ಇತಿಹಾಸ

ವಿಶ್ವಕ್ಕೆ ನ್ಯಾವಿಗೇಶನ್ ತಂತ್ರಜ್ಞಾನದ ಕೊಡುಗೆ ಕೊಟ್ಟದ್ದು ಭಾರತ!! ಮಿಲಿಯನ್ ವರ್ಷಗಳ ಹಿಂದಿನಿಂದಲೂ ಸಾಗರಯಾನ ಸಮಯದಲ್ಲಿ ದಿಕ್ಸೂಚಿ ಉಪಯೋಗಿಸುತ್ತಿದ್ದರು ಭಾರತೀಯರು!!

ಮಿಲಿಯನ್ ವರ್ಷಗಳ ಹಿಂದಿನಿಂದಲೂ ಆರ್ಯಾವರ್ತ ಭಾರತೀಯರು ಸಾಗರೋಲ್ಲಂಘನ ಮಾಡುತ್ತಿದ್ದರೆನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇವತ್ತು ಪ್ರಪಂಚದಾದ್ಯಂತ ಲಭ್ಯವಿರುವ ತಂತ್ರಜ್ಞಾನಗಳು ಅಮೇರಿಕಾ-ಇಂಗ್ಲೆಂಡ್ ದೇಶಗಳ ಕೊಡುಗೆ ಎಂದು ಜನರು ಭಾವಿಸುತ್ತಾರೆ. ಆದರೆ ಅಮೇರಿಕಾ-ಇಂಗ್ಲೆಂಡ್ ದೇಶಗಳು ಕಣ್ಬಿಡುವ ಮುನ್ನವೆ ಭಾರತ ಅಂತರಿಕ್ಷದಲ್ಲಿ ಪ್ರಯಾಣ ಮಾಡುವ ತಂತ್ರಜ್ಞಾನವನ್ನು ಹೊಂದಿತ್ತು ಎನ್ನುವುದು ಸೂರ್ಯನಷ್ಟೆ ಸತ್ಯ. ವಿಶ್ವಕ್ಕೆ ನ್ಯಾವಿಗೇಶನ್ ತಂತ್ರಜ್ಞಾನವನ್ನು ಪಾಶ್ಚಾತ್ಯರು ಕೊಟ್ಟದ್ದೆನ್ನುವುದು ಬಹು ಜನರ ಅನಿಸಿಕೆ. ಆದರೆ ನ್ಯಾವಿಗೇಶನ್ ತಂತ್ರಜ್ಞಾನದ ಬಗ್ಗೆ ಹಲವಾರು ವರ್ಷಗಳ ಹಿಂದೆಯೆ ನಮ್ಮ ಪುರಾಣಗಳಲ್ಲಿ ಉಲ್ಲೇಖವಾಗಿದೆ.

ವಿಶೇಷವೆಂದರೆ ಇಂಗ್ಲಿಷಿನ ‘ನ್ಯಾವಿಗೇಶನ್’ ಎನ್ನುವ ಪದವೆ ಸಂಸ್ಕೃತದ ‘ನವಗತಿಃ’ ಶಬ್ದದಿಂದ ಉತ್ಪತ್ತಿಯಾದದ್ದು. ಶಬ್ದವೆ ಸಂಸ್ಕೃತದಿಂದ ಉತ್ಪತ್ತಿ ಆದದ್ದು ಎಂದ ಮೇಲೆ ತಂತ್ರಜ್ಞಾನವೂ ಭಾರತದಿಂದಲೆ ಉತ್ಪತ್ತಿಯಾಗಿರಬೇಕಲ್ಲ!! ಸಂಸ್ಕೃತ ಶಬ್ದ ‘ನೌ’ನಿಂದ ‘ನೇವಿ’ ಎನ್ನುವ ಶಬ್ದದ ಉತ್ಪತ್ತಿಯಾಗಿದೆ. ಇತಿಹಾಸಕಾರರ ಪ್ರಕಾರ ಕನಿಷ್ಟ 5,000 ವರ್ಷಗಳ ಹಿಂದಿನಿಂದಲೂ ಭಾರತವು ಶ್ರೀಮಂತ ಕಡಲ ಇತಿಹಾಸವನ್ನು ಹೊಂದಿದೆ. ವಿಶ್ವದ ಮೊಟ್ಟಮೊದಲ ಉಬ್ಬರವಿಳಿತದ ದೋಣಿಯನ್ನು ಕ್ರಿ.ಪೂ. 2300ರಲ್ಲಿ ಗುಜರಾತ್ ಕರಾವಳಿಯ ಅಂದಿನ ಲೋಥಲ್, ಇಂದಿನ ಮಂಗ್ರೋಲ್ ನಲ್ಲಿ ನಿರ್ಮಾಣ ಮಾಡಲಾಗಿತ್ತು. ಸಿಂಧೂ ನಾಗರಿಕತೆಯ ಕಾಲದಿಂದಲೂ ಭಾರತದಲ್ಲಿ ನ್ಯಾವಿಗೇಶನ್ ತಂತ್ರಜ್ಞಾನ ಅಸ್ತಿತ್ವದಲ್ಲಿತ್ತು ಎನ್ನಲಾಗಿದೆ.

ಕ್ರಿಸ್ತ ಶಕ 4-5 ಶತಮಾನದ್ದೆನ್ನಲಾದ ಮತ್ಸ್ಯ ಯಂತ್ರವೊಂದು ಸಂಶೋಧನಕರ್ತರಿಗೆ ದೊರಕಿದೆ ಮತ್ತು ಅನಾದಿ ಕಾಲದಲ್ಲಿ ಭಾರತದಲ್ಲಿ ಸಾಗರೋಲ್ಲಂಘನಕ್ಕೆ ದಿಕ್ಸೂಚಿಯನ್ನು ಬಳಸಲಾಗುತ್ತಿತ್ತು ಎನ್ನುವ ಸತ್ಯದ ಮೇಲೆ ಬೆಳಕು ಚೆಲ್ಲಿದೆ. ವೃತ್ತಶಾಂಗ-ಭಾಗ ಎನ್ನುವ ಷಷ್ಟಕವನ್ನು ನ್ಯಾವಿಗೇಶನ್ ಆಗಿ ಬಳಸಲಾಗುತ್ತಿತ್ತು ಮಾತ್ರವಲ್ಲ ಸುಮಾರು 1500 ರಿಂದ 2000 ವರ್ಷಗಳ ಹಿಂದೆ ಭಾರತೀಯ ನಾವಿಕರು ಒಂದು ಯೋಜಿತ ನೌಕಾಪಡೆಯ ಕಂಪಾಸ್ ಅನ್ನು ಸಾಗರ ಪ್ರಯಾಣ ಸಮಯದಲ್ಲಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಇವೆಲ್ಲ ಕಪೋಲ ಕಲ್ಪಿತ ವಿಷಯಗಳಲ್ಲ ಬದಲಿಗೆ ಯುರೋಪಿಯನ್ ತಜ್ಞರೊಬ್ಬರು ಸಾಕ್ಷ್ಯಾಧಾರಗಳಿಂದ ಕಂಡುಕೊಂಡ ವಿಷಯಗಳು.

Mr. J.L. Reid (member of the Institute of Naval Architects and Shipbuilders in England) ಅವರ ಪ್ರಕಾರ(Bombay Gazetteer, vol. xiii., Part ii., Appendix A:)

“ಭಾರತದ ಹಿಂದಿನ ಕಾಲದ ಜ್ಯೋತಿಷ್ಯರು ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಕಂಡುಕೊಳ್ಳಲು, ಕಟ್ಟಡಗಳ ಅಡಿಪಾಯ ಹಾಕಲು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಆಯಸ್ಕಾಂತವನ್ನು ಬಳಸುತ್ತಿದ್ದರು. ಈ ಹಿಂದೂ ಕಂಪಾಸ್ ನಲ್ಲಿ ಕಬ್ಬಿಣದ ಮೀನೊಂದು ತೈಲ ತುಂಬಿದ ಬಟ್ಟಲಿನಲ್ಲಿ ತೇಲುವ ಮೂಲಕ ಉತ್ತರ ದಿಕ್ಕನ್ನು ತೋರಿಸುತ್ತಿತ್ತು! ಇದನ್ನು “ಮಚ್ಚಯಂತ್ರ” ಎಂದು ಕರೆಯಲಾಗುತ್ತಿತ್ತು. ಈ ಮಚ್ಚಯಂತ್ರ ಎಂಬುದು ಅನಾದಿ ಕಾಲದಿಂದಲೂ ಸಂಸ್ಕೃತದಲ್ಲಿ ಬಳಕೆಯಾದ ಪದ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಅನಾದಿ ಕಾಲದಿಂದಲೂ ಭಾರತೀಯರು ನೌಕಾಯಾನದಲ್ಲಿ ದಿಕ್ಸೂಚಿ(ಮಚ್ಚಯಂತ್ರ)ಯನ್ನು ಉಪಯೋಗಿಸುತ್ತಿದ್ದರು ಎನ್ನುವುದು ಸಾಬೀತಾಗುತ್ತದೆ.”

ಪಾಶ್ಚಾತ್ಯ ನೌಕಾ ವಾಸ್ತು ಶಿಲ್ಪ ಮತ್ತು ಹಡಗು ನಿರ್ಮಾಣದಲ್ಲಿ ಈ ಪದಗಳನ್ನು ಯಧೇಚ್ಚವಾಗಿ ಬಳಸಲಾಗುತ್ತದೆ. ಭಾರತದ ಮಚ್ಚಯಂತ್ರವನ್ನು ಅರಬ್ಬರು ತಮ್ಮೊಂದಿಗೆ ಕೊಂಡೊಯ್ದು ತದನಂತರ ಅದು ಮತ್ಸ್ಯ ಯಂತ್ರವೆಂದು ಮಾರ್ಪಟ್ಟು ಪಾಶ್ಚಾತ್ಯ ದೇಶಗಳತ್ತ ಸಾಗಿರಬಹುದು ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಭೋಜ ನರಪತಿಯು ಸಂಕಲನ ಮಾಡಿದ “ಯುಕ್ತಿ ಕಲ್ಪ ತರು” ಅಧ್ಯಯನ ಗ್ರಂಥದಲ್ಲಿ ಹಡಗಿನ ಪ್ರಕಾರಗಳನ್ನು ಉಲ್ಲೇಕಿಸಲಾಗಿದೆ. ಭಾರತದಲ್ಲಿ ಹಡಗುಗಳನ್ನು ‘ಸಾಮಾನ್ಯ’ ಮತ್ತು ‘ವಿಶೇಷ’ ಎನ್ನುವ ಎರಡು ವರ್ಗಗಳಾಗಿ ವಿಂಗಡಿಸಲಾಗಿತ್ತು. ಈ ಗ್ರಂಥದಲ್ಲಿ ಹಡಗು ನಿರ್ಮಾಣದ ಸೂಕ್ಷಾತಿ ಸೂಕ್ಷ್ಮ ವಿಷಯಗಳನ್ನೂ ದಾಖಲಿಸಲಾಗಿದೆ.

ದ್ವಾಪರಯುಗದಲ್ಲಿ ಕೃಷ್ಣನ ದ್ವಾರಕೆಯು( ಸಮುದ್ರದ ಮಧ್ಯೆ ಕಟ್ಟಲಾಗಿದ್ದ) ಅತಿ ದೊಡ್ಡ ಬಂದರನ್ನು ಹೊಂದಿತ್ತು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ದ್ವಾರಕೆಯೊಳಗೆ ಪ್ರವೇಶಿಸಲು ಹಾಗೂ ಸಣ್ಣ ಮತ್ತು ವಿಶಾಲ ಕಾಯ ಹಡಗುಗಳು ತಂಗಬಹುದಾದಂತಹ ಬಂದರನ್ನು ದ್ವಾರಕೆಯಲ್ಲಿ ನಿರ್ಮಾಣ ಮಾಡಲಾಗಿತ್ತು ಎಂದು ಸಂಶೋಧನಾ ನಿರತರು ಕಂಡುಕೊಂಡಿದ್ದಾರೆ. ಅಂದರೆ ದ್ವಾಪರಯುಗದಿಂದಲೂ ಅಥವಾ ತ್ರೇತಾಯುಗದಿಂದಲೂ ಅಥವಾ ಅದಕ್ಕೂ ಮೊದಲಿನಿಂದಲೂ ಆರ್ಯಾವರ್ತದ ಜನರು ಹಡಗು ನಿರ್ಮಾಣ ಮಾಡುವುದನ್ನು ಬಲ್ಲವರಾಗಿದ್ದರು ಮತ್ತು ಸಾಗರ ಯಾನ ಸಮಯದಲ್ಲಿ ದಿಕ್ಸೂಚಿ ವ್ಯವಸ್ತೆಯನ್ನು ಬಳಸುತ್ತಿದ್ದರು ಎನ್ನುವ ವಾದಕ್ಕೆ ಪುಷ್ಟಿ ದೊರೆಯುತ್ತದೆ.

ಅನಾದಿ ಕಾಲದಿಂದಲೂ ಭಾರತ ಸಮುದ್ರ ಮಾರ್ಗದ ಮೂಲಕ ಪ್ರಪಂಚದ ಇನ್ನಿತರ ಖಂಡಗಳ ಜೊತೆ ವ್ಯಾಪಾರ ವಹಿವಾಟು ನಡೆಸುತ್ತಿತ್ತು ಎಂದು ಪುರಾಣಗಳೆ ಹೇಳುತ್ತವೆ. ವಾಸ್ಕೋಡಗಾಮ ಭಾರತ ಕಂಡುಹಿಡಿದ, ಕೊಲಂಬಸ್ ಅಮೇರಿಕಾ ಕಂಡುಹಿಡಿದ ಎನ್ನುವುದು ಕಾಗಕ್ಕ-ಗೂಬಕ್ಕ ಕಥೆಗಳು ಅಷ್ಟೆ. ಮೊದಲೆ ಇರುವುದನ್ನು ಇನ್ನೊಮ್ಮೆ ಕಂಡುಹಿಡಿಯುವುದಂತೆ ಅದನ್ನು ಭಾರತೀಯರು ನಂಬಬೇಕಂತೆ. ವಿಪರ್ಯಾಸವೆಂದರೆ ನಮ್ಮ ಜನರು ಪಾಶ್ಚಾತ್ಯರು ಹೇಳಿದ್ದನ್ನು ನಂಬುತ್ತಾರೆ ಆದರೆ ನಮ್ಮ ವೇದ-ಪುರಾಣಗಳನ್ನು ನಂಬುವುದಿಲ್ಲ!

-ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close