ಪ್ರಚಲಿತ

ನದಿಯ ನಡುವೆ ನೆಲೆಸಿರುವ ಕಟಿಲೇಶ್ವರಿಗೆ ಹರಕೆಯ ರೂಪದಲ್ಲಿ ಬಂದ ಹೂವಿನ ಪೂಜೆ ಎಷ್ಟು ಗೊತ್ತಾ?ಯಕ್ಷಗಾನದಲ್ಲೂ ದೇವಿ ಮಹಾತ್ಮೆ ಟಾಪ್.!

ತ್ರಿಮೂರ್ತಿಗಳ ಸೃಷ್ಟಿಕರ್ತೆ, ಭೂಲೋಕದ ಒಡತಿ, ಕಷ್ಟ ಎಂದು ಕಣ್ಣೀರಿಟ್ಟು ಬಂದ ಭಕ್ತಾದಿಗಳನ್ನು ತನ್ನ ಮಕ್ಕಳಂತೆ ಪೊರೆಯುವ ಜಗದೊಡತಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರು. ಜಾಬಾಲಿ ಮುನಿಯ ತಪಸ್ಸಿಗೆ ಒಲಿದು ಧರೆಗಿಳಿದು ಬಂದ ಮಹಾಮಾಯೆ. ಸುರರಿಗೆ ಕಂಟಕನಾಗಿ, ಪಾಪಗಳನ್ನೇ ಹೊತ್ತು ಅಟ್ಟಹಾಸ ಮೆರೆಯುತ್ತಿದ್ದ ದುಷ್ಟ ಅರುಣಾಸುರನನ್ನು ದುಂಬಿಯ ರೂಪದಲ್ಲಿ ಚುಚ್ಚಿ ಚುಚ್ಚಿ ಕೊಂದ ಭ್ರಾಮರಿ ದೇವಿ. ಬರಗಾಲದಿಂದ ತತ್ತರಿಸಿದ್ದ ಭೂಲೋಕಕ್ಕೆ ನೀರಿನ ದಾಹ ತಣಿಸಲು ಗಂಗೆಯಾಗಿ ಧರೆಗಿಳಿದ ಕಾಮಧೇನು ಪುತ್ರಿ ನಂದಿನಿಗೆ ಅಭಯ ನೀಡಿ ನಂದಿನಿಯ ಕಟಿ(ಸೊಂಟ)ಯಲ್ಲಿ ನೆಲೆಸಿದ ಕಟಿಲೇಶ್ವರಿ.

See the source image

 

ಇದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯದ. ಈ ದೇವಾಲಯಕ್ಕೆ ಕೋಟ್ಯಾಂತರ ಮಂದಿ ಭಕ್ತಾದಿಗಳಿದ್ದು ದಿನನಿತ್ಯ ಜನಜಂಗುಳಿಯಿಂದ ತುಂಬಿರುತ್ತದೆ. ಗುಡ್ಡಕಾಡುಗಳ ತಪ್ಪಲಿನಲ್ಲಿ, ನಂದಿನಿ ನದಿಯ ಮಧ್ಯದಲ್ಲಿ ನೆಲೆಸಿ ತನ್ನನ್ನು ಅರಸಿಕೊಂಡು ಬಂದ ನೊಂದ ಭಕ್ತಾದಿಗಳನ್ನು ಹರಸುವ ದೇವಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮ. ಅಸುರರ ಅಟ್ಟಹಾಸವನ್ನು ತನ್ನ ದಿವ್ಯಶಕ್ತಿಯಿಂದ ಸುಟ್ಟುಹಾಕಿ ಭೂಲೋಕದಲ್ಲಿ ಧರ್ಮ ಕಾಪಾಡಿದ ನವಶಕ್ತಿ-ನವಮಾತೆಯರಲ್ಲಿ ಒಬ್ಬಾಕೆಯೇ ಕಟೀಲು ಶ್ರೀ ದುರ್ಗಾ ಪರಮೇಶ್ವರಿ. ಇದೀಗ ಈ ದೇವಾಲಯ ಮತ್ತೊಂದು ದಾಖಲೆಗೆ ಪಾತ್ರವಾಗಿದೆ.

ಇಲ್ಲಿನ ಶ್ರೀ ದೇವಿಗೆ ಬಲು ಇಷ್ಟವಾದ ಸೇವೆಯೆಂದರೆ ಹೂವಿನ ಪೂಜೆ. ಭಕ್ತಾದಿಗಳು ಯಾವ ಸಂಕಷ್ಟದಲ್ಲಿದ್ದರೂ ಕಟೀಲು ಶ್ರೀ ಮಾತೆಯನ್ನು ನೆನೆದು ಹೂವಿನ ಪೂಜೆ ಹರಕೆ ಹೊತ್ತರೆ ಕಷ್ಟ-ಕಾರ್ಪಣ್ಯಗಳು ದೂರವಾಗುತ್ತದೆ ಹಾಗೂ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಅದೆಷ್ಟೋ ಬಾರಿ ಈ ದೇವಾಲಯದಲ್ಲಿ ಪವಾಡಗಳೇ ನಡೆದು ಹೋಗಿದೆ. ಆರೋಗ್ಯ ಹಾಗೂ ಸಂಪತ್ತಿಗಾಗಿ ಶ್ರೀ ದೇವಿಯನ್ನು ಸ್ಮರಿಸುತ್ತಾರೆ. ಅದರಲ್ಲೂ ಹೊರ ರಾಜ್ಯ ಹಾಗೂ ವಿದೇಶದಲ್ಲಿ ಉದ್ಯಮ ನಡೆಸುತ್ತಿರುವ ಉದ್ಯಮಿಗಳಿಗೆ ಶ್ರೀದೇವಿ ಇಷ್ಟದೇವತೆ. ಸನ್ನಿಧಿಯಲ್ಲಿ ನೆಲೆಸಿರುವ ಶ್ರೀ ದೇವಿ ಲಕ್ಷ್ಮೀ ಸ್ವರೂಪಿ ಎಂದೂ ಹೇಳಲಾಗುತ್ತಿದೆ.

See the source image

ಮಲ್ಲಿಗೆಯೇ ದುರ್ಗಾಪರಮೇಶ್ವರಿಗೆ ಇಷ್ಟವಾದ ಆಭರಣ. ಕಟೀಲು ದೇವಾಲಯದ ಗರ್ಭಗುಡಿಯಲ್ಲಿ ನೆಲೆಸಿರುವ ಶ್ರೀದೇವಿಯನ್ನು ಸಂಪೂರ್ಣವಾಗಿ ಮಲ್ಲಿಗೆಯಿಂದ ಅಲಂಕರಿಸಲಾಗುತ್ತದೆ. ಈ ಬಾರಿ ಹೂವಿನ ಪೂಜೆಯಲ್ಲಿ ದೇಗುಲ ದಾಖಲೆಯನ್ನು ಬರೆದಿದೆ. ಕಟೀಲು ದೇವಾಲಯ ಸರ್ಕಾರದ ಮುಜುರಾಯಿ ಇಲಾಖೆಗೆ ಸೇರಿದ ದೇವಾಲಯವಾಗಿದೆ. ಮುಜುರಾಯಿ ಇಲಾಖೆಗೆ ಸೇರಿದ ಕರ್ನಾಟಕದ ಪ್ರಸಿದ್ಧ ದೇವಾಲಯಗಳ ಹಾಗೂ ಅತೀಹೆಚ್ಚು ಆದಾಯ ತರುವ ದೇವಾಲಯಗಳ ಪೈಕಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಕೂಡಾ.

ಈ ಬಾರಿಯ ವಾರ್ಷಿಕ ಆದಾಯ 24.22 ಕೋಟಿ ಆಗಿದ್ದು ಕಳೆದ ವರ್ಷದಿಂದ 41 ಲಕ್ಷ ಏರಿಕೆ ಕಂಡಿದೆ. ಈ ಆದಾಯಗಳಲ್ಲಿ ಹೂವಿನ ಪೂಜೆಯ ಪಾಲು ದೊಡ್ಡದು. 2018-19ನೇ ಸಾಲಿನ ವಾರ್ಷಿಕ ಲೆಕ್ಕಾಚಾರದಲ್ಲಿ ಬರೋಬ್ಬರಿ 5.5 ಲಕ್ಷ ಹೂವಿನ ಪೂಜೆಯನ್ನು ಭಕ್ತಾದಿಗಳು ಶ್ರೀ ದೇವಿಗೆ ಸಲ್ಲಿಸಿದ್ದಾರೆ. ಅಂದರೆ ದಿನಕ್ಕೆ ಸರಿಸುಮಾರು 1600 ಹೂವಿನ ಪೂಜೆಯ ಸೇವೆಗಳು ಅರ್ಪಿಸಿದಂತಾಗುತ್ತದೆ. ಇನ್ನು ಪಟ್ಟೆ ಸೀರೆ, ಅನ್ನದಾನ ಸಹಿತ ಅನೇಕ ಸೇವೆಗಳು ಶ್ರೀ ದೇವಿಗೆ ಇಷ್ಟಸೇವೆಗಳಾಗಿದ್ದು ಪ್ರಸಿದ್ಧಿಯನ್ನು ಪಡೆದಿದೆ.

ಈ ದೇಗುಲದ ಮತ್ತೊಂದು ವಿಶೇಷವೆಂದರೆ ಯಕ್ಷಗಾನ ಬಯಲಾಟ. ಸುಮಾರು ಹತ್ತು ವರ್ಷಗಳಿಗೆ ಸಲ್ಲಿಸುವಷ್ಟರ ಯಕ್ಷಗಾನ ಸೇವೆಯು ಅದಾಗಲೇ ನಿಗಧಿಯಾಗಿದೆ. ಕಷ್ಟದ ಸಂದರ್ಭದಲ್ಲೋ ಅಥವಾ ಇಷ್ಟಾರ್ಥ ಸಿದ್ಧಿಗಾಗಿಯೋ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇದರ ದೇವಿ ಮಹಾತ್ಮೆ ಯಕ್ಷಗಾನ ಸೇವೆಯನ್ನು ಹರಕೆ ಹೊತ್ತರೆ ಇಷ್ಟಾರ್ಥ ಸಿದ್ಧಿಸುತ್ತದೆ ಎನ್ನುವ ನಂಬಿಕೆಯೂ ಇದೆ. ಹೀಗಾಗಿ ಇಲ್ಲಿ ಒಟ್ಟು 6 ಯಕ್ಷಗಾನ ತಂಡವು ಸೇವೆಯನ್ನು ನೀಡುತ್ತಿದ್ದು ಈ ಸಾಲಿನ ವಾರ್ಷಿಕ ಆದಾಯ ಒಂದು ಕೋಟಿಯಷ್ಟಾಗಿದೆ.

See the source image

ತುಳುನಾಡಿನಲ್ಲಿ ಮಾತ್ರವಲ್ಲದೆ ಕೋಟ್ಯಾಂತರ ಜನರು ಭಕ್ತಿಯಿಂದ ಪೂಜಿಸುವ ಶ್ರೀದೇವಿಯ ದೇಗುಲ ಈಗ ರಾಜ್ಯ ಮುಜುರಾಯಿ ಇಲಾಖೆಯ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು ಆದಾಯ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದು ಕಟೀಲು ಕ್ಷೇತ್ರವು ಸರಿಸಮಾನವಾದ ಸ್ಥಾನದಲ್ಲಿದೆ. ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮುಜುರಾಯಿ ಇಲಾಖೆಗೆ ದೊಡ್ಡ ಕೊಡುಗೆ ನೀಡಿದ ದೇವಾಲಯಗಳು ಇವೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close