ಪ್ರಚಲಿತ

ರಾಜ್ಯಕ್ಕೇ ಮಾದರಿಯಾದ ಉಡುಪಿ ಶಾಸಕರ ಈ ಕೆಲಸ.! ರಾಜಕೀಯ ಕೆಸರೆರೆಚಾಟದ ನಡುವೆಯೇ ಕೆಸರು ತೆಗೆದ ಶಾಸಕರು..!

ಮಳೆ ಇಲ್ಲದೆ ರಾಜ್ಯದಲ್ಲಿ ಅಕ್ಷರಶಃ ಬರದ ಕಾರ್ಮೋಡ ಕವಿದಿದೆ. ಹಂತ ಹಂತಕ್ಕೂ ಕೊಳವೆ ಬಾವಿ ತೋಡಿದರೂ ನೀರು ಸಿಗುತ್ತಿಲ್ಲ. ಬಾವಿಯಲ್ಲಂತೂ ನೀರು ಬತ್ತಿ ಹೋಗಿದೆ. ಇದು ಉತ್ತರ ಕರ್ನಾಟಕದ ವಿಷಯ ಅಲ್ಲ. ಸದಾ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಕರಾವಳಿಯ ವಿಚಾರ. ಈ ಬಾರಿ ಕರಾವಳಿಯಲ್ಲೂ ಮುಂಗಾರು ಕೈಕೊಟ್ಟಿದ್ದು ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ನಗರ ಪ್ರದೇಶಗಳಲ್ಲಂತೂ ನೀರೇ ಸಿಗುತ್ತಿಲ್ಲ. ರಾಜ್ಯದೆಲ್ಲೆಡೆ ಇಂತಹಾ ಪರಿಸ್ಥಿತಿ ಇದ್ದರೂ ಇದಕ್ಕೆ ಪರಿಹಾರ ಕಂಡುಹಿಡಿಯಬೇಕಾದ ರಾಜಕಾರಣಿಗಳು, ಜನಪ್ರತಿನಿಧಿಗಳು ಮಾತ್ರ ರಾಜಕೀಯ ಕೆಸರೆರೆಚಾಟದಲ್ಲೇ ತೊಡಗಿಕೊಂಡಿದ್ದಾರೆ.

ಕರಾವಳಿಯ ಉಡುಪಿ ನಗರದಲ್ಲಿಯೂ ನೀರಿನ ಅಭಾವ ಉಂಟಾಗಿತ್ತು. ನಗರದ ಜನತೆ ನೀರಿಲ್ಲದೆ ಪರದಾಡುವಂತೆ ಆಗಿತ್ತು. ಬಜೆ ಡ್ಯಾಂಗೆ ನೀರು ಬಾರದೆ ಒಣಗುತ್ತಿತ್ತು. ಉಡುಪಿಯ ಬಜೆ ಡ್ಯಾಂಗೆ ಬರಬೇಕಾಗಿದ್ದ ನೀರನ್ನು ಕಾಪು ವಿಧಾನಸಭಾ ಕ್ಷೇತ್ರದ ಬಸ್ತಿ ಮತ್ತು ಮಾಣಾಯಿ ಗ್ರಾಮದ ಜನತೆ ತಡೆದಿದ್ದರು. ತಮ್ಮ ಗ್ರಾಮಕ್ಕೆ ನೀರು ಸಿಗುತ್ತಿಲ್ಲ, ಹೀಗಾಗಿ ನೀರನ್ನು ಬಿಟ್ಟುಕೊಡುವುದಿಲ್ಲ ಎಂದು ಹಠ ಹಿಡಿದಿದ್ದರು. ಮಾತ್ರವಲ್ಲದೆ ನೀರು ಬಿಡುಗಡೆಗೊಳಿಸುವ ಪ್ರಕ್ರಿಯೆಗೆ ಅಧಿಕಾರಿಗಳು ಜೆಸಿಬಿ ಯಂತ್ರವನ್ನು ತಂದಿದ್ದಾಗ ಆ ಯಂತ್ರದ ಅಡಿಯಲ್ಲಿ ಮಲಗಿ ಜನತೆ ವಿರೋಧ ವ್ಯಕ್ತಪಡಿಸಿದ್ದರು. ಉಡುಪಿ ನಗರಕ್ಕೆ ಬರಬೇಕಾದ ನೀರಿಗೆ ತೊಂದರೆ ಉಂಟಾಗಿತ್ತು.

ಅಧಿಕಾರಿಗಳಿಗೆ ಜನತೆ ಖ್ಯಾರೆ ಎನ್ನದಿದ್ದನ್ನು ಕಂಡ ಉಡುಪಿ ಶಾಸಕ ಕೆ ರಘುಪತಿ ಭಟ್ ಖುದ್ದು ಕಾಪು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಕಾಪು ಕ್ಷೇತ್ರದ ಬಸ್ತಿ ಮತ್ತು ಮಾಣಾಯಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದರು. “ನಿಮ್ಮ ಬೇಡಿಕೆಯಷ್ಟು ನೀರನ್ನು ತನ್ನ ಸ್ವಂತ ಖರ್ಚಿನಿಂದಲೇ ನೀಡುತ್ತೇನೆ. ಮುಂದಿನ 15 ದಿನಗಳ ಕಾಲ ಟ್ಯಾಂಕರಿನಲ್ಲಿ ನೀರು ಕೊಡುವ ವ್ಯವಸ್ಥೆಯತನ್ನು ಮಾಡುತ್ತೇನೆ. ಆದರೆ ಈಗ ಉಡುಪಿ ನಗರಕ್ಕೆ ನೀರು ನೀಡಬೇಕಾದರೆ ನಿಮ್ಮ ಸಹಕಾರ ಅಗತ್ಯ” ಎಂದು ಮನವೊಲಿಸಿದ್ದರು. ಶಾಸಕರ ಭರವಸೆಯ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ವಾಪಾಸು ಪಡೆದರು.

ಈ ಎರಡು ಗ್ರಾಮಗಳಿಗೆ ಸ್ವಂತ ಖರ್ಚಿನಿಂದ ನೀರು ನೀಡಿದ್ದು ಮಾತ್ರವಲ್ಲದೆ ಆ ನದಿಯ ಕಸ ವಿಲೇವಾರಿ ಹಾಗೂ ನೀರು ಹರಿವಿಗೆ ಕಾರಣವಾದ ಹೂಳೆತ್ತುವಿಕೆಗೆ ತನ್ನ ಕ್ಷೇತ್ರದ ನಗರದ ಜನರನ್ನು ಆಹ್ವಾನಿಸಿ ತಾನೂ ಕೆಲಸಕ್ಕೆ ಇಳಿದುಬಿಟ್ಟಿದ್ದರು. ಎರಡು ದಿನದಿಂದ ನಡೆಯುತ್ತಿರುವ ಶ್ರಮದಾನ ಮತ್ತೆ ಮುಂದುವರೆಯುತ್ತಿದೆ. ಜನರನ್ನು ಒಟ್ಟುಗೂಡಿಸಿ ತಾನೂ ಅವರೊಂದಿಗೆ ಕೆಲಸ ಮಾಡುವ ಮೂಲಕ ಕಾಪು ಕ್ಷೇತ್ರದಿಂದ ತನ್ನ ಕ್ಷೇತ್ರಕ್ಕೆ ನೀರು ಹರಿಸುವ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ.

ರಾಜ್ಯದಲ್ಲಿ ಬರಬಂದು ನೀರಿಗಾಗಿ ಪರದಾಟ ಎಂದು ಸುದ್ಧಿ ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ಧಿಯಾಗುತ್ತಲೇ ಇದೆ. ಆದರೆ ಇವೆಲ್ಲದರ ನಡುವೆ ಸದ್ಧಿಲ್ಲದೆ ಮತ್ತೊಂದು ಕ್ಷೇತ್ರದ ಜನತೆಗೆ ತನ್ನ ಖರ್ಚಿನಿಂದ ನೀರು ಕೊಟ್ಟು ಅಲ್ಲಿನ ನದಿಯಿಂದ ತನ್ನ ಕ್ಷೇತ್ರಕ್ಕೆ ನೀರು ಹರಿಯುವಂತೆ ಮಾಡಿದ್ದು ಮಾತ್ರವಲ್ಲದೆ ತಾನೇ ಶ್ರಮದಾನಕ್ಕೆ ಇಳಿದಿದ್ದು ಉಡುಪಿ ಕ್ಷೇತ್ರದ ಮಾತ್ರವಲ್ಲದೆ ಕರ್ನಾಟಕ ರಾಜ್ಯದ ಜನತೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಮರಳು ಹೋರಾಟ, ಟೋಲ್ ಗೇಟ್ ಸಹಿತ ಅನೇಕ ವಿಚಾರಗಳಲ್ಲಿ ಶಾಸಕರ ಹೋರಾಟವನ್ನು ಜನರು ಮುಕ್ತಕಂಠದಿಂದ ಶ್ಲಾಘಿಸಿದ್ದು, ಇದೀಗ ಮತ್ತೊಂದು ವಿಧಾನಸಭಾ ಕ್ಷೇತ್ರದ ಜನತೆಯನ್ನು ಮನವೊಲಿಸಿ ತನ್ನ ಕ್ಷೇತ್ರಕ್ಕೆ ನೀರು ಹರಿಯುವಂತೆ ಮಾಡಿದ್ದು ಮತ್ತೊಮ್ಮೆ ಶಾಸಕರ ಅಭಿವೃದ್ಧಿ ಹಾಗೂ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close