ಪ್ರಚಲಿತ

ಬಿಎ ಪಠ್ಯದಲ್ಲಿ ಬರುತ್ತಿದೆ ಆರೆಸ್ಸೆಸ್ ಸಾಧನೆ.! ಸಂಘದ ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಮುಂದಾದ ವಿವಿ.!

ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಜಗತ್ತಿನಲ್ಲೇ ಅತೀಹೆಚ್ಚು ಸ್ವಯಂ ಸೇವಕರನ್ನು ಹೊಂದಿರುವ ಅತೀದೊಡ್ಡ ಸ್ವಯಂಸೇವಾ ಸಂಘಟನೆ. ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡು ರಾಷ್ಟ್ರದ ಸಾಂಸ್ಕೃತಿಕ ಹಾಗೂ ಪಾರಂಪರಿಕ ಶಕ್ತಿಯನ್ನು ಪ್ರಚಾರ ಮಾಡಿಕೊಂಡು ವಿಶ್ವದಲ್ಲೇ ಅತೀದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ಆದರೆ ಅನೇಕ ಬಾರಿ ವಿರೋಧಿಗಳಿಂದ ತುಳಿಯಲ್ಪಟ್ಟ ಈ ಸಂಘಟನೆಗೆ ಕಳಂಕ ತರುವ ಅನೇಕ ಷಡ್ಯಂತ್ರಗಳೂ ನಡೆದಿದ್ದವು. ಯಾವುದೇ ರಾಜಕೀಯ ಇಚ್ಚಾಶಕ್ತಿ ಹೊಂದಿರದ ಈ ಸಂಘಟನೆಗೆ ರಾಜಕೀಯ ಶತ್ರುತ್ವವೇ ಎದುರಾಗಲು ಆರಂಭವಾಗಿತ್ತು. ಅದು ಅಂದಿನ ಜವಹರಲಾಲ್ ನೆಹರೂರಿಂದ ಇಂದಿನ ಕೆಲ ನಾಯಕರವರೆಗೂ. ಇದೀಗ ಇಂತಹಾ ಮಹಾನ್ ರಾಷ್ಟ್ರಭಕ್ತ ಸಂಘಟನೆಯ ಸಾಧನೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಉದ್ದೇಶಿಸಲಾಗಿದೆ.

ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ಹಾಗೂ ಸಂಘದ ಇತಿಹಾಸದ ಕುರಿತ ವಿವರಣೆಗಳನ್ನು ನಾಗ್ಪುರದ ವಿಶ್ವವಿದ್ಯಾಲಯವೊಂದರ ಪಠ್ಯದಲ್ಲಿ ಸೇರಿಸಲಾಗಿದೆ. “ದ ರಾಷ್ಟ್ರಸಂತ ತುಕಾದೋಜಿ ಮಹರಾಜ್ ನಾಗ್ಪುರ ವಿವಿ”ಯ ದ್ವಿತೀಯ ವರ್ಷದ ಬಿಎ ಶಿಕ್ಷಣದ ಇತಿಹಾಸ ಪಠ್ಯಪುಸ್ತಕದಲ್ಲಿ ಸಂಘದ ಬಗ್ಗೆ ವಿಚಾರಗಳನ್ನು ಬಿತ್ತರಿಸಲಾಗಿದೆ. ಇದರಲ್ಲಿ ರಾಷ್ಟ್ರನಿರ್ಮಾಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ನೀಡಿದ ಕೊಡುಗೆಗಳು ಹಾಗೂ ರಾಷ್ಟ್ರಭಕ್ತಿ ಹೊಂದಿಕೊಂಡು ನಡೆಸಿದ ಕೆಲ ಕೆಲಸ ಕಾರ್ಯಗಳನ್ನು ಬಿಂಬಿಸಲಾಗಿದೆ. ಪಠ್ಯದ ಮೊದಲ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾಪನೆ ಹಾಗೂ ಜವಹರಲಾಲ್ ಆಗಮನ ಮುಂತಾದವುಗಳ ಬಗ್ಗೆ ಬರೆಯಲಾಗಿದ್ದು ನಂತರ ಮೂರನೇ ಭಾಗದಲ್ಲಿ ರಾಷ್ಟ್ರೀಯ ಸ್ವಯ ಸೇವಕ ಸಂಘದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಇತಿಹಾಸಸದಲ್ಲಿನ ಹೊಸ ಟ್ರೆಂಡ್ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಎಂಎ ಇತಿಹಾಸ ಪಠ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಚಾರವಾಗಿ ಪಠ್ಯ ಇದೆ ಎಂದು ವಿವಿ ಆಡಳಿತ ತಿಳಿಸಿದೆ.

ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಕೇವಲ ಒಂದು ಸಂಘಟನೆಯಾಗದೆ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಂಘವಾಗಿದೆ. ವ್ಯಕ್ತಿಯನ್ನು ಮುಖ್ಯವಾಗಿರಿಸದ ಈ ಸಂಘದಲ್ಲಿ ವ್ಯಕ್ತಿತ್ವ ನಿರ್ಮಾಣದ ಪಾಠವನ್ನು ಅದ್ಭುತವಾಗಿ ಹೇಳಿಕೊಡಲಾಗುತ್ತದೆ. ಓರ್ವ ವ್ಯಕ್ತಿ ತನಗಾಗಿ ಬದುಕುವುದರೊಂದಿಗೆ ದೇಶಕ್ಕಾಗಿ ಹೇಗೆ ಬದುಕಬಹುದು ಎಂಬುವುದನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಬಹಳ ಪರಿಣಾಮಕಾರಿಯಾಗಿ ಹೇಳಿಕೊಡುತ್ತದೆ.

ಈ ಸಂಘಟನೆಯ ಬಗ್ಗೆ ಅನೇಕ ತರಹದ ಟೀಕೆಗಳು ಕೇಳಿಬಂದಿದ್ದವು. ಸಂಘವನ್ನು ಟೀಕಿಸುವ ರಾಜಕೀಯ ಪಕ್ಷಗಳ ಪೈಕಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಗ್ರಸ್ಥಾನದಲ್ಲಿದೆ. ಆದರೆ ಅದೇ ಪಕ್ಷದ ನಾಯಕ ನೆಹರೂ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಮಾಜಕ್ಕೆ ಸಂಘ ನೀಡಿದ್ದ ಸೇವೆಯನ್ನು ಮನಗಂಡು ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಲು ಆಮಂತ್ರಿಸಿದ್ದರು. ಹೀಗೆ ಅನೇಕ ಮಂದಿ ಕಾಂಗ್ರೆಸ್ ನಾಯಕರೂ ಸಂಘಕ್ಕೆ ಮನಸೋತಿದ್ದು ವರ್ಷದ ಹಿಂದೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸಂಘದ ವೇದಿಕೆಯಲ್ಲಿ ನಿಂತುಕೊಂಡು ಸಂಘವನ್ನು ಕೊಂಡಾಡಿದ್ದರು.

ಸಂಘ ಒಂದು ಧರ್ಮಕ್ಕೆ ಅಥವಾ ಪಕ್ಷಕ್ಕೆ ಸೀಮಿತವಾಗದೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ತತ್ವದಡಿ ಸಂಘಟನೆ ಮಾಡುತ್ತಿದೆ. ದೇಶದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಸಂಘ ಭಾರತ ವೈಭವವನ್ನು ಮೆರೆಯುತ್ತಿದೆ. ಇದನ್ನು ಗಮದಲ್ಲಿಟ್ಟುಕೊಂಡು ನಾಗ್ಪುರ ವಿವಿ ಸಂಘದ ಕೆಲಸ ಕಾರ್ಯಗಳನ್ನು ಪಠ್ಯದಲ್ಲಿ ಅಳವಡಿಸಲು ಮುಂದಾಗಿದ್ದು ದೇಶಕ್ಕೆ ಸಂಘ ನೀಡಿದ್ದ ಸೇವೆಯನ್ನು ಹಾಗೂ ಅದರ ವಿಸ್ತಾರತೆಯನ್ನು ಪ್ರಚುರಪಡಿಸಲು ಮುಂದಾಗಿದೆ. ಇದು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close