ಪ್ರಚಲಿತ

ಸ್ಮರಣಿಕೆಗಳನ್ನು ಹರಾಜಿಗಿಟ್ಟು ಸಂಗ್ರಹವಾದ ಹಣವನ್ನು ಗಂಗಾನದಿ ಶುದ್ದೀಕರಣಕ್ಕೆ ಮೀಸಲಿಟ್ಟ ಮೋದಿ! ದೇಶದ ಜನರ ಮೆಚ್ಚುಗೆಗೆ ಪಾತ್ರವಾಯಿತು ಪ್ರಧಾನಿಯ ಈ ನಿರ್ಧಾರ!

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಏನೇ ಮಾಡಿದರೂ ಅದರಲ್ಲಿ ಒಂದು ಉತ್ತಮ ಯೋಚನೆ ಇದ್ದೇ ಇರುತ್ತದೆ ಎಂಬುದು ಈಗಾಗಲೇ ಇಡೀ ದೇಶವೇ ಒಪ್ಪಿಕೊಂಡ ಸತ್ಯ. ತಾನು ಮಾಡುವ ಪ್ರತೀ ಕೆಲಸದಲ್ಲೂ, ತಾನು ತೆಗೆದುಕೊಳ್ಳುವ ಪ್ರತೀ ನಿರ್ಧಾರದಲ್ಲೂ ದೇಶದ ಹಿತವನ್ನೇ ಉದ್ದೇಶವನ್ನಾಗಿಟ್ಟುಕೊಂಡು ಯೋಚನೆ-ಯೋಜನೆ ರೂಪಿಸುವ ಪ್ರಧಾನಿ ಮೋದಿ ಇದೀಗ ಮತ್ತೊಂದು ವಿಶಿಷ್ಟ ನಿರ್ಧಾರದ ಮೂಲಕ ದೇಶದ ಜನರ ಗಮನ ಸೆಳೆದಿದ್ದಾರೆ. ದೇಶ ವಿದೇಶ ಸೇರಿದಂತೆ ಮೋದಿ ಕೈಗೊಂಡ ಪ್ರವಾಸ ಒಂದಲ್ಲ ಎರಡಲ್ಲ, ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದರೂ ಆ ದೇಶದ ಅಥವಾ ರಾಜ್ಯದ ಸಂಪ್ರದಾಯದಂತೆ ಸ್ಮರಣಿಕೆ ನೀಡಿ ಗೌರವಿಸುತ್ತಾರೆ.

ಇಂತಹ ಸ್ಮರಣಿಕೆಗಳನ್ನು ಮೋದಿ ತನ್ನ ಮನೆಯಲ್ಲಿ ಅಥವಾ ಕಛೇರಿಯಲ್ಲಿ ಇಟ್ಟುಕೊಳ್ಳದೆ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಅದರಲ್ಲೂ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ “ನಮಾಮಿ ಗಂಗೆ” ಯೋಜನೆಗೆ ಹೆಚ್ಚು ಒತ್ತು ನೀಡಿ, ತನಗೆ ಬಂದ ಸ್ಮರಣಿಕೆಗಳನ್ನು ಹರಾಜಿಗಿಟ್ಟು ಅದರಲ್ಲಿ ಸಂಗ್ರಹವಾದ ಹಣವನ್ನು ಗಂಗಾ ನದಿಯ ಶುದ್ಧೀಕರಣಕ್ಕೆ ಮೀಸಲಿಡುವ ಮೂಲಕ, ಮತ್ತೊಮ್ಮೆ ತಮ್ಮ ವಿಶೇಷ ನಿರ್ಧಾರವನ್ನು ಪ್ರದರ್ಶಿಸಿದ್ದಾರೆ.!

ವಿಶೇಷತೆಗೆ ಇನ್ನೊಂದು ಹೆಸರೇ ಮೋದಿ!

ಹೌದು ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ವಿಶೇಷವಾಗಿ ಏನಾದರೂ ಮಾಡಬೇಕು ಎಂಬ ಆಲೋಚನೆ ಹೊಂದಿರುವ ಪ್ರಧಾನಿ ಮೋದಿ, ಈ ಬಾರಿ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪವಿತ್ರ ಗಂಗಾನದಿಯ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ತನ್ನ ಅಧಿಕಾರ ಅವಧಿಯಲ್ಲಿ ತನಗೆ ಸಿಕ್ಕಿರುವ ಸ್ಮರಣಿಕೆಗಳನ್ನು ಹರಾಜಿಗಿಟ್ಟ ಮೋದಿ, ಇದೀಗ ಅದರಿಂದ ಸಂಗ್ರಹವಾದ ಎಲ್ಲಾ ಹಣವನ್ನೂ ನಮಾಮಿ ಗಂಗೆ ಯೋಜನೆಗೆ ಮೀಸಲಿಟ್ಟಿದ್ದಾರೆ. ಸ್ಮರಣಿಕೆಗಳನ್ನು 15 ದಿನಗಳ ಕಾಲ ಹರಾಜಿಗಿಟ್ಟಿದ್ದು, ಇದೀಗ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ, ಹರಾಜು ಪ್ರಕ್ರಿಯೆಗೆ ಜನರಿಂದ ಉತ್ತಮ ಸ್ಪಂದನೆ ಕೂಡ ಬಂದಿದ್ದು, ಸಾವಿರ ರೂಪಾಯಿ ಬೆಲೆಬಾಳುವ ವಸ್ತುಗಳು ಕೂಡ ಲಕ್ಷಾಂತರ ರೂಪಾಯಿಗೆ ಹರಾಜಾಗುವ ಮೂಲಕ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸತತ ಎರಡು ದಿನಗಳ ಕಾಲ ಮಾಡರ್ನ್ ಆರ್ಟ್ ಗ್ಯಾಲರಿ ಮೂಲಕ ಸ್ಮರಣಿಕೆಗಳನ್ನು ಬೌದ್ಧಿಕವಾಗಿ ಹರಾಜು ಮಾಡಲಾಗಿದೆ ಮತ್ತು ಅಂತರ್ಜಾಲದ ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಒಟ್ಟು 1800ಕ್ಕೂ ಹೆಚ್ಚು ವಸ್ತುಗಳನ್ನು ಹರಾಜು ಮಾಡಲಾಗಿದ್ದು, ಮೋದಿಯವರಿಗೆ ಲಭಿಸಿದ ಎಲ್ಲಾ ಸ್ಮರಣಿಕೆಗಳಿಗೂ ಉತ್ತಮ ಬೇಡಿಕೆ ಬಂದಿದ್ದು, ಎಲ್ಲಾ ವಸ್ತುಗಳು ಕೂಡ ಅತೀ ಹೆಚ್ಚು ಹಣಕ್ಕೆ ಮಾರಾಟವಾಗಿದೆ. ಎನ್‌ಜಿಎಂಎ ಆಯೋಜಿಸಿದ್ದ ಈ ಹರಾಜು ಪ್ರಕ್ರಿಯೆಯಲ್ಲಿ ಕೈಯಲ್ಲೇ ತಯಾರಿಸಿದ ಮರದ ಬೈಕ್ ಒಂದು ಬರೋಬ್ಬರಿ 5 ಲಕ್ಷಕ್ಕೆ ಹರಾಜಾಗಿದ್ದು, ಎಲ್ಲರ ಗಮನ ಸೆಳೆಯಿತು. ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಮತ್ತು ರೈಲ್ವೆ ನಿಲ್ದಾಣದ ಬಗ್ಗೆ ಇರುವ ಅನನ್ಯ ಬಾಂಧವ್ಯವನ್ನು ಬಿಂಬಿಸುವ ಒಂದು ಕಲಾಕೃತಿ ಕೂಡ ಉತ್ತಮ ಬೆಲೆಗೆ ಹರಾಜಾಗಿದೆ. ಈ ಕಲಾಕೃತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರೈಲ್ವೆ ನಿಲ್ದಾಣದಲ್ಲಿ ನಿಂತಿರುವುದನ್ನು ವಿಶಿಷ್ಠವಾಗಿ ಪ್ರದರ್ಶನ ಮಾಡಲಾಗಿತ್ತು.

ಅದೇ ರೀತಿ ಸುಮಾರು 5 ಸಾವಿರ ರೂಪಾಯಿ ಮೂಲ ದರ ಹೊಂದಿದ್ದ ಶಿವನ ಮೂರ್ತಿ ಒಂದು ಹರಾಜು ಪ್ರಕ್ರಿಯೆಯಲ್ಲಿ 200 ಪಟ್ಟು ಹೆಚ್ಚಿನ ಬೆಲೆಗೆ ಹರಾಜಾಗಿದೆ ಎಂಬುದು ವಿಶೇಷ. ‌ಅಶೋಕಸ್ತಂಭದ ಮರದ ಪ್ರತಿಕೃತಿಯೊಂದರ ಮೂಲ ಬೆಲೆ 4 ಸಾವಿರ ಆಗಿತ್ತು, ಆದರೆ ಹರಾಜು ಪ್ರಕ್ರಿಯೆಯಲ್ಲಿ ಈ ಪ್ರತಿಕೃತಿ ಬರೋಬ್ಬರಿ 13 ಲಕ್ಷಕ್ಕೆ ಮಾರಾಟವಾಗಿದೆ. ಮೋದಿಯವರಿಗೆ ಅಸ್ಸಾಂ ರಾಜ್ಯದ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಸಾಂಪ್ರದಾಯಿಕ ಸಂಕೇತ “ಹೊರೈ” ಯನ್ನು ನೀಡಿದ್ದರು.‌ ಅದರ ಮೂಲ ಬೆಲೆ 2 ಸಾವಿರ ಆಗಿತ್ತು, ಆದರೆ ಹರಾಜಿನ ಮೂಲಕ 12 ಲಕ್ಷಕ್ಕೆ ಹರಾಜಾಯಿತು. ಅಮೃತಸರದ ಎಸ್‌ಜಿ‌ಪಿ‌ಸಿ ಯಿಂದ ಸ್ವೀಕರಿಸಿದ್ದ “ದೈವತ್ವ” ದ ಸ್ಮರಣಿಕೆಯ ಮೂಲ ದರ 10 ಸಾವಿರ, ಆದರೆ ಬರೋಬ್ಬರಿ 10.1 ಲಕ್ಷಕ್ಕೆ ಹರಾಜು ಮಾಡಲಾಗಿದೆ. ಗೌತಮ ಬುದ್ಧನ ಪ್ರತಿಮೆಯ ಮೂಲ ದರ 4 ಸಾವಿರ, ಆದರೆ 7 ಲಕ್ಷಕ್ಕೆ ಹರಾಜಾಗುವ ಮೂಲಕ ಎಲ್ಲರ ಗಮನ ಸೆಳೆದ. ಹಾಗೂ ನೇಪಾಳದ ಮಾಜಿ ಪ್ರಧಾನಮಂತ್ರಿ ಸುಶೀಲ್ ಕೊಯಿರಾಲಾ ಅವರಿಂದ ಪಡೆದಿದ್ದ ಸಿಂಹದ ಕಂಚಿನ ಸಾಂಪ್ರಾದಾಯಿಕ ಪ್ರತಿಮೆಯನ್ನು 5.20 ಲಕ್ಷಕ್ಕೆ ಹರಾಜು ಹಾಕಲಾಯಿತು. ಅದೇ ರೀತಿ 10 ಸಾವಿರ ಬೆಲೆಬಾಳುವ ಉಬ್ಬು ಶಿಲ್ಪಗಳನ್ನು ಒಳಗೊಂಡ ಬೆಳ್ಳಿಯ ಕಲಶವು 6 ಲಕ್ಷಕ್ಕೆ ಹರಾಜಾಗಿದೆ. ಇವಿಷ್ಟು ಪ್ರಮುಖ ವಸ್ತುಗಳಾದರೆ ಇಂತಹ ನೂರಾರು ವಸ್ತುಗಳನ್ನು ಹರಾಜು ಹಾಕಲಾಯಿತು. ‌

ವಿಶೇಷವೆಂದರೆ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತನಗೆ ಸಿಗುವ ಸ್ಮರಣಿಕೆಗಳನ್ನು ಇದೇ ರೀತಿ ಹರಾಜು ಮಾಡುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಹರಾಜಿನಿಂದ ಸಂಗ್ರಹವಾದ ಹಣವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಳಸುತ್ತಿದ್ದರು. ಸದ್ಯ ಪ್ರಧಾನಮಂತ್ರಿ ಆದ ನಂತರವೂ ತಮ್ಮ ಹಳೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿರುವ ಮೋದಿ, ಈಗ ಹರಾಜಿನಿಂದ ಸಂಗ್ರಹವಾದ ಹಣವನ್ನು ಗಂಗಾನದಿಯ ಸ್ವಚ್ಛತೆಗೆ ಮೀಸಲಿಟ್ಟಿದ್ದು ಬಹಳ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close