ಅಂಕಣ

ವಿದೇಶದಲ್ಲಿ ಸಂಸ್ಕೃತ ಸಂಭ್ರಮ-ಭಾರತೀಯರ ಪುರಾಣ ಭಾಷೆಗೆ ವಿದೇಶದಲ್ಲಿ ಗೌರವ.! ಮಕ್ಕಳ ಪಠ್ಯ ಪುಸ್ತಕದಲ್ಲೂ ಸಂಸ್ಕೃತ ಅಭಿಯಾನ!

ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವಂತಹಾ ರಾಷ್ಟ್ರ. ಇಲ್ಲಿ ಜಾತಿ-ಮತಗಳ ಸಂಕೋಲೆ ಇಲ್ಲ, ವರ್ಣಭೇದ ಸುತ್ತೋಲೆ ಇಲ್ಲ. ಪ್ರಜಾಪ್ರಭುತ್ವವನ್ನು ಗೌರವಿಸುವ ಎಲ್ಲಾ ನಾಗರೀಕರೂ ಇಲ್ಲಿ ರಾಷ್ಟ್ರಭಕ್ತ ಭಾರತೀಯರು. ಹೀಗಾಗಿಯೇ ನಮ್ಮ ಹಿರಿಯರು ಭಾರತವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದಾರೆ. ಹಾಗೇ ಇಲ್ಲಿನ ಭಾಷೆ ಕೂಡಾ. ಒಂದೊಂದು ಪ್ರದೇಶಕ್ಕೆ ಒಂದೊಂದು ಭಾಷೆ. ಕರ್ನಾಟಕ ರಾಜ್ಯವೊಂದರಲ್ಲೇ ಕನ್ನಡ ಭಾಷೆಯ ಹೊರತಾಗಿ ತುಳು, ಕೊಡವ, ಲಂಬಾಣಿ, ಕೊಂಕಣಿ ಹೀಗೆ ಅನೇಕ ಭಾಷೆಗಳನ್ನು ಕಾಣಬಹುದು. ಇನ್ನು ಕನ್ನಡ ಭಾಷೆಯೂ ಭಿನ್ನವಾಗಿದ್ದು ಒಂದೊಂದು ಪ್ರದೇಶಕ್ಕೆ ಒಂದೊಂದು ತರಹದ ಕನ್ನಡವನ್ನು ಕಾಣಬಹುದು. ಉತ್ತರದ ಕನ್ನಡ, ದಕ್ಷಿಣದ ಕನ್ನಡ, ಕುಂದಾಪುರ ಕನ್ನಡ, ಹುಬ್ಬಳ್ಳಿ ಕನ್ನಡ ಹೀಗೆ ಅನೇಕ ರೀತಿಯಲ್ಲಿ ಭಾಷೆಗಳು ನಮ್ಮಲ್ಲಿ ಹಾಸುಹೊಕ್ಕಾಗಿದೆ. ಇದು ಕೇವಲ ಒಂದು ರಾಜ್ಯದ ಕಥೆಯಾದರೆ ಇನ್ನೂ ಅನೇಕ ರಾಜ್ಯಗಳ ಕಥೆಯೂ ಹೀಗೇ. ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ತಮಿಳು, ಮಳಯಾಳಂ, ತೆಲುಗು ಹೀಗೆ ಅನೇಕನೇಕ ಭಾಷೆಗಳು ಭಾರತವನ್ನು ವಿಶ್ವದಲ್ಲೇ ಪರಿಚಯಿಸುತ್ತಿದೆ. ಆದರೆ ಈ ಎಲ್ಲಾ ಭಾಷೆಗಳ ಮೂಲ ಭಾಷೆಯೇ ಸಂಸ್ಕೃತ ಭಾಷೆ.

ಭಾರತ ಸನಾತನ ಧರ್ಮವನ್ನು ಪ್ರತಿಪಾದಿಸಿಕೊಂಡು ಬಂದಿರುವ ಹಾಗೂ ಆರಾಧಿಸಿಕೊಂಡು ಬಂದಿರುವ ರಾಷ್ಟ್ರ. ಪುರಾತನ ಕಾಲದಿಂದಲೂ ಇಲ್ಲಿ ಸಂಸ್ಕೃತ ಭಾಷೆಗೆ ಮೊದಲ ಪ್ರಾತಿನಿಧ್ಯ. ಇಂದಿಗೂ ಅನೇಕ ಭಾಷೆಗಳು ಜನಿಸಿದ್ದರೆ ಅದರ ಮೂಲ ಭಾಷೆಯೇ ಸಂಸ್ಕೃತ ಭಾಷೆ. ಆದರೆ ಇಂದು ಅನೇಕ ಭಾಷೆಗಳ ಭರಾಟೆಯಲ್ಲಿ ಮೂಲ ಭಾಷೆ ಅವನತಿಯ ಹಂತಕ್ಕೆ ಬಂದಿದೆ. ವಿಧ್ವಾಂಸರು, ಪುರೋಹಿತರು, ಹಾಗೂ ಕೆಲ ಆಸಕ್ತರು ಹೊರತುಪಡಿಸಿದರೆ ಸಂಸ್ಕೃತವನ್ನು ಕಲಿಯುವ ಹಾಗೂ ಸಂಸ್ಕೃತದಲ್ಲಿ ಮಾತನಾಡುವ ಭಾಷಿಗರು ಕಡಿಮೆಯಾಗಿದ್ದಾರೆ. ಹೀಗಾಗಿ ಕೆಲ ಶಾಲೆಗಳಲ್ಲಿ ಸಂಸ್ಕೃತ ತರಗತಿಗಳೂ ಆರಂಭವಾಗಿದ್ದು ವಿದ್ಯಾರ್ಥಿಗಳು ಈ ಭಾಷೆಯನ್ನು ಕಲಿಯುತ್ತಿದ್ದಾರೆ.

ಇತ್ತ ಭಾರತದಲ್ಲಿ ಸುಮಾರು 4000ಕ್ಕಿಂತಲೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿರುವ ಸಂಸ್ಕೃತ ಭಾಷೆ ಅವನತಿಯತ್ತ ಸಾಗುತ್ತಿದೆಯಾ ಎಂಬ ಪ್ರಶ್ನೆ ಮೂಡುತ್ತಿರುವಾಗಲೇ ವಿದೇಶದಿಂದ ಸಂತಸದ ಸುದ್ಧಿಯೊಂದು ಕೇಳಿ ಬಂದಿದೆ. ವಿದೇಶದಲ್ಲಿ ಸಂಸ್ಕೃತ ಶಾಲೆಗಳು ಆರಂಭವಾಗಿದ್ದು ಭಾರತೀಯ ಪರಂಪರೆಯನ್ನು ವಿದೇಶದಲ್ಲಿ ಸಾರುವ ಕೆಲಸ ಕಾರ್ಯಗಳು ನಡೆಯುತ್ತಿವೆ. ಕೆನಡಾದ ಟೊರೆಂಟೋ ಡಿಸ್ಟ್ರಿಕ್ಟ್ ಸ್ಕೂಲ್ ಬೋರ್ಡ್ ಪಠ್ಯ ಪುಸ್ತಕದಲ್ಲಿ ಸಂಸ್ಕೃತ ಭಾಷೆ ಸ್ಥಾನ ಪಡೆದಿದೆ. ಕಿಂಡರ್ ಗಾರ್ಟನ್ ನಿಂದ ಹಿಡಿದು ಗ್ರೇಡ್ 8ರವರೆಗಿನ ಮಕ್ಕಳು ಕೆನಡಾದಲ್ಲಿ ಸಂಸ್ಕೃತ ಕಲಿಯುತ್ತಿದ್ದಾರೆ.

ಕಾರ್ನೆಕ್ ಎಂಬ ಪಬ್ಲಿಕೆ ಸ್ಕೂಲ್ ಪ್ರತಿ ಶನಿವಾರ ಸಂಸ್ಕೃತ ಕಲಿಯಲು ಅವಕಾಶ ನೀಡಿ ವಿಶೇಷ ತರಗತಿಯನ್ನು ನಡೆಸುತ್ತಿದೆ. ಸುಮಾರು 27ಕ್ಕಿಂತಲೂ ಅಧಿಕ ಮಕ್ಕಳು ಈ ಶಾಲೆಯಲ್ಲಿ ಸಂಸ್ಕೃತ ಅಧ್ಯಯನ ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಟೊರೆಂಟೋ ಡಿಸ್ಟ್ರಿಕ್ಟ್ ಸ್ಕೂಲ್ ಬೋರ್ಡ್ ಕ್ರಮಕ್ಕೆ ಇತರೆ ಅನೇಕ ಶಾಲೆಗಳೂ ಒಪ್ಪಿಗೆ ಸೂಚಿಸಿದ್ದೂ ಅನೇಕ ಕಡೆಗಳಲ್ಲಿ ಸಂಸ್ಕೃತ ತರಗತಿಗಳು ಆರಂಭವಾಗಿದೆ. ಭಾರತೀಯ ಮೂಲದ ಎನ್.ಜಿ.ಓ.ಗಳು ಈ ಬಗ್ಗೆ ಶ್ರಮವಹಿಸಿ ಕೆಲಸ ಮಾಡುತ್ತಿವೆ. ಸಂಸ್ಕಾರ ಭಾರತಿ ಎಂಬ ಸಂಘಟನೆಯೂ ಇದರ ಹಿಂದೆ ಕೆಲಸ ಮಾಡುತ್ತಿದೆ. ಇನ್ನು ಸಂಸ್ಕೃತ ತರಗತಿ ಕೇವಲ ಕೆನಡಾದಲ್ಲಿ ಮಾತ್ರವಲ್ಲದೆ ಇನ್ನೂ ಅನೇಕ ರಾಷ್ಟ್ರಗಳಲ್ಲೂ ನಡೆಯುತ್ತಿದೆ. ಭಾರತದ ನೆರೆಹೊರೆಯು ರಾಷ್ಟ್ರಗಳೂ ಸಂಸ್ಕೃತ ಭಾಷೆಯ ಅಧ್ಯಯನ ನಡೆಸುತ್ತಿದೆ. ಆದರೆ ಭಾರತಕ್ಕೆ ಬಲುದೂರದಲ್ಲಿರುವ ರಾಷ್ಟ್ರವೊಂದು ಇದೀಗ ಭಾರತೀಯರ ಮೂಲಭಾಷೆ ಸಂಸ್ಕೃತವನ್ನು ಕಲಿಸಲು ಮುಂದಾಗಿರುವುದು ಭಾರತೀಯರ ಭಾಷಾ ಪರಂಪರೆಯನ್ನು ಎತ್ತಿ ತೋರಿಸುತ್ತಿದೆ.

ಸಂಸ್ಕೃತ ಕೇವಲ ಭಾಷೆ ಅಲ್ಲ. ಅದು ಒಂದು ಪದ್ದತಿ. ಸಂಸ್ಕೃತ ಭಾಷೆಯಲ್ಲಿ ಮಾತನಾಡಿದರೆ ಉಚ್ಚಾರಗಳ ಕೊರತೆ ಇರುವುದಿಲ್ಲ. ಶಬ್ಧಕೋಶಗಳು ವಿಭಿನ್ನವಾಗಿರುವುದರಿಂದ ನಾಲಿಗೆಯ ಚಲನಾ ಶಕ್ತಿ ಮತ್ತಷ್ಟು ಹೆಚ್ಚುತ್ತದೆ. ಹಾಗೂ ಇದು ಅನೇಕ ರೋಗಗಳಿಗೆ ಔಷಧಿ ಕೂಡಾ ಹೌದು ಎಂದು ವಿಜ್ಞಾನ ಲೋಕವೇ ಹೇಳಿದೆ. ಹೀಗಾಗಿ ಇದನ್ನು ದೇವರ ಭಾಷೆ ಎಂದೂ ಕರೆಯುತ್ತಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close