆ. ಸೂರ್ಯನು ತನ್ನ ಶಕ್ತಿಯಿಂದ ಸುವರ್ಚಲೆಗೆ ಜನ್ಮ ನೀಡುತ್ತಾನೆ. ಈಕೆ ಅಯೋನಿಜೆ. ಭಾರತದಲ್ಲಿ ಹಿಂದಿನ ಕಾಲದಿಂದಲೂ ರೋಬೋಟ್ ತಂತ್ರಜ್ಞಾನ ಇತ್ತೆಂದು ಪುರಾಣಗಳಿಂದ ತಿಳಿದು ಬರುತ್ತದೆ. ಬಹುಷ ಈ ಸುವರ್ಚಲೆ ಒಂದೋ ಕೃತ್ರಿಮ ಗರ್ಭದ ಮೂಲಕ ಇಲ್ಲವೆ ರೋಬೋಟ್ ತಂತ್ರಜ್ಞಾನದ ಮೂಲಕ ಜನಿಸಿರಬಹುದು.

ಈಕೆಯ ವಿವಾಹ ಹನುಮಂತನೊಡನೆ ನಡೆಯುತ್ತದೆ ಮತ್ತು ಹನುಮಂತ ಸೂರ್ಯ ದೇವನಿಂದ ದಿವ್ಯ ವಿದ್ಯೆಗಳನ್ನೂ ಪಡೆದುಕೊಳ್ಳುತ್ತಾನೆ. ವಿವಾಹದ ಬಳಿಕವೂ ಹನುಮ ಸನ್ಯಾಸವನ್ನು ಪಾಲಿಸುತ್ತಾನೆ ಮತ್ತು ಸುವರ್ಚಲೆಯೂ ಧ್ಯಾನಾಸಕ್ತಳಾಗಿ ತನ್ನ ಜೀವನವನ್ನು ತಪಸ್ಸಿನಲ್ಲಿ ಕಳೆದು ಬಿಡುತ್ತಾಳೆ. ಯಾರ ಜನ್ಮ ಧರ್ಮ ರಕ್ಷಣೆಗಾಗಿ ಆಗಿರುತ್ತದೆಯೋ ಅಂತವರ ಜೀವನದಲ್ಲಿ ಮದುವೆಯೆಂಬುದು ನೆಪ ಮಾತ್ರವಾಗಿರುತ್ತದೆ. ರಾಮ, ಹನುಮಂತ, ಕೃಷ್ಣ, ಬುದ್ದ, ರಾಘವೇಂದ್ರ ಸ್ವಾಮಿ ಇವರೆಲ್ಲರ ಜನ್ಮವೂ ಒಂದು ಉದ್ದೇಶಕ್ಕಾಗಿಯೇ ಆಗಿರುವುದರಿಂದ ಇವರೆಲ್ಲರ ಜೀವನದಲ್ಲಿ ಮದುವೆಯೆಂಬುದು ಅನಿವಾರ್ಯ ಬಂಧನವಾಗಿರುವುದಿಲ್ಲ ಬದಲಾಗಿ ಜೀವನದಲ್ಲಿ ಅತ್ಯುನ್ನತವಾದುದನ್ನು ಸಾಧಿಸಲು ಪ್ರೇರಣೆಯಾಗಿರುತ್ತದೆ.

ಇದರಲ್ಲಿ ಇನ್ನೂ ಒಂದು ಪಾಠವಿದೆ. ಯಾರು ಸಂಸಾರಿಯಾಗಿ ಸನ್ಯಾಸಿಯಾಗಿರುತ್ತಾನೋ ಆತನಿಗೆ ದಿವ್ಯ ಶಕ್ತಿಗಳು ಇತರರಿಗಿಂತ ಬಹು ಬೇಗನೆ ಒದಗಿ ಬಿಡುತ್ತದೆ. ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಸಂಸಾರಿಯಾಗಿ ತದನಂತರ ಸನ್ಯಾಸಿಯಾಗುತ್ತಿದ್ದುದು ಇದೆ ಕಾರಣಕ್ಕಾಗಿ. ಸಂಸಾರಿಯಾದವನಿಗೆ ವೈರಾಗ್ಯವೂ ಬಲು ಬೇಗನೆ ಬಂದು ಬಿಡುತ್ತದೆ. ಇಲ್ಲವಾದಲ್ಲಿ ಆತ ಆಕರ್ಷಣೆಗೊಳಗಾಗಿ ಪಥಭ್ರಷ್ಟನಾಗುತ್ತಾನೆ. ಅದನ್ನು ನಾವು ಈ ಕಾಲದಲ್ಲಿ ಕಣ್ಣಾರೆ ಕಾಣುತ್ತಿದ್ದೇವೆ. ಈ ಕಥೆಯಲ್ಲಿ ಅದನ್ನೆ ಹೇಳುವ ಪ್ರಯತ್ನ ನಮ್ಮ ಪೂರ್ವಜರು ಮಾಡಿರಬಹುದು.

ಖಮ್ಮಾಮ್ ಜಿಲ್ಲೆಯಲ್ಲಿರುವ ಶ್ರಿ ಸುವರ್ಚಲ ಹನುಮಂತ ದೇವಾಲಯದಲ್ಲಿ ಪ್ರತಿವರ್ಷ ಜೇಷ್ಠ ಶುದ್ದ ದಶಮಿಯಂದು ಹನುಮಂತ-ಸುವರ್ಚಲೆಯರ ವಿವಾಹ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಸಾವಿರಾರು ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಭೇಟಿ ನೀಡುವ ದಂಪತಿಗಳ ಜೋಡಿ ಸದಾ ಜೊತೆಗಿರುತ್ತದೆ ಎನ್ನುವ ನಂಬಿಕೆ ಇದೆ! ಈ ದೇವಸ್ಥಾನವನ್ನು ಯಾರು, ಯಾವಾಗ ಕಟ್ಟಿಸಿದ್ದೆನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಭಾರತದಲ್ಲಿ ಹನುಮಂತ ಪತ್ನೀ ಸಮೇತ ಪೂಜಿಸಲ್ಪಡುವ ಏಕೈಕ ದೇವಸ್ಥಾನ ಇದೆ ಇರಬಹುದು.

source: the hindu

Postcard team

Tags

Related Articles

FOR DAILY ALERTS
 
FOR DAILY ALERTS
 
Close