ಪ್ರಚಲಿತ

ಇತಿಹಾಸ ಪ್ರಸಿದ್ಧ ಹಂಪೆಯ ಕಲ್ಲಿನ ರಥಗಳ ವಿಶೇಷತೆ ಏನು? ಶತ್ರುಗಳ ದಾಳಿಗೂ ಜಗ್ಗದ ರಥಗಳು ಯಾವ ರೀತಿಯ ಪರಂಪರೆಯನ್ನು ಸಾರುತ್ತಿದೆ ಗೊತ್ತಾ?

ಭಾರತದ ಸಂಸ್ಕ್ರತಿಯೇ ಒಂದು ರೀತಿಯಾಗಿ ವಿಶೇಷ ಮತ್ತು ವಿಚಿತ್ರ. ಯಾಕೆಂದರೆ ಇಡೀ ಜಗತ್ತಿಗೆ ಜ್ಞಾನದ ಅರಿವು ಇಲ್ಲದ ಸಂದರ್ಭದಲ್ಲೇ ಭಾರತೀಯರು ಅದೆಷ್ಟೋ ರೀತಿಯ ಹೊಸ ಹೊಸ ಸಂಶೋಧನೆಗಳನ್ನು ನಡೆಸಿ ತಮ್ಮ ಜೀವನದ ಜೊತೆ ಅಳವಡಿಸಿಕೊಂಡು, ನಾಗರೀಕತೆ ಎಂದರೆ ಏನು ಎಂಬುದನ್ನು ಪರಿಚಯಿಸಿದ್ದರು. ಅದೇ ರೀತಿ ಭಾರತದಲ್ಲಿ ಇರುವ ಒಂದೊಂದು ದೇವಾಲಯಗಳು ಇಂದಿಗೂ ವಿಜ್ಞಾನಕ್ಕೆ ಸವಾಲೆಸೆದು ನಿಂತಿದೆ. ಹಲವಾರು ದೇವಾಲಯಗಳನ್ನು ಯಾವ ರೀತಿ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಯಾವ ತಂತ್ರಜ್ಞಾನ ಆಗಲಿ ಅಥವಾ ಯಾವುದೇ ವಿಜ್ಞಾನಿಗಳಿಗಾಗಲಿ ಸಾಧ್ಯವಾಗುತ್ತಿಲ್ಲ. ಅಂತಹ ವಿಶೇಷ ಮತ್ತು ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಕರ್ನಾಟಕದ ಹಂಪೆ ಕೂಡ ಒಂದು. ಹಂಪೆಯ ಇತಿಹಾಸ ಇಂದು ಇಡೀ ಜಗತ್ತಿಗೆ ತಿಳಿದಿದೆ ಮತ್ತು ಪ್ರತಿದಿನ ಸಾವಿರಾರು ಪ್ರವಾಸಿಗರು ಒಂದಿಗೂ ಇಲ್ಲಿಗೆ ಭೇಟಿ ನೀಡಿ ಕಣ್ತುಂಬಿಸಿಕೊಳ್ಳುತ್ತಾರೆ. ಆದರೆ ಹಂಪೆ ಯಾವ ರೀತಿ ಶತ್ರುಗಳ ಆಕ್ರಮಣಕ್ಕೆ ಒಳಗಾಗಿತ್ತು ಮತ್ತು ಅಂತಹ ದಾಳಿಯಾದ ನಂತರವೂ ಯಾವ ರೀತಿ ತನ್ನ ಸೌಂದರ್ಯವನ್ನು ಉಳಿಸಿಕೊಂಡಿತ್ತು ಎಂಬುದು ಬಹಳ ರೋಮಾಂಚಕಾರಿ.!

13ನೇ ಶತಮಾನದಿಂದ 16ನೇ ಶತಮಾನದವರೆಗೂ ಇಡೀ ದಕ್ಷಿಣ ಭಾರತವನ್ನೇ ತಮ್ಮ ಮುಷ್ಟಿಯೊಳಗಿಟ್ಟುಕೊಂಡು ಏಕಸಾರ್ವಭೌಮತ್ವ ಮೆರೆದಿದ್ದ ವಿಜಯನಗರ ಸಂಸ್ಥಾನದ ರಾಜಧಾನಿ ಹಂಪೆಯು ತನ್ನ ವೈಭೋಗ ಮತ್ತು ಸಮೃದ್ಧಿಯ ಕಾರಣದಿಂದ ವಿದೇಶಿಗರಿಂದ ಕೂಡ ಹೊಗಳಿಕೆಗೆ ಪಾತ್ರವಾಗಿತ್ತು. ಬೀದಿ ಬೀದಿಗಳಲ್ಲಿ ಚಿನ್ನ, ಮುತ್ತು ರತ್ನಗಳನ್ನು ಮಾರುತ್ತಿದ್ದ ಶ್ರೀಮಂತ ನಗರ ಹಂಪೆಯಾಗಿತ್ತು ಎಂಬುದು ವಿಶೇಷ. ಇಂತಹ ಕಾರಣದಿಂದ ಹಂಪೆ ಶತ್ರುಗಳ ಆಕ್ರಮಣಕ್ಕೆ ಹೆಚ್ಚು ಒಳಗಾಗಿತ್ತು, ಆದರೆ ಯಾವ ದಾಳಿಗೂ ಜಗ್ಗದ ಹಂಪೆ, ಇಂದಿಗೂ ತನ್ನ ಸೌಂದರ್ಯವನ್ನು ಉಳಿಸಿಕೊಂಡಿದೆ ಎಂಬುದು ವಿಶೇಷ. ಹಂಪಿಯನ್ನು ದೇವನಗರಿ, ಭಗ್ನಾವಶೇಷಗಳ ನಗರಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಸಿಗುತ್ತಿದ್ದ ವಜ್ರ ವೈಡೂರ್ಯಗಳ ಕಾರಣದಿಂದ ದೇವನಗರಿ ಎಂದು ಕರೆಯಲ್ಪಟ್ಟರೆ, ಶತ್ರುಗಳ ಆಕ್ರಮಣವನ್ನು ಎದುರಿಸಿದ ನಂತರವೂ ಇಲ್ಲಿನ ಕಲ್ಲಿನ ರಥಗಳು, ಮೂರ್ತಿಗಳು ಇನ್ನೂ ತಮ್ಮ ಸೌಂದರ್ಯವನ್ನು ಉಳಿಸಿಕೊಂಡಿರುವ ಕಾರಣಕ್ಕಾಗಿ ಭಗ್ನಾವಶೇಷಗಳ ನಗರಿ ಎಂದು ಕರೆಯುತ್ತಾರೆ. ಹಲವಾರು ಆಕ್ರಮಣಗಳ ನಂತರ ಇಲ್ಲಿ ಉಳಿದ ಮೂರ್ತಿಗಳು ಮತ್ತು ರಥಗಳು ಅನೇಕ ವಿಶೇಷತೆಗಳನ್ನು ಹೊಂದಿದೆ.

* ಹಂಪಿಯ ಪೂರ್ವೋತ್ತರ ದಿಕ್ಕಿನಲ್ಲಿ ಆನೆಗೊಂದಿಯ ಎದುರಿಗಿರುವ,ಹದಿನಾರನೇ ಶತಮಾನದಲ್ಲಿ ನಿರ್ಮಾಣವಾದ ವಿಜಯ ವಿಠ್ಠಲ ದೇವಸ್ಥಾನದ ಎದುರಿಗಿರುವ ಈ ಕಲ್ಲಿನ ಕೆತ್ತನೆ ನೋಡುಗರಿಗೆ ರಥದಂತೆ ಭಾಸವಾದರೂ ಮೂಲತಃ ಇದು ಗರುಡನಿಗಾಗಿ ನಿರ್ಮಿಸಲಾದ ದೇಗುಲ.ರಥದ ಮೇಲ್ಭಾಗದಲ್ಲಿ ಬೃಹತ್ ಗರುಡನ ವಿಗ್ರಹವನ್ನು ಕೆತ್ತಲಾಗಿತ್ತಾದರೂ ನಂತರದಲ್ಲಿ ದಾಳಿಕೋರರ ಕೆಂಗಣ್ಣಿಗೆ ಗುರಿಯಾಗಿ ಈಗ ಅದರ ನಾಮಾವಶೇಷವೂ ಇಲ್ಲದಂತಾಗಿದೆ.

* ರಥವನ್ನು ಸಂಪೂರ್ಣ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು,ನಮ್ಮ ಪೂರ್ವಜರು ಅಳವಡಿಸಿಕೊಂಡಿದ್ದ ಪುಟ್ಟ ರಚನೆಯೊಂದರ ಬೃಹತ್ ಪ್ರತಿಬಿಂಬ ನಿರ್ಮಾಣ ಕಲೆಯ ಕೌಶಲ್ಯಕ್ಕೊಂದು ಅತ್ಯುತ್ತಮ ನಿದರ್ಶನವಾಗಿದೆ.

* ವಿಜಯನಗರ ಸಂಸ್ಥಾನದ ಚಕ್ರವರ್ತಿಯಾಗಿದ್ದ ಕೃಷ್ಣದೇವರಾಯ ಹದಿನಾರನೇ ಶತಮಾದಲ್ಲಿ ಒರಿಸ್ಸಾದ ಸಂಸ್ಥಾನದೊಂದಿಗಿನ ಯುದ್ಧದ ಸಂದರ್ಭದಲ್ಲಿ ಕೊನಾರ್ಕಿನ ಸೂರ್ಯ ದೇವಾಲಯವನ್ನು ನೋಡಿ ಆಕರ್ಷಿತನಾಗಿ ತನ್ನ ಸಂಸ್ಥಾನದಲ್ಲಿಯೂ ಅಂತಹದ್ದೊಂದು ಕೆತ್ತನೆಯನ್ನು ಕೆತ್ತಿಸಿದರಂತೆ. ತಮ್ಮ ಸುತ್ತಮುತ್ತಲಿನ ರಾಜ್ಯದ ಕೆಲವೊಂದು ಶಿಲ್ಪಕಲೆಯನ್ನು ಕಂಡು ತಮ್ಮ ರಾಜ್ಯದಲ್ಲೂ ಅದೇ ರೀತಿ ಕೆತ್ತನೆಗಳನ್ನು ನಿರ್ಮಿಸುತ್ತಿದ್ದರು.

* ಈ ಕಲ್ಲಿನ ರಥವನ್ನು ಭಾರತದ ಶಿಲ್ಪಕಲಾ ಕೌಶಲ್ಯಗಳ ಪ್ರತೀಕವಾದ ತ್ರಿವಳಿ ರಥಗಳಲ್ಲಿ ಒಂದಾಗಿ ಗುರುತಿಸಲಾಗಿದ್ದು ಕೊನಾರ್ಕ್ ನ ಸೂರ್ಯ ದೇವರ ರಥ ಹಾಗೂ ಮಹಾಬಲಿಪುರಂ ನ ಪಂಚರಥಗಳು ಉಳಿದ ಎರಡು ರಚನೆಗಳಾಗಿವೆ.

* ಕೆಲವೊಂದು ಕಲ್ಲಿನ ರಥಗಳು ಸಂಗೀತ ಸ್ತಂಭಗಳನ್ನು ಹೊಂದಿದ್ದು, ಇಲ್ಲಿ ಸಂಗೀತ ವಾದ್ಯಗಳ ಕೆತ್ತನೆಯೂ ಕಾಣ ಸಿಗುತ್ತವೆ. ಅಷ್ಟೇ ಅಲ್ಲದೆ ಕೃಷ್ಣ ದೇವರಾಯನ ಕಾಲದಲ್ಲಿ ಈ ಪ್ರದೇಶದಲ್ಲಿ ಸಂಗೀತ ಗೋಷ್ಠಿಯನ್ನು ನಡೆಸುತ್ತಿದ್ದರು ಎಂದೂ ಹೇಳಲಾಗುತ್ತದೆ. ಆದ್ದರಿಂದ ಅವುಗಳ ಪ್ರತೀಕವಾಗಿ ಈ ಕಂಬಗಳನ್ನು ನಿರ್ಮಾಣ ಮಾಡಲಾಗಿದೆ ಎಂಬುದು ಪ್ರತೀತಿ.

* ಅದೇ ರೀತಿ ಅಂದು ಕೆಲವು ಆಕ್ರಮಣದಿಂದ ನಾಶವಾದ ಗರುಡ ಮರಳಿ ಜೀವ ಪಡೆದು ಇಲ್ಲಿರುವ ರಥದ ಮೇಲೆ ಕುಳಿತುಕೊಳ್ಳುತ್ತದೆ, ಆ ಸಂದರ್ಭದಲ್ಲಿ ರಥವೂ ತನ್ನ ಜಾಗದಿಂದ‌ ಚಲಿಸುತ್ತದೆ ಮತ್ತು ಆ ನಂತರ ಪ್ರಳಯ ಸಂಭವಿಸುತ್ತದೆ ಎಂದು ಇಲ್ಲಿನ ಜನರ ನಂಬಿಕೆ.

* ಕೆಲವೊಂದು ಕಂಬಗಳಲ್ಲಿ ಯುದ್ಧ ಸನ್ನಿವೇಶಗಳನ್ನು ಅತ್ಯಂತ ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿದ್ದು, ಪ್ರತಿಯೊಂದು ಹಂತಗಳಲ್ಲೂ ವಿವರಿಸಲಾಗಿದೆ. ಪ್ರವೇಶ ದ್ವಾರದಿಂದ ಹಿಡಿದು ಎಲ್ಲಾ ದಿಕ್ಕುಗಳಲ್ಲೂ ಒಂದೊಂದು ಕಥೆ ಸಾರುವ ಕೆತ್ತನೆಗಳು ಕಂಡು ಬರುತ್ತವೆ.

ಇಂತಹ ಹತ್ತು ಹಲವು ವಿಶೇಷತೆಗಳು ಇಲ್ಲಿನ ಕಲ್ಲಿನ ರಥಗಳಲ್ಲಿ ಕಾಣಬಹುದು. ಹಂಪಿ ಸ್ವತಃ ಯುನೆಸ್ಕೋ ವತಿಯಿಂದ ಗುರುತಿಸಲ್ಪಟ್ಟಿದ್ದು, ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ ಎಂಬುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ಆದ್ದರಿಂದ ಹಂಪಿಗೆ ಕೇವಲ ಭಾರತ ಮಾತ್ರವಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳಿಂದ ವೀಕ್ಷಣೆಗೆ ಆಗಮಿಸುತ್ತಾರೆ. ಇಂದು ಹಂಪಿ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಸರಕಾರ ಮತ್ತಷ್ಟು ಅಭಿವೃದ್ಧಿ ಪಡಿಸಿದರೆ ಹಂಪಿ ಇನ್ನೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close