ಪ್ರಚಲಿತ

ಜೆಡಿಎಸ್ ವಿರುದ್ಧ ಸಿಡಿದೆದ್ದು ರಾಜೀನಾಮೆಗೆ ಮುಂದಾದ ಕಾಂಗ್ರೆಸ್ಸಿಗರು.! ಹತ್ತನೇ ಪಾಸಾದವರ ಕೈನಲ್ಲಿದೆಯಂತೆ ಎರಡೆರಡು ಖಾತೆಗಳು.!

“ಜೆಡಿಎಸ್ ಅಪ್ಪ ಮಕ್ಕಳ ಪಕ್ಷವೆಂದು ಮತ್ತೆ ಸಾಭೀತಾಗಿದೆ. ಅದು ಒಂದು ಕುಟುಂಬವನ್ನು ಮಾತ್ರ ರಕ್ಷಿಸುತ್ತಿದೆ. ರಾಜ್ಯದ ಅಭಿವೃದ್ಧಿ ಹಾಗೂ ಮಿತ್ರ ಪಕ್ಷಕ್ಕೆ ಕೊಡಬೇಕಾದ ಗೌರವ ಕೊಡುವಲ್ಲಿ ಜೆಡಿಎಸ್ ವಿಫಲವಾಗಿದೆ. ಹತ್ತನೇ ಕ್ಲಾಸು ಕಲಿತವರೂ ಎರಡೆರಡು ಖಾತೆಯನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಎಜುಕೇಟೆಡ್ ಪರ್ಸನ್ಸ್ ಗೆ ಅವಕಾಶ ಇಲ್ಲದಂತಾಗಿದೆ. ಇದು ಒಬ್ಬರು ಇಬ್ಬರ ಪ್ರಶ್ನೆಯಲ್ಲ. ನಾವು 80 ಸ್ಥಾನ ಗಳಿಸಿದ್ದರೂ ಜೆಡಿಎಸ್ ಗೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಆದರೆ ಅವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರದ್ದೇ ರಾಜ್ಯಭಾರ ನಡೆಸುತ್ತಿದ್ದಾರೆ. ಇದು ನನಗೆ ಆದ ಅವಮಾನ ಅಲ್ಲ. ಎಲ್ಲಾ ನಿಗಮ ಮಂಡಳಿಗಳ ಆಯ್ಕೆಯನ್ನು ಸ್ವತಃ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಸಮ್ಮಖದಲ್ಲೇ ನಡೆದಿದ್ದ ಕಾರಣದಿಂದ ಅದು ರಾಹುಲ್ ಗಾಂಧಿಗೆ ಆದ ಅವಮಾನ. ಇನ್ನು ಮುಂದೆ ಸಹಿಸಿಕೊಂಡಿರಲು ಸಾಧ್ಯವೇ ಇಲ್ಲ. ಹೈಕಮಾಂಡ್ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು”

ಈ ಮಾತನ್ನು ಯಾರೋ ಭಾರತೀಯ ಜನತಾ ಪಕ್ಷದವರು ಆಡಿದ್ದಲ್ಲ. ಇದು ಸ್ವತಃ ರಾಜ್ಯದಲ್ಲಿ 37 ಸ್ಥಾನಗಳನ್ನು ಗಳಿಸಿರುವ ಮಿತ್ರ ಪಕ್ಷದೊಂದಿಗೆ ಆಡಳಿತ ನಡೆಸಿ ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷದ ಶಾಸಕ ಡಾ.ಸುಧಾಕರ್ ಆಡಿದ ಮಾತುಗಳಿವು. ಇತ್ತೀಚೆಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಭಾರೀ ಗೊಂದಲವುಂಟಾಗಿ ಇನ್ನೇನು ಸರ್ಕಾರ ಬಿದ್ದೇ ಹೋಗುತ್ತೆ ಎನ್ನುವ ಹಂತದಲ್ಲಿತ್ತು. ಈ ಮಧ್ಯೆ ಕೆಲವರನ್ನು ಸಮಾಧಾನಪಡಿಸಲು ನಿಗಮ ಮಂಡಳಿಗೆ ಸೇರ್ಪಡೆಗೊಳಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದರು. ಆದರೆ ಇದೀಗ ನಿಗಮ ಮಂಡಳಿ ಸ್ಥಾನವನ್ನೂ ಜೆಡಿಎಸ್ ಕಿತ್ತುಕೊಂಡಿದೆ.

ಇತ್ತೀಚೆಗೆ ಆಯ್ಕೆಯಾಗಿದ್ದ ನಿಗಮ ಮಂಡಳಿ ಅಧ್ಯಕ್ಷರನ್ನು ಜೆಡಿಎಸ್ ಹಿಂತೆಗೆದುಕೊಂಡಿದೆ. ಕಾಂಗ್ರೆಸ್ ಶಾಸಕರಾದ ಡಾ.ಸುಧಾಕರ್, ಸುಬ್ಬಾರೆಡ್ಡಿ, ಟಿ.ಎಸ್.ಸೋಮಶೇಖರ್ ಸೇರಿದಂತೆ ಐವರು ಶಾಸಕರ ಹೆಸರನ್ನು ಹಿಂತೆಗೆದುಕೊಂಡಿದೆ. ಇದು ಸ್ವತಃ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧೀಯವರ ಸಮ್ಮುಖದಲ್ಲೇ ನಡೆದ ಆಯ್ಕೆಯಾಗಿದ್ದು ಇದನ್ನು ವಾಪಾಸು ಪಡೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರೇವಣ್ಣ ಸಹಿತ ಜೆಡಿಎಸ್ ಪಕ್ಷದ ಮೇಲೆ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ.

ಈ ಬಗ್ಗೆ ಬಹಿರಂಗವಾಗಿಯೇ ಕಿಡಿಕಾರಿದ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಕಾಂಗ್ರೆಸ್ ಹೈಕಮಾಂಡ್ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಕಾಂಗ್ರೆಸ್ ಭವಿಷ್ಯ ಕರ್ನಾಟಕದಲ್ಲಿ ಕಷ್ಟವಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಯಶವಂತಪುರ ಶಾಸಕ ಟಿ.ಎಸ್.ಸೋಮಶೇಖರ್ ಗೆ ನೀಡಿದ್ದ ಸ್ಥಾನವನ್ನು ಹಿಂತೆದುಕೊಂಡಿದ್ದಕ್ಕೆ ಶಾಸಕರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಬೆಂಬಲಿಗರ ಕಾಪೋರೇಟರ್ ಗಳು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳು ಮೈತ್ರಿ ಸರ್ಕಾರದ ಅಂತಿಮ ಹಂತದ ಯಾತ್ರೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಸಂಕ್ರಮಣದ ವೇಳೆಗೆ ಸರ್ಕಾರ ಪತನವಾಗುತ್ತೆ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರ ಮಾತುಗಳ ಸತ್ಯವಾಗುತ್ತಾ ಎನ್ನುವ ಪ್ರಶ್ನೆಗಳೂ ಉದ್ಭವಿಸುತ್ತಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close