ಈಗ ಎಲ್ಲವೂ ಭಾರತೀಯ ಜನತಾ ಪಕ್ಷದ ನಾಯಕರು ಅಂದುಕೊಂಡಂತೆಯೇ ನಡೆಯುತ್ತಿದೆ. ಜ್ಯೋತಿಷ್ಯ ಪ್ರಕಾರವೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಮಯ ಅತ್ಯಂತ ಕೆಟ್ಟದಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಜಾತಕ ಅದ್ಭುತವಾಗಿದೆಯಂತೆ. ಅದರಂತೆಯೇ ಮೊದಲ ಎರಡು ದಿನದ ವಿಧಾನ ಮಂಡಲ ಅಧಿವೇಶನ ಬಿಜೆಪಿ ಎನಿಸಿದ ರೀತಿಯೇ ನಡೆದಿದೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜನತಾದಳ, ಹೀಗೆ ಮೂರೂ ಪ್ರಮುಖ ಪಕ್ಷಗಳೂ ಇದೀಗ ಮಾಡು ಇಲ್ಲವೇ ಮಡಿ ಎಂಬ ಫಾರ್ಮುಲವನ್ನು ಹೊಂದಿದೆ. ಬಿಜೆಪಿಗೆ ಇದು ಕೊನೇಯ ಅಸ್ತ್ರವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸುತ್ತಿರುವ ಬಜೆಟ್ ಕಲಾಪಕ್ಕೆ ಅತೃಪ್ತ ಶಾಸಕರನ್ನು ಗೈರಾಗಿಸುವುದು ಬಿಜೆಪಿ ಪ್ಲಾನ್ ಆಗಿದ್ದು ಈ ಪ್ಲಾನ್ ಕಳೆದ ಎರಡು ದಿನಗಳ ಅಧಿವೇಶನದಲ್ಲಿ ಗೆದ್ದು ಬಿಟ್ಟಿದೆ. ಎರಡೂ ದಿನದ ಕಲಾಪಕ್ಕೂ ಕಾಂಗ್ರೆಸ್ ಅತೃಪ್ತ ಶಾಸಕರು ಗೈರಾಗಿದ್ದು ಸರ್ಕಾರದ ಸಂಖ್ಯಾಬಲ ಕುಸಿದಿದೆ.
ಇಂದು ಸ್ಪೀಕರ್ ರಮೇಶ್ ಕುಮಾರ್ ನಾಳೆಗೆ ವಿಧಾನಸಭಾ ಕಲಾಪವನ್ನು ಮುಂದೂಡಿದ್ದು ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ. ಆದರೆ ಈ ಬಜೆಟ್ ಯಾವುದೇ ಕಾರಣಕ್ಕೂ ಮಂಡಿಸಲು ಅವಕಾಶ ನೀಡಬಾರದು ಎಂಬ ಹೋರಾಟವನ್ನು ಬಿಜೆಪಿ ಕೈಗೆತ್ತಿಕೊಂಡಿದೆ. ಈಗಾಗಲೇ ದೇವೇಗೌಡರ ಮನೆಯಲ್ಲಿ ವಿಶ್ರಾಂತಿಯಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆಯ ಬಗ್ಗೆನೇ ಚಿಂತೆಯಲ್ಲಿದ್ದಾರೆ.
ಇದೀಗ ಕಾಂಗ್ರೆಸ್ ಸಚಿವರು ತಮ್ಮ ಪದತ್ಯಾಗಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅತೃಪ್ತ ಶಾಸಕರು ಮುಂದೆ ಬರಲಿ, ನಾವು ನಮ್ಮ ಪದವಿಯನ್ನು ತ್ಯಾಗ ಮಾಡಿ ಅವರಿಗೆ ನೀಡಲು ಸಿದ್ಧರಿದ್ದೇವೆ ಎಂದು ಸಚಿವರುಗಳು ಸೂಚನೆ ನೀಡಿದ್ದಾರೆ. ಸಚಿವ ಯುಟಿ ಖಾದರ್, ಕೆಜೆ ಜಾರ್ಜ್ ಸಹಿತ ಐವರು ಸಚಿವರು ಈಗಾಗಲೇ ತಮ್ಮ ಸಸಚಿವ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಆದರೆ ಈ ಸಚಿವರುಗಳ ಯಾವುದೇ ಪದತ್ಯಾಗಕ್ಕೂ ಅತೃಪ್ತ ಶಾಸಕರು ಸೊಪ್ಪು ಹಾಕಿಲ್ಲ. ನಮಗೆ ಸಚಿವ ಸ್ಥಾನ ಬೇಡವೇ ಬೇಡ ಎಂಬ ಪರೋಕ್ಷ ಸಂದೇಶವನ್ನು ಶಾಸಕರು ನೀಡಿದ್ದಾರೆ. ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರೂ ಅತೃಪ್ತ ಶಾಸಕರು ಡೋಂಟ್ ಕೇರ್ ಎಂದಿದ್ದಾರೆ. ಇದು ಸರ್ಕಾರವನ್ನು ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ. ಇನ್ನು ಎಲ್ಲರ ಚಿತ್ತ ನಾಳಿನ ಬಜೆಟಿನತ್ತ ತಿರುಗಿದ್ದು ಯಾವ ರೂಪವನ್ನು ಪಡೆದುಕೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.
-ಏಕಲವ್ಯ