ಪ್ರಚಲಿತ

ಬ್ರಿಟಿಷರ ವಿರುದ್ಧ ಸಿಂಹ ಸ್ವಪ್ನವಾಗಿದ್ದ ಝಾನ್ಸಿರಾಣಿ ವೀರ ಮರಣವನ್ನಪ್ಪುವಾಗ ಆಕೆಯ ಬಾಯಿಯಿಂದ ಬಂದ ಶ್ಲೋಕ ಯಾವುದು ಗೊತ್ತಾ?!

ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ಘಟ್ಟದಲ್ಲಿ ಭಾರತದ ಎರಡು ರಾಜ್ಯಗಳಲ್ಲಿ ಬ್ರಿಟಿಷ್ ಸೈನ್ಯ ಏಕಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಅಷ್ಟೇ ಅಲ್ಲದೇ ಈ ದಾಳಿಗೆ ಬ್ರಿಟಿಷ್ ಸೈನ್ಯ ತತ್ತರಿಸಿ ಹೋಗಿತ್ತಲ್ಲದೇ ಕಾನ್ ಪುರದಲ್ಲಿ ನಾನಾ ಸಾಹೇಬ ಎನ್ನುವ ವೀರಯೋಧನ ಪರಾಕ್ರಮಕ್ಕೆ ಸರಿಸಾಟಿಯಾಗಿ ಯುದ್ಧದಲ್ಲಿ ಹೋರಾಡಲಾಗದೆ ಬ್ರಿಟಿಷ್ ಸೇನೆ ಕಂಗೆಟ್ಟಿತ್ತು.

ಅದೇ ಸಮಯದಲ್ಲಿ ಆ ಪ್ರದೇಶ ವೀರ ವನಿತೆಯ ಸೈನ್ಯಬಲವನ್ನು ಎದುರಿಸಲಾಗದೆ ಬ್ರಿಟಿಷ್ ಸೈನ್ಯ ಹಿಮ್ಮೆಟ್ಟತೊಡಗಿತು. ಅಂದು ಬ್ರಿಟಿಷರ ಎದೆಯಲ್ಲಿ ನಗಾರಿ ಬಾರಿಸಿದಂತಹ ವೀರ ಮಹಿಳೆ ಬೇರಾರು ಅಲ್ಲ… ಆಕೆಯ ಸೌಂದರ್ಯ, ಶೌರ್ಯ, ನಡವಳಿಕೆ, ಜನರ ಮೇಲೆ ಪ್ರೀತಿ, ದೇಶದ ಪ್ರೇಮ, ಹೋರಾಟ, ನೋವು-ನಲಿವು ಇವೆಲ್ಲವೂ ಯಾರಿಗೂ ಸಮಾನವಿಲ್ಲ. ಅವಳೇ ಭಾರತದ ಏಕಮಾತ್ರ ವೀರಮಹಿಳೆ ಬ್ರಿಟಿಷರ ವಿರುದ್ಧ ಹೋರಾಡಿದ ಸಿಂಹಿಣಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ!!

ಅಂದು ಬ್ರಿಟಿಷರ ಸಂಕೋಲೆಗಳಿಂದ ತನ್ನ ರಾಜ್ಯವನ್ನು ಮರಳಿ ಪಡೆದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, “ನನ್ನ ಝಾನ್ಸಿಯನ್ನು ಎಂದೆಂದೂ ಕೊಡುವುದಿಲ್ಲ” ಎನ್ನುವ ರಾಣಿಯ ಸಿಂಹಘರ್ಜನೆ ಯುದ್ಧಭೂಮಿಯಲ್ಲಿ ಮುಗಿಲು ಮುಟ್ಟಿತ್ತು. ಇನ್ನು 12 ನೇ ಶತಮಾನದಲ್ಲಿ ಚೀನಾದಲ್ಲಿ ಮದ್ದುಗುಂಡುಗಳನ್ನು ತಯಾರಿಸಲಾಗಿತ್ತಲ್ಲದೇ ಕ್ರಿ.ಶ 1526ರಂದು ಬಾಬರನು ಬಂದೂಕಿನ ಬಲದಲ್ಲಿ ಆಕ್ರಮಣ ಮಾಡಿ ವಿಜಯಿಯಾದನು. ಅದೇ ಸಂದರ್ಭದಲ್ಲಿ ಝಾನ್ಸಿ ರಾಣಿಯು ಯುದ್ಧದಲ್ಲಿ ಮದ್ದುಗುಂಡುಗಳಿಗೆ ಇರುವ ಮಹತ್ವನ್ನು ಅರಿತ ಭಾರತದ ಪ್ರಥಮ ರಾಣಿಯಾಗಿದ್ದಳು.

ಭಾರತದಲ್ಲಿ ರಾಣಿಯು ಮದ್ದುಗುಂಡುಗಳನ್ನು ತಯಾರಿಸುವಲ್ಲಿ ಮೊದಲನೇಯವಳಾಗಿದ್ದರೂ ರಾಣಿಯ ಆಡಳಿತಾವಧಿಯು ಕಡಿಮೆ ಇದ್ದುದರಿಂದ ಮಹತ್ವದ ಪರಿಣಾಮವಾಗಲಿಲ್ಲ. ಇಡೀ ಮಹಿಳಾ ಕುಲವೇ ಹೆಮ್ಮೆಪಡಬೇಕಾದ, ಭಾರತೀಯರೆಲ್ಲರೂ ಎಂದಿಗೂ ಚಿರಋಣಿಗಳಾಗಿರಬೇಕಾದ ವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿಯು ಕಾರ್ತಿಕ ಮಾಸದ ಬಿದಿಗೆಯ ದಿನ 1835 ನೇ ಇಸವಿ ನವೆಂಬರ್ 19 ರಂದು ಕಾಶಿ(ವಾರಣಸಿ) ಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರೇ ಮಣಿಕರ್ಣಿಕಾ!!

ಹಾಗಾಗಿ ಪ್ರೀತಿಯಿಂದ ಎಲ್ಲರೂ ಮನು ಎಂದು ಕರೆಯುತ್ತಿದ್ದರು. ಈಕೆಯ ತಂದೆ ಮೋರೋಪಂತ್, ತಾಯಿ ಭಾಗೀರಥಿಬಾಯಿ!! ಮನೂಬಾಯಿಗೆ ನಾಲ್ಕು ವರ್ಷದವಳಾಗಿದ್ದಾಗ ತಾಯಿ ತೀರಿಕೊಂಡಿದ್ದರಿಂದ ಅವಳ ಪೂರ್ಣ ಜವಾಬ್ದಾರಿ ತಂದೆಯದಾಯಿತು. ಚಿಕ್ಕವಯಸ್ಸಿನಿಂದಲೇ ನಾನಾಸಾಹೇಬ್, ರಾವ್ ಸಾಹೇಬರ ಜೊತೆಗೆ ಆಪ್ತಳಾಗಿದ್ದರಿಂದ ಅವರ ಜೊತೆ ಹುಡುಗಾಟ, ಕುದುರೆಸವಾರಿ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಮಣಿಕರ್ಣಿಕಾ ತಂದೆಯವರಿಂದ ಸಾಧ್ವಿಸೀತೆ, ವೀರಮಾತೆ ಜೀಜಾಬಾಯಿ, ವೀರಾಂಗನೆ ತಾರಾಬಾಯಿಯವರ ಜೀವನ ಆದರ್ಶಗಳನ್ನು ರೂಢಿಸಿಕೊಂಡಿದ್ದರು.

ಕತ್ತಿವರಸೆ, ಕುದುರೆಸವಾರಿ, ಬಂದೂಕುಗುರಿ ಸಾಧನೆಗಳ ಜೊತೆಯಲ್ಲೇ ವಿದ್ಯಾಭ್ಯಾಸವೂ ದೊರಕಿತ್ತು. ಆದರೆ ಮನುಬಾಯಿ ಏಳು ವರ್ಷ ಆಗಿದ್ದಾಗಲೇ ನಲವತ್ತೈದು ವರ್ಷದ ಝಾನ್ಸಿ ಮಹಾರಾಜ ಗಂಗಾಧರರಾಯರ ಗೃಹಲಕ್ಷ್ಮಿಯಾದಳು. ಅಷ್ಟೇ ಅಲ್ಲದೇ ಝಾನ್ಸಿ ರಾಜ್ಯದ ರಾಣಿ ಲಕ್ಷ್ಮೀಬಾಯಿಯಾದರು!!

ಆದರೆ ವಿಧಿಯಾಟವೇ ಬೇರೆಯದೇ ಆಗಿತ್ತು!! ಲಕ್ಷ್ಮೀಬಾಯಿ 1851 ರಲ್ಲಿ ಒಂದು ಗಂಡುಮಗುವಿಗೆ ಜನ್ಮ ನೀಡಿದ್ದಲ್ಲದೇ ಆ ಮಗು 4 ತಿಂಗಳಿರುವಾಗ ಮರಣವನ್ನಪ್ಪಿತು. ಮಗನ ಸಾವಿನ ದುಃಖ ತಾಳಲಾರದೆ ರಾಜ ಬಾಲಗಂಗಾಧರ್‍ರವರು 21 ನವೆಂಬರ್ 1853 ರಲ್ಲಿ ಮರಣವನ್ನಪ್ಪಿದರು. ಆದರೆ ಲಕ್ಷ್ಮೀಬಾಯಿ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು, ತಾಯಿಯಾದಾಗ ಮಗುವನ್ನು ಕಳೆದುಕೊಂಡು ಕೊನೆಗೆ ಆಸರೆಯಾಗಿದ್ದ ಪತಿಯನ್ನು ಕಳೆದುಕೊಂಡು ಧೃತಿಗೆಡದೆ, ಧೈರ್ಯವಾಗಿ ಝಾನ್ಸಿಗೆ ರಾಣಿಯಾಗಿ ಬ್ರಿಟಿಷರನ್ನು ಎದುರಿಸಿದ ವೀರ ಮಹಿಳೆ.

19ನೆಯ ಶತಮಾನದ ಆರಂಭ!! ಸಾಗರೋತ್ತರ ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪೆನಿಯ ಹೆಸರಿನಲ್ಲಿ ದಿನ ಕ್ರಮದಲ್ಲಿ ರಾಜ್ಯಸೂತ್ರವನ್ನೂ ಹಿಡಿಯತೊಡಗಿದ್ದರು. ಅಂತಃಕಲಹಗಳಲ್ಲಿ ನಿರತರಾಗಿದ್ದ ಭಾರತೀಯ ರಾಜ ಮಹಾರಾಜರು ಪೈಪೆÇೀಟಿಯ ಮೇಲೆ ಬ್ರಿಟಿಷರ ಕೈಗೊಂಬೆಗಳಾಗಿದ್ದರು. ಅಂದಿನ ಭಾರತದ ಪ್ರತಿ ದುರ್ಘಟನೆಯನ್ನೂ ಇಂಗ್ಲಿಷ್ ಸಾಮ್ರಾಜ್ಯದ ವಿಸ್ತಾರಕ್ಕೆ ಬಳಸಿಕೊಳ್ಳಲಾಯಿತು. ಇಂಗ್ಲಿಷರ ಕೈಮೇಲಾದಾಗ ಒಂದು ರೀತಿಯ ಒಪ್ಪಂದವಾದರೆ ಅವರು ಸೋಲನ್ನು ಅನುಭವಿಸಿದಾಗ ಬೇರೊಂದು ಬಗೆಯ ಒಪ್ಪಂದ. ಅಂತೂ ಹಾನಿ ಭಾರತೀಯರಿಗಾಗಿತ್ತು!!

ರಾಣಿ ಲಕ್ಷ್ಮೀಬಾಯಿ ತಮ್ಮ ಮೊದಲನೆಯ ಮಗುವಿನ ಮರಣದ ನಂತರ ಅವರು ದಾಮೋದರ ರಾವ್ ಅವರನ್ನು ದತ್ತು ಪಡೆದರು. ಆದರೆ ದಾಮೋದರ ರಾವ್ ರವರು ರಾಜನಿಗೆ ರಕ್ತಸಂಬಂಧಿಲ್ಲದಿದ್ದರಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಲಾರ್ಡ್ ಡಾಲ್ ಹೌಸಿಯು ದಾಮೋದರ ರಾವ್ ಅವರಿಗೆ ರಾಜಾಭಿಷೇಕ ಮಾಡಲು ಬಿಡಲಿಲ್ಲ. ಲಾರ್ಡ್ ಡಾಲ್ ಹೌಸಿಯು ಝಾನ್ಸಿಯ ರಕ್ಷಣೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಜವಾಬ್ಡಾರಿಯೆಂದು ರಾಣಿ ಲಕ್ಷ್ಮೀಬಾಯಿಯವರಿಗೆ ರೂಪಾಯಿ 60,000 ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೋಟೆಯನ್ನು ಬಿಟ್ಟು ಹೋಗಲು ಆಜ್ಞೆ ಮಾಡಿದನು. ಆದರೆ ಇದನ್ನು ಒಮ್ಮೆಲೇ ನಂಬಲು ರಾಣಿಗೆ ಸಾಧ್ಯವಾಗಲಿಲ್ಲ!!

ಕ್ಷಣಕಾಲ ಮೈಮರೆತ ಮಹಾರಾಣಿ “ಇಲ್ಲ, ಸಾಧ್ಯವಿಲ್ಲ. ನಾನು ಝಾನ್ಸಿಯನ್ನು ಬಿಟ್ಟುಕೊಡಲಾರೆ” ಎಂದು ಉದ್ಗರಿಸಿದಳು. ಆಡಳಿತದ ಹೊಣೆ ತಪ್ಪಿದ ಮೇಲೆ ರಾಣಿ ಬ್ರಿಟಿಷರನ್ನು ತೊಲಗಿಸಲು ಯುದ್ಧಕ್ಕೆ ಸಜ್ಜಾಗಲು ಕುದುರೆ ಸವಾರಿ, ಬಂದೂಕುಗುರಿ, ಬಾಯಲ್ಲಿ ಲಗಾಮು ಕಚ್ಚಿಕೊಂಡು ಎರಡು ಕೈಗಳಿಂದ ಕತ್ತಿವರಸೆ, ಧನುರ್ವಿದ್ಯ ಇವುಗಳೆಲ್ಲವನ್ನು ಅಭ್ಯಾಸ ಮಾಡಿದರು. ಅಲ್ಲದೇ ಪೂಜೆ, ದೇವರ ಸ್ಮರಣೆ, ಧ್ಯಾನ, ವ್ಯಾಯಾಮ ಮಾಡುವುದರ ಜೊತೆಗೆ ತನ್ನೆಲ್ಲಾ ಕಾರ್ಯಗಳನ್ನು ನಿಯಮಬದ್ಧವಾಗಿ ಮಾಡುತ್ತಿದ್ದರು!!

ಅದೇ ಸಂದರ್ಭದಲ್ಲಿ ತಾತ್ಯಾಟೋಪಿ, ರಘುನಾಥ ಸಿಂಹ, ಜವಾಹರ ಸಿಂಹ ಮುಂತಾದ ಸ್ವಾತಂತ್ರ್ಯ ಪ್ರಿಯರು ರಾಣಿ ಲಕ್ಷ್ಮೀಬಾಯಿಯ ಭೇಟಿಗೆ ರಹಸ್ಯವಾಗಿ ಆಗಮಿಸುತ್ತಿದ್ದರು. ಜನತೆಯ ಅತೃಪ್ತಿ ಅಸಮಾಧಾನಗಳ ವಿವರಗಳನ್ನು ನೀಡುತ್ತಿದ್ದರು. ತನ್ನ ರಾಜ್ಯದ ಸುತ್ತಮುತ್ತಲಿನ ಭೌಗೋಳಿಕ ಪರಿಸ್ಥಿತಿ, ಆಯಕಟ್ಟಿನ ಸ್ಥಳಗಳು, ಪಂಜಾಬಿನ ಸಿಖ್ಖರು ಬ್ರಿಟಿಷರೊಡನೆ ಸೆಣಸಿದ ವಿಧಾನ-ವ್ಯೂಹಗಳನ್ನು ಕುರಿತು ರಾಣಿ ಲಕ್ಷ್ಮೀಬಾಯಿ ಎಚ್ಚರಿಕೆಯಿಂದ ಅಭ್ಯಾಸ ನಡೆಸಿದ್ದಳು. ರಾಣಿ ಕುದುರೆ ಸವಾರಿಗೆಂದು ಹೊರಹೊರಟಾಗ ವೀರಯೋಧನ ಉಡುಪು ಧರಿಸುತ್ತಿದ್ದಳು. ಗಾಳ-ಮೇಳ-ಮನೋಲ್ಲಾಸದ ರೂಪದಲ್ಲಿ ಸೇನಾ ಶಿಬಿರದಲ್ಲಿ ಅತೃಪ್ತಿಯ ಅಗ್ನಿಯನ್ನು ಪ್ರಜ್ವಲಗೊಳಿಸುವ ಕಾರ್ಯದಲ್ಲಿ ಮಹಿಳೆಯರೂ ತೊಡಗಿದರು. ಎಲ್ಲ ಸಮಾಚಾರಗಳೂ ರಾಣಿಗೆ ತಲುಪುತ್ತಿದ್ದವು. ಮೇ 31ನೇ ತಾರೀಖು ಭಾನುವಾರ ದೇಶದಲ್ಲಿ ದಂಗೆಯಾಗಬೇಕೆಂದು ತೀರ್ಮಾನವಾಯಿತು.

ದಾಮೋದರನೆಂಬ ಮಗುವನ್ನು ಲಕ್ಷ್ಮೀಬಾಯಿ ದತ್ತು ತೆಗೆದುಕೊಂಡರೂ ಬ್ರಿಟಿಷರು ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು ಅನುಸರಿಸಿ ಝಾನ್ಸಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಆದರೆ ಝಾನ್ಸಿರಾಣಿ ತನ್ನ ಚಿಕ್ಕ ಸೈನ್ಯದೊಂದಿಗೆ ಬ್ರಿಟಿಷರನ್ನು ಸೋಲಿಸಲು ಹೊರಟ ಧೈರ್ಯವಂತ ರಾಣಿಯಾಗಿದ್ದರು!! ಅಷ್ಟೇ ಅಲ್ಲದೇ, ರಾಣಿಗೆ ಮುಂದರ ಮತ್ತು ಜೂಹಿ ಎಂಬ ಅಂಗರಕ್ಷಕಿಯರಿದ್ದರು. ಅವರೂ ಸಹ ವೀರ ಮಹಿಳೆಯರೇ ಆಗಿದ್ದರು. ಬದುಕಿರುವವರೆಗೂ ನಿಮ್ಮ ಜೊತೆಯಲ್ಲಿಯೇ ಇದ್ದು, ಸಾಯುವಾಗಲೂ ಸಹ ನಿಮ್ಮ ಜೊತೆಯಲ್ಲಿಯೇ ಇರುತ್ತೇವೆಂದು ಹೇಳಿ ವಚನವನ್ನು ನಿಭಾಯಿಸಿದ ವೀರ ಅಂಗರಕ್ಷಕಿಯರು!!

ಇತ್ತ ಡಾಲ್ ಹೌಸಿಯು ಸಂಸ್ಥಾನವನ್ನು ಪ್ರಾಂತ್ಯಗಳನ್ನಾಗಿ ಮಾಡಿದನು. ಆಗಿನ ಕಾಲದ ರಾಣಿಯ ಪತ್ರ ವ್ಯವಹಾರದಲ್ಲಿನ ಚಾತುರ್ಯವು ಅವರ ಬುದ್ಧಿಯ ಸಾಕ್ಷಿಯಾಗಿದೆ. ಉತ್ತರ ಹಿಂದುಸ್ಥಾನದ ಧುಮಸತ್ಯಾ ಸಂಘರ್ಷದಲ್ಲಿ ಇನ್ನೊಂದು ಕಿಡಿ ಸೇರಿಕೊಂಡಿತು. ರಾಣಿಯು ನಾನಾಸಾಹೇಬ ಹಾಗೂ ತಾತ್ಯಾಟೋಪೆಯೊಂದಿಗೆ ಸಂಧಾನ ಮಾಡಿದಳು. ಹ್ಯೂ ರೋಜನು ಝಾನ್ಸಿಯ ಮೇಲೆ ಆಕ್ರಮಣ ಮಾಡಲು ಬಂದಾಗ ರಾಣಿಯು “ಮೇರಿ ಝಾನ್ಸಿ ನಹಿ ದೂಂಗಿ” ಎಂದು ಸರ್ವಸಾಮಾನ್ಯ ಜನರೊಂದಿಗೆ ಹೋರಾಡಲು ಸಿದ್ಧಳಾದಳು. ಭಯಂಕರ ಯುದ್ಧವಾಯಿತು.

ಸರ್ ಹ್ಯೂರೋಜನ ಸೇನೆ 1858 ರ ಮಾರ್ಚ್ 23 ರಂದು ಸಮರ ಸಾರಿತು. ಪುಟ್ಟ ರಾಜ್ಯವಾದ ಝಾನ್ಸಿ 10-12 ದಿನಗಳವರೆಗೆ ಸೋಲು-ಗೆಲುವುಗಳ ನೆರಳು-ಬೆಳಕಿನಲ್ಲೇ ಸಾಗಿತು. ಒಮ್ಮೆ ಗೆಲುವು ಕಂಡು ನೆಮ್ಮದಿಯುಂಟಾದರೆ ಮರುಗಳಿಗೆಯಲ್ಲೇ ಸೋಲಿನ ಆಘಾತ. ನಿಷ್ಠರಾಗಿದ್ದ ಅನೇಕ ಸರದಾರರು ನೆಲವನ್ನಪಿದ್ದರು. ದುರ್ದೈವದಿಂದ ಹೊರಗಿನ ನೆರವೂ ಬಾರದಾಯಿತು. ಇಂಗ್ಲಿಷರ ಕೈ ಮೇಲಾಗಿ ಹ್ಯೂರೋಸ್‍ನ ಸೇನೆ ಝಾನ್ಸಿ ನಗರವನ್ನು ಪ್ರವೇಶಿಸಿದಾಗ ರಾಣಿಯೇ ಸ್ವಯಂಶಸ್ತ್ರ ಧರಿಸಿದಳು.

ಪುರುಷವೇಷ ಧರಿಸಿ ರಣಚಂಡಿಯಂತೆ ಸೆಣಸಿದಳು. ಅವಳು ಎಲ್ಲಿ ನುಗ್ಗಿದರೆ ಅಲ್ಲಿ ಬ್ರಿಟಿಷರ ಸೇನೆಯು ಆಹುತಿಯಾಗುತ್ತಿತ್ತು. ಆಕೆಯ ಸಮರ ಸಂಚಾಲನ ಕಾರ್ಯ ಮತ್ತು ಪುರುಷ ಸಹಜವಾದ ಕೆಚ್ಚಿನ ಕಾದಾಟ ಹ್ಯೂರೋಜನನ್ನೂ ಬೆರಗುಗೊಳಿಸಿತು. ಪರಿಸ್ಥಿತಿ ಹತೋಟಿ ತಪ್ಪಿದಾಗ ಮಹಾರಾಣಿ ಕೆಲವು ವೀರರೊಡನೆ ಶತ್ರು ಸೇನೆಯನ್ನು ಸೀಳಿಕೊಂಡು ಝಾನ್ಸಿಯನ್ನು ಬಿಟ್ಟು ಹೊರನಡೆದಳು. ಬೋಕರ್ ಎಂಬಾತ ಸೈನ್ಯದೊಡನೆ ಹಿಂಬಾಲಿಸಿದ. ಕದನದಲ್ಲಿ ಅವನೇ ಗಾಯಗೊಂಡು ಹಿಂದಿರುಗಿದ. ರಾಣಿಯ ಕುದುರೆ ಸಾವನ್ನಪ್ಪಿತು. ಆದರೂ ಆಕೆ ಎದೆಗುಂದದೆ ಕಾಲಪಿಗೆ ಹೋಗಿ ತಾತ್ಯಾಟೋಪಿ ಮತ್ತು ರಾವ್‍ಸಾಹೇಬ್ ಜೊತೆಗೂಡಿದಳು.

ಸೂರ್ಯೋದಯಕ್ಕೆ ಮೊದಲೇ ಇಂಗ್ಲಿಷರ ರಣಕಹಳೆ ಮೊಳಗಿತು. ರಾವ್ ಸಾಹೇಬರ ಅಧೀನದಲ್ಲಿದ್ದ ಎರಡು ದಳಗಳು ಮತ್ತೆ ಇಂಗ್ಲಿಷರ ಪರ ವಹಿಸಿದ ಸುದ್ದಿಯೂ ತಿಳಿಯಿತು. ರಾಣಿ ಲಕ್ಷ್ಮೀಬಾಯಿ ರಾಮಚಂದ್ರರಾವ್ ದೇಶಮುಖರನ್ನು ಕರೆಸಿ ಹೇಳಿದಳು : “ಇಂದು ಯುದ್ಧದ ಮುಕ್ತಾಯವೆಂದು ತೋರುತ್ತದೆ. ನಾನು ಸತ್ತರೆ ಮಗು ದಾಮೋದರನನ್ನು ನನ್ನ ಪ್ರಾಣಕ್ಕಿಂತಲೂ ಹೆಚ್ಚು ಮುಖ್ಯ ಎಂದು ಕಾಪಾಡಿ. ಇನ್ನೊಂದು ಮಾತು, ನಾನು ಸತ್ತರೆ ನನ್ನ ಶರೀರವನ್ನು ವಿಧರ್ಮೀಯರ ಕೈ ಸೇರದಂತೆ ನೋಡಿಕೊಳ್ಳಿ” ಎಂದು!!

ವೀರ ಪೆÇೀಷಾಕಿ ತನ್ನ ಪುಟ್ಟ ಕಂದನನ್ನು ಬೆನ್ನ ಹಿಂದೆ ಕಟ್ಟಿ, ತನ್ನ ಕುದುರೆಯನ್ನೇರಿದ ರಾಣಿ ವೀರಾವೇಶದಿಂದ ಹೋರಾಡಿದಳು. ಮೂರು ದಿನಗಳ ಹೋರಾಟದ ನಂತರ ಕೋಟೆಯನ್ನು ಬ್ರಿಟಿಷರು ಮುತ್ತಿಗೆ ಹಾಕತೊಡಗಿದರು. ಬ್ರಿಟಿಷ್ ಸೇನೆಯ ಕೈಸೆರೆಯಾಗಲು ಇಚ್ಛಿಸದ ರಾಣಿ ಆಪ್ತಸೈನಿಕರೊಂದಿಗೆ ಕಲ್ಪಿ ತಲುಪಿದರು. ಅಲ್ಲಿಂದ ತಾತ್ಯಾ ಟೋಪೆಯ ಸೇನೆಯೊಂದಿಗೆ ಗ್ವಾಲಿಯರ್ ನತ್ತ ಪಯಣಿಸಿದಳು. ಮತ್ತೆ ಅವರು ಗ್ವಾಲಿಯರ್ ನ ರಕ್ಷಣೆಗೆ ಹೋರಾಡತೊಡಗಿದರು.

ವೀರಾವೇಷದಿಂದ ಹೋರಾಡುತ್ತಿದ್ದ ಸೈನಿಕರಿಗೆ ಅವಳು ಸಾಕ್ಷಾತ್ ದುರ್ಗೆಯಂತೆ ಕಂಡಳು. ಜೂನ್ 18, ಯುದ್ಧದ ಕೊನೆಯ ದಿನ.. ಬ್ರಿಟಿಷರ ಸೇನೆ 5 ಸಾವಿರ ಭಾರತೀಯ ಯೋಧರನ್ನು ಬಲಿತೆಗೆದುಕೊಂಡಿತ್ತು. ಎದೆಗುಂದದೆ ರಾಣಿ ಹೋರಾಡುತ್ತಲೇ ಇದ್ದಳು. ಕುದುರೆಯ ಲಗಾಮನ್ನು ಹಲ್ಲಿನಿಂದ ಕಚ್ಚಿಕೊಂಡು ಎರಡೂ ಕೈಗಳಿಂದ ಕತ್ತಿ ಬೀಸುತ್ತಾ ರಾಣಿ ಮುನ್ನಡೆದಳು. ಹಿಡಿಮಂದಿ ಪಠಾಣ ಸರದಾರರು, ರಘುನಾಥ ಸಿಂಹ, ರಾಮಚಂದ್ರರಾವ್ ದೇಶಮುಖ್ ಜೊತೆಗಿದ್ದರು. ಇಂಗ್ಲಿಷರ ಸೇನೆ ಸುತ್ತುಗಟ್ಟಿತ್ತು. ರಕ್ತದ ಓಕುಳಿ ನಡೆಯುತ್ತಿತ್ತು. ಪಚ್ಚಿಮ ದಿಗಂತದಲ್ಲಿ ಸೂರ್ಯನೂ ಅದೇ ಬಣ್ಣ ತೊಟ್ಟಿದ್ದ.

ಮಧ್ಯರಾತ್ರಿಯವರೆಗೆ ಒಂದೇ ಸಮನೆ ಹೋರಾಡಿದ್ದರೂ ಆಯಾಸದ ಕುರುಹೂ ಇಲ್ಲದಂತೆ ನದಿಯನ್ನು ದಾಟತೊಡಗಿದಳು. 400 ಬ್ರಿಟಿಷ್ ಸೈನಿಕರು ಅವಳ ಕುದುರೆಯನ್ನು ಹಿಂಬಾಲಿಸುತ್ತಿದ್ದರು. ಅತ್ಯಂತ ಸಮೀಪಕ್ಕೆ ಬಂದ ಇಂಗ್ಲಿಷ್ ಸೈನಿಕನೊಬ್ಬ ರಾಣಿಯ ಎದೆಗೆ ಗುರಿ ಇಟ್ಟು ಚೂರಿಯನ್ನೆಸೆದ. ಅದು ಸ್ವಲ್ಪ ಕೆಳಕ್ಕೆ ತಗುಲಿತು. ರಾಣಿ ಅದನ್ನೆಸೆದ ಸೈನಿಕನನ್ನು ಯಮಸದನಕ್ಕೆ ಕಳುಹಿಸಿದಳು. ಆಕೆಯ ಶರೀರದಿಂದ ರಕ್ತ ಸುರಿಯುತ್ತಿತ್ತು. ರಾಣಿ ಸ್ವರ್ಣರೇಖಾ ನಾಲೆಯನ್ನು ಹಾಯ್ದು ಹೋಗಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಧಾವಿಸಿ ಬಂದ ಇಂಗ್ಲಿಷ್ ಸೈನ್ಯದ ಸರದಾರನೊಬ್ಬ ಹಾರಿಸಿದ ಗುಂಡು ಬಲತೊಡೆಗೆ ತಗುಲಿತು. ಎಡಗೈಯಿಂದಲೇ ಖಡ್ಗ ಪ್ರಹಾರ ಮಾಡಿದ ರಾಣಿ ಅವನಿಗೆ ಕೊನೆಗಾಣಿಸಿದಳು. ವೇಗವಾಗಿ ಹಿಂಬಾಲಿಸಿದ ಇಂಗ್ಲಿಷ್ ಸೈನಿಕನೊಬ್ಬನ ಖಡ್ಗ ಪ್ರಹಾರದಿಂದ ಬಲಕೆನ್ನೆಯೇ ಹರಿಯಿತು. ಆಕೆಯ ಕಣ್ಣು ಗುಡ್ಡೆಯೇ ಕಿತ್ತು ಬಂತು. ಆದರೂ ರಾಣಿ ಎಡಗೈಯಿಂದಲೇ ಆ ಸೈನಿಕನ ಭುಜವನ್ನು ಕತ್ತರಿಸಿದಳು.

ರಾಣಿಯ ಬೆಂಗಾವಲಾಗಿ ಕಾಯುತ್ತಿದ್ದ ಗುಲ್ ಮಹಮದ್‍ನಿಗೆ ತನ್ನ ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಶೌರ್ಯದಿಂದ ಕಾದಾಡಿದ ಆ ಶೂರ ಬಿಕ್ಕಿಬಿಕ್ಕಿ ಅಳತೊಡಗಿದ. ರಘುನಾಥಸಿಂಹ ಮತ್ತು ರಾಮಚಂದ್ರರಾವ್ ದೇಶಮುಖ್ ರಾಣಿಯನ್ನು ಕುದುರೆಯಿಂದ ಕೆಳಗಿಸಿಕೊಂಡರು. ಕಣ್ಣೀರಿಡುತ್ತಿದ್ದ ಮಗು ದಾಮೋದರನನ್ನು ಕುದುರೆಯ ಮೇಲೆ ಕೂರಿಸಿದ ರಾಮಚಂದ್ರರಾವ್ ರಾಣಿಯ ಶರೀರವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಗಂಗಾದಾಸರ ಕುಟೀರಕ್ಕೆ ಧಾವಿಸಿದ.

ರಘುನಾಥಸಿಂಹ ಮತ್ತು ಗುಲ್ ಮಹಮದ್ ಬೆಂಗಾವಲಾಗಿ ನಡೆದರು. ಇರುಳಿನಲ್ಲೂ ಬಾಬಾ ಗಂಗಾದಾಸ್ ರಾಣಿಯ ರಕ್ತಮಯ ಮುಖವನ್ನು ಗುರುತಿಸಿದರು. ತಣ್ಣೀರಿನಲ್ಲಿ ಮುಖ ತೊಳೆದರು. ಕೂಡಲೇ ಗಂಗಾಜಲ ಕುಡಿಸಿದರು. ಸ್ವಲ್ಪ ಚೇತರಿಸಿಕೊಂಡ ರಾಣಿ ನಡುಗುತ್ತಿದ್ದ ತುಟಿಗಳಿಂದ “ಹರಹರ ಮಹಾದೇವ್” ಎಂದು ಅಸ್ಪಷ್ಟವಾಗಿ ಹೇಳಿದಳು. ತಕ್ಷಣ ಮೂರ್ಛಿತಳಾದಳು. ಸ್ವಲ್ಪ ವೇಳೆಯ ನಂತರ ರಾಣಿ ಪ್ರಯಾಸದಿಂದ ಕಣ್ತೆರೆದಳು. ಆಗ ಅವಳು ತನಗೆ ಬಾಲ್ಯದಿಂದ ಬಾಯಿ ಪಾಠವಾಗಿದ್ದ ಭಗವದ್ಗೀತೆಯ ಶ್ಲೋಕಗಳನ್ನು ಮೆಲುಕು ಹಾಕುತ್ತಿದ್ದಳು. ಧ್ವನಿ ಕ್ಷೀಣವಾಗುತ್ತ ಕೊನೆಗೆ, “ಓಂ ನಮೋ ಭಗವತೇ ವಾಸುದೇವಾಯ” ಎಂದು ಕೇಳಿಬಂತು. ಝಾನ್ಸಿಯ ರಾಣಿ ವೀರಾಘೋಷಗಳನ್ನು ಕೂಗುತ್ತಲೇ ಕೊನೆಯುಸಿರೆಳೆದಳು!!

ಲಕ್ಷ್ಮೀಬಾಯಿಯವರ ಇತಿಹಾಸವನ್ನು ಓದುತ್ತಿದ್ದರೆ ಮೈ ಜುಮ್ಮೆನಿಸುತ್ತದೆ. ಲಕ್ಷ್ಮೀಬಾಯಿಗಿದ್ದ ಧೃಡ ಮನಸ್ಸು, ಧೈರ್ಯ, ಅಪಾರವಾದ ದೇಶಭಕ್ತಿ, ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ಧೃತಿಗೆಡದೆ ಜೀವನದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ಮುನ್ನಡೆಯುವುದು, ತನ್ನ ಪವಿತ್ರ ದೇಹದ ಬಗ್ಗೆಯಿದ್ದ ಕಾಳಜಿ ಎಲ್ಲರೂ ಮೆಚ್ಚುವಂಥದ್ದು. ಅಲ್ಲದೇ ಎಲ್ಲಾ ಮಹಿಳಾಕುಲವೇ ಇವರನ್ನು ಆದರ್ಶವಾಗಿಟ್ಟುಕೊಂಡು ಜೀವಿಸಿದರೆ ಜೀವನದ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಬದುಕುವ ಛಲ ಬಂದೀತು. ಹೀಗೆ ಗುಣದಲ್ಲಿ ಲಕ್ಷ್ಮಿಯಾಗಿ ಜ್ಞಾನದಲ್ಲಿ ಸರಸ್ವತಿಯಾಗಿ ಸಾಹಸದಲ್ಲಿ ದುರ್ಗೆಯಾಗಿ ತನ್ನ ಝಾನ್ಸಿಯ ರಕ್ಷಣೆಗೆ ಪ್ರಾಣಕೊಟ್ಟ ವೀರನಾರಿ ಲಕ್ಷ್ಮಿಯ ಹೆಸರು ಇಂದಿಗೂ ಅಜರಾಮರ!!!

– ಅಲೋಖಾ

Tags

Related Articles

Close