ಪ್ರಚಲಿತ

ಇದೇ ರೀತಿ ಮುಂದುವರಿದರೆ ಭೂಮಿ ಬರಡಾಗಲಿದೆ, ಜೀವ ಸಂಕುಲ ನಾಶವಾಗಲಿದೆ! ಎಚ್ಚರ ಮಾನವ ಎಚ್ಚರ!

ನಿಜಕ್ಕೂ ನಾವು ಊಹಿಸದ ಆ ದಿನಗಳು ಹೆಚ್ಚು ದೂರ ಇಲ್ಲ. ನೆನ್ನೆಯ ದಿನ ಆರಾಮವಾಗಿದ್ದೆವು, ಇಂದು ಕೂಡ ಆರಾಮವಾಗಿ ಇದ್ದೇವೆ ಎಂಬ ಕಾರಣಕ್ಕೆ ನಾಳೆ ಕೂಡ ಸುಖವಾಗಿ ಇರುತ್ತೇವೆ ಎಂಬ ಆಸೆ ಇಂದೇ ಬಿಟ್ಟು ಬಿಡೋಣ. ಯಾಕೆಂದರೆ ಪರಿಸ್ಥಿತಿ ನಾವು ಊಹಿಸದ ರೀತಿಯಲ್ಲಿ ಕೈಮೀರಿದೆ. ಕೈ ಮೀರಿದೆ ಎಂಬುವುದಕ್ಕಿಂತ ನಾವೇ ಪರಿಸ್ಥಿತಿ ಹಾಳು ಮಾಡಿದ್ದೇವೆ ಎನ್ನಬೇಕು. ಭಾರತ ಎಂದರೆ ಸರ್ವವನ್ನೂ ನೀಡುವ ಕಲ್ಪವೃಕ್ಷ ಎಂಬ ಒಂದು ಕಾಲವಿತ್ತು. ಆದರೆ ಇಂದು ಅದೇ ಕಲ್ಪವೃಕ್ಷದ ಒಡಲು ಬತ್ತಿ ಹೋಗಿದೆ. ತಾನೂ ಸುಖವಾಗಿ ತನ್ನವರನ್ನೂ ಸುಖವಾಗಿ ನೋಡಿಕೊಳ್ಳುತ್ತಿದ್ದ ಭೂತಾಯಿಯನ್ನು ನಾವು ನಾಶ ಮಾಡುತ್ತಾ ಬಂದಿದ್ದೇವೆ, ಆದರೂ ಹೆತ್ತ ತಾಯಿಯಂತೆ ಭೂಮಿ ತಾಯಿ ನಮ್ಮನ್ನು ಸಲಹುತ್ತಾ ಬಂದಿದ್ದಾಳೆ. ಆದರೆ ಈಗ ಭೂಮಿ ತಾಯಿಯ ಕೈಗಳ ಬಲವನ್ನೇ ನಾವು ಕಸಿದುಕೊಂಡಿದ್ದೇವೆ.

ಹೌದು ಇಂದು ಭೂಮಿ ಸಂಪೂರ್ಣ ಬರಡಾಗಿ ಹೋಗಿದೆ. ನೀರಿನ ಮಟ್ಟ ಸಂಪೂರ್ಣ ಕುಸಿದಿದ್ದು ದೇಶಾದ್ಯಂತ ನೀರಿಗಾಗಿ ಹಾಹಾಕಾರ ಎದ್ದಿದೆ. ಬೇಕಾಬಿಟ್ಟಿ ನೀರು ಪೋಲು ಮಾಡುತ್ತಿದ್ದ ಜನರು ಇಂದು ಚರಂಡಿ ನೀರನ್ನೂ ಕೂಡ ತಮ್ಮ ದಿನನಿತ್ಯದ ಕೆಲಸಕ್ಕೆ ಬಳಸಿಕೊಳ್ಳುವಂತಾಗಿದೆ. ಇಂತಹ ಸ್ಥಿತಿ ಬರುತ್ತದೆ ಎಂದು ನಾವು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ಆ ಘೋರ ಸ್ಥಿತಿ ಇಂದು ನಮ್ಮ ಕಣ್ಣ ಮುಂದೆ ಇದೆ. ಹೊಟ್ಟೆಗೆ ಅನ್ನ‌ ಇಲ್ಲದೇ ಇದ್ದರು ಕೂಡ ಒಂದಿಷ್ಟು ದಿನ ಬದುಕಬಹುದು, ಆದರೆ ನೀರಿಲ್ಲದೆ ಬದುಕಲು ಸಾಧ್ಯವೇ?

See the source image

ಮನುಷ್ಯ ಮಾಡಿದ ಕೆಲವು ತಪ್ಪುಗಳಿಂದ ಇಂದು ಪ್ರಕೃತಿ ನಾಶವಾಯಿತು, ಪ್ರಾಣಿ ಪಕ್ಷಿಗಳು ತಮ್ಮ ಪ್ರಾಣ ಕಳೆದುಕೊಂಡವು, ಜೀವ ಸಂಕುಲವೇ ಈ ಭೂಮಿ ಮೇಲೆ ಇತ್ತು ಎಂಬುದಕ್ಕೆ ಯಾವುದೇ ಸಾಕ್ಷಿ ಕೂಡ ಸಿಗದಂತಾಗಬಹುದು ಎಂಬುದು ಹಿರಿಯರ ಎಚ್ಚರಿಕೆ ಕೂಡ ಹೌದು. ಈ ಬಾರಿ ಅಂತೂ ನೀರಿನ ಮಹತ್ವ ಏನೆಂಬುದು ಪ್ರತಿಯೊಬ್ಬರಿಗೂ ಅರಿವಾಗಿದೆ. ನೀರಿಗಾಗಿ ಕಿಲೋ ಮೀಟರ್ ದೂರ ನಡೆದಾಡಿದ ಮನುಷ್ಯ ಇಂದು ಹೇಳುತ್ತಿದ್ದಾನೆ, ಇನ್ನಾದರೂ ನೀರನ ಮಟ್ಟ ಹೆಚ್ಚಿಸುವಂತೆ ಮಾಡೋಣ ಎಂದು.

ತಮ್ಮ ತೀಟೆ ತೀರಿಸಿಕೊಳ್ಳಲು ಪ್ರಕೃತಿಯನ್ನು ನಾಶ ಮಾಡುತ್ತಾ ಬಂದ ಮನುಷ್ಯ ಇನ್ನಾದರೂ ಗಿಡಗಳನ್ನು ನೆಟ್ಟು ಮರಗಳನ್ನು ರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆಯನ್ನಾದರು ಉಳಿಸಿಕೊಳ್ಳಬಹುದೇ ವಿನಃ, ಇದೇ ರೀತಿ ಮುಂದುವರಿದರೆ ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲದೆ ಯಾವುದೇ ಜೀವಿ ಕೂಡ ಬದುಕಿರಲು ಸಾಧ್ಯವಿಲ್ಲ. ಮನುಷ್ಯ ಹೆಚ್ಚು ಹೆಚ್ಚು ಕಲಿಯುತ್ತಾ, ಬೆಳೆಯುತ್ತಾ ಹೋದಂತೆ ತನ್ನ ಸ್ವಾರ್ಥವನ್ನೇ ನೋಡಿಕೊಂಡು ಹೋಗುತ್ತಿದ್ದಾನೆ ಹೊರತು ಪ್ರಕೃತಿ ಉಳಿಸಲು ಏನು ಮಾಡಬೇಕು ಎಂಬುದನ್ನು ಮರೆತೇಬಿಟ್ಟಿದ್ದಾನೆ. ನಿಜಕ್ಕೂ ಇದು ಅಪಾಯದ ಮುನ್ಸೂಚನೆ ಅಷ್ಟೇ. ಈ ಬಾರಿ ಯಾವ ರೀತಿ ಬರಗಾಲ ಬಂದಿದೆ ಎಂದರೆ ಕೃಷಿ ಮಾಡುತ್ತಿದ್ದ ರೈತ ಆಕಾಶ ನೋಡುತ್ತಾ ಕೂರುವಂತಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲ, ನೀರಿಲ್ಲದೆ ಜೀವನವೇ ಇಲ್ಲ ಎಂದು ಗೋಗರೆಯುವ ಜನರು ಇನ್ನಾದರೂ ಗಿಡ ಮರಗಳನ್ನು ಬೆಳೆಸಿದರೆ ಉತ್ತಮ.!

See the source image

ಗಿಡ ಮರಗಳು ಹೆಚ್ಚಾದಂತೆ ಮಳೆಯ ನೀರು ಭೂಮಿಗೆ ಇಂಗಿ ಹೋಗುವುದರಿಂದ ನೀರಿನ ಮಟ್ಟ ಹೆಚ್ಚಾಗುತ್ತದೆ. ಕೆರೆ ಬಾವಿಗಳಲ್ಲಿ ನೀರು ಹೆಚ್ಚು ಹೆಚ್ಚು ಉಳಿಯುತ್ತದೆ. ಆದರೆ ಸದ್ಯ ಮರಗಳೇ ಕಾಣ ಸಿಗುತ್ತಿಲ್ಲ, ಎತ್ತ ನೋಡಿದರೂ ದೊಡ್ಡ ದೊಡ್ಡ ಕಟ್ಟಡಗಳದ್ದೇ ದರ್ಬಾರ್. ‌ಹೀಗೇ ಮುಂದುವರಿದರೆ ಮುಂದೊಂದು ದಿನ ಮನುಷ್ಯ ಪಶ್ಚಾತ್ತಾಪ ಪಡಲು ಕೂಡ ಸಮಯ ಸಿಗುವುದಿಲ್ಲ ಖಂಡಿತ. ಅದೇನೇ ಇರಲಿ, ಇನ್ನಾದರೂ ಪ್ರಕೃತಿ ಉಳಿಸೋಣ ಬೆಳೆಸೋಣ ಎಂಬುದು ಪ್ರತಿಯೊಬ್ಬರಲ್ಲೂ ವಿನಂತಿ..!

– ಪಿ ಆರ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close