ಅಂಕಣ

ಭಾರತದ ಸ್ವಾತಂತ್ರ್ಯಕ್ಕಾಗಿ “ಕಲಾಪಾನಿ” ಶಿಕ್ಷೆ ಅನುಭವಿಸಿದ ವೀರ ಕ್ರಾಂತಿಕಾರಿ ಮಹಾನಾಯಕರನ್ನು ಮರೆತಿರಾ ಭಾರತೀಯರೆ…??

ಚಿಕ್ಕಂದಿನಿಂದಲೂ ನಿಮ್ಮ ಶಾಲೆಯ ಪಠ್ಯ ಪುಸ್ತಕಗಳಲ್ಲಿ ನೀವು ಓದಿರುವುದೇನು? ಭಾರತಕ್ಕೆ ಶಾಂತಿ ಮತ್ತು ಅಹಿಂಸೆಯಿಂದ ಸ್ವಾತಂತ್ರ್ಯ ಸಿಕ್ಕಿತು. ಚಾಚಾ ನೆಹರೂ, ಮಹಾತ್ಮಾ ಗಾಂಧಿಯ ಸತ್ಯಾಗ್ರಹದಿಂದಾಗಿ ಬ್ರಿಟಿಷರು ಭಾರತ ಬಿಟ್ಟು ತೊಲಗಿದರು ಇತ್ಯಾದಿ, ಇತ್ಯಾದಿ. ಇದು ನಿಜವೆಂದಾದರೆ ಸಾವಿರಕ್ಕೂ ಹೆಚ್ಚು ಕ್ರಾಂತಿಕಾರಿಗಳು ಬ್ರಿಟಿಷರ ಲಾಠೀ ಏಟು ತಿಂದು ಬೆನ್ನು ಮೂಳೆ ಮುರಿಸಿಕೊಂಡದ್ದು ಏತಕ್ಕೆ? ಬೆನ್ನ ಮೇಲೆ ಬಾಸುಂಡೆ ಬರುವಂತೆ ಹೊಡೆಸಿಕೊಂಡದ್ದು ಏತಕ್ಕೆ? ಹಸಿ ಬಿಸಿ ನೆತ್ತರಿನ ತರುಣರು ನಗು ನಗುತ್ತಾ “ಭಾರತ್ ಮಾತಾ ಕೀ ಜೈ”, “ವಂದೇ ಮಾತರಂ”, “ಇನ್ಕಿಲಾಬ್ ಜಿಂದಾಬಾದ್” ಎನ್ನುತ್ತಾ ನೇಣುಗಂಬಕ್ಕೆ ಕೊರಳೊಡ್ಡಿದ್ದೇಕೆ? ಭೂಮಿಯ ಮೇಲಿನ ಪ್ರತ್ಯಕ್ಷ ನರಕ ಅಂಡಮಾನಿನ ಸೆಲ್ಯೂಲರ್ ಜೈಲಿನಲ್ಲಿ “ಕಾಲಾಪಾನಿ” ಸಜೆ ಅನುಭವಿಸಿದ್ದು ಯಾರಿಗಾಗಿ? ಯೋಚಿಸಿ.

ಸ್ವಾತಂತ್ರ್ಯ ಶಾಂತಿ, ಅಹಿಂಸೆಯಿಂದ ಬಂದದ್ದಲ್ಲ. ಹಲಾವಾರು ವೀರ ಯೋಧರ ಬಲಿದಾನದಿಂದಾಗಿ ಸ್ವಾತಂತ್ರ್ಯ ದೊರೆತದ್ದು. ಆದರೆ ನಮ್ಮಲ್ಲಿ ಹಲವರು ಕೇವಲ ಇಬ್ಬರಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತೆಂದು ಬಂಬಡಾ ಬಜಾಯಿಸುತ್ತಾರೆ. ನಿಮಗೆ ಗೊತ್ತೇ ದೇಶದ ಮಹಾನ್ ಕ್ರಾಂತಿಕಾರಿಗಳಿಗೆ ಕೊಡುತ್ತಿದ್ದ ಘನ್ ಘೋರ ಶಿಕ್ಷೆಯೆಂದರೆ ಅದೆ “ಕಾಲಾಪಾನಿ”. ಕಾಲ್ ಅಂದರೆ ಸಮಯ ಅಥವಾ ಮೃತ್ಯು, ಪಾನೀ ಅಂದರೆ ನೀರು. ಮೃತ್ಯು ಸದೃಶ ನೀರು ಅಂದರೆ ಕಾಲಾಪಾನಿ. ಸೆಲ್ಯೂಲರ್ ಜೈಲ್ ಅಂದರೆ ಸಾಕು ಎಂತಹ ಗಂಡುಗಲಿಯ ಎದೆಯಲ್ಲೂ ಸಣ್ಣಗೆ ನಡುಕ ಹುಟ್ಟುತ್ತಿತ್ತು. ಒಂದು ಬಾರಿ ಕಾಲಾಪಾನಿ ಶಿಕ್ಷೆಯೆಂದು ಘೋಷಣೆಯಾದರೆ ಅಲ್ಲಿಗೆ ಕಥೆ ಮುಗಿಯಿತು, ಮತ್ತೆ ಆ ವ್ಯಕ್ತಿ ಜೀವಂತವಾಗಿ ಮರಳಿ ಬರುವುದು ಅಸಂಭವ. ಕಾಲಾಪಾನಿಯಲ್ಲಿ ಕ್ರಾಂತಿವೀರರು ಅನುಭವಿಸಿದ ಯಮ ಯಾತನೆಯನ್ನು ಕೇಳಿದರೆ ನೀವು ಕನಸಿನಲ್ಲೂ ಬೆಚ್ಚಿ ಬೀಳುವಿರಿ.

ಅಂಡಮಾನಿನ ಸೆಲ್ಯೂಲರ್ ಜೈಲಿನ ಮಣ್ಣಿನ ಪ್ರತಿ ಕಣದಲ್ಲೂ ನಮ್ಮ ಕ್ರಾಂತಿವೀರರ ನೆತ್ತರಿನ ಬಿಂದುಗಳಿವೆ. ಅಲ್ಲಿನ ಗಾಳಿಯಲ್ಲೂ ನಮ್ಮ ಮಹಾನಾಯಕರ ಬಿಸಿಯುಸಿರಿನ ಕಂಪಿದೆ. ಅಲ್ಲಿನ ಪ್ರತಿ ಗೋಡೆಯೂ ಕ್ರಾಂತಿಕಾರಿಗಳ ಬವಣೆಗೆ ಮೂಕ ಸಾಕ್ಷಿಯಾಗಿ ನಿಂತಿದೆ. ನಮಗಾಗಿ, ದೇಶದ ಸ್ವಾತಂತ್ಯಕ್ಕಾಗಿ ಕ್ರಾಂತಿವೀರರು ಅನುಭವಿಸಿದ ನೋವು ಅಪಮಾನಗಳು ಅಷ್ಟಿಷ್ಟಲ್ಲ. ಸೆಲ್ಯೂಲರ್ ಜೈಲೆಂಬ “ಜೀವಂತ ನರಕ”ದಲ್ಲಿ ನಮ್ಮ ಕ್ರಾಂತಿವೀರರು ರಾತ್ರಿ ಹಗಲು ಗಾಣದೆತ್ತಿನಂತೆ ದುಡಿಯುತ್ತಿದ್ದರು. ಪ್ರತಿದಿನ ಒಬ್ಬ ಕೈದಿಯು ಮೂವತ್ತು ಪೌಂಡು ತೆಂಗಿನ ಮತ್ತು ಸಾಸಿವೆಯ ಎಣ್ಣೆಯನ್ನು ಕಡ್ಡಾಯವಾಗಿ ತೆಗಿಯಲೇ ಬೇಕಿತ್ತು. ತಪ್ಪಿದರೆ ಮೈಯೆಲ್ಲಾ ಬಾಸುಂಡೆ ಬರುವಂತೆ ಛಾಟೀ ಏಟು ಕೊಡಲಾಗುತ್ತಿತ್ತು. ದಿನವಿಡೀ ಕತ್ತೆಯಂತೆ ದುಡಿಸಲಾಗುತ್ತಿತ್ತು. ಸೆಲ್ಯೂಲರ್ ಜೈಲಿನ ಕೋಣೆಗಳನ್ನು ಕೈದಿಗಳಿಂದಲೇ ಕಟ್ಟಿಸಲಾಗುತ್ತಿತ್ತು. ಕೈದಿಗಳಿಗೆ ಮರಣದಂಡನೆ ವಿಧಿಸಲು ಇಲ್ಲಿಯೇ ನೇಣುಗಂಬಗಳೂ ಇರುತ್ತಿದ್ದವು.

ಈ ಸೆಲ್ಯೂಲರ್ ಜೈಲಿನ ಕೋಣೆಗಳು ಅತ್ಯಂತ ಕಿರಿದಾಗಿರುತ್ತಿದ್ದವು. 13.6*7.6 ಈ ಕಿರಿದಾದ ಕೋಣೆಗಳಲ್ಲಿ ಗಾಳಿಯಾಡಲು ಒಂದೇ ಗವಾಕ್ಷಿಯಿರುತ್ತಿತ್ತು. ಈ ಗವಾಕ್ಷಿಎಷ್ಟು ಎತ್ತರದಲ್ಲಿರುತ್ತಿತ್ತೆಂದರೆ ಕೈದಿಯ ಕೈ ಕೂಡಾ ಅಲ್ಲಿ ತಲುಪುತ್ತಿರಲಿಲ್ಲ. ಇನ್ನು ಕೋಣೆಗಳನ್ನು ಹೇಗೆ ಕಟ್ಟಲಾಗಿತ್ತೆಂದರೆ ಒಂದು ಕೋಣೆಯಿಂದ ಇನ್ನೊಂದು ಕೋಣೆಯ ಹಿಂಬಾಗ ಮಾತ್ರ ಕಾಣುತ್ತಿತ್ತು. ಅಂದರೆ ಒಬ್ಬ ಕೈದಿ, ಇನ್ನೊಬ್ಬ ಕೈದಿಯ ಮುಖ ಕೂಡಾ ನೋಡುವುದು ಸಾಧ್ಯವಿರಲಿಲ್ಲ. ಕೋಣೆಯ ತುಂಬಾ ನೀರವ ಮೌನ. ಘೋರ ಏಕಾಂತ, ದ್ವೀಪದ ಸುತ್ತೆಲ್ಲಾ ನೀರು. ಮೈ ದಣಿಯುವಷ್ಟು ಕೆಲಸ, ಜೊತೆಗೆ ಲಾಠೀ ಏಟು.

ಕಾಲಾಪಾನಿ ಶಿಕ್ಷೆ ಅನುಭವಿಸಿದ ಕ್ರಾಂತಿವೀರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಷ್ಟೊಂದು ಜರ್ಜರಿತವಾಗಿರುತ್ತಿದ್ದರೆಂಬುದನ್ನು ನಾವು ಕನಸಿನಲ್ಲೂ ಊಹಿಸಲು ಅಸಾಧ್ಯ. ನೆನಪಿಡಿ ನಾವೂ ಕನಸಿನಲ್ಲೂ ಕಲ್ಪನೆ ಮಾಡಲಾಗದಂತಹ ಯಮ ಯಾತನೆಯನ್ನು ಅವರು ನಿಜದಲ್ಲಿ ಅನುಭವಿಸಿರುತ್ತಾರೆ. ಕೈದಿಗಳಿಗೆ ಶಿಕ್ಷೆ ಕೊಡಲೆಂದೇ ಯಾತನಾ ಕಕ್ಷೆಗಳಿರುತ್ತಿದ್ದವು. ದಿನವಿಡೀ ದುಡಿದು ದಣಿಯುತ್ತಿದ ದೇಹಕ್ಕೆ ಮತ್ತೊಮ್ಮೆ ಕೈ ಕಾಲು ಗಳಿಗೆ ಸಂಕೋಲೆ ಬಿಗಿದು ಛಾಟೀ ಏಟು ಕೊಟ್ಟರೆ ಹೇಗಿರಬಹುದು ಊಹಿಸಿ. ಜೈಲಿನ ನಾಲ್ಕೂ ಕಡೆ ನೀರಿನಿಂದಾವೃತವಾಗಿದ್ದುದರಿಂದ ತಪ್ಪಿಸಿಕೊಂಡು ಹೋಗುವುದು ಸಾಧ್ಯವೇ ಇರಲಿಲ್ಲ. ಒಮ್ಮೆ ಸೆಲ್ಯೂಲರ್ ಜೈಲು ಪ್ರವೇಶಿಸಿದ ವ್ಯಕ್ತಿ ಜೀವಂತವಾಗಿ ಹೊರಬರುತ್ತಲೇ ಇರಲಿಲ್ಲ.

ಕಾಲಾಪಾನಿ ಶಿಕ್ಷೆ ಅನುಭವಿಸಿದ ಕ್ರಾಂತಿವೀರರಲ್ಲಿ ಡಾ. ದೀವಾನ್ ಸಿಂಗ್, ಮೌಲಾನಾ ಫಜಲ್ ಹಕ್ ಖೈರಾಬಾದಿ, ಯೋಗೆಂದ್ರ ಶುಕ್ಲಾ, ಬಟುಕೇಷ್ವರ್ ದತ್ತ್, ಮೌಲಾನಾ ಅಹಮದ್ ಉಲ್ಲಾ, ಮೌಲ್ವೀ ಅಬ್ದುಲ್ ರಹೀಮ್ ಸಾದಿಕ್ ಪುರೀ, ಬಾಬೂರಾವ್ ಸಾವರಕರ್, ವಿನಾಯಕ ದಾಮೋದರ್ ಸಾವರಕರ್, ಭಾಯೀ ಪರಮಾನಂದ್, ಶದನ್ ಚಂದ್ರ ಚಾಟರ್ಜೀ, ಸೋಹನ್ ಸಿಂಗ್, ವಮನ್ ರಾವ್ ಜೋಶಿ, ನಂದ ಗೋಪಾಲ್ ಮತ್ತು ಮಹಾಬೀರ್ ಸಿಂಗ್ ಮೊದಲಿಗರು. ನಿಮಗೆ ತಿಳಿದಿರಲಿ ಎರಡೆರಡು ಬಾರಿ ಆಜೀವನ ಕಾಲಾಪಾನಿ(೫೦ ವರುಷ) ಶಿಕ್ಷೆ ಅನಿಭವಿಸಿರುವುದು ವಿನಾಯಕ ದಾಮೋದರ್ ಸಾವರಕರ್ ರವರು ಮಾತ್ರ. ನಮ್ಮಲ್ಲಿ ಕೆಲವು ದೇಶದ್ರೋಹಿಗಳು ಸಾವರಕರ್ ಅವರನ್ನು ಹೇಡಿ ಎಂದು ಜರೆಯುತ್ತಾರೆ.

ಇಂತಹ ದೇಶದ್ರೋಹಿಗಳನ್ನು ಅಂಡಮಾನ್ ಜೈಲಿನ ಸುತ್ತೆಲ್ಲಾ ದರದರನೆ ಎಳೆದುಕೊಂಡು ಹೋಗಬೇಕು. ಸಾವರಕರ್ ಅನುಭವಿಸಿದ ಯಾತನೆಯ ಕಾಲಂಶವಾದರೂ ನಮ್ಮಿಂದ ಸಹಿಸಲು ಸಾಧ್ಯವೇ? ಅಂತಹ ದೇಶ ಪ್ರೇಮಿಗಳನ್ನು ಹೇಡಿ ಎನ್ನುತ್ತಾರೆ ನರ ಸತ್ತ ನಪುಸಂಕ ದೇಶದ್ರೋಹಿ ಗುಲಾಮರು. ಸಾವರಕರ್ ಅವರಂತಹ ಮಹಾ ನಾಯಕರ ಪಾದದ ಧೂಳಿಗೂ ಸಮನಲ್ಲ ನಾವುಗಳು. ಕ್ರಾಂತಿಕಾರಿಗಳ ಹೆಸರೆತ್ತಲೂ ಯೊಗ್ಯತೆ ಇಲ್ಲದ ಅಧಮರು ಅವರ ದೇಶಪ್ರೇಮದ ಬಗ್ಗೆ ಸಬೂಬು ಕೇಳುತ್ತಾರೆ.

ಅಂದು ನಮ್ಮ ಕ್ರಾಂತಿವೀರರು ನಮಗಾಗಿ ಪ್ರಾಣಾರ್ಪಣೆ ಮಾಡಿಲ್ಲವಾಗಿದ್ದಲ್ಲಿ ಇಂದು “ಬಾಯಿಗೆ ಬಂದತೆ ಬೊಗಳುವ” ಸ್ವಾತಂತ್ರ್ಯ ನಮಗಾರಿಗೂ ಇರುತ್ತಿರಲಿಲ್ಲ. ಭೂಮಿಯ ಮೇಲೆ ಅತಿ ಪಾವನ ಪುಣ್ಯಭೂಮಿಯೇನಾದರೂ ಇದ್ದರೆ ಅದೆ ಅಂಡಮಾನಿನ ಸೆಲ್ಯೂಲರ್ ಜೈಲು. ನಮ್ಮ ಕ್ರಾಂತಿಕಾರಿಗಳು ನಮಗಾಗಿ ಪ್ರಾಣತೆತ್ತ ಜಾಗವದು. ಜೀವನದಲ್ಲಿ ಹೇಗೆ ಕೈಲಾಸ, ಕಾಶೀ ಯಾತ್ರೆ ಮಾಡಿ ಧನ್ಯರಾಗುತ್ತೇವೋ ಹಾಗೇ ಒಂದು ಬಾರಿ ಅಂಡಮಾನಿನ ಸೆಲ್ಯೂಲರ್ ಜೈಲಿಗೂ ಭೇಟಿ ನೀಡಿ ಧನ್ಯರಾಗಬೇಕು. ನಮ್ಮ ಕ್ರಾಂತಿವೀರರು ಯಾವುದೇ ಭಗವಂತನಿಗೂ ಕಮ್ಮಿಯಲ್ಲ. ಅವರು ಓಡಾಡಿದ ಆ ಜಾಗದಲ್ಲಿ ಅವರ ಸ್ಮೃತಿಗಳಿವೆ. ಪುರುಸೊತ್ತಿದ್ದರೂ, ಇಲ್ಲದಿದ್ದರೂ ಒಮ್ಮೆ ಭೇಟಿ ಕೊಡಿ ನಿಮ್ಮ ಜೀವನ ಪಾವನವಾಗುವುದು….

ಭಾರತದ ಸ್ವಾತಂತ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿವೀರರ ನೆನೆಯಿರಿ ಭಾರತೀಯರೆ….ಇನ್ಕಿಲಾಬ್ ಜಿಂದಾಬಾದ್… ವಂದೇ ಮಾತರಂ…

ಶನ್ನು

 

Tags

Related Articles

FOR DAILY ALERTS
 
FOR DAILY ALERTS
 
Close