ಪ್ರಚಲಿತ

ಭಾಜಪಾ ಶಾಸನದ ರಾಜ್ಯದಲ್ಲಿ ಸನಾತನದ ಪುನರುತ್ಥಾನ!! ಉತ್ತರಾಖಂಡ್ ನ 18,000 ಸರಕಾರಿ ಶಾಲೆಗಳಲ್ಲಿ ಮಧ್ಯಾನ್ನದ ಬಿಸಿ ಊಟಕ್ಕೂ ಮುಂಚೆ “ಭೋಜನ ಮಂತ್ರ” ಪಠಿಸುವಂತೆ ನಿರ್ದೇಶನ!!

ಇದು ಕೇವಲ ಭಾಜಪ ಶಾಸನದ ರಾಜ್ಯಗಳಲ್ಲಿ ಮಾತ್ರ ಸಾಧ್ಯ!! ಮಾಧ್ಯಮಗಳ ವರದಿಯ ಪ್ರಕಾರ ಉತ್ತರಾಖಂಡ್ ಸರಕಾರವು 12 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡ ಎಲ್ಲ 18,000 ಸರಕಾರಿ ಶಾಲೆಗಳಲ್ಲಿ ಮಧ್ಯಾನ್ನದ ಬಿಸಿ ಊಟದ ಮೊದಲು ‘ಭೋಜನ ಮಂತ್ರವನ್ನು’ ಪಠಿಸುವಂತೆ ನಿರ್ದೇಶನ ನೀಡಲು ನಿರ್ಧರಿಸಿದೆ. ಮಾತ್ರವಲ್ಲ ಈ ಮಂತ್ರಗಳನ್ನು ಶಾಲೆಯ ಅಡುಗೆ ಮನೆಯ ಗೋಡೆಗಳಲ್ಲೂ ಬರೆಯಲು ಆದೇಶಿಸಲಾಗಿದೆ. ಉತ್ತರಾಖಂಡಿನ ಶಿಕ್ಷಣ ಸಚಿವ ಅರವಿಂದ್ ಪಾಂಡೆ ಮತ್ತು ಇತರ ಅಧಿಕಾರಿಗಳು ಶಾಲೆಯ ಪಠ್ಯಕ್ರಮದಲ್ಲಿ ಸಂಸ್ಕೃತ ಪ್ರಾರ್ಥನೆಗಳನ್ನು ಸೇರಿಸುವಂತೆಯೂ ಸಲಹೆ ನೀಡಿದ್ದಾರೆ.

ಉತ್ತರಾಖಂಡ್ ಸರಕಾರವು ಶಾಲೆಗಳು ಮತ್ತು ಶಿಕ್ಷಕರ ಮೇಲೆ ಈ ನಿರ್ಣಯವನ್ನು ಬಲವಂತವಾಗಿ ಹೇರಿಲ್ಲ, ಬದಲಾಗಿ ಶಾಲೆಯ ಅಧಿಕಾರಿಗಳಿಗೆ ಈ ನಿರ್ದೇಶನವನ್ನು ಪಾಲಿಸುವ ಅಥವಾ ಪಾಲಿಸದಿರುವ ಸ್ವಾತಂತ್ರ್ಯವನ್ನು ನೀಡಿದೆ. ಆದರೂ ಇಂತಹ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡ ಉತ್ತರ ಪ್ರದೇಶದ ಸರಕಾರದ ಕ್ರಮವನ್ನು ಶ್ಲಾಘಿಸಲೆ ಬೇಕು. ಶಾಲಾ ಶಿಕ್ಷಣ ಮಂತ್ರಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು ವಿಮರ್ಶೆ ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ಸಲಹೆ ಸೂಚನೆ ನೀಡಿದರು. ಶಾಲೆಗಳಲ್ಲಿ ಊಟದ ಮೊದಲು ಭೋಜನ ಮಂತ್ರ ಪಠಿಸುವುದು ಮತ್ತು ಅಡುಗೆ ಮನೆಯ ಗೋಡೆಗಳಲ್ಲಿ ಮಂತ್ರಗಳನ್ನು ಶಾಲೆಗಳ ಮೇಲೆ ಬರೆಯುವುದು ಶಾಲಾ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಸ್ವಂತಿಕೆಗೆ ಬಿಟ್ಟಿದ್ದು ಎಂದು ಶಿಕ್ಷಣ ಮಂತ್ರಿ ಸ್ಪಷ್ಟ ಪಡಿಸಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಭೋಜನ ಮಂತ್ರ ಪಠಿಸುತ್ತಾರೆ ಎಂದು ಗೊತ್ತಾದ ಕೂಡಲೆ ಎಡಪಂಥೀಯರಿಗೆ ಚೇಳು ಕುಟುಕಿದಂತಾಗಿದೆ. ಎಡಪಂಥೀಯ ಮಾಧ್ಯಮಗಳೆಲ್ಲ ಈಗಾಗಲೇ ಗಂಟಲು ಹರಿಯಲು ಶುರುವಿಟ್ಟುಕೊಂಡಿದ್ದಾವೆ. ಇದು ಜಾತ್ಯಾತೀತ ದೇಶ ಹಾಗಾಗಿ ಇಲ್ಲಿನ ಶಾಲೆಗಳಲ್ಲಿ ಇಸ್ಲಾಮಿನ ಹದೀಸ್-ಕಲಮಾ ಮತ್ತು ಕ್ರೈಸ್ತರ ಪ್ರಾರ್ಥನೆಗಳನ್ನೆ ಪಠಿಸಬಹುದು. ಆದರೆ ಸಂಸ್ಕೃತ ಶ್ಲೋಕ-ಮಂತ್ರಗಳನ್ನು ಪಠಿಸುವಂತಿಲ್ಲ. ಅದು ಸಂವಿಧಾನಕ್ಕೆ ಮಾಡುವ ಅಪಮಾನ. ಶಾಲೆಗಳನ್ನು ಕೇಸರೀಕರಣ ಮಾಡುವ ಹುನ್ನಾರ-ಇದು ಭಾರತದ ಸೆಕ್ಯೂಲರ್ ಬ್ರಿಗೇಡಿನ ಇಬ್ಬಗೆ ನೀತಿ. ಬೆಂಕಿ ಬೀಳ ಇವರ ಜಾತ್ಯಾತೀತತೆಗೆ.

ಶಾಲಾ ಶಿಕ್ಷಣ ನಿರ್ದೇಶಕ ಆರ್. ಕೆ.ಕುಂವರವರ ಪ್ರಕಾರ ಪ್ರತಿದಿನ ಪಠ್ಯಕ್ರಮದಲ್ಲಿ ಯೋಗಾಭ್ಯಾಸವನ್ನು ಸೇರಿಸಿಕೊಳ್ಳುವುದು, ಮಹಾನ್ ಭಾರತೀಯ ರಾಷ್ಟ್ರೀಯ ನಾಯಕರ ಬಗ್ಗೆ ಜಾಗೃತಿ ಮೂಡಿಸುವುದು, ಪ್ರದೇಶದ ಕುಮಾವೊನಿ-ಗರ್ವಾಲಿ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡುವುದು ಮತ್ತು ಶಾಲೆಯ ದಿನವನ್ನು ಗಾಯತ್ರಿ ಮಂತ್ರ ಅಥವಾ ಸರಸ್ವತಿ ವಂದಾನದೊಂದಿಗೆ ಆರಂಭಿಸುವ ಹಲವಾರು ನಿರ್ಣಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಉತ್ತರಾಖಂಡ್ ಸರಕಾರದ ಈ ನಿರ್ಣಯಗಳು ಕಾರ್ಯರೂಪದಲ್ಲಿ ಜಾರಿಗೆ ಬಂದರೆ ಸಮಸ್ತ ಹಿಂದೂಗಳು ನಲಿದಾಡುವರು. ಸೆಕ್ಯೂಲರ್ ಬ್ರಿಗೇಡ್ ಮೈಯೆಲ್ಲಾ ಪರಚಿ ಗಾಯಮಾಡಿಕೊಳ್ಳುವುದಂತು ನಿಶ್ಚಿತ.

ಉತ್ತರಾಖಂಡಿನಲ್ಲಿ ಸನಾತನ ಧರ್ಮದ ಪುನರುತ್ಥಾನವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಅತ್ತ ಉತ್ತರಪ್ರದೇಶದಲ್ಲಿ ಸನಾತನ ಸಂತ ಯೋಗಿ, ಇತ್ತ ಉತ್ತರಾಖಂಡಿನಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಸರಕಾರಗಳು ಸನಾತನದ ಪುನರುತ್ಥಾನಕ್ಕಾಗಿ ದುಡಿಯುತ್ತಿವೆ. ಇನ್ನು ಜಾರ್ಖಂಡ್, ಮಧ್ಯಪ್ರದೇಶ, ಛತ್ತಿಸ್ ಗಢ್ ಸರಕಾರಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಈಗಾಗಲೆ ಗುರುಕುಲ ಶಾಲೆಗಳನ್ನು ತೆರೆಯುವ ನಿರ್ಧಾರ ಮಾಡಿವೆ. ಕರ್ನಾಟಕದ ಮತದಾರರು ಮನಸ್ಸು ಮಾಡಿದ್ದಿದ್ದರೆ ಕರ್ನಾಟಕವೂ ಈ ರಾಜ್ಯಗಳ ಸಾಲಿಗೆ ಸೇರುತ್ತಿತ್ತು. ಕರ್ನಾಟಕದ ಪಾಲಿಗೆ ಒದಗಿದ್ದ ಸುವರ್ಣಾವಕಾಶ ಸ್ವಲ್ಪದರಲ್ಲೆ ಕೈ ತಪ್ಪಿತು.

ಕೇಂದ್ರ ಸರಕಾರವು ಕೂಡಾ ಭಾರತಿಯ ಪ್ರಾಚೀನ ಪರಂಪರೆಯನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸುವ ನಿರ್ಧಾರ ಮಾಡಿದೆ. ಇದರ ಪ್ರಕಾರ NCERT ಪಠ್ಯಪುಸ್ತಕಗಳಲ್ಲಿ ಇನ್ನು ಮುಂದೆ ಆಯುರ್ವೇದ, ಉಪನಿಷತ್ತುಗಳು, ಸ್ಮೃತಿಗಳು, ಯೋಗ, ಖಗೋಳವಿಜ್ಞಾನ, ಲೋಹಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭಾರತೀಯ ತತ್ತ್ವಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕಾಣ ಸಿಗಲಿವೆ. ಅಂತೂ ಬ್ರಿಟಿಷರು ಕುಲಗೆಡಿಸಿದ್ದ ನಮ್ಮ ಪಾಠ್ಯ ಕ್ರಮವನ್ನು ಸರಿಪಡಿಸಿ ಮರಳಿ “ಭಾರತೀಯತೆ”ಯೆಡೆಗೆ ಕರೆತರಲು ಮೋದಿಯೆ ಬರಬೇಕಾಯಿತು. ಗಂಗೆಯನ್ನು ಶುದ್ದೀಕರಣ ಗೊಳಿಸಿದಂತೆಯೆ ಗಬ್ಬು ನಾರುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಶುಚಿಗೊಳಿಸುತ್ತಿರುವ ಮೋದಿ ಅವರಿಗೆ ನಮೋ. ಭಾಜಪ ಶಾಸನದ ರಾಜ್ಯಗಳಲ್ಲಿ ನಿಧಾನವಾಗಿಯಾದರೂ ಸರಿ ಸನಾತನ ಧರ್ಮದ ಪುನರುತ್ಥಾನವಾದರೆ ಅಷ್ಟೆ ಸಾಕು!

-ಶಾರ್ವರಿ

featured image for representation purpose only

Tags

Related Articles

FOR DAILY ALERTS
 
FOR DAILY ALERTS
 
Close