ಪ್ರಚಲಿತ

ಮೋದಿ ಇರೋವರೆಗೂ ಭಾರತವನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ! ಖರ್ಗೆ ಕೋಟೆಯಲ್ಲಿ ನಮೋ ಘರ್ಜನೆ!

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಕೂಡ ಜೋರಾಗಿ ನಡೆಯುತ್ತಿದೆ. ಒಂದೆಡೆ ಮೋದಿ ನೇತೃತ್ವದ ಬಿಜೆಪಿ ಕೂಡ ಪ್ರಚಾರ ಆರಂಭಿಸಿದ್ದು ಇತ್ತ ಮೋದಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ಪ್ರತಿಪಕ್ಷಗಳು ಒಂದಾಗಿ ಚುನಾವಣೆಗೆ ರಣಕಹಳೆ ಮೊಳಗಿಸಿವೆ. ರಾಜ್ಯದಲ್ಲೂ ಈಗಾಗಲೇ ಮೋದಿ ಹಲವಾರು ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಕರ್ನಾಟಕದಲ್ಲೂ ಚುನಾವಣಾ ಕಹಳೆ ಮೊಳಗಿಸಿದ್ದರು. ಇದೀಗ ಮತ್ತೆ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಸೋಲಿಲ್ಲದ ಸರದಾರ ಎಂದೇ ಕರೆಯಲ್ಪಡುವ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರವಾದ ಕಲಬುರ್ಗಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಮೋದಿ ರಾಜ್ಯ ಸರಕಾರದ ವಿರುದ್ಧ ಮತ್ತು ಪ್ರತಿಪಕ್ಷಗಳ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದರು.!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಯನ್ನು ಆಯ್ಕೆ ಮಾಡಿದ್ದರೂ ಕೂಡ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಮೈತ್ರಿ ಸರಕಾರ ರಚಿಸಿಕೊಂಡರು. ಅದರ ಪರಿಣಾಮವಾಗಿಯೇ ಇಂದು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯದ ಜನರು ಮಾಡಿದ ಒಂದು ಸಣ್ಣ ತಪ್ಪು ಇಂದು ಅದರ ಫಲ ಅನುಭವಿಸುವಂತಾಗಿದೆ ಎಂದರು. ಮೈತ್ರಿ ಸರಕಾರ ಕೇವಲ ಹೆಸರಿಗಷ್ಟೇ ಅಸ್ತಿತ್ವದಲ್ಲಿ ಇದೆ, ರಾಜ್ಯದ ಜನರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಪ್ರತಿಪಕ್ಷಗಳಿಗೆ ಬೇಕಾಗಿರುವುದು ಕೇವಲ ಅಧಿಕಾರ ಮಾತ್ರ, ಅದಕ್ಕಾಗಿಯೇ ಇಂದು ಮಹಾಘಟಬಂಧನ ನಿರ್ಮಾಣ ಮಾಡಿ ಮೋದಿಯನ್ನು ಸೋಲಿಸಲು ಪಣತೊಟ್ಟಿವೆ. ಆದರೆ ಒಂದು ನೆನಪಿರಲಿ ಮೋದಿಗೆ ಬೇಕಾಗಿರುವುದು ದೇಶದ ಅಭಿವೃದ್ಧಿ ಮತ್ತು ದೇಶದ ಏಳಿಗೆ ಮಾತ್ರವೇ ಹೊರತು ಮೋದಿಯ ಅಭಿವೃದ್ಧಿ ಅಲ್ಲ ಎಂದು ವಿಪಕ್ಷಗಳ ವಿರುದ್ಧ ಟೀಕೆ ಮಾಡಿದರು.!

ಮೋದಿ ರೈತರಿಗೆ ಹಣ ನೀಡಿದರೆ ವಿಪಕ್ಷಗಳಿಗೆ ಹೊಟ್ಟೆಯುರಿ!

ಕೇಂದ್ರ ಸರಕಾರ ರೈತರಿಗೆ ಉಪಯೋಗವಾಗುವಂತಹ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ, ಆದರೆ ರಾಜ್ಯ ಸರಕಾರ ರೈತರ ಹೆಸರು ಬಳಸಿಕೊಂಡು ಚುನಾವಣೆಯಲ್ಲಿ ಮತ ನೀಡುವಂತೆ ಕೇಳಿಕೊಂಡು ಇದೀಗ ರೈತರನ್ನೇ ಕಡೆಗಣಿಸುತ್ತಿದೆ ಎಂದರು. ನಮ್ಮ ಸರಕಾರ ರೈತರಿಗೆ ೬೦೦೦ ಹಣ ನೀಡುತ್ತದೆ ಎಂಬ ಘೋಷಣೆ ಮಾಡುತ್ತಿದ್ದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು, ನಾವು ರೈತರಿಗೆ ನೀಡುವ ಹಣಕ್ಕೂ ಇವರು ಅಡ್ಡಿಪಡಿಸುತ್ತಾರೆ ಎಂದರೆ ರೈತರ ಮೇಲಿನ ಕಾಳಜಿ ಏನೆಂಬುದು ಅರ್ಥ ಆಗುತ್ತದೆ ಎಂದರು. ಕಬ್ಬು ಬೆಳೆಗಾರರಿಗೆ ರಾಜ್ಯ ಸರಕಾರ ಅನ್ಯಾಯ ಮಾಡುತ್ತಿದೆ, ಸಕ್ಕರೆ ಉತ್ಪಾದನೆಯಲ್ಲೂ ರಾಜ್ಯ ಸರಕಾರ ಉಡಾಫೆ ತೋರಿಸುತ್ತಿದ್ದು ರೈತರಿಗೆ ಬೇಕಾದ ಸೌಲಭ್ಯ ನೀಡಲು ರಾಜ್ಯ ಮೈತ್ರಿ ಸರಕಾರ ಹಿಂದೇಟು ಹಾಕುತ್ತಿದೆ ಎಂದರೆ ಇವರಿಗೆ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ರೈತರು ಬೇಕು ಮತ್ತು ಅಧಿಕಾರ ವಹಿಸಿಕೊಂಡ ನಂತರ ರೈತರ ಅವಶ್ಯಕತೆ ಇಲ್ಲವೇ ಎಂದು ಪ್ರಶ್ನಿಸಿದರು.

ಅದೇ ರೀತಿ ದೇಶದ ಸ್ಥಿತಿಯ ಬಗ್ಗೆ ಮಾತನಾಡಿದ ನಮೋ, ಭಾರತದ ಶಕ್ತಿ ಸಾಮಾರ್ಥ್ಯ ಏನೆಂಬುದನ್ನು ಈಗಾಗಲೇ ನಾವು ಜಗತ್ತಿನ ಪರಿಚಯಿಸಿದ್ದೇವೆ, ಭಾರತ ಯಾರಿಗೂ ಹೆದರುವ ಅವಶ್ಯಕತೆ ಇನ್ನು ಇಲ್ಲ ಮತ್ತು ಯಾವ ಸಂದರ್ಭವನ್ನು ಎದುರಿಸಲು ಕೂಡ ಭಾರತ ಸಜ್ಜಾಗಿದೆ ಎಂದು ಹೇಳಿದ ಮೋದಿ, ಇತ್ತೀಚೆಗೆ ಪಾಕಿಸ್ತಾನದ ಮೇಲೆ ದಾಳಿ ಮಾಡಿರುವ ಬಗ್ಗೆ ಪ್ರಸ್ತಾಪಿಸಿದರು. ಬಡತನ ಮತ್ತು ಭಯೋತ್ಪಾದನೆಯನ್ನು ದೇಶದಿಂದ ಸಂಪೂರ್ಣ ದೂರ ಮಾಡುವುದೇ ನಮ್ಮ ಸರಕಾರದ ಗುರಿಯಾಗಿದೆ ಎಂದ ಮೋದಿ, ಅದಕ್ಕೆ ಬೇಕಾದ ಕ್ರಮ‌ ಕೂಡ ನಾವು ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.!

ಮಲ್ಲಿಕಾರ್ಜುನ ಖರ್ಗೆ ಅವರು ಈವರೆಗೆ ಚುನಾವಣೆಯಲ್ಲಿ ಸೋತ ಉದಾಹರಣೆಯೇ ಇಲ್ಲವಾದ್ದರಿಂದ ಈ ಬಾರಿ ಖರ್ಗೆಯವರನ್ನು ಸೋಲಿಸುವುದು ಖಂಡಿತ ಎಂದು ರಾಜ್ಯ ಬಿಜೆಪಿ ನಾಯಕರು ಕೂಡ ಶಪಥ ಮಾಡಿಕೊಂಡಿದ್ದು ಪ್ರಧಾನಿ ಮೋದಿ ಕಲಬುರ್ಗಿಯಲ್ಲೇ ರಣಕಹಳೆ ಮೊಳಗಿಸಿದ್ದಾರೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close