ಪ್ರಚಲಿತ

ಕರ್ನಾಟಕದ ಬಲಿಷ್ಠ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು ಹೊಯ್ಸಳ ಸಾಮ್ರಾಜ್ಯ! ದೆಹಲಿಯ ಸುಲ್ತಾನರನ್ನೇ ನಡುಗಿಸಿತ್ತು ಈ‌ ಹಿಂದೂ ಸಾಮ್ರಾಜ್ಯ!

ಭಾರತದ ಇತಿಹಾಸವನ್ನು ಕೆದಕುತ್ತಾ, ಹುಡುಕುತ್ತಾ ಹೋದರೆ ಅದೆಷ್ಟೋ ಮುಚ್ಚಿಟ್ಟ ಸತ್ಯಗಳು ಹೊರ ಬೀಳುತ್ತವೆ. ಯಾಕೆಂದರೆ ನಾವು ಕಲಿತ ಪಠ್ಯ ಪುಸ್ತಕಗಳಲ್ಲಿ ಕೇವಲ ಸುಲ್ತಾನರ, ಮುಸ್ಲಿಂ ರಾಜರ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ ಮತ್ತು ಅದೆಷ್ಟೋ ಸಾಹಸ ಮೆರೆದ ಹಿಂದೂ ರಾಜರುಗಳ ಬಗ್ಗೆ ಯಾವುದೇ ರೀತಿಯ ವಿಚಾರಗಳನ್ನು ತಿಳಿಸಲಾಗಿಲ್ಲ. ಆದರೆ ಪ್ರತಿಯೊಬ್ಬರೂ ಕೂಡ ನಮ್ಮ ದೇಶದ ಇತಿಹಾಸವನ್ನು ತಿಳಿಯಬೇಕು ಮತ್ತು ಇತಿಹಾಸದಲ್ಲಿ ದೇಶ ಮತ್ತು ಧರ್ಮಕ್ಕಾಗಿ ಹೋರಾಡಿದ ರಾಜರುಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಇತಿಹಾಸದಲ್ಲಿ ಅನೇಕ‌ ಹಿಂದೂ ವಂಶಗಳು ಮತ್ತು ರಾಜರುಗಳ ಆಳ್ವಿಕೆ ನಡೆದಿದೆ. ಆದರೆ ಅವ್ಯಾವುದನ್ನು ಕೂಡ ಹೆಚ್ಚು ಉಲ್ಲೇಖ ಮಾಡಲಾಗಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸದ ವಿಚಾರ.

ಇಂತಹ ಹತ್ತಾರು ಹಿಂದೂ ರಾಜ ವಂಶಗಳ ಪೈಕಿ ಬಲಿಷ್ಠ ಸಾಮ್ರಾಜ್ಯ ಮಾತ್ರವಲ್ಲದೆ ದೆಹಲಿಯ ಸುಲ್ತಾನರನ್ನೇ ನಡುಗಿಸಿದ್ದ ಹೊಯ್ಸಳ ಸಾಮ್ರಾಜ್ಯದ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ಯಾಕೆಂದರೆ ಹೊಯ್ಸಳ ಸಾಮ್ರಾಜ್ಯವು ಯಾವ ರೀತಿ ವಿಸ್ತರಿಸಿಕೊಂಡಿತ್ತು ಎಂದರೆ ದಕ್ಷಿಣ ಭಾರತದ ಅಂದರೆ ಈಗಿನ ಕರ್ನಾಟಕ ಕೂಡ ಹೊಯ್ಸಳರ ಆಳ್ವಿಕೆಯಲ್ಲೇ ಇತ್ತು. ಅತ್ಯಂತ ಬಲಾಢ್ಯ ಸೈನ್ಯ ಕಟ್ಟಿಕೊಂಡಿದ್ದ ಹೊಯ್ಸಳರು ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ರವರೆಗೆ ಆಳ್ವಿಕೆ ನಡೆಸಿದ್ದರು. ಹಾಸನದ ಹಳೇಬೀಡು ಹೊಯ್ಸಳರ ಕಾಲದ ರಾಜಧಾನಿಯಾಗಿತ್ತು.

ಹೊಯ್ಸಳ ಎಂಬ ಹೆಸರು ಹುಟ್ಟಿಕೊಳ್ಳಲು ಒಂದು ಕಾರಣವಿದೆ ಎಂಬುದು ಇತಿಹಾಸದಲ್ಲಿ ಹೇಳಲಾಗಿದೆ. ಅದೇನೆಂದರೆ, ಜೈನ ಗುರು ಸುದತ್ತಾಚಾರ್ಯರು ಒಂದು ಮಂದಿರದಲ್ಲಿ ಇರುವ ಸಂದರ್ಭದಲ್ಲಿ ಒಂದು ಹುಲಿ ಅವರ ಮೇಲೆ ದಾಳಿ ಮಾಡಲು ಮುಂದಾಗುತ್ತಿದ್ದಾಗ ಅದನ್ನು ಗಮನಿಸಿ ತಕ್ಷಣ ಸಳ ಎಂಬ ಯುವಕನಿಗೆ “ಹೋಯ್-ಸಳ” ಎಂದು ಕರೆಯುತ್ತಾರೆ. ಈ‌ ಸಂದರ್ಭದಲ್ಲಿ ಸಳ ಕೂಡ ಆ ಹುಲಿಯನ್ನು ಕೊಲ್ಲುತ್ತಾನೆ. ಅದೇ ರೀತಿ ಹೊಯ್ಸಳ ಎಂಬ ಹೆಸರು ಬಂದಿದೆ ಎಂಬುದು ಉಲ್ಲೇಖ. ಈ ಕಥೆಯು ವಿಷ್ಣುವರ್ಧನನ ಶಾಸನದಲ್ಲಿ ಹೇಳಲಾಗಿದ್ದು, ನಂತರದಲ್ಲಿ ಅನೇಕ ಕಥೆ ಹುಟ್ಟಿಕೊಂಡಿದೆ. ಚೋಳರನ್ನು ಸೋಲಿಸಿದ ನಂತರ ಈ ಒಂದು ಕಥೆಗೆ ಮತ್ತಷ್ಟು ಹೆಚ್ಚು ಜೀವ ಬಂದಿತ್ತು ಮತ್ತು ಪ್ರಚಲಿತವಾಗಿತ್ತು. ಅದೇ ರೀತಿ ಹೊಯ್ಸಳರ ಲಾಂಛನದಲ್ಲೂ ಕೂಡ ಸಳ ಹುಲಿಯನ್ನು ಕೊಲ್ಲುವ ಚಿತ್ರವನ್ನೇ ಮುದ್ರಿಸಲಾಗಿದ್ದು, ಸಳನಿಂದಲೇ ಈ ಹೆಸರು ಬಂದಿದೆ ಎಂಬುದು ಸ್ಪಷ್ಟವಾಗುತ್ತದೆ.

ಹೊಯ್ಸಳರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿ, ಬಲಿಷ್ಠಗೊಳಿಸುವುದರ ಜೊತೆಗೆ ವ್ಯಾಪಾರ ಕ್ಷೇತ್ರದಲ್ಲಿ ಬಹಳ ಅಭಿವೃದ್ಧಿಗೊಂಡಿದ್ದರು. ಯಾಕೆಂದರೆ ಕೃಷಿಯನ್ನೇ ತಮ್ಮ ಆದಾಯದ ಮೂಲವನ್ನಾಗಿಸಿಕೊಂಡಿದ್ದ ಇವರು, ತಮಗೆ ಯಾವುದೇ ರೀತಿಯ ಸೇವೆ ಸಲ್ಲಿಸಿದವರಿಗೆ ಜಮೀನುಗಳನ್ನು ನೀಡುತ್ತಿದ್ದರು ಮತ್ತು ಸಾಮಾನ್ಯ ಜನರು ಈ‌ ಜಮೀನುಗಳಲ್ಲಿ ಕೃಷಿ ಮಾಡಿಕೊಂಡು ಉತ್ತಮ ಆದಾಯ ಗಳಿಸಿಕೊಳ್ಳುತ್ತಿದ್ದರು. ಯಾವ ಪ್ರದೇಶಗಳಲ್ಲಿ ಯಾವ ರೀತಿಯ ಕೃಷಿ ಅಥವಾ ವ್ಯಾಪಾರ ವಹಿವಾಟು ನಡೆಸಬೇಕು ಎಂಬ ಸ್ಪಷ್ಟ ಲೆಕ್ಕಾಚಾರ ಹಾಕಿಕೊಂಡು ಮುಂದೆ ಹೆಜ್ಜೆ ಇಡುತ್ತಿದ್ದ ಹೊಯ್ಸಳರು ಮಲೆನಾಡು ಪ್ರದೇಶದಲ್ಲಿ ಉತ್ತಮ ಹವಾಮಾನ ಇರುವುದರಿಂದ ಪಶುಪಾಲನೆ, ತೋಟಗಾರಿಕೆ ಸೇರಿದಂತೆ ಕೆಲವು ಸಾಂಬಾರ ಪದಾರ್ಥಗಳ ಉತ್ಪಾದನೆ ಕೂಡ ಮಾಡುತ್ತಿದ್ದರು. ಅದೇ ರೀತಿ ಬಯಲುನಾಡಿನಲ್ಲಿ ಭತ್ತ ಮತ್ತು ಜೋಳವನ್ನು ಕೃಷಿ ಮಾಡಲಾಗುತ್ತಿತ್ತು. ನೀರಿನ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಹೊಯ್ಸಳರು ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಮುಖ್ಯವಾಗಿ ಕುದುರೆ ವ್ಯಾಪಾರ ಮಾಡುತ್ತಿದ್ದ ಹೊಯ್ಸಳರು, ಜನಸಾಮಾನ್ಯರ ಪ್ರಯಾಣಕ್ಕೆ ಕುದುರೆಗಳನ್ನೇ ಬಳಸಲಾಗುತ್ತಿತ್ತು. ಆದ್ದರಿಂದ ಕುದುರೆಗಳನ್ನು ಆಮದು ಮಾಡಿ ಸರಬರಾಜು ಮಾಡುತ್ತಿದ್ದರು. ಬೃಹತ್ ಕಾಡುಗಳಲ್ಲಿ ಬೆಲೆಬಾಳುವ ಮರಗಳನ್ನು ಬೆಳೆಸಿ ಅದನ್ನು ಕೇರಳದ ಮೂಲಕ ರಫ್ತು ಮಾಡುತ್ತಿದ್ದರು. ಇದು ಹೊಯ್ಸಳರ ವ್ಯಾಪಾರ ವಹಿವಾಟು ನಡೆಸುವ ರೀತಿಯಾಗಿತ್ತು.

ಭಾರತ ಮಾತ್ರವಲ್ಲದೆ ಚೀನಾದಂತಹ ದೇಶದಲ್ಲೂ ಹೊಯ್ಸಳರ ವ್ಯಾಪಾರ ವಹಿವಾಟು ನಡೆಯುತ್ತಿತ್ತು ಎಂಬುದನ್ನು ಸ್ವತಃ ಶುಂಗ ಸಾಮ್ರಾಜ್ಯದ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಯಾಕೆಂದರೆ ಉತ್ತರ ಚೀನಾದ ಅನೇಕ ಕಡೆಗಳಲ್ಲಿ ಭಾರತದ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದರು. ಈ ಒಂದು ವಿಚಾರ ಭಾರತ ಸಮುದ್ರದ ಆಚೆಗೂ ಕೂಡ ತನ್ನ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸಿಕೊಂಡಿತ್ತು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಭಾರತದಿಂದ ಮಣ್ಣಿನ ಸಾಮಾಗ್ರಿಗಳು, ಔಷಧೀಯ ಸಸ್ಯಗಳು, ರತ್ನ, ಚಿನ್ನ ಬೆಳ್ಳಿ, ಖಡ್ಗಗಳು, ಕೆಲ ಪ್ರಾಣಿಗಳ ಕೊಂಬುಗಳು, ಶ್ರೀಗಂಧ, ಹೀಗೆ ಅತ್ಯಂತ ಬೆಲೆಬಾಳುವ ವಸ್ತುಗಳು ಭಾರತದಿಂದ ರಫ್ತಾಗುತ್ತಿದ್ದವು. ಹೊಯ್ಸಳರ ಕಾಲದಲ್ಲಿ ಬಡತನದ ಬೇಗೆಯಿಂದ ಬಳಲುತ್ತಿದ್ದವರ ಸಂಖ್ಯೆ ಕಡಿಮೆಯಾಗಿತ್ತು. ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಜೀವನ ನಡೆಸುವ ಮಟ್ಟಕ್ಕೆ ತಲುಪಿದ್ದರು ಎಂಬುದು ವಿಶೇಷ.

ಬೇಲೂರಿನ ಚೆನ್ನಕೇಶವ ದೇವಾಲಯ, ಹಳೇಬೀಡಿನ ದೇವಾಲಯ, ಹೊಯ್ಸಳೇಶ್ವರ ದೇವಾಲಯ, ಸೋಮಾನಥಪುರದ ದೇವಾಲಯ, ಹೀಗೆ ಇವೆಲ್ಲವೂ ಹೊಯ್ಸಳರು ತಮ್ಮ ಆಡಳಿತದ ಕಾಲದಲ್ಲಿ ಹಿಂದೂ ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ. ತಮ್ಮ ಆಳ್ವಿಕೆಯ ಅವಧಿಯಲ್ಲಿ ದೆಹಲಿಯ ಅನೇಕ ಸುಲ್ತಾನರ ವಿರುದ್ಧ ಸಮರ ಸಾರಿದ್ದ ಹೊಯ್ಸಳರು ಸುಲ್ತಾನರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು ಎಂಬುದು ಸತ್ಯ. ಆದರೆ ಹೊಯ್ಸಳರ ಈ ಶೌರ್ಯ ಸಾಹಸಗಳನ್ನು ಯಾವ ಪಠ್ಯ ಪುಸ್ತಕಗಳಲ್ಲಿ ಕೂಡ ಹೆಚ್ಚು ತಿಳಿಸಲಾಗಿಲ್ಲ ಎಂಬುದು ವಿಪರ್ಯಾಸವೇ ಸರಿ. ಇತಿಹಾಸವನ್ನು ತಿರುಚಿದರು ಕೂಡ ಸತ್ಯ ಸುಳ್ಳಾಗಲು ಸಾಧ್ಯವಿಲ್ಲ, ಯಾಕೆಂದರೆ ಇಂತಹ ಅನೇಕ ಹಿಂದೂ ರಾಜರುಗಳ ಇತಿಹಾಸ ತಿಳಿದಾಗ ನಮಗೆ ಸತ್ಯದ ಅರಿವಾಗುತ್ತದೆ..!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close