ಪ್ರಚಲಿತ

ರೇವಣ್ಣರನ್ನು ಮುಖ್ಯಮಂತ್ರಿ ಮಾಡಿಯೆಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ.! ಉರಿವ ಬೆಂಕಿಗೆ ತುಪ್ಪ ಸುರಿದ ಮಾಜಿ ಸಿಎಂ..!

ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಕರ್ನಾಟಕದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಉಂಟಾಗಿದ್ದ ಸಂದರ್ಭ. ರಾಜ್ಯದಲ್ಲಿ ಬಹುಮತ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಎಸ್ ಯಡಿಯೂರಪ್ಪನವರನ್ನು ಕೆಳಗಿಳಿಸಿ ಕಾಂಗ್ರೆಸ್ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡ ಜೆಡಿಎಸ್ ಅಧಿಕಾರಕ್ಕೇರಲು ಸಜ್ಜಾಗಿದ್ದ ಸಂದರ್ಭ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ ಜನರು ಬೆಸ್ತು ಬಿದ್ದು ಒಂದು ವರ್ಷಗಳ ಗೆರೆಗೆ ಮುತ್ತಿಕ್ಕುವ ಸಮಯ. ಆದರೆ ಈ ಅವಧಿಯಲ್ಲೆಲ್ಲಾ ಸರ್ಕಾರ ಗೊಂದಲದ ಗೂಡಾಗಿದೆಯೇ ಹೊರತು ರಾಜ್ಯದ ಜನತೆಗೆ ಯಾವುದೇ ಭರವಸೆಗಳು ಈಡೇರಿಲ್ಲ.

ಆಗಲೇ ಒಂದು ಮಾತು ಬಹಳ ಸದ್ದು ಮಾಡಿತ್ತು. ಈ ಮೈತ್ರಿ ಒಂದು ವರ್ಷ ಕೂಡಾ ಇರೋದಿಲ್ಲ. ಲೋಕಸಭಾ ಚುನಾವಣೆಯ ನಂತರ ಈ ಮೈತ್ರಿ ಮುರಿದು ಬೀಳಲಿದೆ ಎಂದು ಹೇಳಲಾಗಿತ್ತು. ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಧರ್ಮಸ್ಥಳದ ಶಾಂತಿವನದಲ್ಲಿ ವಿಶ್ರಾಂತಿ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದರು. ಆದರೆ ಅದು ಇದೀಗ ನಿಜವಾಗುವತ್ತ ಸಾಗುತ್ತಿದೆ. ಒಂದು ಕಡೆ ಮೋದಿ ಅಲೆ, ಮತ್ತೊಂದು ಕಡೆ ಮೈತ್ರಿ ಸರ್ಕಾರದ ಗೊಂದಲ. ಇವುಗಳ ಮಧ್ಯೆ ತನ್ನ ಜೆಡಿಎಸ್ ಪಕ್ಷದಿಂದ ಹೊರಹಾಕಿದ್ದ ದೇವೇಗೌಡರ ವಿರುದ್ಧ ಸೇಡು ತೀರಿಸಲು ಹಾತೊರೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಕಳೆದ ಕೆಲ ದಿನಗಳಿಂದ ಬೇಯುತ್ತಿರುವ ಕಾಂಗ್ರೆಸ್ ಬೇಗುದಿ ಶಮನವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇತ್ತೀಚೆಗೆ ಚಿಂಚೊಳ್ಳಿ ವಿಧಾನಸಭಾ ಚುನಾವಣೆಯ ಸಂದರ್ಭ ಮುಖ್ಯಮಂತ್ರಿ ಕುಮಾರಸ್ವಾಮಿ “ಮಲ್ಲಿಕಾರ್ಜುನ ಖರ್ಗೆ ಯಾವತ್ತೋ ಸಿಎಂ ಆಗಬೇಕಿತ್ತು” ಎಂಬ ಮಾತು ಹೇಳಿದ್ದರು. ಕುಮಾರಸ್ವಾಮಿಯವರ ಈ ಮಾತು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗಿತ್ತು. ಆದರೆ ಇದನ್ನೇ ಅಸ್ತ್ರವಾಗಿ ಉಪಯೋಗಿಸಿಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ “ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾತ್ರವಲ್ಲ ಅದಕ್ಕಿಂತ ಉನ್ನತ ಹುದ್ದೆಗೇರುವ ಅರ್ಹತೆ ಇದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಸಿಎಂ ಹುದ್ದೆಯ ಅರ್ಹತೆಯ ಜನರು ಬಹಳ ಮಂದಿಯಿದ್ದಾರೆ. ಅದರಲ್ಲಿ ಸಿಎಂ ಸಹೋದರ ಹೆಚ್.ಡಿ.ರೇವಣ್ಣ ಕೂಡಾ ಓರ್ವರು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು” ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಮೈತ್ರಿ ಪಕ್ಷಗಳ ಬೀದಿ ಕಾಳಗಕ್ಕೆ ಸಾಕ್ಷಿಯಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.

ಇನ್ನು ಈ ಮಧ್ಯೆ ಹೇಳಿಕೆ ನೀಡಿರುವ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ಮಹದೇವಪ್ಪ “ಸಿಎಂ ಹುದ್ದೆಗೆ ಅರ್ಹತೆ ಇಲ್ಲದವರು ಅಧಿಕಾರದಲ್ಲಿದ್ದಾರೆ. ಇನ್ನು ಅನೇಕ ಮಂದಿ ಅರ್ಹತೆ ಇದ್ದವರು ಇದ್ದಾರೆ. ಅದರಲ್ಲೇನಿದೆ” ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧವೇ ಬಾಣ ಬಿಟ್ಟಿದ್ದಾರೆ.

ಒಟ್ಟಾರೆ ದೋಸ್ತಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಶೀತಲ ಸಮರ ಜೋರಾಗಿದ್ದು ಯಾವುದೇ ಸಂದರ್ಭದಲ್ಲೂ ಸರ್ಕಾರ ಬೀಳಬಹುದು ಎನ್ನುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಭವಿಷ್ಯ ನಿಜವಾಗುವಂತಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close