ಪ್ರಚಲಿತ

ಯುದ್ಧಗೆದ್ದು ಕೋಟೆಯಲ್ಲಿ ಧ್ವಜ ಹಾರಿಸುವಾಗ ಶಿವಾಜಿಗೆ ಕಾಡುತ್ತಿದ್ದ ಭಯಕ್ಕೆ ಆಕೆ ಕುಡಿಸಿದ ಎದೆಹಾಲೇ ಕಾರಣನಾ? ಬಾಲಶಿವಾಜಿ ಕುಡಿದ ಹಾಲನ್ನು ಜೀಜಾಮಾತೆ ಕಕ್ಕಿಸಿದ್ದು ಯಾಕೆ?

ಶ್ರೀ ಕೃಷ್ಣ ಪರಮಾತ್ಮನ ತಂಗಿ, ಅರ್ಜುನನ ಮಡದಿ ಸುಭದ್ರೆ ಗರ್ಭಿಣಿ ಆಗಿದ್ದ ಸಂದರ್ಭದಲ್ಲಿ ಆಕೆಯ ಒಂಟಿತನವನ್ನು ಹಾಗೂ ಚಿಂತೆಯನ್ನು ದೂರಮಾಡಲು ಶ್ರೀಕೃಷ್ಣ ಆಕೆಗೆ ಒಂದೊಂದೇ ಕಥೆ ಹೇಳುತ್ತಿದ್ದನಂತೆ. ಅದೊಂದು ದಿನ ಸುಭದ್ರೆಯ ಚಿಂತೆ ದೂರ ಮಾಡಲೆಂದು ಶ್ರೀ ಕೃಷ್ಣ ಚಕ್ರವ್ಯೂಹವನ್ನು ಭೇದಿಸುವ ಕಥೆಯನ್ನು ಹೇಳಿದ್ದನು. ಗುರು ದ್ರೋಣಾಚಾರ್ಯರ ಚಕ್ರವ್ಯೂಹ ಭೇದಿಸುವ ಕಥೆಯನ್ನು ತನ್ನ ತಂಗಿ ಸುಭದ್ರೆಗೆ ಹೇಳುತ್ತಿದ್ದ ಸಂದರ್ಭದಲ್ಲಿ ಆಕೆಯ ಭ್ರೂಣದಲ್ಲಿದ್ದ ಮಗು ಹೂಂಗುಟ್ಟುತ್ತಿದ್ದ ಶಬ್ಧವು ಕೇಳಿಸಿತ್ತಂತೆ. ಇದೇ ಕಥೆಯನ್ನು ಕೇಳಿ ಜನಿಸಿದ್ದ ಅರ್ಜುನನ ಪುತ್ರ ಅಭಿಮನ್ಯು ವೀರನೂ, ಪರಾಕ್ರಮಿಯೂ ಆಗಿದ್ದ. ತಾನು ತನ್ನ ತಾಯಿಯ ಗರ್ಭದಲ್ಲಿದ್ದಾಗ ಕೇಳಿದ್ದ ಚಕ್ರವ್ಯೂಹ ಭೇದಿಸುವ ಕಥೆಯನುಸಾರ ಎದುರಾಳಿಗಳ ಚಕ್ರವ್ಯೂಹವನ್ನು ಭೇದಿಸಿ ಹೋರಾಡಿದ್ದನು. ಆದರೆ ಗರ್ಭದಲ್ಲಿದ್ದಾಗ ಶ್ರೀ ಕೃಷ್ಣ ಚಕ್ರವ್ಯೂಹ ಭೇದಿಸುವ ಕಥೆಯನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದ ಅಭಿಮನ್ಯುಗೆ ಚಕ್ರವ್ಯೂಹದಿಂದ ಹಿಂದೆ ಬರಲಾರದೆ ಸಾವನ್ನಪ್ಪುವ ಪರಿಸ್ಥಿತಿ ಎದುರಾಗಿತ್ತು. ಇಂತಹಾ ಸಂದರ್ಭಕ್ಕೆ ಮಹಾಭಾರತ ಸಾಕ್ಷಿಯಾಗಿತ್ತು.

ಇಂತಹಾ ಅನೇಕ ಘಟನೆಗಳು ಪುರಾಣದಲ್ಲಿ ನಡೆದಿದೆ, ನಂತರ ಆಧುನಿಕ ಜಗತ್ತಿನಲ್ಲೂ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು ವೈಜ್ಞಾನಿಕವಾಗಿಯೂ ಇದು ಸಾಭೀತಾಗಿತ್ತು. ಇದು ಶಿವಾಜಿ ಮಹಾರಾಜರ ಜೀವನದಲ್ಲೂ ನಡೆದಿತ್ತು ಎನ್ನುವ ಕಥೆಗಳೂ ಇವೆ. ಹಿಂದೂವೀ ಸ್ವರಾಜ್ಯದ ಸಾಕಾರ ಮೂರ್ತಿ, ಮೊಘಲರನ್ನು ತನ್ನ ಸಾಮ್ರಾಜ್ಯದಿಂದಲೇ ಓಡಿಸಿದ ಮಹಾಧೀರ, ಆಕ್ರಮಣಕಾರಿ ಮುಸಲ್ಮಾನರ ಕೈನಲ್ಲಿದ್ದ ಹಿಂದೂ ಸಾಮ್ರಾಜ್ಯದಲ್ಲಿ ಭಗವಾಧ್ವಜ ಹಾರಿಸಿದ್ದ ಅಪ್ರತಿಮ ವೀರ ಛತ್ರಪತಿ ಶಿವಾಜಿಯ ತಾಯಿ ಜೀಜಾಮಾತೆಯ ಕಥೆಯಿದು.

ಶಿವಾಜಿಯ ತಾಯಿ ಜೀಜಾಮಾತೆ ತನ್ನ ಮಗನನ್ನು ಹಿಂದುವೀ ಸಾಮ್ರಾಜ್ಯದ ಛತ್ರಪತಿಯಾಗಿ ಕಾಣಬೇಕೆಂದು ಆಸೆಪಟ್ಟಿದ್ದಳಂತೆ. ಶಿವಾಜಿ ಗರ್ಭದಲ್ಲಿರುವಾಗಲೆಲ್ಲಾ ಆಕೆಗೆ ರೋಮಾಂಚನಕಾರಿ ಕನಸುಗಳು ಬೀಳುತ್ತಿತ್ತು. ತಾನು ಸಿಂಹಾಸನದಲ್ಲಿ ಕೂರುವುದು, ಅಕ್ಕಪಕ್ಕದಲ್ಲಿನ ಹಿಂಬಾಲಕರು ಚಾಮರ ಬೀಸುವುದು, ಹೀಗೆಲ್ಲಾ ಕನಸುಗಳು ಜೀಜಾಮಾತೆಗೆ ಮೂಡುತ್ತಿತ್ತಂತೆ. ತನ್ನ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಅಂತಿಂತಾ ಮಗು ಅಲ್ಲ. ಹಿಂದೂ ಸಾಮ್ರಾಜ್ಯದ ಒಡೆಯನೇ ನನ್ನ ಗರ್ಭದಲ್ಲಿ ಜನಿಸುತ್ತಿದ್ದಾನೆ ಎಂದು ಆಗಲೇ ಅನ್ನಿಸುತ್ತಿತ್ತಂತೆ. ಹೀಗಾಗಿಯೇ ಆಕೆ ಪರಾಕ್ರಮಶಾಲಿಗಳ ಕಥೆಗಳನ್ನು ಕೇಳುತ್ತಿದ್ದಳಂತೆ.

ಜೀಜಾಮಾತೆ ಶಿವಾಜಿಯ ಜನನದ ನಂತರ ಬಾಲ ಶಿವಾಜಿಗೆ ತನ್ನ ಎದೆಹಾಲು ಕುಡಿಸುವಾಗಲೂ ಧೈರ್ಯದಿಂದ ಪರಾಕ್ರಮದ ಕಲ್ಪನೆಯನ್ನು ಇಟ್ಟುಕೊಂಡು ಹಾಲು ಕುಡಿಸುತ್ತಿದ್ದಳಂತೆ. ತಾನು ಹಾಲು ಕುಡಿಸುತ್ತಿರುವುದು ಕೇವಲ ಸಾಮಾನ್ಯ ಪುತ್ರನಿಗಲ್ಲ. ಬದಲಾಗಿ ಮುಂದೊಂದು ದಿನ ಮೊಘಲರ ಸಂತಾನವನ್ನೇ ಕಿತ್ತು ಸರ್ವನಾಶ ಮಾಡಲಿರುವ ನನ್ನ ವೀರಪುತ್ರನಿಗೆ ಎಂದೆನಿಸುತ್ತಲೇ ಹಾಲು ಕುಡಿಸುತ್ತಿದ್ದಳಂತೆ. ಅದರಂತೆಯೇ ಶಿವಾಜಿಯು ವೀರ ಪರಾಕ್ರಮವನ್ನು ಮರೆಯುತ್ತಾನೆ. ಭಾರತೀಯರು (ಹಿಂದೂಗಳು) ಯಾವ ಯುದ್ಧವನ್ನು ಮಾಡಿದರೂ ಸೋಲನುಭವಿಸುತ್ತದೆ ಎಂಬ ಅಪವಾದಕ್ಕೆ ಪೂರ್ಣವಿರಾಮ ಇಟ್ಟವನೇ ವೀರ ಶಿವಾಜಿ. ಮೊಘಲರ ಕೋಟೆಗೆ ನುಗ್ಗಿ ಮೊಘಲರನ್ನು ಸಂಹಾರ ಮಾಡಿ ಮರಾಠರ ಪೌರುಷವನ್ನು ಜಗತ್ತಿಗೆ ಸಾರಿದವನು ವೀರ ಶಿವಾಜಿ. ತನ್ನ ತಾಯಿ ಜೀಜಾಮಾತೆ ಬೆರಳು ತೋರಿಸಿದ ಬೆಟ್ಟಕ್ಕೆ ಹೋಗಿ ಭಗವಾಧ್ವಜ ಹಾರಿಸಿ ಬರುತ್ತಿದ್ದ ಹಿಂದೂ ಸಾಮ್ರಾಜ್ಯದ ಒಡೆಯ ವೀರ ಶಿವಾಜಿ.

ಅದೊಂದು ದಿನ ಶಿವಾಜಿ ತನ್ನ ತಾಯಿಯ ಬಳಿ ತನ್ನ ಭಯದ ಅಳಲನ್ನು ವ್ಯಕ್ತಪಡಿಸಿದ್ದನಂತೆ. ತನ್ನ ತಾಯಿಯ ಬಳಿ ಮಾತನಾಡುತ್ತಾ, “ಅಮ್ಮಾ, ಅದೆಷ್ಟೊ ಕೋಟೆಗಳನ್ನು ಗೆದ್ದಿದ್ದೇನೆ. ಅದೆಷ್ಟೋ ಕೋಟೆಗಳನ್ನು ಗೆದ್ದು ಅದರ ಮೇಲೆ ನಮ್ಮ ಭಗವಾ ಹಾರಿಸಿದ್ದೇನೆ. ಆದರೆ ಹೀಗೆಲ್ಲಾ ಯುದ್ಧ ಮಾಡಿ ನಂತರ ಆ ಕೋಟೆಯ ಮೇಲೆ ಭಗವಾ ಹಾರಿಸುವಾಗ ಅದ್ಯಾಕೋ ನನ್ನಲ್ಲಿ ಭಯ ಆವರಿಸುತ್ತದೆ. ನನಗೆ ಗೊತ್ತಿಲ್ಲದೆ ಭಯ ನನ್ನನ್ನು ಕುಪಿತಗೊಳಿಸುತ್ತದೆ” ಎಂದು ತನ್ನಲ್ಲಿರುವ ಆ ಪ್ರಶ್ನೆಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದನಂತೆ.

ತನ್ನ ಮಗನ ಪ್ರಶ್ನೆಗೆ ತಡಮಾಡದೆ ಉತ್ತರಿಸಿದ್ದ ಶಿವಾಜಿ ತಾಯಿ ಜೀಜಾಮಾತೆ ಶಿವಾಜಿಗೆ ಆ ಭಯ ಆವರಿಸಲು ಕಾರಣವಾದ ರಹಸ್ಯವನ್ನು ಬಿಚ್ಚಿಡುತ್ತಾಳೆ. “ಮಗು ಶಿವಬಾ, ನೀನು ಸಣ್ಣವನಿದ್ದಾಗ ನಾನು ನಿನಗೆ ಧೈರ್ಯದಿಂದಲೂ, ನಿರ್ಭಯದಿಂದಲೂ ಹಾಲು ಕುಡಿಸುತ್ತಿದ್ದೆ. ಆದರೆ ಅದೊಂದು ದಿನ ಒಂದು ಘಟನೆ ನಡೆದಿತ್ತು. ನಾನು ನಿನ್ನೊಂದಿಗೆ ಇಲ್ಲದ ಸಂದರ್ಭದಲ್ಲಿ ನೀನು ಜೋರಾಗಿ ಅಳುತ್ತಿದ್ದದ್ದನ್ನು ಕಂಡ ಮನೆಯ ಕೆಲಸದಾಕೆ ನಿನಗೆ ಎದೆಹಾಲು ಕುಡಿಸುತ್ತಿದ್ದಳು. ನಾನು ಬಂದ ಕ್ಷಣವೇ ಆಕೆ ನನಗೆ ಹೆದರಿ ಹಾಲು ಕೊಡುವುದನ್ನು ನಿಲ್ಲಿಸಿದ್ದಳು. ನಾನು ನಿನ್ನನ್ನು ಎತ್ತಿಕೊಂಡು ಆಕೆಯನ್ನು ಕುರಿತು `ನೀನು ಹಾಲು ಕುಡಿಸಿದ್ದು ಸರಿ, ಆದರೆ ಏನು ಎನಿಸಿಕೊಂಡು ನನ್ನ ಮಗನಿಗೆ ಹಾಲು ಕುಡಿಸಿದೆ?’ ಎಂದು ಪ್ರಶ್ನಿಸಿದ್ದಕ್ಕೆ ಆಕೆ `ನೀವು ಬಂದರೆ ಬಯ್ಯುತ್ತೀರಿ ಎಂಬ ಭಯದಲ್ಲೇ ಹಾಲು ಕುಡಿಸಿದೆ’ ಎಂದು ಹೇಳಿದ್ದಳು. ಹೀಗಾಗಿ ನಾನು ಕೂಡಲೇ ಉಲ್ಟಾ ಹಿಡಿದು ನೀನು ಕುಡಿದ ಹಾಲು ಕಕ್ಕಿಸಿದ್ದೆ. ಆಕೆ ಭಯದಿಂದ ಕುಡಿಸಿದ ಹಾಲು ನಿನ್ನ ದೇಹವನ್ನು ಹೊಕ್ಕಬಾರದು ಎಂದು ನಾನು ನೀನು ಕುಡಿದ ಹಾಲನ್ನು ಕಕ್ಕಿಸಿದ್ದೆ. ಆದರೂ ಸ್ವಲ್ಪ ಭಾಗ ಹಾಲು ನಿನ್ನ ದೇಹವನ್ನು ಹೊಕ್ಕಾಗಿತ್ತು. ಹೀಗಾಗಿಯೇ ಇಂದು ನಿನಗೆ ಈ ಭಯ ಆವರಿಸುತ್ತಿದೆ. ಭಯ ಪಡಬೇಡ, ಧೈರ್ಯದಿಂದ ಮುನ್ನುಗ್ಗು” ಎಂದು ಜೀಜಾಮಾತೆ ತನ್ನ ಮಗ ಶಿವಾಜಿಗೆ ಹೇಳಿದ್ದಳಂತೆ.

ಪುರಾಣ ಹಾಗೂ ಇತಿಹಾಸದ ಅದೆಷ್ಟೋ ಕಥೆಗಳು ಇಂದಿಗೂ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡುತ್ತಿದೆ. ಅಂತೆಯೇ ಅದೆಷ್ಟೋ ಕಥೆಗಳು ಇಂದಿಗೂ ವಿಜ್ಞಾನಕ್ಕೆ ಸವಾಲೆಸೆಯುತ್ತಿದೆ. ಆದರೆ ಪುರಾಣದಲ್ಲಿ ನಡೆದ ಎಲ್ಲಾ ಘಟನೆಗಳೂ ವೈಜ್ಞಾನಿಕವಾಗಿ ಸತ್ಯ ಎನ್ನುತ್ತಾರೆ. ಛತ್ರಪತಿ ಶಿವಾಜಿಯ ಜೀವನದಲ್ಲಿ ಬಂದಿರುವ ಪ್ರತಿಯೊಂದು ಘಟನೆಗಳೂ ಹಿಂದೂ ಧರ್ಮದ ಸಾರ ಹಾಗೂ ಪರಾಕ್ರಮತೆಯನ್ನು ಬಿಂಬಿಸುತ್ತದೆ. ಹಾಗೂ ಕೆಲವೊಂದು ಅಚ್ಚರಿಗಳಿಗೂ ಕಾರಣವಾಗುತ್ತದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close