ಅಂಕಣ

ವೈರಾಗ್ಯದಿಂದ ಶಿವಾಜಿ ತನ್ನೆಲ್ಲಾ ಸಾಮ್ರಾಜ್ಯವನ್ನು ಆ ಸನ್ಯಾಸಿಯ ಜೋಳಿಗೆಗೆ ಹಾಕಿದಾಗ ಆ ಮಹಾಸಂತ ಮಾಡಿದ್ದೇನು ಗೊತ್ತಾ.? ಶಿವಾಜಿಯ ನಿಸ್ವಾರ್ಥತೆಯ ಮತ್ತೊಂದು ಮುಖ!

“ಕಾಶೀ ಕೀ ಕಲಾ ಜಾತೀ, ಮಥುರಾ ಕೀ ಮಸ್ಜಿದ್ ಬನ್ ತೀ, ಅಗರ್ ಶಿವಾಜಿ ನಾ ಹೋತೇತೋ ಸಬ್ ಕೀ ಸುನ್ನತ್ ಹೋತೀ”… ಇದು ಕವಿ ಭೂಷಣರು ಹೇಳಿದ ಒಂದೇ ಒಂದು ಸಾಲಿನ ಛತ್ರಪತಿಯ ವರ್ಣನೆಯ ಸಾಲು. ಕಾಶೀ ಕಳಾಹೀನವಾಗುತ್ತಿತ್ತು, ಮಥುರಾ ಮಸೀದಿಯಾಗುತ್ತಿತ್ತು, ಅಕಸ್ಮಾತ್ ಶಿವಾಜಿ ಮಹರಾಜ್ ಹುಟ್ಟದೇ ಇರುತ್ತಿದ್ದರೆ ಈ ರಾಷ್ಟ್ರ ಆಕ್ರಮಣಕಾರಿಗಳ ಅಟ್ಟಹಾಸಕ್ಕೆ ತುತ್ತಾಗಿ ಮುಸಲ್ಮಾನ ಸಂತತಿಯನ್ನು ಅನುಸರಿಸಿರುತ್ತಿತ್ತು. ಈ ಸಮಯದಲ್ಲಿ ಹಿಂದೂ ಸಾಮ್ರಾಜ್ಯದ ಉದ್ಧಾರಕ್ಕಾಗಿ ಎದ್ದು ಬಂದ ಶಿವಾಂಶ ಆತ ಎಂದು ಹೇಳಿದ್ದರು. ಈ ಮಾತನ್ನು ಸಿಟಿಲ ಸಂತ ಸ್ವಾಮಿ ವಿವೇಕಾನಂದರೂ ಉಲ್ಲೇಖಿಸಿದ್ದರು. ಇಂತಹಾ ಶಿವಾಜಿ ಮಹಾರಾಜರ ಬಗ್ಗೆ ಒಂದು ಸುಂದರವಾದ ಕಥೆಯನ್ನು ನಾವು ತಿಳಿದುಕೊಳ್ಳಲೇ ಬೇಕು.

ಅಂದಹಾಗೆ ಶಿವಾಜಿ ಮಹಾರಾಜರು ತನ್ನ ಸಿಂಹಾಸನಕ್ಕಾಗಿ ಅಂಟಿಕೊಂಡು ಯಾವತ್ತೂ ಕುಳಿತುಕೊಂಡವರೇ ಅಲ್ಲ. ಶಿವಾಜಿ ಮಹಾರಾಜರ ಜೀವನವೇ ಒಂದು ಅದ್ಭುತ. ಅದು ಯಾರಿಂದಲೂ ಮೀರಿಸಲಾಗದ ವ್ಯಕ್ತಿತ್ವ. ಭರತ ಖಂಡ ಮಾತ್ರವಲ್ಲದೆ ಇಡೀ ಜಗತ್ತೇ ಛತ್ರಪತಿಯ ಈ ಅಪ್ರತಿಮ ಸಾಧನೆಯನ್ನು ಇಂದಿಗೂ ತನ್ನ ಆಡಳಿತದಲ್ಲಿ ಪಾಲಿಸಿಕೊಂಡು ಬರುತ್ತಿದೆ ಎಂದರೆ ನಾವು ನಂಬಲೇಬೇಕು. ವಿಯೆಟ್ನಾಂ ಎಂಬ ದೇಶದಲ್ಲಿ ಯುದ್ಧವನ್ನು ಗೆಲ್ಲಲು ಶಿವಾಜಿ ಮಹಾರಾಜರ ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸಿದ್ದರು ಎಂದರೆ ಛತ್ರಪತಿ ಶಿವಾಜಿ ಮಹಾರಾಜರ ಛಾಪು ಯಾವ ರೀತಿ ಇತ್ತು ಎಂಬುವುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಇಂತಹ ಧೈರ್ಯ, ಸಾಹಸ, ಸಾಮಾಥ್ರ್ಯ ಇರುವಂತಹ ಓರ್ವ ಶಕ್ತಿಯುತವಾದ ವ್ಯಕ್ತಿಯನ್ನು ನಾವು ಕಂಡಿದ್ದರೆ ಅದು ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರನ್ನು ಮಾತ್ರ.

ಶಿವಾಜಿ ಮಹಾರಾಜರು ಎಂದಾಕ್ಷಣ ಪಕ್ಕನೆ ಕಣ್ಣಮುಂದೆ ಅವರ ಕೆಚ್ಚೆದೆಯ ಹೋರಾಟ, ಹಿಂದೂ ಸಮ್ರಾಜ್ಯವನ್ನು ಮರುಸ್ಥಾಪಿಸಿದ್ದು, ಮೊಘಲರ ಹುಟ್ಟಡಗಿಸಿದ್ದು, ಔರಂಗಜೇಬನ ಆಸ್ಥಾನಕ್ಕೆ ನುಗ್ಗಿ ತನ್ನನ್ನೇ ಮೋಸದಿಂದ ಕೊಲ್ಲಲು ಬಂದ ಕಿರಾತಕನ ಎದೆಬಗಿದು ಸಂಹಾರ ಮಾಡಿದ ರೋಚಕ ಕಥೆಗಳು ಮಾತ್ರವೇ ಎದುರು ಬರುತ್ತದೆ. ಮಾತ್ರವಲ್ಲದೆ ಶಿವಾಜಿ ಮಹಾರಾಜರು ತನ್ನ ತಾಯಿಯೊಂದಿಗೆ ಇಟ್ಟುಕೊಂಡಿದ್ದ ಒಡನಾಟ, ಅವರು ಪಾಲಿಸುತ್ತಿದ್ದ ಮಾತೃಧರ್ಮ, ತನ್ನ ತಾಯಿ ನೀಡುತ್ತಿದ್ದ ವಚನವನ್ನು ತಪ್ಪದೇ ಪಾಲಿಸುತ್ತಿದ್ದ ಶೈಲಿಯನ್ನು ನಾವು ಓದುತ್ತಲೇ ಅದನ್ನು ತಿಳಿದುಕೊಳ್ಳುತ್ತೇವೆ. ಆದರೆ ಶಿವಾಜಿ ಮಹಾರಾಜರು ಕೇವಲ ಇಷ್ಟಕ್ಕೇ ಸೀಮಿತವಾಗಿರಲಿಲ್ಲ. ಶಿವಾಜಿ ಮಹಾರಾಜರ ಉದ್ಧೇಶ ಇದ್ದದ್ದು ಒಂದೇ… ಅದು ಹಿಂದೂ ಸ್ವರಾಜ್ಯ. ಮುಸಲ್ಮಾನ ಆಕ್ರಮಣಕಾರಿಗಳ ತುತ್ತಾಗಿದ್ದ ಭರತಖಂಡದಲ್ಲಿ ತನ್ನ ಮಾತೆ ಹೇಳಿದ ಮಾತನ್ನು ಉಳಿಸಿಕೊಳ್ಳಲು ಮೊಘಲರ ಎದೆಬಗಿದು ಅಲ್ಲಿ ಕೇಸರೀ ಧ್ವಜವನ್ನು ನೆಟ್ಟು ಮತ್ತೆ ಹಿಂದೂ ಧರ್ಮವನ್ನು ಪ್ರತಿಷ್ಟಾಪಿಸುವುದು. ಶಿವಾಜಿ ಮಹಾರಾಜರು ಹೇಳಿದ್ದೂ ಅದನ್ನೇ. “ಹಿಂದೂ ಧರ್ಮ ಪ್ರತಿಷ್ಟಾಯೇ ಸಿದ್ಧ ಖಡ್ಗ ಸದಾವಯಂ”… ಅಂದರೆ ಹಿಂದೂ ಧರ್ಮವನ್ನು ಈ ಭಾರತದಲ್ಲಿ ಮತ್ತೆ ಪ್ರತಿಷ್ಟಾಪನೆ ಮಾಡಲು ನನ್ನ ಖಡ್ಘ ಸದಾ ಸಿದ್ಧವಾಗಿರುತ್ತದೆ ಎಂದು. ಹೀಗೆಯೇ ಶಿವಾಜಿ ಮಹಾರಾಜರು ತಮ್ಮ ಆಡಳಿತವನ್ನು ನಡೆಸುತ್ತಿದ್ದರು.

ಧರ್ಮ ಪ್ರತಿಷ್ಟಾಪಕನಿಗೆ ಬಂದಿತ್ತಾ ವೈರಾಗ್ಯ..?

ಮೊದಲೇ ಹೇಳಿದಂತೆ ಶಿವಾಜಿ ಮಹಾರಜರು ಯಾವತ್ತೂ ತಮ್ಮ ಸಿಂಹಾನಕ್ಕೆ ಅಂಟಿ ಕುಳಿತವರಲ್ಲ. ಶಿವಾಜಿ ಮಹಾರಾಜರಿಗೆ ಸಮರ್ಥ ರಾಮದಾಸರು ಎಂಬ ಓರ್ವ ಶ್ರೇಷ್ಟ ಗುರುಗಳಿದ್ದರು. ಸಮರ್ಥ ರಾಮದಾಸರು ಹಾಗೂ ಶಿವಾಜಿ ಮಹಾರಾಜರ ಒಡನಾಟ ತುಂಬಾನೆ ಅದ್ಭುತವಾಗಿತ್ತು. ಶಿವಾಜಿ ಮಹಾರಾಜರು ತಮ್ಮ ಗುರುಗಳನ್ನು ತುಂಬಾನೆ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ತಾನು ಅತಿದೊಡ್ಡ ಸಾಮ್ರಾಜ್ಯದ ಒಡೆಯ ಎಂಬ ಅಹಂಕಾರವೇ ಇಲ್ಲದೆ ಸಮರ್ಥ ರಾಮದಾಸರ ಬಳಿ ಶಿವಾಜಿ ಮಹಾರಾಜರು ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು. ತನ್ನೆಲ್ಲಾ ಸಾಮ್ರಾಜ್ಯಕ್ಕಿಂತ ಗುರುಗಳ ಮೇಲಿನ ಪ್ರೇಮವೇ ಮಿಗಿಲಾಗಿತ್ತು. ಗುರುಗಳಿಗಾಗಿ ಯಾವ ಕಾರ್ಯಕ್ಕೂ ಹಾಗೂ ಯಾವ ತ್ಯಾಗಕ್ಕೂ ಶಿವಾಜಿ ಮಹಾರಾಜರು ಸಿದ್ದರಾಗಿರುತ್ತಿದ್ದರು.

ಅನೇಕ ಬಾರಿ ಶಿವಾಜಿ ಮಹಾರಾಜರಿಗೆ ಜೀವನದಲ್ಲಿ ವೈರಾಗ್ಯ ಕಾಡುತ್ತಿತ್ತಂತೆ. ಅಷ್ಟೊಂದು ದೊಡ್ಡ ಪರಾಕ್ರಮಿಗೆ ತನ್ನ ರಾಜತನದ ಬಗ್ಗೆಯೇ ವೈರಾಗ್ಯ ಕಾಡಿ ಸನ್ಯಾಸತ್ವವನ್ನು ಪಾಲಿಸಬೇಕೆಂಬ ಹಂಬಲ ಕಾಡುತ್ತಿತ್ತಂತೆ. ಹೀಗೆ ವೈರಾಗ್ಯ ಬಂದಾಗಲೆಲ್ಲಾ ತನ್ನ ಪರಮ ಗುರುಗಳಾದ ಸಮರ್ಥ ರಾಮದಾಸರ ಬಳಿ ಹೋಗಿ “ನಾನು ನಿಮ್ಮ ಬಳಿ ಬರುತ್ತೇನೆ. ದಯವಿಟ್ಟು ನಿಮ್ಮೊಂದಿಗೆ ನನ್ನನ್ನು ಕರೆದುಕೊಂಡು ಹೋಗಿ” ಎಂದು ಕೇಳಿಕೊಳ್ಳುತ್ತಿದ್ದರಂತೆ. ಆದರೆ ಸಮರ್ಥ ರಾಮದಾಸರಿಗೆ ಶಿವಾಜಿಯಿಂದ ಯಾವ ಕೆಲಸ ಆಗೋದಿದೆ ಎಂಬ ಸ್ಪಷ್ಟ ಅರಿವಿತ್ತು. ಈ ಕಾರಣಕ್ಕಾಗಿಯೇ ಸಮರ್ಥ ರಾಮದಾಸರು ಶಿವಾಜಿಯ ಈ ಮಾತನ್ನು ನಯವಾಗಿಯೇ ತಿರಸ್ಕರಿಸುತ್ತಿದ್ದರು. ಆದರೆ ಶಿವಾಜಿ ಮಹಾರಾಜರು ಮಾತ್ರ ತನ್ನ ಪರಮೋಛ್ಛ ಗುರುಗಳ ಅಪ್ಪಣೆಗೆ ಕಾಯುತ್ತಲೇ ಕುಳಿತಿರುತ್ತಿದ್ದರು. ಸಮರ್ಥ ರಾಮದಾಸರು ಶಿವಾಜಿ ಮಹಾರಾಜರಿಗೆ ಒಂದು ಭರವಸೆಯನ್ನು ನೀಡಿದ್ದರು. “ನೀನು ನನ್ನ ಜೊತೆ ಬರೋದು ಬೇಡ. ಬದಲಾಗಿ ನಾನು ಬೇಕೆಂದಿದ್ದಾಗ ನನ್ನನ್ನು ಧ್ಯಾನಿಸು, ನಾನೇ ನಿನ್ನ ಮುಂದೆ ಪ್ರತ್ಯಕ್ಷನಾಗುತ್ತೇನೆ” ಎಂದು ಹೇಳಿದ್ದರು.

Related image

ಅದೊಂದು ದಿನ ವಿಶೇಷವಾದ ಭಾವನಾತ್ಮಕ ಘಟನೆಯೊಂದು ನಡೆದಿತ್ತು. ಶಿವಾಜಿ ಮಹಾರಾಜರಿಗೆ ಮತ್ತೆ ವೈರಾಗ್ಯ ಕಾಡಿತ್ತು. ತನಗೇನೂ ಬೇಡವೆಂಬ ವೈರಾಗ್ಯತೆಯು ಶಿವಾಜಿ ಮಹಾರಾಜರಿಗೆ ಕಾಡತೊಡಗಿತು. ಛತ್ರಪತಿಗೆ ಮತ್ತೆ ತನ್ನ ಗುರುಗಳಾದ ಸಮರ್ಥ ರಾಮದಾಸರ ನೆನಪಾಯಿತು. ಆ ವೇಳೆ ಶಿವಾಜಿ ಮಹಾರಾಜರು “ಗುರುಗಳೇ” ಎಂದು ಕರೆಯುತ್ತಾರೆ. ಶಿವಾಜಿ ಮಹಾರಾಜರು ಹೀಗೆ ಕರೆಯುವಷ್ಟರಲ್ಲಿ ಶಿವಾಜಿಯ ಆಸ್ಥಾನದ ಹೊರಗಡೆ “ಭವತಿ ಭಿಕ್ಷಾಂದೇಹಿ” ಎಂಬ ಸದ್ದು ಕೇಳಿ ಬರುತ್ತೆ. ಈ ಧ್ವನಿಯನ್ನು ಕೇಳಿದ ಕ್ಷಣಮಾತ್ರದಲ್ಲೇ ಶಿವಬಾ ಹೊರಗೆ ಓಡಿ ಹೋಗುತ್ತಾರೆ. ಈ ವೇಳೆ ಸಮರ್ಥ ರಾಮದಾಸರು ಕಾಣುತ್ತಾರೆ. ತನ್ನ ಖುಷಿಯನ್ನು ತಾಳಲಾರದೆ ಗುರುಗಳ ಬಳಿಗೆ ತೆರಳಿ ಶಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾರೆ ಛತ್ರಪತಿ ಶಿವಾಜಿ ಮಹಾರಾಜರು.

ಈ ವೇಳೆ ಭಿಕ್ಷುಕರಾಗಿ ಬಂದ ಸಮರ್ಥ ರಾಮದಾಸರು “ಭಿಕ್ಷೆ ಕೊಡಪ್ಪಾ” ಎಂದು ಕೇಳುತ್ತಾರೆ. ಸ್ವತಃ ಹಿಂದೂ ಸಾಮ್ರಾಜ್ಯದ ಒಡೆಯನೇ ಬಂದು ಶಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುವಾಗ ಆ ಮಹಾ ಸಂತ ಭಿಕ್ಷೆ ಎಂದು ಕೇಳುತ್ತಾರೆ. ಶಿವಾಜಿ ಮಹಾರಾಜರಿಗೆ ಭಾರೀ ಸಂತೋಷವಾಗುತ್ತೆ. ಈಗಲಾದರೂ ತಾನು ತನ್ನ ಗುರುಗಳೊಂದಿಗೆ ಕಾವಿ ತೊಟ್ಟು ಹೊರಡಬಹುದು ಎಂದು ಅಂದುಕೊಂಡು ಒಳಗೆ ತೆರಳಿ ತನ್ನ ಇಡೀ ಸಾಮ್ರಾಜ್ಯವನ್ನೇ ಬರೆದು ಕೊಂಡು ಬರುತ್ತಾರೆ. ತಾನು ತನ್ನ ಆಡಳಿತದ ಸಂದರ್ಭದಲ್ಲಿ ಆಳಿದ ಅಷ್ಟೂ ರಾಜ್ಯಗಳ ಪತ್ರವನ್ನೇ ಬರೆದು ತಂದು ಸಮರ್ಥ ರಾಮದಾಸರ ಭಿಕ್ಷೆಯ ಜೋಳಿಗೆಗೆ ತಂದು ಹಾಕುತ್ತಾರೆ. “ಇದೆಲ್ಲವೂ ನಿಮ್ಮ ಆಶೀರ್ವಾದದಿಂದಲೇ ಸಂಪಾದಿಸಿದ್ದೇನೆ. ಇನ್ನೇನು ನೀಡಲಿ ನಿಮಗೆ. ಇದೇ ನನ್ನ ಭಿಕ್ಷೆ” ಎಂದು ಹೇಳಿ ನೀಡುತ್ತಾರೆ. ಶಿವಾಜಿಯ ಐಡಿಯಾ ಬಹಳ ಚೆನ್ನಾಗಿತ್ತು. ಈ ಎಲ್ಲಾ ಸಮ್ರಾಜ್ಯವನ್ನೇ ಕೊಟ್ಟು ತಾನು ತನ್ನ ಗುರುಗಳ ಜೊತೆಗೆ ತೆರಳುವ ಎನ್ನುವ ಯೋಚನೆ ಶಿವಾಜಿಯದ್ದಾಗಿತ್ತು.

ಆದರೆ ಅಲ್ಲಿ ನಡೆದದ್ದೇ ಬೇರೆ. ತನ್ನ ಜೋಳಿಗೆಗೆ ಹಾಕಿದ್ದ ಆ ಭಿಕ್ಷೆಯನ್ನು ಹೊರತೆಗೆದು ನೋಡುತ್ತಾರೆ. ನೋಡೋವಾಗ ಶಿವಾಜಿ ತನ್ನ ಸಮಸ್ತ ಸಾಮ್ರಾಜ್ಯವನ್ನೇ ಬರೆದು ತನ್ನ ಜೋಳಿಗೆ ಹಾಕಿರೋದು ಅವರ ಗಮನಕ್ಕೆ ಬಂದಿರುತ್ತದೆ. ಇದನ್ನು ನೋಡಿದ ಮಹಾ ಸಂತ ಸಮರ್ಥ ರಾಮದಾಸರು ಬಹಳ ಸಂತೋಷದಿಂದ ಆ ಎಲ್ಲಾ ಸಾಮ್ರಾಜ್ಯವನ್ನು ಶಿವಾಜಿಯ ಕೈಗೆ ಇಟ್ಟು ಹೇಳುತ್ತಾರೆ, “ಮಗು ಶಿವಬಾ, ನಾನು ಭಿಕ್ಷೆ ಕೇಳಿದ್ದೆ. ಆದರೆ ನೀನು ನಿನ್ನ ಅಷ್ಟೂ ಸಾಮ್ರಾಜ್ಯವನ್ನೇ ನನಗೆ ಭಿಕ್ಷೆಯಾಗಿ ನೀಡಿದ್ದೀಯಾ. ತುಂಬಾ ಸಂತೋಷವಾಯಿತು. ಇನ್ನು ಮುಂದೆ ಇವಿಷ್ಟೂ ಸಾಮ್ರಜ್ಯವೂ ನನ್ನದೇ. ತೆಗೆದುಕೋ ನನ್ನ ಈ ಎಲ್ಲಾ ಸಾಮ್ರಾಜ್ಯವನ್ನು, ನನ್ನ ಸಾಮ್ರಾಜ್ಯವನ್ನು ನಿನ್ನ ಜವಬ್ಧಾರಿಯಲ್ಲಿ ಕೊಡುತ್ತಿದ್ದೇನೆ. ಚೆನ್ನಾಗಿ ನೋಡಿ ಕೋ ಹೋಗು” ಎಂದು ಹೇಳಿಬಿಟ್ಟರು. ಈ ಮೂಲಕ ಮತ್ತೆ ಆ ಎಲ್ಲಾ ಸಾಮ್ರಾಜ್ಯವನ್ನು ಶಿವಾಜಿಯೇ ಆಳಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಸಮರ್ಥ ರಾಮದಾಸರು ನೀಡಿಬಿಟ್ಟಿದ್ದರು.

ಇಲ್ಲಿರುವ ಸಂದೇಶ ಇಷ್ಟೇ. ಛತ್ರಪತಿ ಶಿವಾಜಿ ಮಹಾರಾಜರು ಪದೇ ಪದೇ ವ್ಯಕ್ತಿ ಮುಕ್ತಿಯ ಕಲ್ಪನೆಯನ್ನು ಇಟ್ಟುಕೊಂಡಿದ್ದಾಗ, ಒಂದು ಸಮರ್ಥ ಹಿಂದೂ ರಾಷ್ಟ್ರವನ್ನು ಕಟ್ಟುವಂತಹ ಹಾಗೂ ಸಾಮ್ರಾಜ್ಯವನ್ನು ಕಟ್ಟಲು ಪ್ರೇರೇಪಣೆ ನೀಡಿದವರು. ಶಿವಾಜಿಯ ಕರ್ತವ್ಯ ಪ್ರಜ್ಞೆಯನ್ನು ಮೂಡಿಸಿದ್ದರು ಸಮರ್ಥ ರಾಮದಾಸರು. ಈ ಮೂಲಕ “ನೀನು ಬಂದಿರೋದು ಹಿಂದೂ ಸಾಮ್ರಾಜ್ಯದ ನಿರ್ಮಾಣಕ್ಕಾಗಿ. ಅದು ನಿನ್ನ ಕೆಲಸ” ಎಂದು ಹೇಳುವ ಮೂಲಕ ಕೇವಲ ಶಿವಾಜಿಯ ಮಾತ್ರವಲ್ಲ, ಸಮಸ್ತ ಸಮಾಜದ ಕರ್ತವ್ಯ ಪ್ರಜ್ಞೆಯನ್ನು ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾದ ಸಮರ್ಥ ರಾಮದಾಸರು ನೀಡುತ್ತಾರೆ.

-ಸುನಿಲ್ ಪಣಪಿಲ

Tags

Related Articles

Close