ಅಂಕಣದೇಶಪ್ರಚಲಿತ

ಅಧಿಕಾರಿಗಳು ನಿನಗೇನು ಬೇಕು ಎಂದು ಕೇಳಿದ ಪ್ರಶ್ನೆಗೆ, “ಸ್ವರಾಜ್ಯ” ಬೇಕು ಎನ್ನುತ್ತಲೇ ಮಡಿದ ಗಂಡುಮೆಟ್ಟಿದ ನಾಡಿನ ಈ ಬಾಲಕನ ಬಗ್ಗೆ ನಿಮಗೆಷ್ಟು ಗೊತ್ತು?

ಅಂದು ತ್ರಿವರ್ಣ ಪತಾಕೆಯಡಿ ಎಲ್ಲಾ ಚಳವಳಿಕಾರರೂ ಒಗ್ಗೂಡಿ, ದೇಶದಿಂದ ಪರಕೀಯರನ್ನು ಮೂಲೋತ್ಪಾಟಿಸಲು ಸಿದ್ಧರಾದ ಮಹತ್ವದ ದಿನ!! ಬ್ರಿಟಿಷರ ದಬ್ಬಾಳಿಕೆಯು ದೇಶದ ಜನರ ಕಣಕಣದಲ್ಲೂ ರಕ್ತ ಕುದಿಯುವಂತೆ ಮಾಡಿತ್ತು ಎಂಬುದಕ್ಕೆ ಸಾಕ್ಷಿಯಾದ ಘಟನೆಯೇ ಕ್ವಿಟ್ ಇಂಡಿಯಾ ಚಳುವಳಿ!! ಆದರೆ ಈ ಕ್ವಿಟ್ ಇಂಡಿಯ ಚಳವಳಿಯ ಜ್ವಾಲೆಗಳು ಬ್ರಿಟಿಷ್ ಆಡಳಿತದ ಬುಡ ಹತ್ತಿ ಉರಿಯಲಾರಂಭಿಸಿದ್ದಲ್ಲದೇ ಅದೆಷ್ಟೋ ದೇಶಭಕ್ತರು ತನ್ನ ಪ್ರಾಣವನ್ನೇ ಅರ್ಪಿಸಿ ಸ್ವಾತಂತ್ರ್ಯ ಎನ್ನುವ ದೀವಿಗೆಯನ್ನು ನಮಗೆ ಕರುಣಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಎರಡು ಪ್ರಮುಖ ಹೆಜ್ಜೆ ಗುರುತುಗಳು ಉಳಿದ್ದದ್ದು, 1857ರಲ್ಲಿ ನಡೆದ ಸಿಪಾಯಿ ದಂಗೆ ಒಂದಾದರೆ, ಎರಡನೆಯದು 1942ರಲ್ಲಿ ನಡೆದ ಕ್ವಿಟ್ ಇಂಡಿಯಾ(ಭಾರತ ಬಿಟ್ಟು ತೊಲಗಿ) ಆಂದೋಲನ!! ಹೌದು… ದೇಶದ ಸ್ವಾತಂತ್ರ್ಯ ವೀರರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಎನ್ನುವ ಕೂಗು ಇಡೀ ದೇಶದ್ಯಾಂತ ಸದ್ದು ಮಾಡಿತ್ತು!! ಆದರೆ ಅಂದು ಆಗಸ್ಟ್ 15 ,1942ನೇ ಇಸವಿ. ಎಲ್ಲಾ ಮಕ್ಕಳು ಆಟವಾಡುತ್ತಿದ್ದರೆ ಈ ಬಾಲಕ ಮಾತ್ರ ಸ್ವಾತಂತ್ರ್ಯ ಬೇಕು ಎನ್ನುವ ಉದ್ದೇಶದಿಂದ ತ್ರಿವರ್ಣ ಧ್ವಜವನ್ನು ಹಿಡಿದು ಹೊರಟೇ ನಿಂತ!!

“ವಂದೇ ಮಾತರಂ”, “ಭಾರತ ಮಾತಾಕಿ ಜೈ” ಎಂಬಿತ್ಯಾದಿ ಘೋಷಣೆಗಳು ಮೊಳಗುತಿದ್ದರೆ, ಇತ್ತ ತನ್ನದೇ ಪ್ರಾಯದ ಮಕ್ಕಳೆಲ್ಲ ತಮ್ಮ ಆಟದಲ್ಲಿ ಮೈಮರೆತ್ತಿದ್ದರೆ ಗಂಡು ಮೆಟ್ಟಿದ ನಾಡು ಹುಬ್ಬಳಿಯ ಈ ಬಾಲಕ ಮಾತ್ರ ಸ್ವಾತಂತ್ರ್ಯ ಬೇಕು ಎನ್ನುವ ಹೋರಾಟಕ್ಕೆ ಮುನ್ನುಗ್ಗಿದ್ದ!! ಇಂತಹ ವೀರರಿಂದಾಗಿಯೇ ಇರಬೇಕು ಹುಬ್ಬಳ್ಳಿಯನ್ನು “ಗಂಡು ಮೆಟ್ಟಿದ ನಾಡು” ಅಂತ ಕರೆಯುವುದು!! ಅದೇನೇ ಇರಲಿ… ತನ್ನ ಚಿಕ್ಕ ವಯಸ್ಸಿಗೆ ಸ್ವಾತಂತ್ರ್ಯದ ಕಿಚ್ಚನ್ನು ಮೈಗೂಡಿಸಿಕೊಂಡಿದ್ದ ವೀರ ಬಾಲಕನಾದರೂ ಯಾರು ಗೊತ್ತೇ?? ಆತ ಬೇರಾರು ಅಲ್ಲ. “ಲಾಮಿಂಗ್ಟನ್ ಹೈಸ್ಕೂಲ್” ನಲ್ಲಿ ಓದುತ್ತಿದ್ದ 13 ವರ್ಷದ ಬಾಲಕ ನಾರಾಯಣ ಮಹಾದೇವ ಧೋನಿ!!

ಹೌದು….. ದೇಶದ ಉದ್ದಗಲಕ್ಕೂ ಹರಡಿದ ಈ ಚಳುವಳಿ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ಘಟ್ಟಗಳಲ್ಲಿ ಒಂದು. ಈ ಚಳುವಳಿಯ ಗುರಿ ಬ್ರಿಟಿಷ್ ಆಳ್ವಿಕೆಗೆ ಅಂತ್ಯ ಹಾಡುವುದು ಮತ್ತು ಭಾರತದಲ್ಲಿ ಸ್ವತಂತ್ರಗೊಳಿಸುವುದಾಗಿತ್ತಲ್ಲದೇ ಸಂಪೂರ್ಣ ಸ್ವಾತಂತ್ರಕ್ಕಾಗಿಯೇ ನಡೆದ ಚಳುವಳಿ ಅದಾಗಿತ್ತು!! ಉಪ್ಪಿನ ಸತ್ಯಾಗ್ರಹದ ನಂತರ ನಡೆದ ಬಹುದೊಡ್ಡ ಹೋರಾಟ ಇದಾಗಿದ್ದು, ಭಾರತೀಯರ ಅಪ್ಪಟ ದೇಶಭಕ್ತಿಗೆ ಸಾಕ್ಷಿಯಾಗಿ ಇತಿಹಾಸ ಪುಟಗಳಲ್ಲಿ ರಾರಾಜಿಸುತ್ತಿದೆ ಕೂಡ!!

ಅಂದು ಆಗಸ್ಟ್ 15 ,1942ರ ಸಂದರ್ಭ, ಹುಬ್ಬಳಿಯ ಆಗಸದಲ್ಲಿ ಸ್ವಾತಂತ್ರ್ಯದ ಸೂರ್ಯ ಉದಯಿಸಿದ್ದ!! ಇತ್ತ ಕಡೆ ಹಕ್ಕಿಗಳ ಕಲರವದ ನಡುವೆ, ದುರ್ಗದ ಬಯಲಿನಲ್ಲಿ ಸ್ವಾತಂತ್ರ್ಯದ ಘೋಷಣೆಗಳು ಮೊಳಗಲಾರಂಭಿಸಿದವು. 13 ವರ್ಷದ ಬಾಲಕ ನಾರಾಯಣ ಮಹಾದೇವ ಧೋನಿ ಬೆಳಿಗ್ಗೆ ಬೇಗ ಎದ್ದು, ಶ್ವೇತವರ್ಣದ ಜುಬ್ಬಾ-ಪೈಜಾಮ ಧರಿಸಿ, ತನಗಿಂತಲೂ ಎತ್ತರವಿದ್ದ ಒಂದು ಬೊಂಬಿಗೆ “ತ್ರಿವರ್ಣ ಧ್ವಜ” ಕಟ್ಟಿಕೊಂಡವನೇ ಮಲಗಿದ್ದ ತಾಯಿಯ ಬಳಿ ಹೋಗಿ ಆಕೆಯನ್ನು ಎಬ್ಬಿಸಿ ಆಶೀರ್ವದಿಸುವಂತೆ ಕೇಳಿಕೊಂಡ!!

ನಿದ್ದೆಯ ಮಬ್ಬಿನಲ್ಲಿದ್ದ ತಾಯಿ, ಶ್ವೇತ ವಸ್ತ್ರಧಾರಿಯಾಗಿ “ತ್ರಿವರ್ಣ ಧ್ವಜ” ವನ್ನಿಡಿದ ಮಗನನ್ನು ನೋಡಿ ಆಶ್ಚರ್ಯಪಟ್ಟಳಲ್ಲದೇ, ಇಷ್ಟು ಬೆಳ್ಳಂಬೆಳ್ಳಗೆ ತನ್ನ ಪುಟ್ಟ ಪ್ರಾಯದ ಮಗ ಶ್ವೇತ ವಸ್ತ್ರಧಾರಿಯಾಗಿ ಎತ್ತಕಡೆಗೆ ಹೊರಟು ನಿಂತ ಎನ್ನುವ ಪ್ರಶ್ನೆಯೂ ಆಕೆಯ ಮನದಲ್ಲಿ ಕಾಡಲಾರಂಭಿಸಿತು. ತದನಂತರ ತನ್ನ ಮಗನನ್ನು ಸಮೀಪಕ್ಕೆ ಕರೆದು “ಎಲ್ಲಿಗೆ ಹೊರಟು ನಿಂತೇ ಮಗು” ಎಂದು ತನ್ನ ಮಗನಲ್ಲಿ ಕೇಳಿದಳು!!

ಆಗ ಆ ಬಾಲಕ, “ಅಮ್ಮ….. ನಾನು ದುರ್ಗದ ಬಯಲಿನಲ್ಲಿ ನಡೆಯುತ್ತಿರುವ “ಕ್ವಿಟ್ ಇಂಡಿಯಾ ಚಳುವಳಿ”ಯಲ್ಲಿ ಪಾಲ್ಗೊಳ್ಳಲು ಹೊರಟಿದ್ದೇನೆ ಎಂದು ಉತ್ತರವನಿತ್ತ!! ಇದನ್ನು ಕೇಳಿದ ಆತನ ತಾಯಿಗೆ ಆಶ್ಚರ್ಯ ಇಮ್ಮಡಿಯಾಯಿತಲ್ಲದೇ, ” ಮಗು, ಅಲ್ಲಿ ಹಿರಿಯರೇ ಇರುತ್ತಾರೆ ಕಣೋ!” ಎಂದು ಹೇಳಿದಳು. ಅದಕ್ಕೆ ಆತನ ಉತ್ತರವೇ ಆಕೆಯನ್ನು ಮರು ಪ್ರಶ್ನೆಯನ್ನೇ ಕೇಳದಂತೆ ಮಾಡಿತಲ್ಲದೇ, ಸ್ವಾತಂತ್ರ್ಯದ ಕಿಚ್ಚು ತನ್ನ ಇಷ್ಟು ಸಣ್ಣ ವಯಸ್ಸಿನ ಮಗನಲ್ಲಿರುವುದನ್ನು ಕಂಡು ಸಂತಸ ಪಟ್ಟಳು!!

ಹೌದು… ಅಲ್ಲಿ ಕೇವಲ ಹಿರಿಯರೇ ಇರುತ್ತಾರೆ ಎಂದು ತಾಯಿ ಹೇಳಿದಾಗ 13 ವರ್ಷದ ವೀರ ಬಾಲಕ ನಾರಾಯಣ ಮಹಾದೇವ ಧೋನಿ, “ಅಮ್ಮ….. ತಾಯಿ ಭಾರತೀಯ ಸೇವೆ ಮಾಡಲು ಹಿರಿಯರು, ಕಿರಿಯರು ಯಾರದರೇನಮ್ಮ??” ಎಂದವನ ಮುಖದಲ್ಲಿನ ದಿವ್ಯ ತೇಜಸ್ಸನ್ನು ಕಂಡು ಆ ತಾಯಿ ಮಗನನ್ನು ಹರಸಿ ಸಂತೋಷದಿಂದನೇ ಬೀಳ್ಕೊಟ್ಟಳು.

ಶ್ವೇತವರ್ಣದ ಜುಬ್ಬಾ-ಪೈಜಾಮ ಧರಿಸಿ, ತ್ರಿವರ್ಣ ಧ್ವಜವನ್ನು ಹಿಡಿದು ದುರ್ಗದ ಬಯಲಿಗೆ ಬಂದ ನಾರಾಯಣ ಮಹಾದೇವ ಧೋನಿ, ಸ್ವಾತಂತ್ಯ್ರ ಹೋರಾಟಗಾರರ ಜೊತೆ ಸೇರಿಕೊಂಡ. ಅವನ ಉತ್ಸಾಹ, ತೇಜಸ್ಸು ಕಂಡ ಹಿರಿಯರೆಲ್ಲ ಅವನನ್ನು ಅಪಾರ ಜನಸ್ತೋಮದ ಮುಂಚೂಣಿಯಲ್ಲಿ ಬಿಟ್ಟರು. ಇಡೀ ಜನಸಾಗರಕ್ಕೆ ಪುಟ್ಟ ಬಾಲಕ ನಾರಾಯಣ ಮಹಾದೇವ ಧೋನಿ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತ ಮಾತೆಯನ್ನು ಬಿಡಿಸ ಬಂದ ನಾಯಕನಂತೆ ಕಂಗೊಳಿಸುತಿದ್ದ.

ಸಣ್ಣ ವಯಸ್ಸಿನಲ್ಲಿಯೇ ಸ್ವಾತಂತ್ರ್ಯದ ಕಿಚ್ಚು ನರನಾಡಿಗಳಲ್ಲೇ ಹರಿದಾಡುತ್ತಿದ್ದು, ಬ್ರಿಟಿಷರನ್ನು ಭಾರತದಿಂದ ಓಡಿಸಲೇಬೇಕೆಂದು ಪಣತೊಟ್ಟ ಈ ಬಾಲಕ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸೇರಿಕೊಂಡು ಬ್ರಿಟಿಷರ ವಿರುದ್ಧ ಘೋಷಣೆಗಳ ಸುರಿಮಳೆಯನ್ನೇ ಹರಿಸಿದ!! ಇಡೀ ಜನಸ್ತೋಮದ ನಡುವೆ ಈ ಬಾಲಕ ವೀರ ಯೋಧನಂತೆ ಕಂಗೊಳಿಸಿದ!! “ವಂದೇ ಮಾತರಂ”, “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಎನ್ನುವ ಘೋಷಣೆಗಳು ಪ್ರತಿಧ್ವನಿಸುತಿದ್ದವು.

ಆ ಹರತಾಳವನ್ನು ನೋಡುತ್ತಾ…. ರಸ್ತೆಯ ಬದಿ ತಮ್ಮಷ್ಟಕ್ಕೆ ತಾವು ಸುಮ್ಮನೆ ನಿಂತಿದ್ದ ಅದೆಷ್ಟೋ ಜನರು ಈ ಪುಟ್ಟ ವೀರನ ಸ್ವಾತಂತ್ರ್ಯದ ಕಿಚ್ಚನ್ನು ನೋಡಿ ತಮ್ಮ ಬಗ್ಗೆ ತಾವೇ ಅಸಹ್ಯ ಪಟ್ಟುಕೊಂಡರು. ಅಷ್ಟೇ ಅಲ್ಲದೇ, ಈ ಬಾಲಕನಿಗೆ ಇರುವಷ್ಟು ದೇಶಪ್ರೇಮ ನಮಗಿಲ್ಲವೇ ಎಂದು ತಾವು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡರು. ನೋಡನೋಡುತಿದ್ದಂತೆ ಅಲ್ಲೊಂದು ಜನಪ್ರವಾಹವೇ ಸೃಷ್ಟಿಯಾಯಿತು!! ಈ ಬಾಲಕನ ದೇಶಪ್ರೇಮವನ್ನು ಕಂಡು ಅದೆಷ್ಟೋ ಮಂದಿ ಪ್ರೇರಣೆಗೊಂಡರಲ್ಲದೇ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಘೋಷಣೆಯನ್ನು ಕೂಗಿದರು.

ಹಾಗೆ ಸಾಗುತ್ತಿದ್ದ ಮೆರವಣಿಗೆಯನ್ನು ಕಂಡು ಸಿಡಿದೆದ್ದ ಬ್ರಿಟಿಷರು ದೇಶಪ್ರೇಮದ ಕಿಚ್ಚಿಗೆ ಕೊನೆಗಾಣಿಸಲು ಸಿದ್ದರಾದರು!! ಹಾಗಾಗಿ, ಘೋಷಣೆಗಳ ಮೇಲೆ ಘೋಷಣೆಗಳನ್ನು ಹಾಕುತ್ತಾ ಸಾಗುತ್ತಿದ್ದ ಚಳುವಳಿಗೆ, ಆಂಗ್ಲ ಪೆÇಲೀಸರು ಏಕಾಏಕಿ ಗುಂಡಿನ ಮಳೆ ಸುರಿಸಲಾರಂಭಿಸಿದರು. ಜನ ದಿಕ್ಕಾಪಾಲಾಗಿ ಓಡಲಾರಂಭಿಸಿದರು, ಆದರೆ ಈ ಪುಟ್ಟ ಬಾಲಕ ನಾರಾಯಣ ಮಹಾದೇವ ಧೋನಿ ಮಾತ್ರ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಎನ್ನುವ ಘೋಷಣೆ ಕೂಗುತ್ತಲೇ ಇದ್ದ.

ದುರಾದೃಷ್ಟವಶಾತ್, ಘೋಷಣೆಗಳನ್ನು ಕೂಗುತ್ತಲೇ ಇದ್ದ ಈ ಪುಟ್ಟಬಾಲಕನಲ್ಲಿಗೆ ನುಗ್ಗಿ ಬಂದ ಗುಂಡಿಗೆ, ಎದೆ ಕೊಟ್ಟವನೇ ರಕ್ತದ ಮಡುವಲ್ಲಿ ಕುಸಿದು ಬಿದ್ದ. ಸಾವು ಬದುಕಿನ ನಡುವೆ ಹೋರಾಟ ನಡೆಸುತಿದ್ದ ನಾರಾಯಣನನ್ನು ನೋಡಲು ಆಸ್ಪತ್ರೆಗೆ ತೆರಳಿದ ಕೆಲ ಹಿರಿಯ ಅಧಿಕಾರಿಗಳು “ನಿನಗೇನು ಬೇಕು” ಎಂದಾಗ…. “ಸ್ವರಾಜ್ಯ” ಎನ್ನುತ್ತಲೇ ಈ ವೀರ ಬಾಲಕ ನಾರಾಯಣ ಮಹಾದೇವ ಧೋನಿ ಇಹಲೋಕ ತ್ಯಜಿಸಿದ!!

ಹೌದು…. ಇತಿಹಾಸದ ಪುಟಗಳಲ್ಲಿ ಅದೆಷ್ಟು ವೀರರು ಮರೆಯಾಗಿ ಹೋಗಿದ್ದಾರೋ ಗೊತ್ತಿಲ್ಲ!! ಆದರೆ ಈ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬೆಳೆದ ಈ ಅಪ್ಪಟ ಕನ್ನಡಿಗ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ತನ್ನ ವಯಸ್ಸಿಗೂ ಮೀರಿದ ಸಾಧನೆಯನ್ನೇ ಮಾಡಿರುವುದು ಹೆಮ್ಮೆಯ ವಿಚಾರ. ಅಷ್ಟೇ ಅಲ್ಲದೇ, ತನ್ನ ಸ್ವಾತಂತ್ರ್ಯದ ಕಿಚ್ಚಿನಿಂದಾಗಿ ಇತರರನ್ನು ಈ ಚಳುವಳಿಗೆ ಭಾಗವಹಿಸುವಂತೆ ಮಾಡಿದ ಈತ, ಸ್ವಾತಂತ್ರ್ಯಕ್ಕೋಸ್ಕರನೇ ತನ್ನ ಪ್ರಾಣವನ್ನೇ ತ್ಯಜಿಸಿರುವ ಇಂತಹ ವೀರರನ್ನು ಸ್ಮರಿಸಲೇ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ!!

– ಅಲೋಖಾ

Tags

Related Articles

Close