ಪ್ರಚಲಿತ

ಕಳೆದ 15 ವರ್ಷದಲ್ಲಿ “ಕಾಂಗ್ರೆಸ್ ಕಂಬಳ” ಎಂದೇ ಖ್ಯಾತಿಗೊಂಡಿದ್ದ ಪ್ರತಿಷ್ಠಿತ ಮೂಡಬಿದಿರೆ ಕಂಬಳ ಈ ಬಾರಿ ಸಂಪೂರ್ಣ ಕೇಸರಿಮಯಗೊಂಡಿದ್ದೇಗೆ? ಕಂಬಳ ವೇದಿಕೆಯಲ್ಲೂ ರಾರಾಜಿಸಿದ ಕೇಸರಿ ಧ್ವಜ!!!

 

“ಕಂಬಳ” ಹೆಸರು ಕೇಳುತ್ತಿದ್ದಂತೆ ಕರಾವಳಿಯ ಜನರ ಮೈಯಲ್ಲಿ ರೋಮಾಂಚನವಾಗುತ್ತದೆ ಕಿವಿ ನೆಟ್ಟಗಾಗುತ್ತದೆ ಅಷ್ಟೇ ಅಲ್ಲದೆ ಹಾಸಿಗೆ ಹಿಡಿದ ಅಜ್ಜ ಅಜ್ಜಿ ಕೂಡ ಕಂಬಳ ವೀಕ್ಷಿಸಲು ಥಟ್ಟನೆ ಎದ್ದು ಕೂರುತ್ತಾರೆ , ಇದು ಕಂಬಳಕ್ಕಿರುವ ಗೌರವ ಮತ್ತು ಹೆಮ್ಮೆ. ಹೌದು ಕಂಬಳ ಕ್ರೀಡೆ ಕರಾವಳಿಯ ಜನರ ಜೀವಾಳ ಎಂದರೂ ತಪ್ಪಾಗದು.ಕಂಬಳ ಕ್ರೀಡೆಯಲ್ಲಿ ಯಾವುದೇ ಜಾತಿ ಧರ್ಮದ ಭೇದ ಭಾವ ಇಲ್ಲ, ಯಾವುದೇ ರಾಜಕೀಯ ನಾಟಕಗಳು ಇಲ್ಲ. ಇಂತಹ ಒಂದು ಕ್ರೀಡೆಗೆ ಕಾಂಗ್ರೆಸ್ ರಾಜಕೀಯ ಬಣ್ಣ ಬಳಿದಿತ್ತು ಮಾತ್ರವಲ್ಲದೆ ಪ್ರತೀ ವರ್ಷ ನಡೆಯುವ ಕಂಬಳ ನೋಡುಗರ ಕಣ್ಣಿಗೆ ಇದೊಂದು “ಕಾಂಗ್ರೆಸ್ ಕಂಬಳ” ಎಂದೇ ಬಿಂಬಿಸಿತ್ತು.‌ ಕಂಬಳಾಭಿಮಾನಿಗಳು ಯಾವುದೇ ರಾಜಕೀಯ ಪಕ್ಷಗಳ ಆಟಕ್ಕೆ ಕುಣಿಯುವವರಲ್ಲ ಅದೇ ರೀತಿ ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳಕ್ಕೆ ರಾಜಕೀಯ ಪ್ರವೇಶಿಸಲೂ ಬಾರದು.‌ ಆದರೂ ಕಾಂಗ್ರೆಸ್ ಒಂದು ರೀತಿಯಲ್ಲಿ ಕಂಬಳದಲ್ಲೂ ರಾಜಕೀಯ ನಡೆಸಿತ್ತು. ಆದರೆ ಕಾಲ ಒಂದೇ ರೀತಿ ಇರುವುದಿಲ್ಲ ಮತ್ತು ರಾಜಕೀಯ ಆಟ ಕೂಡ ಹೆಚ್ಚು ದಿನ ಉಳಿಯುವುದಿಲ್ಲ ಎಂಬುದು ಸದ್ಯ ಸ್ಪಷ್ಟವಾಗಿದೆ..!

ಸಂಪೂರ್ಣ ಕೇಸರೀಮಯವಾದ ಜೋಡುಕರೆ ಕಂಬಳ!

ಕಂಬಳ ಕ್ರೀಡೆ ಅಂದ್ರೆನೇ ಒಂದು ರೀತಿಯ ಹುಚ್ಚು, ಅದರಲ್ಲೂ ರಾಜಕೀಯ ನಡೆಸಿದರೆ ಕಂಬಳದ ಸೊಬಗು ಕಡಿಮೆ ಆಗುತ್ತದೇ ವಿನಃ ಹೆಚ್ಚಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಕಳೆದ 15 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕಂಬಳ, ಕಾಂಗ್ರೆಸ್ ಶಾಸಕರ ನೇತೃತ್ವದಲ್ಲೇ ನಡೆಯುತ್ತಿತ್ತು. ಕಂಬಳಕ್ಕೆ ರಾಜಕೀಯ ನಾಯಕರು ನೇತೃತ್ವ ವಹಿಸಿದರೆ ತಪ್ಪೇನಿಲ್ಲ ಆದರೆ ಕಂಬಳವನ್ನೇ ರಾಜಕೀಯಕ್ಕೆ ಸೇರಿಸುವುದು ತಪ್ಪು. ಆದರೆ ಮೂಡಬಿದಿರೆಯ ಕಂಬಳ ಇದೊಂದು ಕಾಂಗ್ರೆಸ್ ಕಂಬಳ ಎಂದೇ ಕರೆಯಲ್ಪಡುತ್ತಿತ್ತು.

ರಾಜಕೀಯಕ್ಕೆ ಸಂಬಂಧಪಟ್ಟ ವಿಚಾರವನ್ನು ರಾಜಕೀಯವಾಗಿಯೇ ನೋಡಬೇಕು ನಾಡಿನ‌ ಆಚಾರ ವಿಚಾರಗಳನ್ನು ರಾಜಕೀಯವಾಗಿ ನೋಡಬಾರದು. ಈ ಬಾರಿಯ ಮೂಡಬಿದಿರೆಯ ಜೋಡುಕರೆ ಕಂಬಳ ನೋಡುಗರನ್ನು ವಿಶೇಷವಾಗಿ ಆಕರ್ಷಿಸಿದೆ , ಈ ಬಾರಿ ಇಲ್ಲಿ ಬಿಜೆಪಿ ಆಡಳಿತವಿದೆ ಮತ್ತು ಕೇಸರಿ ಪಡೆಗಳ ಪ್ರಾಬಲ್ಯ ಇದೆ. ಇದೇ ಕಾರಣದಿಂದ ಈ ಬಾರಿಯ ಜೋಡುಕರೆ ಕಂಬಳದ ಕರೆ ಸಂಪೂರ್ಣ ಕೇಸರೀಮಯಗೊಂಡಿತ್ತು ಮಾತ್ರವಲ್ಲದೆ ಮುಖ್ಯ ವೇದಿಕೆಯ ಮೇಲ್ಬಾಗದಲ್ಲೇ ಕೇಸರಿ ಧ್ವಜ ರಾರಾಜಿಸುತ್ತಿತ್ತು. ಸಂಘಪರಿವಾರದ ಕಾರ್ಯಕರ್ತರ ಮತ್ತು ಕಂಬಳಾಭಿಮಾನಿಗಳನ್ನು ಈ ಬಾರಿಯ ಕಂಬಳ ವಿಶೇಷವಾಗಿ ಆಕರ್ಷಿಸಿತ್ತು ಎಂದರೆ ತಪ್ಪಾಗದು.

ಕಂಬಳ ಸಮಿತಿಯ ಪರವಾಗಿ ಸ್ವಯಂ ಸೇವಕರಿಗೆ ಮತ್ತು ಉಸ್ತುವಾರಿ ನೋಡಿಕೊಳ್ಳುವ ಕಾರ್ಯಕರ್ತರಿಗೆ ಒಂದೊಂದು ಶಾಲು ನೀಡಿ ಗೌರವಿಸಲಾಗುತ್ತದೆ, ಆದರೆ ಕಳೆದ 15 ವರ್ಷಗಳಿಂದ ಇಲ್ಲಿ ಕಂಡು ಬಂದಿದ್ದು ಕೇವಲ ನೀಲಿ / ಹಸಿರು ಶಾಲುಗಳು. ಆದರೆ ಈ ಬಾರಿ ಪ್ರತಿಯೊಬ್ಬರ ತಲೆ ಮೇಲೂ ಮತ್ತು ಹೆಗಲ ಮೇಲೆ ಕೇಸರಿ ಬಣ್ಣದ ಶಾಲು ಹೊಳೆಯುತ್ತಿತ್ತು. ಇಂತಹ ಬದಲಾವಣೆ ಬಯಸಿದ್ದ ಕಾರ್ಯಕರ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಎಲ್ಲೆಲ್ಲೂ ಕೇಸರಿಗಳದ್ದೇ ದರ್ಬಾರು ನೋಡುವಾಗ ತುಂಬಾ ಖುಷಿ ಆಗುತ್ತಿತ್ತು.!

ತುಳುನಾಡ ಮಣ್ಣಿನ‌ ಮಗಳಿಗೂ ಸಿಕ್ಕಿತು ವಿಶೇಷ ಗೌರವ.!

ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕನ ಹೆಸರಿನಲ್ಲೇ ಮೂಡಬಿದಿರೆಯಲ್ಲಿ ಒಂದು ಗ್ರಾಮ‌ ಇದೆ, ಆ ಗ್ರಾಮದ ಆವರಣದಲ್ಲೇ ಕೋಟಿ – ಚೆನ್ನಯ ಜೋಡುಕರೆ ಕಂಬಳ ಪ್ರತೀ ವರ್ಷ ನಡೆಯುತ್ತದೆ. ಕೇವಲ ಹೆಸರಿನಲ್ಲಿ ಮಾತ್ರ ಈ ಗ್ರಾಮ ಅಬ್ಬಕ್ಕನಿಗೆ ಗೌರವ ನೀಡುತ್ತಿತ್ತೇ ವಿನಃ ಮತ್ಯಾವ ಗೌರವವೂ ಲಭಿಸಲಿಲ್ಲ. ಆದರೆ ಇದೀಗ ಅಂದರೆ 16ನೇ ವರ್ಷದ ಕಂಬಳದ ಸಂದರ್ಭದಲ್ಲಿ ಮುಖ್ಯ ವೇದಿಕೆಯ ಮುಂಬಾಗದಲ್ಲೇ ರಾಣಿ ಅಬ್ಬಕ್ಕನ ಬೃಹತ್ ಫೋಟೋ ಇಟ್ಟು ಗಣ್ಯರಿಂದ ಗೌರವ ಪಡೆಯುವಂತಾಗಿದೆ. ರಾಣಿ ಅಬ್ಬಕ್ಕನ ಮೂಡಬಿದಿರೆಯ ಮಣ್ಣಿನ ಮಗಳು, ಆದರೂ ಈವರೆಗೆ ಯಾರೊಬ್ಬರೂ ಕೂಡ ಈಕೆಯ ಹೆಸರಿಗೆ ಗೌರವ ಸಲ್ಲಿಸುವ ಕೆಲಸ ಮಾಸಿರಲಿಲ್ಲ. ಆದರೆ ಮೂಡಬಿದಿರೆಯ “ಜವನೆರ್ ಬೆದ್ರ” ಎಂಬ ಸಮಾಜಮುಖಿ ಸಂಘಟನೆಯೊಂದು ರಾಣಿ ಅಬ್ಬಕ್ಕನಿಗೆ ವಿಶೇಷ ಗೌರವ ಸಿಗಲೇಬೇಕು ಎಂದು ಹೋರಾಡುತ್ತಾ ಬಂದಿದೆ. ಈ ಸಂಘಟನೆ ಈಗಾಗಲೇ ತಮ್ಮ ಕೆಲಸದ ಮೂಲಕವೇ ಕ್ಷೇತ್ರದ ಜನರ ಮನ-ಮನೆಯ ಮಾತಾಗಿದೆ ಎಂದರೂ ತಪ್ಪಾಗದು. ಕೊನೆಗೂ ಜವನೆರ್ ಬೆದ್ರ ಸಂಘಟನೆಯ ಹೋರಾಟಕ್ಕೂ ಫಲ ಸಿಕ್ಕಿದೆ ಮತ್ತು ತುಳುನಾಡ ಮಣ್ಣಿನ ಮಗಳಿಗೂ ವಿಶೇಷ ಗೌರವ ಲಭಿಸಿದೆ.

ಅಷ್ಟೇ ಅಲ್ಲದೆ ಕಂಬಳದ ವೇದಿಕೆಯ ಮೇಲೆ ತುಳು ಲಿಪಿ ಈ ಬಾರಿ ಕಂಡುಬಂದಿದ್ದು ತುಳುವರಿಗೆ ಸಂತಸ ತಂದಿದೆ. ಏಕೆಂದರೆ ಕಂಬಳದ ಅಧ್ಯಕ್ಷರಾಗಿ ಕ್ಷೇತ್ರದ ಶಾಸಕರಾದ ಶ್ರೀ ಉಮನಾಥ್ ಕೋಟ್ಯಾನ್ ಅವರು ವಹಿಸಿಕೊಂಡಿದ್ದರು. ಕೋಟ್ಯಾನ್ ತುಳು ಅಕಾಡಮಿಯ ಅಧ್ಯಕ್ಷರೂ ಆಗಿದ್ದು ತುಳು ಭಾಷೆಯನ್ನು ಕಂಬಳದಲ್ಲಿ ಮುಖ್ಯವಾಗಿ ಪ್ರತಿನಿಧಿಸಿದ್ದಾರೆ.!

ಈ ಬಾರಿಯ ಕಂಬಳ “ಬಿಜೆಪಿ ಕಂಬಳ” ಎಂದು ಕೆಲವರು ಹೇಳಿಕೊಂಡಿದ್ದರು, ಆದರೆ ಬಿಜೆಪಿ ಪಕ್ಷ ಇಲ್ಲಿ ಯಾವುದೇ ಹಸ್ತಕ್ಷೇಪ ಮಾಡಿರಲಿಲ್ಲ ಎಂಬುದು ಸ್ಪಷ್ಟ ಮತ್ತು ಈ ಬಾರಿಯ ಕಂಬಳ ಅನೇಕ ಹೊಸ ಹೊಸ ವಿಚಾರಗಳಿಗೆ ಸಾಕ್ಷಿಯಾಯಿತು‌ ಎಂಬುದು ಗಮನಿಸಬೇಕಾದ ಅಂಶ. !

–ಪಿ ಆರ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close