ಪ್ರಚಲಿತ

ಮೋದಿ ಕನಸಿಗೆ ಜೀವ ತುಂಬಲು ಬೀದಿಗಿಳಿದ ಈ ತಂಡಕ್ಕೆ ಈಗ 50 ವಾರಗಳ ಸಂಭ್ರಮ.! ಕರಾವಳಿಯಲ್ಲೊಂದು ಮಾದರಿ ಸ್ವಚ್ಚತಾ ಸೈನ್ಯ..!

ಅಧಿಕಾರಕ್ಕೆ ಬಂದ ಕೂಡಲೇ ಅವರು ಮೊದಲು ಕರೆ ಕೊಟ್ಟಿದ್ದು ಸ್ವಚ್ಚತಾ ಜಾಗೃತಿ. “ದೇಶ ಸುಂದರವಾಗಿ ಕಾಣಬೇಕಾದರೆ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚವಾಗಿಡಬೇಕು. ನಮ್ಮ ಮನೆ ಮಾತ್ರವಲ್ಲದೆ ಪರಿಸರವೂ ಸ್ವಚ್ಚವಾಗಿಸಬೇಕು. ಈ ಮೂಲಕ ಭಾರತವನ್ನು ಸ್ವಚ್ಛ ಗೊಳಿಸಬೇಕು”. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಬಹುಮುಖ್ಯವಾದ ಕನಸು. ಈ ಕನಸನ್ನು ಸಾಕಾರಗೊಳಿಸಲು ” ಸ್ವಚ್ಛ ಭಾರತ ” ಎಂಬ ಯೋಜನೆಯನ್ನು ಆಂದೋಲನವಾಗಿ ಮೂಡುವಂತೆ ಮಾಡಿದ್ದರು. ಇದು ಕೇವಲ ಮಾತಿನಲ್ಲೇ ಸೀಮಿತವಾಗದೆ ಕಾರ್ಯರೂಪಕ್ಕೂ ಬಂತು. ಸ್ವತಃ ಪ್ರಧಾನಿಯೇ ಪೊರಕೆ ಹಿಡಿದು ಬೀದಿಗಿಳಿದಿದ್ದರು. ಅಚ್ಚರಿಯೆಂದರೆ ಪ್ರಧಾನಿ ಪೊರಕೆ ಹಿಡಿದ ಕೂಡಲೇ ಇಡೀ ದೇಶವೇ ಬೀದಿಗಿಳಿದು ಈ ಆಂದೋಲನದಲ್ಲಿ ಪಾಲ್ಗೊಂಡು ಭಾರತವನ್ನು ಸ್ವಚ್ಛಗೊಳಿಸುವ ಸಂಕಲ್ಪಕ್ಕೆ ಮುಂದಾಯ್ತು.

ಕರಾವಳಿ ಕರ್ನಾಟಕದಲ್ಲಿ ಸ್ವಚ್ಚತಾ ಸೈನ್ಯ..!

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಂದರೆ ವಿದ್ಯಾವಂತರ, ಬುದ್ಧಿವಂತರ ನಾಡು ಎಂಬ ಕೀರ್ತಿಗೆ ಪಾತ್ರವಾದ ಜಿಲ್ಲೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಬಹುತೇಕ ಹಚ್ಚಿಕೊಂಡಿರುವ ಈ ಜಿಲ್ಲೆಯ ಮೂಡುಬಿದಿರೆ ಎಂಬಲ್ಲಿ ಮೋದಿ ಕನಸನ್ನು ಸಾಕಾರಗೊಳಿಸಲು ಸಂಘಟನೆಯೊಂದು ಬೀದಿಗಿಳಿದಿತ್ತು. ಸ್ವಚ್ಛ ಭಾರತ- ಸ್ವಚ್ಛ ಮೂಡುಬಿದಿರೆ ಕನಸನ್ನು ಇಟ್ಟುಕೊಂಡು ಪೊರಕೆ, ಹಾರೆ,ಪಿಕ್ಕಾಸಿ ಹಿಡಿದು ಬೀದಿಗಿಳಿದ ಈ ಸಂಘಟನೆಯೇ “ಜವನೆರ್ ಬೆದ್ರ ಯುವ ಸಂಘಟನೆ”…

ಜವನೆರ್ ಬೆದ್ರ ಎಂದರೆ ಮೂಡುಬಿದಿರೆಯ ಸದೃಢ ಯುವಕರು ಎಂದರ್ಥ. ಸಾಮಾಜಿಕ ಕಳಕಳಿ ಇಟ್ಟುಕೊಂಡು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವ ಈ ಸಂಘಟನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೂ ಕೈ ಜೋಡಿಸಿತ್ತು. ಒಂದಷ್ಟು ಯುವಕರನ್ನು ಒಗ್ಗೂಡಿಸಿ ಪ್ರತಿ ಆದಿತ್ಯವಾರ ಬೆಳಗ್ಗೆ 7 ಗಂಟೆಯಿಂದ 9.30ವರೆಗೆ ಕಸಕಡ್ಡಿಗಳಿಂದ ತುಂಬಿಕೊಂಡಿರುವ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯಗಳನ್ನು ಹಮ್ಮಿಕೊಂಡಿತ್ತು. ಫೇಸ್‌ಬುಕ್‌- ವಾಟ್ಸಾಪ್ ಎಂಬ ಗೀಳಿಗೆ ಆಧುನಿಕ ಕ್ಯಾಮರಾಗೆ ಪೋಸ್ ಕೊಡಲಷ್ಟೇ ಸೀಮಿತವಾಗದ ಈ ಆಂದೋಲನ ಪರಿಣಾಮಕಾರಿಯಾದ ಅಭಿಯಾನವನ್ನು ಮುಂದುವರೆಸಿತು.

ಚರಂಡಿ ಶುದ್ಧೀಕರಣ, ಪುರಾಣ ಸ್ಥಳಗಳಲ್ಲಿ ಸ್ವಚ್ಛತೆ, ನದಿಗಳ ಶುದ್ಧೀಕರಣ, ಪ್ಲಾಸ್ಟಿಕ್ ತೆರವುಗೊಳಿಸುವುದು ಸೇರಿದಂತೆ ಅನೇಕ ಯೋಜನೆಯನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮುಂದುವರೆಯಿತು. ಎಷ್ಟೆಂದರೆ ಗಣೇಶೋತ್ಸವ ಸಂದರ್ಭದಲ್ಲಿ ಜನತೆ ಸಂಭ್ರಮಿಸುತ್ತಿದ್ದರೆ ಈ ಸಂಘಟನೆಯ ಯುವಕರು ಸ್ವಚ್ಚತಾ ಜಾಗೃತಿ ಮೂಡಿಸಿ ಖುದ್ದಾಗಿ ತಾವೇ ಕಸ ಹೆಕ್ಕುತ್ತಿದ್ದರು. ಸಂಘಟನೆ ದಿನದಿಂದ ದಿನಕ್ಕೆ ಬೇಳೆದು ನಿಂತು ಇಂದು ಯಶಸ್ವೀ 50 ವಾರಗಳನ್ನು ಪೂರೈಸಿ ಸ್ವಚ್ಛತೆಯ ಸುವರ್ಣ ಸಂಭ್ರಮದೆಡೆಗೆ ಪಾದಾರ್ಪಣೆ ಮಾಡುತ್ತಿದೆ.

ಶಾಲೆಗೆ ಹೋಗುವ ಮಕ್ಕಳಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳವರೆಗೂ, ಕಾಲೇಜಿನ ಉಪನ್ಯಾಸಕರಿಂದ ಗಡಿಕಾಯ್ದ ಮಾಜಿ ಯೋಧರವರೆಗೂ, ಬೀದಿಬದಿ ವ್ಯಾಪಾರಸ್ಥರಿಂದ ಬೃಹತ್ ಉದ್ಧಿಮೆದಾರರವರೆಗೂ, ಪತಂಜಲಿ ಯೋಗ ಸಮಿತಿಯಿಂದ ವಿವಿಧ ಸಂಘ ಸಂಸ್ಥೆಗಳವರೆಗೂ ಜವನೆರ್ ಬೆದ್ರ ಸಂಘಟನೆಯ ಈ ಕಾರ್ಯಕ್ಕೆ ಫಿದಾ ಆಗಿದ್ದು ತಾವೇ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಸಮಾಜದ ಎಲ್ಲಾ ವರ್ಗಕ್ಕೂ ಈ ಅಭಿಯಾನ ಹೊಸ ಹುರುಪನ್ನು ನೀಡಿದ್ದು ಕುರ್ಚಿ ಬಿಸಿ ಮಾಡುತ್ತಿರುವ ರಾಜಕಾರಣಿಗಳಿಗೆ ಮಾತ್ರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಫೆಬ್ರವರಿ 18, 2017ಕ್ಕೆ ಆರಂಭವಾದ ಈ ಸ್ವಚ್ಚತಾ ಅಭಿಯಾನ ಇದೀಗ 50ನೇ ವಾರ ಪೂರೈಸುತ್ತಿದ್ದು ಫೆಬ್ರವರಿ 10ನೇ ತಾರೀಖಿನಂದು ಸುವರ್ಣ ಸಂಭ್ರಮವನ್ನು ಆಯೋಜಿಸಿದೆ. ಮತ್ತೂ ಈ ಅಭಿಯಾನವನ್ನು ಹಮ್ಮಿಕೊಂಡು ಸಮಾಜದಲ್ಲಿ ಹೊಸ ಬದಲಾವಣೆ ತರಲು ಪ್ರಯತ್ನಿಸುವುದು ಸಂಘಟನೆಯ ಉದ್ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸುವುದು ಸಂಘಟನೆಯ ಧ್ಯೇಯವಾಗಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಮಹೇಶ್ ವಿಕ್ರಂ ಹೆಗ್ಡೆ ಹಾಗೂ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಹೇಳಿದ್ದಾರೆ. ಸುಂದರ ಭಾರತದ ಕನಸನ್ನು ಹೊತ್ತು ಸುಂದರ ಮೂಡುಬಿದಿರೆಗೆ ಪಣತೊಟ್ಟ ಈ ಸಂಘಟನೆಗೊಂದು ಸಲಾಂ…

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close