ಅಂಕಣ

ಪಂಚಾಕ್ಷರಿ ಮಂತ್ರದಲ್ಲಿ ಅಡಕವಾಗಿರುವ ಆ ಅತ್ಯದ್ಭುತ ಶಕ್ತಿಗಳ ಬಗ್ಗೆ ನಿಮಗೆಷ್ಟು ಗೊತ್ತು?!

ಆಧ್ಯಾತ್ಮಿಕ ವಿಚಾರಗಳೇ ಹಾಗೆ!! ಬಲು ಬೇಗನೇ ಸೆಳೆದಿಡುವ ಒಂದು ಅದ್ಭುತ ಶಕ್ತಿಯನ್ನು ಹೊಂದಿರುವುದಂತೂ ಅಕ್ಷರಶಃ ನಿಜ. “ಶಿವ ಶಿವ ಎಂದರೆ ಭಯವಿಲ್ಲ ಶಿವನಾಮಕೆ ಸಾಟಿ ಬೇರಿಲ್ಲ” ಎನ್ನುವ ಸಾಲುಗಳ ಒಳಾರ್ಥವನ್ನು ಒಂದು ಕ್ಷಣ ಗ್ರಹಿಸಿದರೆ ಸಾಕು, ಆಧ್ಯಾತ್ಮಿಕ ವಿಚಾರಗಳಲ್ಲಿನ ಶಿವನ ನಾಮಸ್ಮರಣೆಯು ಅತ್ಯದ್ಭುತವಾದ ಪವಾಡವನ್ನೇ ಸೃಷ್ಟಿ ಮಾಡಿ ಬಿಡುತ್ತೆ!! ಅದರಲ್ಲೂ ಶಿವನ ಪಂಚಾಕ್ಷರಿ ಮಂತ್ರವು ಮನುಷ್ಯನಲ್ಲಿ ಅದೆಷ್ಟು ಪವಾಡಗಳನ್ನು ಸೃಷ್ಟಿಸುತ್ತೆ ಎಂದು ತಿಳಿದರೆ, ನಿಜಕ್ಕೂ ಕೂಡ ಒಂದು ಕ್ಷಣ ಅಚ್ಚರಿಯಾಗುತ್ತೆ!!

ಶಿವನ ರೂಪವೇ ಸರ್ವ ಶ್ರೇಷ್ಠ ಮತ್ತು ಸರ್ವ ಶಕ್ತ ರೂಪ ಎಂದು ಹೇಳಲಾಗುತ್ತದೆ. ಅಂತಹ ಶಿವನ ಪಂಚಾಕ್ಷರಿ ಮಂತ್ರದಲ್ಲಿ ಅಡಕವಾಗಿರುವ ಅದ್ಭುತವಾದ ಶಕ್ತಿಗಳು ಮನಸ್ಸಿಗೆ ವೈಜ್ಞಾನಿಕವಾಗಿಯೂ, ಮಾನಸಿಕವಾಗಿಯೂ ನೆಮ್ಮದಿ ಹಾಗೂ ಅನೇಕ ಅನುಕೂಲಗಳು ಉಂಟಾಗುವುದು ಎಂದು ಹೇಳಲಾಗುತ್ತದೆ. ಇನ್ನು ಈ ಬಗ್ಗೆ ಡಾ. ಟಿ. ಟೆಂಪಲ್ ಟ್ಯುಟ್ಲೆರ್ (Dr.T. Temple, of the Cleveland University, Ohio, USA) ಅವರ ಹಲವಾರು ಸಂಶೋಧನೆಗಳ ಫಲಿತಾಂಶಗಳ ನಂತರ ಕೆಲವು ಸತ್ಯಗಳು ಬೆಳಕಿಗೆ ಬಂದಿರುವುದು ಗಮನಾರ್ಹ.

ಮೆದುಳಿನಲ್ಲಿರುವ ಚಿಕಿತ್ಸಕ ರಾಸಾಯನಿಗಳ ಉತ್ಪಾದನೆ ಮತ್ತು ಹರಡುವಿಕೆಯಲ್ಲಿ ಈ NLE ಮತ್ತು PLE ಬಹಳಷ್ಟು ಪರಿಣಾಮಕಾರಿಯಾಗಿದೆ ಮತ್ತು ದೇಹದ ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಆದ್ದರಿಂದ ಮಂತ್ರ ಪಠಣವು ಒಂದು ಮೂಢನಂಬಿಕೆ ಅಲ್ಲ. ಆಧುನಿಕ ಪದಗಳಲ್ಲಿ ಇದನ್ನು ಮಂತ್ರ ಚಿಕಿತ್ಸೆಯೆಂದು ನೇರವಾಗಿ ಕರೆಯಬಹುದು. ಮಂತ್ರ ಪಠನೆಗಳು ನೇರವಾಗಿ ರಕ್ತದೊತ್ತಡ ಕಡಿಮೆ ಮಾಡುವುದು, ಹೃದಯ ಬಡಿತದ ಏರಿಳಿತ, ಮೆದುಳಿನ ತರಂಗ ಮಾದರಿ, ಅಡ್ರಿನಾಲಿನ್ ಮಟ್ಟ, ಕೊಲೆಸ್ಟ್ರಾಲ್ ಮಟ್ಟ ವನ್ನು ಸಾಮಾನ್ಯಗೊಳಿಸುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಭಾರತೀಯ ವಿವಿಧ ಧರ್ಮಗಳಲ್ಲಿ ಪರಾತ್ಪರ ಪರವಸ್ತುವಾದ ಪರಮಾತ್ಮನನ್ನು ಅರಿಯಲು ಮತ್ತು ಅರಿತು ಅವನಲ್ಲಿ ಒಂದಾಗಲು ಓಂಕಾರಯುಕ್ತ ನಾಮ ಜಪ ಅಥವಾ ಮಂತ್ರಪಠನಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಲಾಗಿದೆ. ಪರಮಾತ್ಮನ ಸ್ತುತಿಗೆ ಸಂಬಂಧಿಸಿದ ಮಂತ್ರಗಳಲ್ಲಿ “ಓಂ ನಮಃ ಶಿವಾಯ” ಎಂಬುವುದು ಕೂಡ ಶ್ರೇಷ್ಠವಾದ ಮಂತ್ರವೆಂದು ತಿಳಿಯಲಾಗಿದೆ. ಅಷ್ಟೇ ಅಲ್ಲದೇ ದೇವಾದಿ ದೇವ ಶಿವನ ನಾಮ ಸ್ಮರಣೆಯಿಂದ ಆಧ್ಯಾತ್ಮಿಕವಾಗಿ ಪುಣ್ಯ ಲಭಿಸುವುದು. ಅಂತೆಯೇ ವೈಜ್ಞಾನಿಕವಾಗಿಯೂ ಮಾನಸಿಕ ನೆಮ್ಮದಿ ಹಾಗೂ ಅನೇಕ ಅನುಕೂಲಗಳು ಉಂಟಾಗುವುದು ಎಂದು ಹೇಳಲಾಗುತ್ತದೆ.

ಇನ್ನು ಈ ಓಂಕಾರವನ್ನು ಪ್ರಣವವೆಂದೂ ಕರೆಯಲಾಗಿದೆ. ಈ ಪ್ರಣವಾಕ್ಷರದಿಂದಲೇ ಪರಬ್ರಹ್ಮವು ಪ್ರಕಟಗೊಳ್ಳುವುದರಿಂದ ಓಂಕಾರವನ್ನು ಅವಲಂಬಿಸಿಯೇ ಸರ್ವಶ್ರೇಷ್ಠನಾದ ಮತ್ತು ಅಮೃತ ಸ್ವರೂಪನಾದ ಪರಮಾತ್ಮನನ್ನು ಅರಿಯಲು ಮತ್ತು ಅವನಲ್ಲಿ ಒಂದಾಗಲು ಸಾಧ್ಯವಾಗುತ್ತದೆ. ಪರಬ್ರಹ್ಮ ಸ್ವರೂಪವಾದ ಓಂಕಾರದ ಮೂಲಕ “ಪರಮಾತ್ಮನ ಉಪಾಸನೆ ಮಾಡುವವರು ಪೆÇರೆ ಕಳಚಿದ ಸರ್ಪದಂತೆ ಸಂಸಾರದ ಎಲ್ಲ ಕರ್ಮಗಳಿಂದ ಮುಕ್ತರಾಗಿ ಪರಾತ್ಪರ ಪರವಸ್ತುವನ್ನು ಕೂಡಿಕೊಳ್ಳುತ್ತಾರೆ” ಎಂದು ಪ್ರಶ್ನೋಪನಿಷತ್ತಿನಲ್ಲಿ ವಿವರಿಸಲಾಗಿದೆ.

ಪಂಚಾಕ್ಷರಿ ಮಂತ್ರದ ನಿಜವಾದ ಅರ್ಥವೇನು ಗೊತ್ತೇ???

ಯಜುರ್ವೇದದಲ್ಲಿರುವ ರುದ್ರಾಧ್ಯಾಯದಲ್ಲಿ ಶಿವಪಂಚಾಕ್ಷರಿ ಮಂತ್ರವಾದ “ನಮಃ ಶಿವಾಯ” ಎನ್ನುವ ಶಬ್ದದಿಂದ ಒಂದು ಉಪಭಾಗವು ಪ್ರಾರಂಭವಾಗುತ್ತದೆ. ಹಾಗಾಗಿ ಈ ಮಂತ್ರವನ್ನು ರುದ್ರಾಧ್ಯಾಯದಿಂದ ತೆಗೆದುಕೊಳ್ಳಲಾಗಿದ್ದು, ಇದರ ಪ್ರಾರಂಭದಲ್ಲಿ ಪ್ರಣವವನ್ನು ಸೇರಿಸಿದರೆ ಅದು “ಓಂ ನಮಃ ಶಿವಾಯ” ಎಂಬ ಷಡಕ್ಷರಿ ಮಂತ್ರವಾಗಿ ಬಿಂಬಿತಗೊಳ್ಳುತ್ತದೆ. ಹಾಗಾಗಿ ಪಂಚಾಕ್ಷರಿ ಮಂತ್ರದ ಒಳಾರ್ಥವನ್ನೂ ತಿಳಿದುಕೊಳ್ಳುವುದು ಅತೀ ಮುಖ್ಯ!! ಹಾಗಾಗಿ ಪಂಚಾಕ್ಷರಿ ಮಂತ್ರದ ಒಳಾರ್ಥ ಇಂತಿವೆ;

* ನ= ಸಮಸ್ತ ಲೋಕಗಳ ಆದಿದೇವ
* ಮಃ= ಪರಮನವನ್ನು ಕೊಡುವವನು ಮತ್ತು ಮಹಾಪಾತಕಗಳನ್ನು ನಾಶಗೊಳಿಸುವವನು.
* ಶಿ= ಕಲ್ಯಾಣಕಾರಕ, ಶಾಂತ ಮತ್ತು ಶಿವನ ಅನುಗ್ರಹಕ್ಕೆ ಕಾರಣವಾದವನು
* ವಾ= ವೃಷಭವಾಹನ, ವಾಸುಕಿ ಮತ್ತು ವಾಮಾಂಗಿ ಶಕ್ತಿಗಳ ಸೂಚಕ
* ಯ= ಪರಮಾನಂದ ರೂಪ ಮತ್ತು ಶಿವನ ಶುಭ ನಿವಾಸ ಸ್ಥಾನ ಆದುದರಿಂದ ಈ ಐದು ಅಕ್ಷರಗಳಿಗೆ ನಮಸ್ಕಾರ.

ಇನ್ನು, ನಟರಾಜ ಶಿವನ ತಾಂಡವ ನೃತ್ಯದೊಂದಿಗಿರುವ ಮೇಲಿನ ಮಂತ್ರದಲ್ಲಿನ ಐದು ಅಕ್ಷರಗಳ ಸಂಬಂಧವು ಈ ಕೆಳಗಿನಂತಿದೆ. ಅವು,
* ನ= ಅಗ್ನಿಯಿರುವ ಕೈ
* ಮಃ= ಮುಯಲಕ ದೈತ್ಯನನ್ನು ಮೆಟ್ಟುವ ಕಾಲು
* ಶಿ= ಡಮರು ಹಸ್ತ
* ವಾ= ಪಸರಿಸಿರುವ ಹಸ್ತ
* ಯ= ಅಭಯಹಸ್ತ ಎಂದು ಹೇಳಲಾಗುತ್ತದೆ. ಇದರ ಅನುಕ್ರಮವಾಗಿ ಈ ಐದು ಅಕ್ಷರಗಳ ಅರ್ಥವನ್ನು ಈಶ್ವರ, ಶಕ್ತಿ, ಆತ್ಮ, ಅಣತರ್ಧಾನ ಮತ್ತು ಪಾಪನಿವಾರಣೆ ಎಂದೂ ಹೇಳಲಾಗಿದೆ.

Image result for ಪಂಚಾಕ್ಷರಿ ಮಂತ್ರ

ಹಾಗಾದರೆ ಪಂಚಾಕ್ಷರಿ ಮಂತ್ರವಾದ ನಮಃ ಶಿವಾಯ ಎನ್ನುವ ಮಂತ್ರದಲ್ಲಿ ಅಡಕವಾಗಿರುವ ಅದ್ಬುತ ಶಕ್ತಿಯಾದರೂ ಏನು ಗೊತ್ತೇ??

* ಜೀವನ ಎನ್ನುವುದು ಹೂವಿನ ಹಾಸಿಗೆಯಲ್ಲ. ಅನೇಕ ಗೊಂದಲಗಳು ಹಾಗೂ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳು ಅಧಿಕವಾಗಿರುವುದು. ಮಾನಸಿಕ ಒತ್ತಡ ಹೆಚ್ಚಾದಂತೆ ಮಾನಸಿಕ ನೆಮ್ಮದಿ ಹಾಳಾಗುವುದು. ಅಂತಹ ಸಂದರ್ಭದಲ್ಲಿ ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಅಥವಾ ಆರೈಕೆ ಮಾಡಲು ಇರುವ ಏಕೈಕ ವಿಧಾನವೆಂದರೆ ಅದು “ಓಂ ನಮಃ ಶಿವಾಯ” ಎನ್ನುವ ಮಂತ್ರದ ಪಠಣೆಯಿಂದ ಎಂದು ಹೇಳಲಾಗುತ್ತದೆ.

* ಅಷ್ಟೇ ಅಲ್ಲದೇ, “ಓಂ ನಮಃ ಶಿವಾಯ” ಎನ್ನುವ ಮಂತ್ರದ ನಿಜವಾದ ಅರ್ಥ ಶಿವನಿಗೆ ಬಾಗುವುದು ಎಂದಾಗುತ್ತದೆ. ಮನುಷ್ಯನಲ್ಲಿ ಆಂತರಿಕವಾಗಿ ಸ್ವಾಭಿಮಾನ ಮತ್ತು ಅಹಂಭಾವ ಎನ್ನುವುದು ಅಧಿಕವಾಗಿಯೇ ಇರುತ್ತದೆ. ಈ ಮಂತ್ರವನ್ನು ಜಪಿಸುವುದರಿಂದ ಆಂತರಿಕ ಶುದ್ಧತೆಯನ್ನು ಹೊಂದಿ, ಶಿವನಿಗೆ ಶರಣಾಗುವುದು ಎಂದಾಗುತ್ತದೆ.

* ಇನ್ನು, ಈ “ಓಂ ನಮಃ ಶಿವಾಯ” ಮಂತ್ರವು ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯುತವಾದ ಮಂತ್ರ ಎಂದು ಹೇಳಲಾಗುತ್ತದೆ. ಈ ಮಂತ್ರವನ್ನು ನಾವು ಮನಸ್ಸಿನಲ್ಲಿ ನಿರಂತರವಾಗಿ ಹೇಳುತ್ತಿದ್ದರೆ ಯಾವುದೇ ಧಾರ್ಮಿಕ ಆಚರಣೆಯನ್ನು ಮಾಡಬೇಕೆಂದಿಲ್ಲ. ಈ ಮಂತ್ರವನ್ನು ಹೇಳಲು ಯಾರಿಗೂ ನಿರ್ಬಂಧವಿಲ್ಲ. ಯಾರೂ ಬೇಕಾದರೂ ಹೇಳಬಹುದು ಅಥವಾ ಯಾರೂ ಬೇಕಾದರೂ ಕೂಡ ಜಪವನ್ನು ಮಾಡಬಹುದು. ಪುಣ್ಯದ ಜೊತೆಗೆ ಒಂದಿಷ್ಟು ಆರೋಗ್ಯವೂ ವೃದ್ಧಿಯಾಗುವುತ್ತದೆ!!

* ಈ ಮಂತ್ರವು ಪ್ರಮುಖವಾಗಿ 5 ಉಚ್ಚಾರಾಂಶಗಳನ್ನು ಒಳಗೊಂಡಿದೆ. ಅವು, “ನಾ, ಮಾ, ಶಿ, ವಾ, ಯಾ” ಎನ್ನುವುದು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಸ್ಥಳ ಎಂದಾಗುತ್ತಾದೆ. ಈ ಪಂಚ ಭೂತಗಳಲ್ಲಿಯೂ ಶಿವನು ಇರುತ್ತಾನೆ ಎಂದು ಹೇಳಲಾಗುತ್ತದೆ.

* ಕೆಲವರಿಗೆ ಈ ಮಂತ್ರವನ್ನು ಏಕೆ ಹೇಳಬೇಕು ಎನ್ನುವ ಗೊಂದಲ ಇದ್ದೇ ಇರುತ್ತದೆ. ಹಾಗಾಗಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮಂತ್ರವು ಅಧಿಕ ಶಕ್ತಿಯನ್ನು ಒಳಗೊಂಡಿದ್ದು, ಈ ಮಂತ್ರವನ್ನು ಹೇಳುವುದರಿಂದ ನಕಾರಾತ್ಮಕ ಗ್ರಹಗಳ ಪ್ರಭಾವವನ್ನು ಕಡಿಮೆಗೊಳಿಸುವಲ್ಲಿ ಸಾಕಾರವಾಗುತ್ತದೆ. ನಕ್ಷತ್ರಗಳ ಫಲದಿಂದ ಅನುಭವಿಸಬೇಕಾದ ಅನೇಕ ಪರಿಣಾಮಗಳನ್ನು ಕಡಿಮೆಗೊಳಿಸಿ ಚೇತರಿಕೆ ಕಂಡುಕೊಳ್ಳಬಹುದಾಗಿದೆ.

* ಋಷಿಮುನಿಗಳು ಈ ಮಂತ್ರವನ್ನು ನಿರಂತರವಾಗಿ ಹೇಳುವುದರಿಂದ ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅಷ್ಟೇ ಅಲ್ಲದೆ ಆತ್ಮಕ್ಕೆ ಶಾಂತಿ ಲಭಿಸುವುದರ ಜೊತೆಗೆ ಹೃದಯ ಹಾಗೂ ಮನಸ್ಸಿನಲ್ಲಿ ಸದಾ ಸಂತೋಷವು ನೆಲೆಸುವುದು. ಅಷ್ಟೇ ಅಲ್ಲದೇ, ಗೊಂದಲವನ್ನು ನಿವಾರಿಸುವಂತಹ ಶಕ್ತಿಯನ್ನು ತುಂಬುವುದು. ದಿನದ ಆರಂಭವನ್ನು ಶಿವನ ಸ್ಮರಣೆಯಿಂದ ಅಥವಾ “ಓಂ ನಮಃ ಶಿವಾಯ” ಎನ್ನುವ ಮಂತ್ರದಿಂದ ಪ್ರಾರಂಭಿಸಿದರೆ ಉತ್ತಮ ಆರೋಗ್ಯ ಹಾಗೂ ಅದೃಷ್ಟದ ಜೀವನವನ್ನು ಕಾಣುವಿರಿ ಎಂದು ಹೇಳಿದ್ದಾರೆ.

ಹಾಗಾಗಿ ಒಂದು ಮಂತ್ರವನ್ನು ಏರಿಳಿತದಿಂದ ಲಯಬದ್ಧವಾಗಿ ಪಠಿಸಿದರೆ, ಅವರ ದೇಹದಲ್ಲಿ ಮಧುರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಈ ಪರಿಣಾಮವನ್ನು ನರ-ಭಾಷಾ ಶಾಸ್ತ್ರ ಪರಿಣಾಮ ಎಂದು ವ್ಯಾಖ್ಯಾನಿಸಬಹುದು. ಮಂತ್ರದ ಅರ್ಥ ತಿಳಿದಿಲ್ಲದಿದ್ದರೂ ಈ ನರ-ಭಾಷೆಯ ಪರಿಣಾಮವು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತೀ ಮಂತ್ರದ ಅರ್ಥವನ್ನು ತಿಳಿದುಕೊಳ್ಳುವುದು ಕಡ್ಡಾಯವಲ್ಲ. ಹಾಗಾಗಿ ಶಿವನ ಸ್ಮರಣೆ ಮಾಡಿದರೆ ಮನಸ್ಸಿಗೆ ವೈಜ್ಞಾನಿಕವಾಗಿಯೂ ಮಾನಸಿಕವಾಗಿಯೂ ನೆಮ್ಮದಿ ಹಾಗೂ ಅನೇಕ ಅನುಕೂಲಗಳು ಉಂಟಾಗುವುದು ಎಂದು ಹೇಳಲಾಗುತ್ತದೆ.

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close