ಪ್ರಚಲಿತ

ವಿಶ್ವಕಪ್ ಮಂಡಳಿಯನ್ನೇ ನಿಬ್ಬೆರಗಾಗಿಸಿದ ಭಾರತದ ಕ್ರಿಕೆಟ್ ಪ್ರೇಮಿಯರು.! ಬ್ರಿಟಿಷರ ನೆಲದಲ್ಲಿ ತ್ರಿವರ್ಣ ಧ್ವಜಗಳದ್ದೇ ಕಾರುಬಾರು.!

ಕ್ರಿಕೆಟ್ ಎಂಬುವುದು ಇಂಗ್ಲೆಂಡ್ ರಾಷ್ಟ್ರದ ರಾಷ್ಟ್ರೀಯ ಕ್ರೀಡೆ. ಆದರೆ ಅದು ಭಾರತೀಯರ ಕ್ರೀಡೆಯೇನೋ ಎನ್ನುವಷ್ಟರ ಮಟ್ಟಿಗೆ ಭಾರತದಲ್ಲಿ ಬೆಳೆದು ನಿಂತಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಅನೇಕ ರಾಷ್ಟ್ರಗಳು ಕ್ರಿಕೆಟ್ ಪಂದ್ಯಾಟವನ್ನು ಆಡುತ್ತಿದ್ದು ಅದರಲ್ಲಿ ಭಾರತವೂ ಒಂದು. ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಅನೇಕ ಬಾರಿ ಭಾರತ ಛಾಂಪಿಯನ್ ಆಗಿ ಹೊರಹೊಮ್ಮಿದೆ. ಹೀಗಾಗಿ ಕ್ರಿಕೆಟ್ ಕ್ರೀಡೆಗೆ ಉಳಿದೆಲ್ಲಾ ರಾಷ್ಟ್ರಗಳಿಗಿಂತ ಭಾರತದಲ್ಲೇ ಹೆಚ್ಚು ಅಭಿಮಾನಿಗಳನ್ನು ಇದ್ದಾರೆ. ಮಾತ್ರವಲ್ಲದೆ ವಿದೇಶದಲ್ಲೂ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿಮಾನಿಗಳು ಇದ್ದಾರೆ.

2 ವಿಶ್ವಕಪ್ ಪಂದ್ಯವನ್ನು ಗೆದ್ದಿರುವ ಭಾರತ ಇದೀಗ ಮತ್ತೆ ವಿಶ್ವಕಪ್ ಕ್ರಿಕೆಟ್ ಪಂದ್ಯಾಟವನ್ನು ಆಡುತ್ತಿದೆ. ಈಗಾಗಲೇ 2019ರ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಆಡಿರುವ ಎರಡೂ ಪಂದ್ಯವನ್ನೂ ಗೆದ್ದಿರುವ ಭಾರತ ಈಗ ಮತ್ತೊಂದು ಪಂದ್ಯದತ್ತ ಅಭ್ಯಾಸ ನಡೆಸುತ್ತಿದೆ. ವಿಶೇಷ ಎಂದರೆ ಆದಿತ್ಯವಾರ (09.06.2019) ಬ್ರಿಟಿಷರ ನಾಡಿನಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯಾವಳಿ ನಡೆದಿತ್ತು. ಹೈವೋಲ್ಟೇಜ್ ಪಂದ್ಯವೇ ಎನಿಸುತ್ತಿದ್ದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ಬಗ್ಗುಬಡಿದಿತ್ತು. ಈ ಪಂದ್ಯದಲ್ಲಿ ಒಂದು ವಿಶೇಷತೆ ಕಂಡುಬಂದಿತ್ತು.

ಲಂಡನ್ನಿನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಕ್ರಿಕೆಟ್ ಪಂದ್ಯಾಟದ ವೇಳೆ ಕ್ರೀಡಾಂಗಣದಲ್ಲಿ ಭಾರತ್ ಮಾತಾಕೀ ಜೈ ಘೋಷಣೆಯೇ ಜೋರಾಗಿ ಕೇಳಿಬಂದಿತ್ತು. ಕ್ರೀಡಾಂಗಣ ಬಹುತೇಕ ಪಾಲು ಭಾರತೀಯ ಕ್ರಿಕೆಟ್ ಪ್ರೇಮಿಗಳಿಂದಲೇ ತುಂಬಿ ತುಳುಕಿತ್ತು. ತ್ರಿವರ್ಣ ಧ್ವಜ ಎಲ್ಲೆಡೆ ಹಾರಾಡುತ್ತಿತ್ತು. ಯಾವ ತ್ರಿವರ್ಣ ಧ್ವಜ ಹಾರಾಡಲು ಭಾರತದಲ್ಲಿ ಬ್ರಿಟಿಷರು ಅವಕಾಶ ನೀಡಲಿಲ್ಲವೋ ಅದೇ ಬ್ರಿಟಿಷರ ನೆಲದಲ್ಲಿ ಸಾವಿರಾರು ಮಂದಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಂದ ತ್ರಿವರ್ಣ ಧ್ವಜ ಹಾರಾಡುವಂತಾಗಿತ್ತು.

ಭಾರತದ ಕ್ರಿಕೆಟ್ ಪ್ರೇಮಿಗಳು ಭಾರತದಿಂದ ಲಂಡನ್ನಿಗೆ ತೆರಳಿದ್ದರು. ನಮ್ಮ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯುತ್ತೆ ಎನ್ನುವ ವಿಶ್ವಾಸ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಇತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ವೀಕ್ಷಿಸಲು ಓವಲ್ ಮೈದಾನಕ್ಕೆ ತೆರಳಿದ್ದರು. ಭಾರತೀಯರ ನಿರೀಕ್ಷೆಯಂತೆ ಭಾರತ ಆಸ್ಟ್ರೇಲಿಯ ತಂಡವನ್ನು ಬಗ್ಗುಬಡಿದು ಅಜೇಯವಾಗಿ ಉಳಿದಿತ್ತು. ಆಸ್ಟ್ರೇಲಿಯಾ ತಂಡ ಆಡಿದ ಒಟ್ಟು ವಿಶ್ವಕಪ್ ಪಂದ್ಯಾಟದಲ್ಲಿ ಕೇವಲ 4 ಪಂದ್ಯವನ್ನು ಮಾತ್ರವೇ ಸೋತಿದೆ. ಇದರಲ್ಲಿ ಎರಡು ಬಾರಿ ಭಾರತ ತಂಡವೇ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ ಎಂದು ಹೇಳಲಾಗುತ್ತಿದೆ. ಇದು ಭಾರತೀಯರಿಗೆ ಮತ್ತೊಂದು ಹೆಮ್ಮೆ ತರುವ ವಿಚಾರವಾಗಿದೆ.

ಇನ್ನು ಭಾರತೀಯರ ರಾಷ್ಟ್ರಾಭಿಮಾನಕ್ಕೆ ವಿಶ್ವಕಪ್ ಕ್ರಿಕೆಟ್ ಮಂಡಳಿ ಟ್ವೀಟ್ ಮೂಲಕ ಅಚ್ಚರಿ ವ್ಯಕ್ತಪಡಿಸಿದೆ. “ಮೈದಾನವೆಲ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಮುದ್ರದಂತೆ ಸೇರಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಪ್ರೇಮಿಗಳನ್ನು ಹುಡುಕಿಕೊಡಿ” ಎಂದು ಟ್ವೀಟ್ ಮಾಡಿದೆ. ಒಟ್ಟಾರೆ ಸಾಗರದಾಚೆಗೆ ಭಾರತೀಯರ ಕ್ರಿಕೆಟ್ ಪ್ರೇಮ ನೂರ್ಮಡಿಗೊಂಡಿದೆ. ತನ್ನ ರಾಷ್ಟ್ರದಲ್ಲಿ ಕ್ರಿಕೆಟ್ ಪಂದ್ಯಾಟ ನಡೆದರೆ ಭಾರತೀಯರು ಸೇರುವುದು ಸಹಜ. ಆದರೆ ಸಾಗರದಾಚೆಗಿನ ರಾಷ್ಟ್ರದಲ್ಲಿ ನಡೆದ ಈ ಪಂದ್ಯಕ್ಕೂ ಇಷ್ಟೊಂದು ಭಾರತೀಯರು ಸೇರಿದ್ದು ನಿಜವಾಗಿಯೂ ಅಚ್ಚರಿಯನ್ನು ಮೂಡಿಸುತ್ತದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close