ಪ್ರಚಲಿತ

ಎತ್ತಿನ ಹೊಳೆಯೋ-ಬತ್ತುವ ಸೆಳೆಯೋ? ಮಂಜುನಾಥನ ದರ್ಶನಕ್ಕೂ ಬರ ಅಡ್ಡಿ? ಧರ್ಮಸ್ಥಳ ಪ್ರವಾಸ ಮುಂದೂಡಿಯೆಂದ ಧರ್ಮಾಧಿಕಾರಿಗಳು.!

ಒಂದಲ್ಲಾ, ಎರಡಲ್ಲಾ… ಬರೋಬ್ಬರಿ 13000 ಕೋಟಿ ರೂಪಾಯಿ. ಇದು ರಾಜ್ಯ ಸರ್ಕಾರ ಬಯಲು ಸೀಮೆಗೆ ನೀರು ಕೊಡಲೆಂದು ಎತ್ತಿನಹೊಳೆ ಯೋಜನೆಗೆ ಮೀಸಲಿಟ್ಟ ಹಣ. ಅದೆಷ್ಟೋ ಹೋರಾಟ, ಅದೆಷ್ಟೋ ಪ್ರತಿಭಟನೆಗಳು, ಅದೆಷ್ಟೋ ಬಂದ್ ಗಳನ್ನು ನಡೆಸಿದರೂ ಸರ್ಕಾರದ ಮನಸು ಮಾತ್ರ ಕರಗುತ್ತಿಲ್ಲ. ಇದೊಂದು ಅವೈಜ್ಞಾನಿಕ ಹಾಗೂ ಹಣವನ್ನು ಕೊಳ್ಳೆ ಹೊಡೆಯುವ ಯೋಜನೆ ಎಂದು ಹೇಳುತ್ತಾ ಬಂದಿದ್ದರೂ ರಾಜಕಾರಣಿಗಳು ಮಾತ್ರ ಕಮಿಷನ್ ಹಣದ ಆಸೆಯ ಹಿಂದೆ ಬಿದ್ದಿದ್ದಾರೆ ಅಷ್ಟೇ. ಮಂಗಳೂರಿನಿಂದ ಸಂಸದರು ಕಾಲ್ನಡಿಗೆ ನಡೆಸಿದರೂ ಸರ್ಕಾರ ಮಾತ್ರ ಕಲ್ಲು ಬಂಡೆಯ ರೀತಿ ನಿಂತಿದೆ.

ಕರಾವಳಿಯ ಜೀವನದಿ ನೇತ್ರಾವತಿ ಬತ್ತಿ ಹೋಗಲಿದೆ ಎಂದು ಹೇಳುತ್ತಾ ಬಂದರೂ ಕೇಳೋರಿರಲಿಲ್ಲ. ಆದರೆ ಇದೀಗ ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಅನಿವಾರ್ಯವಾಗಿ ಧುಖಃಪಡಬೇಕಾದ ಅನಿವಾರ್ಯತೆ ಎದುರಾಗಿದೆ. ನೇತ್ರಾವತಿಯ ನೀರು ಇಂಗಿಹೋಗಿದೆ. ಎಲ್ಲಿ ಏನೇ ಅನಾಹುತಗಳು ಸಂಭವಿಸಿದರೂ ತುಳುನಾಡಿಗೆ ಮಾತ್ರ ಅದರ ಪರಿಣಾಮ ಬೀರೋದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಇತರೆ ಜಿಲ್ಲೆಗಳಲ್ಲಿ ಅಪ್ಪಳಿಸಿದ ಬರದ ಬಿಸಿ ಈಗ ಕರಾವಳಿಗೂ ತಟ್ಟಿದೆಯಾ ಎಂದೆನಿಸುವಂತಿದೆ.

ಸದಾ ಜಿನುಗುತ್ತಿದ್ದ ನೇತ್ರಾವತಿ ಇಂದು ಬತ್ತಿ ಹೋಗಿದೆ ಎಂದರೆ ಅದಕ್ಕೆ ಕಾರಣ ಯಾರು? ಎತ್ತಿನ ಹೊಳೆ ಎಂಬ ಅವೈಜ್ಞಾನಿಕ ನಿರ್ಧಾರದಿಂದ ಇಂತಹಾ ಸಮಸ್ಯೆ ಎದುರಾಗುತ್ತಿದೆಯೇ? ಇದಕ್ಕೆಲ್ಲಾ ಉತ್ತರ ಕೊಡುವವರು ಯಾರು? ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಭಕ್ತರಿಗೆ ಪತ್ರ ಬರೆದು “ದಯವಿಟ್ಟು ತಮ್ಮ ಧರ್ಮಸ್ಥಳ ಪ್ರವಾಸವನ್ನು ಮುಂದೂಡಿ” ಎಂದು ಮನವಿ ಮಾಡುತ್ತಾರೆ ಎಂದಾದರೆ ಧರ್ಮದ ನೆಲದಲ್ಲಿ ಬರಗಾಲದ ಮುನ್ಸೂಚನೆಯೇ?

ನೇತ್ರಾವತಿಯ ನೀರು ಇಂಗಿರುವುದರಿಂದ ಅನ್ನ ದಾಸೋಹಕ್ಕೆ ಇನ್ನು ಮುಂದೆ ತಟ್ಟೆ ಬಳಸುವಂತಿಲ್ಲ ಎಂದು ಧರ್ಮಾಧಿಕಾರಿಗಳು ಸುದ್ಧಿಗೋಷ್ಠಿ ನಡೆಸಿ ಹೇಳಿದ್ದಾರೆ. ದಿನಕ್ಕೆ 30ರಿಂದ 40 ಸಾವಿರ ಭಕ್ತರು ಅನ್ನ ಪ್ರಸಾದವನ್ನು ಸೇವಿಸುತ್ತಾರೆ. ನೀರಿನ ಅಭಾವದಿಂದ ತಟ್ಟೆ ತೊಳೆಯಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಇನ್ನುಮುಂದೆ ತಟ್ಟೆಯ ಬದಲು ಎಲೆಯಲ್ಲಿ ಊಟ ಮಾಡುವ ಬಗ್ಗೆ ಕ್ಷೇತ್ರ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಸಕಲ ಪಾಪಗಳನ್ನು ಪರಿಹರಿಸುವ ಜೀವನದಿ ನೇತ್ರಾವತಿಯ ನೀರು ಇಂಗಿದ್ದು ಇದಕ್ಕೆ ಅವೈಜ್ಞಾನಿಕ ಎತ್ತಿನ ಹೊಳೆ ಯೋಜನೆಯೇ ಕಾರಣ ಎಂದು ಕರಾವಳಿ ಭಾಗದ ಜನತೆ ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಧರ್ಮದ ಬೀಡಿನಲ್ಲಿ ಬರಗಾಲ ಆವರಿಸದಂತೆ ಆ ಮಂಜುನಾಥನೇ ಕಾಪಾಡಬೇಕಷ್ಟೇ…

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close