ಪ್ರಚಲಿತರಾಜಕೀಯ

ಮೋದಿ ವಿರೋಧಿ ಎಂದ ವಿರೋಧಿಗಳ ವಿರುದ್ಧ ಗರಂ ಆದ ನಿತಿನ್ ಗಡ್ಕರಿ.! ಸುದ್ಧಿ ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ಗಡ್ಕರಿ ಹೇಳಿದ್ದೇನು?

ಕಳೆದ 5 ವರ್ಷಗಳಿಂದ ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಭ್ರಷ್ಟಾಚಾರ, ಹಗರಣದಂತಹಾ ಸುದ್ಧಿಗಳಿಗೆ ಜಾಗವೇ ಇಲ್ಲದಂತಾಗಿದೆ. ಸಂಪೂರ್ಣ ಬಹುಮತದೊಂದಿಗೆ ಆಯ್ಕೆಯಾದ ಪ್ರಧಾನಿ ಮೋದಿಯವರ ವಿರುದ್ಧ ವಿರೋಧಿಗಳು ಅದೆಷ್ಟೇ ಪಿತೂರಿ ನಡೆಸಿದರೂ ಅವರ ವಿರುದ್ಧ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಇದಕ್ಕಾಗಿ ವಿರೋಧಿಗಳು ಬಳಸಿಕೊಂಡ ಮತ್ತೊಂದು ಅಸ್ತ್ರ ಎತ್ತಿಕಟ್ಟುವುದು. ಬಿಜೆಪಿ ಪಕ್ಷದವರ ಮಧ್ಯೆಯೇ ಎತ್ತಿಕಟ್ಟಿ ಪಕ್ಷವನ್ನು ಇಬ್ಭಾಗ ಮಾಡುವ ಕನಸು ಕಂಡಿತ್ತು.

ಇದಕ್ಕಾಗಿ ಕಾಂಗ್ರೆಸ್ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಹೆಸರನ್ನು ಬಳಸಿಕೊಂಡಿತ್ತು. ಗಡ್ಕರಿ ಹಾಗೂ ಮೋದಿ ನಡುವೆ ಮನಸ್ತಾಪ ಇದೆ ಎಂಬುವುದನ್ನು ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿದರು. ಈ ಹಿಂದೆ ಒಂದು ವಿಚಾರಕ್ಕೆ ಸಂಬಂಧಿಸದಂತೆ ರಾಹುಲ್ ಗಾಂಧಿ “ಮೋದಿಯವರನ್ನು ವಿರೋಧಿಸುವ ಗಟ್ಟಿತನ ಇರುವುದು ಗಡ್ಕರಿಗೆ ಮಾತ್ರ, ನಾನು ಅವರನ್ನು ಮೆಚ್ಚುತ್ತೇನೆ” ಎಂದಿದ್ದರು. ರಾಹುಲ್ ಮಾತಿಗೆ ಗಡ್ಕರಿ ಚಾಟಿ ಬೀಸಿದ್ದರು. “ನಿಮ್ಮಿಂದ ಪಾಠ ಹೇಳಿಸಿಕೊಳ್ಳುವ ದೌರ್ಭಾಗ್ಯ ನನಗೆ ಬಂದಿಲ್ಲ” ಎಂದಿದ್ದರು.

ಆದರೂ ಬುದ್ಧಿ ಕಲಿಯದ ಕಾಂಗ್ರೆಸ್ಸಿಗರು ಗಡ್ಕರಿಯವರು ಮೋದಿಯನ್ನು ಕೆಳಗಿಳಿಸಿ ಪ್ರಧಾನಿ ಆಗುವ ಆತುರದಲ್ಲಿದ್ದಾರೆ ಎಂದು ಅಪಪ್ರಚಾರ ಮಾಡಿಕೊಂಡು ಬಂದಿದ್ದರು. ಇತ್ತೀಚೆಗೆ ಚುನಾವಣಾ ಕಾವು ಏರುತ್ತಿರುವಾಗಲೇ ಎ.ಎನ್.ಐ. ಸುದ್ಧಿ ಸಂಸ್ಥೆ ನಿತಿನ್ ಗಡ್ಕರಿಯವರನ್ನು ಸಂದರ್ಶನ ನಡೆಸಿ ಪ್ರಶ್ನೆ ಕೇಳಿತ್ತು. ಈ ವೇಳೆ ಪ್ರಧಾನಿ ಪಟ್ಟದ ಹಾಗೂ ವ್ಯಕ್ತಿ ಕೇಂದ್ರಿತ ಪಕ್ಷದ ಆರೋಪದ ಬಗ್ಗೆ ಗಡ್ಕರಿ ಅದ್ಭುತವಾಗಿ ಉತ್ತರಿಸಿದ್ದರು.

“ಬಿಜೆಪಿ ವ್ಯಕ್ತಿಕೇಂದ್ರಿತ ಪಕ್ಷವಾಗಲು ಸಾಧ್ಯವೇ ಇಲ್ಲ. ನಮ್ಮದು ತತ್ವಾದರ್ಶಗಳನ್ನು ಮೈಗೂಡಿಸಿ ಅದರ ಅಡಿಯಲ್ಲೇ ಬೆಳೆದುಕೊಂಡು ಬಂದಿರುವ ಪಕ್ಷವಾಗಿದೆ. ಹಿಂದೆ ಈ ಪಕ್ಷ ವಾಜಪೇಯಿ ಹಾಗೂ ಅಡ್ವಾಣಿ ಅವರದ್ದಾಗಿರಲಿಲ್ಲ. ಅಂತೆಯೇ ಇಂದು ಕೂಡಾ ಪಕ್ಷ ಮೋದಿ ಹಾಗೂ ಅಮಿತ್ ಶಾ ಅವರದ್ದಾಗಿದೆ ಎಂದಲ್ಲ. ಬಿಜೆಪಿ ಹಾಗೂ ಮೋದಿ ಪರಸ್ಪರ ಆಭಾರಿಗಳಾಗಿದ್ದಾರೆ” ಎಂದು ಹೇಳಿದ್ದರು. ಆದರೆ ಇದನ್ನೇ ನೆಪವಾಗಿರಿಸಿದ ವಿಪಕ್ಷಗಳು ಮೋದಿಯಿಂದ ಪಕ್ಷ ನಡೆಯುತ್ತಿಲ್ಲ ಎಂದು ಗಡ್ಕರಿ ಹೇಳಿದ್ದರು ಎಂದು ಸುಳ್ಳು ಆರೋಪ ನಡೆಸಿದ್ದರು.

ಪ್ರಧಾನಿ ಪಟ್ಟದ ಬಗ್ಗೆಯೂ ಮಾತನಾಡಿದ್ದ ಗಡ್ಕರಿ “ನಾನು ಪ್ರಧಾನಿ ಪಟ್ಟದ ಕನಸು ಇಟ್ಟುಕೊಂಡಿಲ್ಲ. ನಮ್ಮ ಪಕ್ಷ ಗೆಲ್ಲಬೇಕು ಅಷ್ಟೇ. ಮೋದಿಯವರೇ ನಮ್ಮ ನಾಯಕರು. 300ಕ್ಕಿಂತಲೂ ಹೆಚ್ಚಿನ ಸ್ಥಾನದಲ್ಲಿ ಗೆದ್ದು ನಾವು ಮತ್ತೆ ಅಧಿಕಾರ ಸ್ಥಾಪಿಸೋದು ನಿಶ್ಚಿತ. ಹಾಗೆಂದು ನಾವು ಮಿತ್ರ ಪಕ್ಷಗಳನ್ನು ಕಡೆಗಣಿಸುವುದಿಲ್ಲ” ಎಂದೂ ಗಡ್ಕರಿ ಹೇಳಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close