ಇತಿಹಾಸ

47 ವರ್ಷಗಳ ಹಿಂದಿನ ಭಾರತ-ಪಾಕಿಸ್ತಾನ ಯುದ್ದದ ಕಥಾನಾಯಕ ಜನರಲ್ ಜೇಕಬ್ ಒಂದು ತೊಟ್ಟು ರಕ್ತವೂ ಹರಿಸದೆ 93000 ಪಾಕ್ ಸೈನಿಕರನ್ನು ಭಾರತದ ಮುಂದೆ ಮಂಡಿಯೂರುವಂತೆ ಮಾಡಿದ್ದು ಹೇಗೆ?

ಇವತ್ತಿಗೆ ಸರಿಯಾಗಿ 47 ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ಯುದ್ದ ನಡೆದಿತ್ತು. ಡಿಸೆಂಬರ್ 3 ರಂದು ಶುರುವಾದ ಯುದ್ದ ಡಿಸೆಂಬರ್ 16 ರ ವರೆಗೆ ನಡೆದಿತ್ತು. ಈ ಯುದ್ದದಲ್ಲಿ ಭಾರತ ಅನಾಯಾಸವಾಗಿ ಗೆದ್ದಿತ್ತು. ಪ್ರತಿವರ್ಷ ಡಿಸೆಂಬರ್ 16ನೇ ತಾರೀಕನ್ನು ‘ವಿಜಯ್ ದಿವಸ್’ ಎಂದು ಆಚರಣೆ ಮಾಡಲಾಗುತ್ತದೆ. ಈ ಯುದ್ದದ ಜೊತೆ ಒಬ್ಬ ಕಥಾನಾಯಕನ ಹೆಸರು ಅಂಟಿಕೊಂಡಿದೆ. ಇತಿಹಾಸದ ಪುಟಗಳಲ್ಲಿ ಹುದುಗಿ ಹೋದ ಆ ಕಥಾನಾಯಕನೆ ಲೆಫ್ಟಿನೆಂಟ್ ಜನರಲ್ ಜೆ.ಎಫ್.ಆರ್ ಜೇಕಬ್.

ಶಸ್ತ್ರವನ್ನೆ ಎತ್ತದೆ ಒಂದು ತೊಟ್ಟು ರಕ್ತವನ್ನು ಹರಿಸದೆ 93000 ಪಾಕ್ ಸೈನಿಕರನ್ನು ಭಾರತದ ಮುಂದೆ ಮಂಡಿಯೂರುವಂತೆ ಮಾಡಿದ್ದರು ಜೇಕಬ್

ಲೆಫ್ಟಿನೆಂಟ್ ಜನರಲ್ ಜೆ.ಎಫ್.ಆರ್ ಜೇಕಬ್ ತಮ್ಮ ಸೇನಾ ವಲಯದಲ್ಲಿ ಜ್ಯಾಕ್ ಎಂದೆ ಪರಿಚಿತರು. 1923 ರಲ್ಲಿ ಕೋಲ್ಕತ್ತಾದಲ್ಲಿ ಜನನ. ಜ್ಯಾಕ್ ಒಬ್ಬ ಅಪ್ಪಟ ಯಹೂದಿ ಪರಿವಾರದವರು. ಆದರೆ ಭಾರತವನ್ನು ಅದಮ್ಯವಾಗಿ ಪ್ರೀತಿಸುತ್ತಿದ್ದ ಜ್ಯಾಕ್ ತಮ್ಮ 19 ನೇ ವಯಸ್ಸಿಗೇ ಭಾರತೀಯ ಸೇನೆಯನ್ನು ಸೇರಿಕೊಂಡಿದ್ದರು. ತಮ್ಮ 36 ವರ್ಷದ ಸುದೀರ್ಘ ಸೇವೆಯಲ್ಲಿ ದ್ವಿತೀಯ ಮಹಾಯುದ್ದದಲ್ಲಿಯೂ ಭಾಗವಹಿಸಿದ್ದರು. 1947 ರಲ್ಲಿ ಭಾರತ ಪಾಕಿಸ್ತಾನ ವಿಭಜನೆಯಾದಾಗ ಭಾರತದ ಪರವಾಗಿ ನಿಂತು 1965 ಮತ್ತು 1971 ರ ಯುದ್ದಗಳಲ್ಲಿ ಭಾಗವಹಿಸಿದ್ದರು.

ಭಾರತೀಯ ಸೇನಾಧ್ಯಕ್ಷ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೇಕ್ ಶಾ ಅವರ ಬಲಗೈ ಬಂಟ ಜ್ಯಾಕ್. ಎಂತಹ ಸೋಜಿಗ ನೋಡಿ. ಅಂಕಲ್ ಸ್ಯಾಮ್ ಎಂದೆ ಚಿರಪರಿಚಿತರಾದ ಮಾಣೇಕ್ ಶಾ ಒಬ್ಬ ಪಾರ್ಸಿ, ಜ್ಯಾಕ್ ಒಬ್ಬ ಯಹೂದಿ ಆದರೆ ಇಬ್ಬರೂ ತಮ್ಮ ತನು ಮನ ಧನಗಳಿಂದ ತಾಯಿ ಭಾರತಿಯ ಸೇವೆ ಮಾಡಿ ಧನ್ಯರಾಗಿದ್ದಾರೆ.

ಭಾರತೀಯ ಸೇನೆಯ ಚೀಫ್ ಮಾಣೇಕ್ ಶಾ ನ ಅಣತಿಯಂತೆ ಜ್ಯಾಕ್ ಢಾಕಾ ತಲುಪಿದ್ದರು. ಅಲ್ಲಿ ನಿಯಾಜೀ ಜೊತೆ ಮಾತುಕತೆ ನಡೆಸಲು ಮತ್ತು ಯುದ್ದ ತ್ಯಾಗ ಮಾಡಲು ಪಾಕಿಸ್ತಾನಿಗಳನ್ನು ಒಪ್ಪಿಸಲು ಜ್ಯಾಕ್ ಅನ್ನು ಕಳುಹಿಸಲಾಗಿತ್ತು. ಜ್ಯಾಕ್ ಕೈಯಲ್ಲಿ ಶಸ್ತ್ರವೆ ಇಲ್ಲ, ಮಾತ್ರವಲ್ಲ ಅವರ ಜೊತೆಗಿದ್ದದ್ದು ಕೇವಲ 3000 ಸೈನಿಕರು ಅದೂ ಕೂಡಾ ಢಾಕಾದಿಂದ ಮೂವತ್ತು ಕಿ.ಮೀ ಹೊರಗೆ. ಪಾಕಿಸ್ತಾನದ ಬಳಿ ಆ ಹೊತ್ತಿನಲ್ಲಿ 26,400 ಸೈನಿಕರಿದ್ದರು. ಆದರೆ ಚಾಣಾಕ್ಷ್ಯ ಜ್ಯಾಕ್ ಒಂದು ಉಪಾಯ ಮಾಡುತ್ತಾರೆ.

ಜ್ಯಾಕ್ ಶರಣಾಗತಿ ಪತ್ರ ಬರೆದುಕೊಂಡು ನಿಯಾಜಿ ಬಳಿ ತೆರಳಿ ಅದಕ್ಕೆ ಸಹಿ ಹಾಕಿ ಯುದ್ದ ವಿರಾಮ ಘೋಷಿಸುವಂತೆ ಕೇಳಿಕೊಳ್ಳುತ್ತಾರೆ. ಆದರೆ ಆತ ಒಪ್ಪುವುದಿಲ್ಲ. ಜ್ಯಾಕ್ ಮತ್ತು ನಿಯಾಜಿ ಮಧ್ಯೆ ವಾಗ್ವಾದಗಳು ನಡೆಯುತ್ತವೆ. ಆತ ಹಿಡಿದ ಪಟ್ಟು ಬಿಡದಾಗ ಜ್ಯಾಕ್ “ನೀವು ಶರಣಾದರೆ ನಿಮ್ಮ ಮತ್ತು ನಿಮ್ಮ ಪರಿವಾರದ ರಕ್ಷಣೆಯ ಜವಾಬ್ದಾರಿ ಹೊರುತ್ತೇನೆ ಇಲ್ಲವಾದರೆ ನಾನು ಯಾವುದಕ್ಕೂ ಜವಾಬ್ದಾರನಲ್ಲ” ಎನ್ನುತ್ತಾರೆ. ಮುಂದುವರಿಯುತ್ತಾ “ನಿಮಗೆ ನಾನು ಕೇವಲ ಮೂವತ್ತು ನಿಮಿಷ ಕೊಡುತ್ತೇನೆ. ಒಂದು ವೇಳೆ ನೀವು ಕದನ ವಿರಾಮಕ್ಕೆ ಒಪ್ಪದಿದ್ದರೆ ಢಾಕಾ ಮೇಲೆ ಬಾಂಬ್ ದಾಳಿ ನಡೆಸುತ್ತೇನೆ” ಎಂದು ಸಿಂಹದಂತೆ ಘರ್ಜಿಸಿ ಹೊರ ನಡೆದು ಬಿಡುತ್ತಾರೆ.

ಹೊರ ಬಂದ ಜ್ಯಾಕ್ ಚಿಂತಾಕ್ರಾಂತರಾಗುತ್ತಾರೆ. ಭಾರತೀಯ ಸೇನೆಯ ಬಳಿ ಯಾವುದೆ ಬಾಂಬ್ ಇರಲಿಲ್ಲ. ಜ್ಯಾಕ್ ನಿಶಸ್ತ್ರರಾಗಿದ್ದರು. ಕೇವಲ 3000 ಸೈನಿಕರ ಬಲದಿಂದ ಯುದ್ದ ಗೆಲ್ಲುವುದು ಸಾಧ್ಯವೆ ಇಲ್ಲ. ನಿಯಾಜಿ ಸೇನೆ ತಮ್ಮ ಮೇಲೆ ಆಕ್ರಮಣ ಮಾಡಿದರೆ ಬದುಕುಳಿಯುವುದು ಸಾಧ್ಯವೆ ಇಲ್ಲ. ಜ್ಯಾಕ್ ಹೆದರುವುದಿಲ್ಲ ಬದಲಿಗೆ ಮೂವತ್ತು ನಿಮಿಷಗಳ ಬಳಿಕ ಒಂಟಿ ಸಲಗದಂತೆ ಒಳ ನಡೆದ ಜ್ಯಾಕ್ ನಿಯಾಜಿ ಬಳಿ ತೆರಳಿ “ನೀವು ನನ್ನ ಮಾತನ್ನು ಸ್ವೀಕರಿಸುತ್ತೀರಾ” ಎಂದು ಪ್ರಶ್ನಿಸುತ್ತಾರೆ. ಆ ಕಡೆಯಿಂದ ಉತ್ತರ ಬರುವುದಿಲ್ಲ. ಸತತ ಮೂರು ಬಾರಿ ನಿಯಾಜಿಯನ್ನು ಪ್ರಶ್ನಿಸಿದರೂ ಉತ್ತರ ಬರದ್ದು ಕಂಡು, ಜ್ಯಾಕ್ ಶರಣಾಗತಿ ಪತ್ರವನ್ನು ಕೈಗೆತ್ತಿಕೊಂಡು “ನೀವು ನನ್ನ ಮಾತನ್ನು ಸ್ವೀಕರಿಸಿದ್ದೀರಿ ಎಂದುಕೊಂಡಿದ್ದೇನೆ” ಎಂದು ಯುದ್ದ ವಿರಾಮ ಘೋಷಿಸಿಯೆ ಬಿಡುತ್ತಾರೆ!

ಅಷ್ಟೆ ಪಾಕಿಸ್ತಾನ್ ಕಾ ಖೇಲ್ ಖತಮ್!! 93,000 ಸಾವಿರ ಸೈನಿಕರು ಅನಾಮತ್ತಾಗಿ ಭಾರತೀಯ ಸೇನೆಯ ಕಾಲ ಬುಡಕ್ಕೆ ಬಂದು ಬಿದ್ದಿದ್ದರು. ಜ್ಯಾಕ್ ನ ಒಂದೆ ಒಂದು ಬೆದರಿಕೆ ಪಾಕಿಸ್ತಾನದ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸಿತ್ತು. ನಂತರದ ಇತಿಹಾಸ ಎಲ್ಲರಿಗೂ ಗೊತ್ತಿದೆ. ಮುಂದೆ ನಿಯಾಜಿ ಬಳಿ ನೀವು ಯಾಕೆ ಶರಣಾಗತಿಗೆ ಒಪ್ಪಿಕೊಂಡಿರಿ ಎಂದು ಕೇಳಿದಾಗ ನನಗೆ ಜ್ಯಾಕ್ ಬೆದರಿಕೆ ಒಡ್ಡಿದ್ದರು. ಅವರು ನನ್ನನ್ನು ಬ್ಲ್ಯಾಕ್ ಮೇಲ್ ಮಾಡಿದ್ದರು, ನಮ್ಮ ಪರಿವಾರವನ್ನು ಕೊಲ್ಲುವ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದನಂತೆ.

ಹೀಗಿದ್ದರು ನಮ್ಮ ಭಾರತೀಯ ಸೇನೆಯ ಸೈನಿಕರು. ಭಾರತೀಯ ಸೇನೆ ಆಗಲೂ ಹಾಗೆ, ಈಗಲೂ ಹಾಗೆಯೆ. ಅಂಕಲ್ ಸ್ಯಾಮ್ ಇರಲಿ, ಜ್ಯಾಕ್ ಇರಲಿ, ಬಿಪಿನ್ ರಾವತ್ ಇರಲಿ ಭಾರತ ಮತ್ತು ಭಾರತದ ಅಸ್ಮಿತೆಯ ವಿಚಾರ ಬಂದಾಗ ಪ್ರಾಣ ಕೊಡಲೂ ಹಿಂಜರಿಯುವುದಿಲ್ಲ ನಮ್ಮ ಹೆಮ್ಮೆಯ ಸೈನಿಕರು. ಇಂತಹ ಸೈನಿಕರ ಬಲಿದಾನಕ್ಕೆ ನಮಿಸೋಣ.

-Postcard team

Tags

Related Articles

FOR DAILY ALERTS
 
FOR DAILY ALERTS
 
Close