ಅಂಕಣ

ಅಲ್ಲಾವುದ್ದೀನ್ ಖಿಲ್ಜಿಯೆಂಬ ಧೂರ್ತನ ಸೈನ್ಯಕ್ಕೆ ಮಣ್ಣು ಮುಕ್ಕಿಸಿ ಸೋಮನಾಥದ ಜ್ಯೋತಿರ್ಲಿಂಗವನ್ನೂ ಮತ್ತು ಕೊಳ್ಳೆ ಹೊಡೆದ ಸಂಪತ್ತನ್ನೂ ರಕ್ಷಿಸಿದ ರಜಪೂತ ರಾಜ ಕಾನ್ಹಡ ದೇವ ಚೌಹಾನ

ಅಲ್ಲಾವುದ್ದೀನ್ ಖಿಲ್ಜಿಯೆಂಬ ಮತಾಂಧ ಧೂರ್ತನ ಬಗ್ಗೆ ಎಲ್ಲರಿಗೂ ಗೊತ್ತು ಆದರೆ ಆ ಖಿಲ್ಜಿಯ ಬಲಿಷ್ಟ ಸೈನ್ಯಕ್ಕೆ ಮಣ್ಣು ಮುಕ್ಕಿಸಿ ಸೋಮನಾಥ ದೇವಾಲಯದ ಜ್ಯೋತಿರ್ಲಿಂಗವನ್ನೂ ಮತ್ತು ಆತನ ಸೈನ್ಯ ಕೊಳ್ಳೆ ಹೊಡೆದ ಸಂಪತ್ತನ್ನೂ ರಕ್ಷಿಸಿದ ವೀರ ರಜಪೂತ ರಾಜ ಕಾನ್ಹಡ ದೇವ ಚೌಹಾನನ ಬಗ್ಗೆ ತಿಳಿದಿರಲಿಕ್ಕಿಲ್ಲ. ರಾಜಸ್ಥಾನದ ಮಣ್ಣಿನ ಗುಣವೋ ಏನೋ ಅಲ್ಲಿ ಪರಮ ಪರಾಕ್ರಮಿ ವೀರ-ವೀರಾಂಗನೆಯರೆ ಹುಟ್ಟಿದ್ದಾರೆ. ಇಸ್ಲಾಮಿನ ಆಕ್ರಮಣಕಾರಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಹಲವಾರು ರಾಜ-ರಾಣಿಯರು ಈ ಮಣ್ಣಿನಲ್ಲಿ ಆಗಿ ಹೋಗಿದ್ದಾರೆ. ಅಂತಹದ್ದೆ ಒಬ್ಬ ರಾಜ ಕಾನ್ಹಡ ದೇವ ಚೌಹಾನ. ರಾಜಸ್ಥಾನದ ಜಾಲೋರ್ ರಾಜ್ಯ ಕಾನ್ಹಡ ದೇವನ ಆಳ್ವಿಕೆಯಲ್ಲಿತ್ತು. ಜಾಲೋರಿನ ಬಗ್ಗೆ ಒಂದು ಮಾತು ಬಹಳ ಪ್ರಚಲಿತವಾಗಿದ್ದ ಕಾಲವದು.

“ಆಕಾಶವೆ ಬಿರಿಯಲಿ, ಭೂಮಿಯೆ ಬಾಯಿ ಬಿಡಲಿ, ಮೈಗೆ ತೊಟ್ಟಿರುವ ಅಂಗವಸ್ತ್ರ ಮತ್ತು ಶಸ್ತ್ರಾಸ್ತ್ರಗಳು ತುಂಡು ತುಂಡಾಗಲಿ, ಬರಿ ಮೈಯಲ್ಲಿ ಹೋರಾಡುವಂತಾದರೂ ಜಾಲೋರಿನ ಸ್ವಾತಂತ್ರ್ಯವನ್ನು ಬಿಟ್ಟು ಕೊಡೆವು”. ಈ ಮಾತನ್ನ ಶಿರಸಾವಹಿಸಿ ಪಾಲಿಸುತ್ತಿದ್ದರು ಜಾಲೋರಿನ ರಾಜ ವಂಶಸ್ಥರು. ರಾಜಾ ಕಾನ್ಹಡ ದೇವ ಬದುಕಿರುವವರೆಗೂ ಒಬ್ಬೇ ಒಬ್ಬ ಮುಗಲನಿಗೂ ಜಾಲೋರನ್ನು ತನ್ನ ಆಳ್ವಿಕೆಗೆ ಒಳಪಡಿಸಲು ಸಾಧ್ಯವಾಗಿರಲಿಲ್ಲ. ತನ್ನ ರಾಜ್ಯದಲ್ಲಿ ಖಿಲ್ಜಿಯ ಸೇನೆಯ ಪ್ರವೇಶವನ್ನು ನಿಷೇಧಿಸಿದ್ದ ಏಕೈಕ ರಾಜ ಕಾನ್ಹಡ ದೇವ. ಕಾನ್ಹಡ ದೇವನಿಗೆ ಖಿಲ್ಜಿಯ ಮೇಲೆ ಎಳ್ಳಷ್ಟೂ ಭರವಸೆ ಇರಲಿಲ್ಲ, ತನ್ನ ರಾಜ್ಯದಲ್ಲಿ ಪ್ರವೇಶ ನೀಡಿದರೆ ತನ್ನ ಪ್ರಜೆಗಳು ಸಂಕಷ್ಟ ಅನುಭವಿಸುತ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು.

ಜಾಲೋರಿನ ಅಕ್ಕ ಪಕ್ಕದ ರಾಜ್ಯಗಳನ್ನು ಗೆದ್ದ ಅಲ್ಲಾವುದ್ದೀನ್ ಖಿಲ್ಜಿ ಆ ರಾಜ್ಯಗಳನ್ನು ತನ್ನ ಸಾಮ್ರಾಜ್ಯದೊಳಗೆ ವಿಲೀನಗೊಳಿಸಿದ್ದ. ಗುಜರಾತನ್ನು ಗೆಲ್ಲಬೇಕೆಂಬ ಆತನ ಮಹಾತ್ವಾಕಾಂಕ್ಷೆ ಆತನ ಸೈನ್ಯವನ್ನು ಆಕ್ರಮಣ ಮಾಡುವಂತೆ ಪ್ರೇರೇಪಿಸಿತು. ಗುಜರಾತಿಗೆ ಆಕ್ರಮಣ ಮಾಡಿದ ಆತನ ಸೈನ್ಯ ಅಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿತು. ಗುಜರಾತಿನ ಸೋಮನಾಥ ಮಂದಿರವನ್ನು ಕೊಳ್ಳೆ ಹೊಡೆದು, ಮಂದಿರದ ಸಂಪತ್ತನ್ನು ಸೂರೆಗೈದು ಹಿಂದೂ ಪುರುಷ ಮಹಿಳೆಯರಾದಿಯಾಗಿ ಎಲ್ಲರನ್ನೂ ಬಂಧಿಸಿ ದೆಹಲಿಗೆ ವಾಪಾಸಾಗುತ್ತಿತ್ತು.

ಅಲ್ಲಾವುದ್ದೀನ್ ಖಿಲ್ಜಿಯ ಆದೇಶದಂತೆ ಎಲ್ಲಾ ರಾಜರುಗಳು ಆತನ ಸೈನ್ಯವನ್ನು ತಮ್ಮ ರಾಜ್ಯಗಳ ಮೂಲಕ ಸಾಗಲು ಅನುಮತಿ ನೀಡಿದ್ದರು. ಜಾಲೋರಿನ ರಾಜ ಕಾನ್ಹಡ ದೇವನ ರಾಜ್ಯದಲ್ಲಿ ಮಾತ್ರ ಮುಗಲ್ ಸೇನೆಯ ಪ್ರವೇಶಕ್ಕೆ ಸುತರಾಂ ಅನುಮತಿ ಇರಲಿಲ್ಲ. ಜಾಲೋರ್ ರಾಜನಿಗೆ ಭೀರಾಮ್ ದೇವನೆಂಬ ಮಗನೂ ಇದ್ದ. ಈತನನ್ನು ಖಿಲ್ಜಿ ತನ್ನ ಆಸ್ಥಾನದಲ್ಲಿ ನಡೆಯುವ ಕುಸ್ತಿ ಪಂದ್ಯಕ್ಕೆ ಆಹ್ವಾನಿಸಿದ್ದ. ಖಿಲ್ಜಿಯ ಆಸ್ತಾನದ ಕುಸ್ತಿ ಪಟುವನ್ನು ಸೋಲಿಸಿದ ಭೀರಾಮ್ ದೇವನ ಪರಾಕ್ರಮಕ್ಕೆ ಖಿಲ್ಜಿಯ ಮಗಳು ಮನ ಸೋಲುತ್ತಾಳೆ ಮತ್ತು ಆತನನ್ನೆ ಮದುವೆಯಾಗುವುದಾಗಿ ಹಠ ಹಿಡಿಯುತ್ತಾಳೆ.

ಆದರೆ ಭೀರಾಮ್ ದೇವ ಮದುವೆಗೆ ಒಪ್ಪುವುದಿಲ್ಲ. ಖಿಲ್ಜಿ ಭೀರಾಮ ದೇವ ತನ್ನ ಮಗಳನ್ನು ಮದುವೆಯಾಗಬೇಕು ಮತ್ತು ಇಸ್ಲಾಂಗೆ ಮತ ಪರಿವರ್ತನೆ ಮಾಡಬೇಕು ಎಂದು ಹೇಳಿದಾಗ ಆಯಿತೆಂದು ಒಪ್ಪಿಕೊಂಡ ಭೀರಾಮ್ ದೇವ ತಾನು ರಾಜ್ಯಕ್ಕೆ ಮರಳಿ ಸಕಲ ಸಿದ್ದತೆಗಳೊಂದಿಗೆ ವಾಪಾಸಾಗಿ ಮದುವೆ ಆಗುತ್ತೇನೆ ಎಂದು ಹೇಳಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಾನೆ. ಜಾಲೋರಿಗೆ ಮರಳಿದ ಭೀರಾಮ್ ದೇವ ಮದುವೆ ಒಪ್ಪಿಗೆಯನ್ನು ರದ್ದು ಗೊಳಿಸುತ್ತಾನೆ. ಸರಿಯಾಗಿ ಅದೆ ಸಮಯಕ್ಕೆ ಗುಜರಾತಿನಿಂದ ಹಿಂದಿರುಗುತ್ತಿದ್ದ ಮುಗಲರ ಸೇನೆ ಜಾಲೋರನ್ನು ಪ್ರವೇಶಿಸಿತ್ತು.

ಅನುಮತಿ ಇಲ್ಲದಿದ್ದರೂ ಆಜ್ಞೆಯನ್ನು ಅವಗಣಿಸಿ ತಮ್ಮ ರಾಜ್ಯವನ್ನು ಪ್ರವೇಶಿಸಿ ಶಿಬಿರ ಹಾಕಿದ ಮುಗಲ ಸೇನೆಯ ವಿಷಯ ಕಾನ್ಹಡ ದೇವನ ಕಿವಿಗೆ ಬೀಳುತ್ತದೆ. ಅದರಲ್ಲೂ ಸೇನೆಯ ಬಳಿ ಸೋಮನಾಥದ ಶಿವಲಿಂಗ ಮತ್ತು ಸಂಪತ್ತು ಇದೆ ಎಂದು ಗೊತ್ತಾದ ಕೂಡಲೆ ಕಾನ್ಹಡ ದೇವ ಕೋಪದಿಂದ ಕೆಂಡಾಮಂಡಲರಾಗುತ್ತಾರೆ ಮತ್ತು ತನ್ನ ಅತಿ ಬಲಿಷ್ಟ ಸೇನೆಯನ್ನು ಕಳಿಸಿ ಮುಗಲರ ಮೇಲೆ ಆಕ್ರಮಣ ಮಾಡುತ್ತಾರೆ. ಭೀಷಣ ಯುದ್ದದಲ್ಲಿ ರಜಪೂತ ಸೇನೆಯ ಎದುರು ಖಿಲ್ಜಿಯ ಸೇನೆ ಮಣ್ಣು ಮುಕ್ಕುತ್ತದೆ. ಸೇನೆಯ ಕೈಯಿಂದ ಶಿವಲಿಂಗ ಮತ್ತು ಸಂಪತ್ತನ್ನು ಕಸಿದುಕೊಂಡು ಹಿಂದೂಗಳನ್ನು ಬಿಡಿಸಲಾಗುತ್ತದೆ.

ಶಿವಲಿಂಗವನ್ನು ಗಂಗಾಜಲದಿಂದ ಪವಿತ್ರಗೊಳಿಸಿದ ರಾಜ ಕಾನ್ಹಡ ದೇವ ಅದನ್ನು ಜಾಲೋರಿನಲ್ಲಿ ಪ್ರತಿಷ್ಟಾಪಿಸುತ್ತಾರೆ. ಯುದ್ದದಲ್ಲಿ ಸೋತ ಖಿಲ್ಜಿ ಸೇಡಿನ ಜ್ವಾಲೆಯಿಂದ ಬೇಯುತ್ತಾನೆ. ತನ್ನ ಇಬ್ಬರು ಸೇನಾಧಿಕಾರಿಗಳಾದ ನಹರ್ ಮಲಿಕ್ ಮತ್ತು ಭೋಜನನ್ನು ಜಾಲೋರ್ ಕೋಟೆಯನ್ನು ವಶಪಡಿಸಿಕೊಳ್ಳಲು ಸೇನೆಯೊಂದಿಗೆ ಕಳುಹಿಸಿ ಕೊಡುತ್ತಾನೆ. ಆದರೆ ರಜಪೂತ ಸೇನೆ ಅವರಿಬ್ಬರನ್ನೂ ಸೋಲಿಸಿ ಕತ್ತರಿಸಿ ಹಾಕುತ್ತದೆ. ಸೋಲೊಪ್ಪಿಕೊಳ್ಳದ ಖಿಲ್ಜಿ ಎರಡನೆ ಬಾರಿಗೆ ಕಮಲುದ್ದೀನ್ ಗರ್ಗ್ ನೇತೃತ್ವದಲ್ಲಿ ಮತ್ತೂ ದೊಡ್ಡ ಸೈನ್ಯ ಕಳುಹಿಸಿ ಕೋಟೆಗೆ ಮುತ್ತಿಗೆ ಹಾಕಿಸುತ್ತಾನೆ.

ಸತತ ಎರಡು ವರ್ಷಗಳವರೆಗೆ ನಡೆದ ಈ ಯುದ್ಧದಲ್ಲಿ ರಜಪೂತ ಸೇನೆಗೆ ಸೋಲಾಗುತ್ತದೆ. ರಾಜಾ ಕಾನ್ಹಡ ದೇವ ಮತ್ತು ಪುತ್ರ ಭೀರಾಮ ದೇವ ವೀರಾವೇಶದಿಂದ ಹೋರಾಡಿ ವೀರಗತಿಯನ್ನು ಪಡೆಯುತ್ತಾರೆ. ಕೋಟೆಯ ವೀರಾಂಗನೆಯರು “ಜೋಹರ್” ಕುಂಡಕ್ಕೆ ಹಾರಿ ತಮ್ಮ ಮಾನವನ್ನು ಕಾಪಾಡಿಕೊಳ್ಳುತ್ತಾರೆ. ಶಿವಲಿಂಗ ಮತ್ತು ಸಂಪತ್ತಿಗಾಗಿ ಖಿಲ್ಜಿಯ ಸೇನೆ ಇಡಿಯ ಕೋಟೆಯನ್ನೆ ಜಾಲಾಡುತ್ತದೆ ಆದರೆ ಶಿವಲಿಂಗ ಅವರ ಕೈಗೆ ದಕ್ಕುವುದಿಲ್ಲ. ಧರ್ಮ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರರು ಅಮರರಾಗುತ್ತಾರೆ. ಆದರೆ ಅವರ ಪರಾಕ್ರಮ ಇತಿಹಾಸದ ಪುಟಗಳಲ್ಲಿ ದಾಖಲಾಗುವುದಿಲ್ಲ. ಭಾರತದ ಮಂದಿರವನ್ನು ಒಡೆದ, ಸಂಪತ್ತನ್ನು ಕೊಳ್ಳೆ ಹೊಡೆದ, ಹಿಂದೂ ಪುರುಷರ ತಲೆ ಕಡಿದ, ಮಹಿಳೆಯ ಮಾನ ಕಳೆದ ಮತಾಂಧರು ಇಲ್ಲಿ ಮಹಾನಾಯಕರಾಗುತ್ತಾರೆ. ಇದು ಭಾರತದ ದೌರ್ಭಾಗ್ಯ.

source: myindiamyglory.com

–Postcard team

image for representation purpose only

Tags

Related Articles

FOR DAILY ALERTS
 
FOR DAILY ALERTS
 
Close