ಪ್ರಚಲಿತ

ಲೋಕಸಭಾ ಚುನಾವಣೆಗೆ ಪ್ರಧಾನಿ ಮೋದಿ ರಣಕಹಳೆ! ಕಾಂಗ್ರೆಸ್ ಹಾಗೂ ಎಲ್ಲಾ ವಿಪಕ್ಷಗಳ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ನಮೋ! ಕಾರ್ಯಕರ್ತರೇ ಬಿಜೆಪಿಯ ಆಸ್ತಿ ಎಂದು ಮತ್ತೊಮ್ಮೆ ಘೋಷವಾಕ್ಯ ಮೊಳಗಿಸಿದ ಮೋದಿ!

ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿದ್ದ ಎಲ್ಲಾ ಬಿಜೆಪಿ ರಾಷ್ಟ್ರೀಯ ನಾಯಕರು ನಿನ್ನೆಯಿಂದಲೂ ಮೋದಿ ಸರಕಾರದ ಯೋಜನೆಗಳ ಬಗ್ಗೆ ಮತ್ತು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.‌ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಂತೂ ವಿಪಕ್ಷಗಳ ಜನ್ಮ ಜಾಲಾಡಿ ಬಿಟ್ಟರು, ಇದೀಗ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ ವಿಪಕ್ಷಗಳ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದು, ಬಿಜೆಪಿ ಸರಕಾರವನ್ನು ಯಾವ ವಿಪಕ್ಷಗಳಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದು ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಯಾವ ತಂತ್ರ ಕೂಡ ನಮ್ಮ ಜನಪರ ಯೋಜನೆಗಳ ಮುಂದೆ ಫಲಿಸುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಬಿಜೆಪಿ ಪಕ್ಷದ ಆಸ್ತಿ ನಮ್ಮ ಬೆಂಬಲಕ್ಕೆ ನಿಂತಿರುವ ಕಾರ್ಯಕರ್ತರೇ ಹೊರತು ‘ಮೋದಿ’ ಅಲ್ಲ ಎಂಬುದನ್ನು ಸಾರಿದರು.!

ದೇಶ ಮೊದಲು ಪಕ್ಷ ನಂತರ ಎಂದು ಆಡಳಿತ ನಡೆಸುತ್ತಿರುವ ನಾವು ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿದೆ ಎಂದು ಹೇಳಿದ ಮೋದಿ, ಈ ಹಿಂದಿನ‌ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಮಾಡಿದ್ದೇ ಆದಲ್ಲಿ ನಮಗೆ ಇಷ್ಟೊಂದು ಕಷ್ಟದ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು. ಈಗ ನಮ್ಮ ಸರಕಾರದ ವಿರುದ್ಧ ಮಾತನಾಡುವ ಕೆಲವರು ತಮ್ಮ ಅಧಿಕಾರದ ಅವಧಿಯಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬುದು ದೇಶದ ಜನರೇ ನೋಡಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ತಿವುಚಿದರು. ಯಾರು ಅಭಿವೃದ್ಧಿಯನ್ನು ಮಾಡದೆ ಕೇವಲ ನಮ್ಮ ದೇಶವನ್ನು ಲೂಟಿ ಮಾಡಿದರೋ ಅವರೇ ಇಂದು ಬಿಜೆಪಿ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ, ಆದರೆ ನಮ್ಮ ಸರಕಾರ ಏನೆಲ್ಲಾ ಮಾಡಿದೆ ಎಂಬುದು ದೇಶದ ಜನರ ಕಣ್ಣ ಮುಂದಿದೆ, ಇಂತಹ ಯೋಜನೆಗಳೇ ನಮ್ಮನ್ನು ಮುಂದಿನ ಚುನಾವಣೆಯಲ್ಲೂ ಗೆಲ್ಲಿಸಿಕೊಡುತ್ತದೆ ಎಂದು ಮೋದಿ ಹೇಳಿಕೊಂಡಿದ್ದಾರೆ.!

ನಮ್ಮ ಸರಕಾರದ ಯಶಸ್ಸಿಗೆ ಕಾರ್ಯಕರ್ತರು ಮತ್ತು ದೇಶದ ಜನರೇ ಕಾರಣ!

ಬಿಜೆಪಿ ಸರಕಾರ ಇಂದು ಈ‌ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ ಅದಕ್ಕೆ ಕಾರಣ ಮೋದಿ ಅಲ್ಲ, ನಮ್ಮ ಪಕ್ಷದ ಕಾರ್ಯಕರ್ತರೇ ನಮ್ಮ ಆಸ್ತಿ ಎಂದು ಹೇಳಿಕೊಂಡ ಪ್ರಧಾನಿ‌ ಮೋದಿ, ದೇಶವನ್ನು ಬಿಜೆಪಿ ಸರಕಾರ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದೆ ಎಂಬುದು ದೇಶದ ಜನರಿಗೆ ತಿಳಿದಿದೆ ಎಂದರು.‌ ದೇಶವನ್ನು ಮುನ್ನಡೆಸಲು ಸಾಧ್ಯವಾಗದವರು ಇಂದು ನಮ್ಮ ಸರಕಾರದ ಬಗ್ಗೆ ಮಾತನಾಡುತ್ತಾರೆ, ಆದರೆ ಯಾವ ವಿಪಕ್ಷಗಳ ದಾಳಿಗೂ ಬಿಜೆಪಿ ಜಗ್ಗುವುದಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದರು. ರೈತರ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ನಮ್ಮ ಸರಕಾರ, ರೈತರಿಗೆ 2022 ರವರೆಗೆ ಬೇಕಾದ ಎಲ್ಲಾ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.‌

ಅಷ್ಟೇ ಅಲ್ಲದೆ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಲಿದೆ, ಇದಕ್ಕೆ ಬೇಕಾದ ಯೋಜನೆ ನಮ್ಮ ಸರಕಾರ ರೂಪಿಸಿದೆ ಮತ್ತು ರೈತರ ಬೆಂಬಲಕ್ಕೆ ಬಿಜೆಪಿ‌ ಸರಕಾರ ಇದ್ದೇ ಇರುತ್ತದೆ ಎಂಬ ಭರವಸೆ ನೀಡಿದರು. ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಿದ್ದು ಈ ಹಿಂದಿನ‌ ಕಾಂಗ್ರೆಸ್ ಸರಕಾರ ಅಲ್ಲ, ರೈತರ ಪರ ನಿಂತಿರುವ ನಮ್ಮ ಬಿಜೆಪಿ ಸರಕಾರ ಎಂದು ಹೇಳಿದ ಮೋದಿ, ನಮ್ಮ ಸರಕಾರ ಜಾರಿಗೊಳಿಸಿದ ಯೋಜನೆಗಳಿಗೆ “ಮೋದಿ” ಎಂದು ಹೆಸರು ಇಟ್ಟಿಲ್ಲ, ಬದಲಾಗಿ ದೇಶಕಂಡ ಮಹಾನ್ ವ್ಯಕ್ತಿಗಳ ಹೆಸರನ್ನೇ ಇಡಲಾಗಿದೆ ಎಂದು ಹೇಳುತ್ತಾ, ಕಾಂಗ್ರೆಸ್ ಕೇವಲ ತಮ್ಮ ಕುಟುಂಬದ ಸದಸ್ಯರ ಹೆಸರನ್ನೇ ಬಳಸುತ್ತಾರೆ ಎಂಬುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ಅದೇ ರೀತಿ ದೇಶದ ಎಲ್ಲಾ ಅಭಿವೃದ್ಧಿ ನಾನೇ ಮಾಡಿದ್ದೇನೆ‌ ಎಂದು ಹೇಳುತ್ತಿಲ್ಲ, ಆದರೆ ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ಹೇಳಲಿ ಮೊದಲು ಎಂದು ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದರು.!

ಕರ್ನಾಟಕದ ಸಿಎಂ ಒಬ್ಬ ಕ್ಲರ್ಕ್, ಎಚ್‌ಡಿಕೆ ವಿರುದ್ಧ ಲೇವಡಿ!

ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡು ಸರಕಾರ ರಚನೆ‌ ಮಾಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪರಿಸ್ಥಿತಿ ಈಗ ಯಾವ ರೀತಿ ಇದೆ ಎಂಬುದು ಇಡೀ ದೇಶವೇ ನೋಡುತ್ತಿದೆ ಎಂದು ಕರ್ನಾಟಕದ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು “ನಾನು ಕ್ಲರ್ಕ್” ಎಂದು ಹೇಳಿಕೊಂಡಿದ್ದಾರೆ, ಕಾಂಗ್ರೆಸ್ ಜೊತೆ ಸೇರಿಕೊಂಡರೆ ಯಾವ ಪರಿಸ್ಥಿತಿ ಬರುತ್ತದೆ ಎಂಬುದು ಸದ್ಯ ಅವರಿಗೆ ಅರ್ಥ ಆಗಿದೆ, ಆದರೆ ಸರಕಾರ ರಚನೆಯಾದ ಕೇವಲ 6 ತಿಂಗಳಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೇಸತ್ತು ಹೋಗಿದ್ದಾರೆ ಎಂದರು. ಅಷ್ಟೇ ಅಲ್ಲದೆ “ಇದು ಕೇವಲ ಟ್ರೈಲರ್ ಅಷ್ಟೇ, ಸಿನಿಮಾ ಇನ್ನೂ ಕೂಡ ಬಾಕಿ ಇದೆ” ಎಂದು ಕುಮಾರಸ್ವಾಮಿ ವಿರುದ್ಧ ಲೇವಡಿ ಮಾಡಿದರು. ಜನರು ಆಯ್ಕೆ ಮಾಡಿದ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕೆಂದು ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ, ಆದರೆ ಈಗ ಕಾಂಗ್ರೆಸ್ ನೀಡುವ ಕಿರುಕುಳಕ್ಕೆ ಕುಮಾರಸ್ವಾಮಿ ಬೇಸತ್ತಿದ್ದಾರೆ ಎಂದು ಮೋದಿ ಹೇಳಿದರು.

ಒಬ್ಬ ಮೋದಿಯನ್ನು ಸೋಲಿಸಲು ಇಷ್ಟೆಲ್ಲಾ ಕಸರತ್ತು ನಡೆಸುವ ಕಾಂಗ್ರೆಸ್, ತನ್ನ ಆಡಳಿತದ ಅವಧಿಯಲ್ಲಿ ದೇಶದ ಬಗ್ಗೆ ಚಿಂತಿಸುತ್ತಿದ್ದರೆ ಇಂದು ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿರುತ್ತಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲರು‌ ಮೊದಲ ಪ್ರಧಾನಮಂತ್ರಿ ಆಗಿರುತ್ತಿದ್ದರೆ ಇಂದು ಭಾರತ ಯಾವತ್ತೋ ಅಭಿವೃದ್ಧಿ ಹೊಂದಿದ ದೇಶವಾಗಿರುತ್ತಿತ್ತು ಎಂದರು.!

ಕಾಂಗ್ರೆಸ್ ನಾಯಕರ ಟಾರ್ಗೆಟ್ ಒಂದೇ ಅದುವೇ ಮೋದಿ ಟಾರ್ಗೆಟ್!

ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅದು ವ್ಯರ್ಥ ಪ್ರಯತ್ನ ಎಂದು ಹೇಳಿದ ಮೋದಿ, ದೇಶದ ರಕ್ಷಣಾ ವ್ಯವಸ್ಥೆಯ ವಿಚಾರದಲ್ಲೂ ಕಾಂಗ್ರೆಸ್ ಭಾರೀ ಹಗರಣ ನಡೆಸಿದೆ ಎಂದು ರಫೆಲ್ ಡೀಲ್ ಬಗ್ಗೆ ಪ್ರಸ್ತಾಪಿಸಿದರು.‌ ರಫೆಲ್ ಡೀಲ್‌ನ ಪ್ರಮುಖ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್‌ನನ್ನು ಈಗಾಗಲೇ ಭಾರತಕ್ಕೆ ಎಳೆದುಕೊಂಡು ಬರಲಾಗಿದೆ, ಇದು ಇತಿಹಾಸದಲ್ಲೇ ಮೊದಲು ಒಬ್ಬ ಅಪರಾಧಿಯನ್ನು ವಿದೇಶದಿಂದ ವಾಪಾಸ್ ತರುವುದು ಎಂದು ಹೇಳಿದ್ದಾರೆ. ರಫೆಲ್ ಡೀಲ್ ಮತ್ತು ಹೆಲಿಕಾಪ್ಟರ್ ಖರೀದಿಯಲ್ಲಿ ಕಾಂಗ್ರೆಸ್ ಭಾರೀ ಹಗರಣ ನಡೆಸಿದೆ, ಇವೆಲ್ಲವನ್ನೂ ನಾವು ಸುಮ್ಮನೆ ಬಿಡುವುದಿಲ್ಲ ಎಲ್ಲಾ ಸತ್ಯಾಂಶವನ್ನು ಕೂಡ ದೇಶದ ಜನರ ಮುಂದೆ ಬಯಲಿಗೆಳೆಯುತ್ತೇವೆ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರು. ‌ಅಷ್ಟೇ ಅಲ್ಲದೆ ರಾಮಮಂದಿರ ವಿಚಾರವಾಗಿಯೂ ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದೆ, ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ತಯಾರಾಗಿದೆ ಆದರೆ ಕೋರ್ಟ್ ನಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದು, ತೀರ್ಪು ಹೊರಬೀಳದಂತೆ ತಡೆಯುತ್ತಿದೆ ಎಂದರು. ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಹಿಂದೂಗಳ ಪರವಾಗಿ ಭಾಷಣ ಮಾಡುತ್ತದೆ, ಆದರೆ ರಾಮಮಂದಿರ ನಿರ್ಮಾಣ ಆಗದಂತೆ ಸ್ವತಃ ತಮ್ಮದೇ ವಕೀಲರನ್ನು ನೇಮಿಸಿ ವಾದ ನಡೆಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.!

ಈ ಚೌಕಿದಾರ್ ಕೇವಲ ಮಾತನಾಡುವವನಲ್ಲ, ಮಾಡಿ ತೋರಿಸುವವನು ಎಂದು ಬಹಿರಂಗವಾಗಿ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ ನಮೋ, ಚೌಕಿದಾರ್ ಚೋರ್ ಹೈ ಎಂದ ಎಲ್ಲಾ ನಾಯಕರ ಒಂದೊಂದೇ ಕಳ್ಳ ಮುಖವನ್ನು ಬಯಲಿಗೆಳೆದು ಯಾರು ಕಳ್ಳರು ಎಂಬುದನ್ನು ದೇಶವೇ ನೋಡುವಂತೆ ಮಾಡುತ್ತೇನೆ‌ ಎಂದು ಸಾವಿರಾರು ಕೋಟಿಯ ಹಗರಣಗಳಲ್ಲಿ ಭಾಗಿಯಾದ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ಪ್ರಧಾನಿ ಮೋದಿ ಇಂದು ಆಡಿದ ಪ್ರತಿಯೊಂದು ಮಾತು ಕೂಡ ಮುಂದಿನ‌ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದಂತಾಗಿದೆ..!

-ಪಿ ಆರ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close